ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಬಾಲ್ಯದ ಬಯೋಪಿಕ್‌ ‘ಮೋಹನದಾಸ’

ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನದ 12ನೇ ಸಿನಿಮಾ
Last Updated 27 ಸೆಪ್ಟೆಂಬರ್ 2021, 11:46 IST
ಅಕ್ಷರ ಗಾತ್ರ

ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ತಮ್ಮ 20 ವರ್ಷಗಳ ಸಿನಿಮಾ ಪಯಣದಲ್ಲಿ ಇದೇ ಮೊದಲ ಬಾರಿಗೆ ಬಯೋಪಿಕ್‌ ಒಂದನ್ನು ನಿರ್ದೇಶಿಸಿದ್ದಾರೆ. ಮಹಾತ್ಮಾ ಗಾಂಧಿ ಅವರ ಬಾಲ್ಯವನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ ಶೇಷಾದ್ರಿ.ಅವರ 12ನೇ ಸಿನಿಮಾ ಇದಾಗಿದ್ದು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರವು ಅ.1ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೇಷಾದ್ರಿ, ‘ಎಂಟು ವರ್ಷಗಳ ಹಿಂದೆಯೇ ಈ ಸಿನಿಮಾದ ಕಥೆ ಬರೆಯುವಾಗ ಅದಕ್ಕೆ ‘ಪಾಪುಗಾಂಧಿ’ ಎಂದು ಹೆಸರು ಇರಿಸಿದ್ದೆ. ಬೊಳುವಾರು ಅವರು ಬರೆದ ‘ಪಾಪುಗಾಂಧಿ ಬಾಪುಗಾಂಧಿ ಆದ ಕತೆ’ ಪುಸ್ತಕವೇ ಇದಕ್ಕೆ ಆಧಾರ. ಇಲ್ಲಿಯವರೆಗೆ ಮಹಾತ್ಮಾ ಗಾಂಧಿಯವರನ್ನು ಕುರಿತು ಎರಡು ಪ್ರಮುಖ ಚಲನಚಿತ್ರಗಳು ಬಂದಿವೆ. ಆದರೆ ಯಾರೂ ಅವರ ಬಾಲ್ಯವನ್ನು ಕುರಿತು ಚಿತ್ರವನ್ನೇಕೆ ಮಾಡಲಿಲ್ಲ ಎನ್ನುವುದು ನನ್ನ ಪ್ರಶ್ನೆಯಾಗಿತ್ತು. ವಿಚಿತ್ರವೆಂದರೆ ಮಹಾತ್ಮಾ ಗಾಂಧಿ ಅವರು ತಮ್ಮ ಆತ್ಮಕಥೆಯಲ್ಲಿ ತಮ್ಮ ಬಾಲ್ಯದ ಬಗ್ಗೆ ಹೇಳಿರುವುದು ಕೇವಲ 30 ಪುಟಗಳಲ್ಲಿ ಮಾತ್ರ. ಇವತ್ತಿನ ಬಹುತೇಕ ಮಕ್ಕಳಿಗೆ ಗಾಂಧಿ ಎಂದರೆ ಅಕ್ಟೋಬರ್‌ 2ರಂದು ಬರುವ ಗಾಂಧಿ ಜಯಂತಿ ಮತ್ತೊಂದು ದಿನ ರಜೆ ಅಷ್ಟೇ. ಹರೆಯದವರಿಗೆ ಎಂ.ಜಿ.ರೋಡ್! ಸಾಮಾನ್ಯ ಮಗುವೂ ಮಹಾತ್ಮನೆಂದು ಕರೆಸಿಕೊಳ್ಳಲು ಹೇಗೆ ಬದುಕಿ ಬಾಳಬೇಕು ಎಂಬುವುದನ್ನು ಗಾಂಧೀಜಿ ಅವರ ಬಾಲ್ಯದ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ರೂಪಿಸಲಾಗಿದೆ. ಇದು ಪ್ರಪಂಚದ ಎಲ್ಲ ಮಕ್ಕಳಿಗೂ ಮಾಡಿದ ಸಿನಿಮಾ’ ಎಂದರು.

ನಿರ್ದೇಶಕ ಪಿ.ಶೇಷಾದ್ರಿ
ನಿರ್ದೇಶಕ ಪಿ.ಶೇಷಾದ್ರಿ

ಈ ಚಿತ್ರದಲ್ಲಿ ಮೋಹನದಾಸ ಪಾತ್ರದಲ್ಲಿ ಸಮರ್ಥ್‌ ಹೊಂಬಾಳ್‌ ನಟಿಸಿದ್ದು, ದತ್ತಣ್ಣ, ಶೃತಿ, ಅನಂತ್‌ ಮಹಾದೇವನ್‌, ಪರಂಸ್ವಾಮಿ ಸೇರಿದಂತೆಕರ್ನಾಟಕ, ಮುಂಬೈ ಹಾಗೂ ಗುಜರಾತ್‌ನ ಖ್ಯಾತ ಕಲಾವಿದರ ದಂಡೇ ಇದೆ. ಪ್ರವೀಣ್‌ ಗೋಡ್ಕಿಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಿತ್ರಚಿತ್ರವು ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಗಾಂಧೀಜಿ ಜನ್ಮಸ್ಥಳ ಪೋರಬಂದರ್‌, ರಾಜ್‌ಕೋಟ್‌ನಲ್ಲಿ19ನೇ ಶತಮಾನಕ್ಕೆ ತಕ್ಕಂತೆ ಸೆಟ್‌ಗಳನ್ನು ನಿರ್ಮಿಸಿ ಚಿತ್ರದ ಚಿತ್ರೀಕರಣ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT