ಸಮುದಾಯದತ್ತ ಹೊರಟ ‘ಮೂಕನಾಯಕ’

ಶುಕ್ರವಾರ, ಮೇ 24, 2019
23 °C

ಸಮುದಾಯದತ್ತ ಹೊರಟ ‘ಮೂಕನಾಯಕ’

Published:
Updated:
Prajavani

ಕಲಾತ್ಮಕ ಚಿತ್ರಗಳು ಬೆಂಗಳೂರಿಗೆ ಸೀಮಿತಗೊಳ್ಳುವುದೇ ಹೆಚ್ಚು. ನಾಡಿನ ವಿವಿಧ ಭಾಗಗಳ ಜನರಿಗೆ ತಲುಪುವುದು ಕಡಿಮೆ. ಇಂತಹ ಸನ್ನಿವೇಶದಲ್ಲಿ ಸಾಹಿತಿ ಹಾಗೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಕಂಡುಕೊಂಡ ಹೊಸ ಮಾರ್ಗವೇ ‘ಸಮುದಾಯದತ್ತ ಸಿನಿಮಾ’ ಎಂಬ ಪ್ರಾಯೋಗಿಕ ಪರಿಕಲ್ಪನೆ. ಇದರಡಿ ವಿವಿಧ ಸ್ಥಳಗಳಲ್ಲಿ ಮೊದಲೇ ಪ್ರೋತ್ಸಾಹ(ಪ್ರವೇಶ) ಧನ ಸ್ವೀಕರಿಸಿ ಚಿತ್ರ ತೋರಿಸಲಾಗುತ್ತದೆ.

ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಮೂಕನಾಯಕ’ ಸಿನಿಮಾ ಈಗ ಶತ ಪ್ರದರ್ಶನದ ಚಿತ್ರಯಾತ್ರೆಗೆ ಅಣಿಯಾಗಿದೆ. ಫೆಬ್ರುವರಿ 17ರಿಂದ ಪರ್ಯಾಯ ಬಿಡುಗಡೆಯ ಈ ಪ್ರಯೋಗ ಆರಂಭ
ವಾಗಲಿದೆ. ಮೆಕ್ಸಿಕೊ, ಮುಂಬೈ, ನೋಯ್ಡಾ, ಕೇರಳ, ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನಗೊಂಡ ಹೆಗ್ಗಳಿಕೆ ಈ ಚಿತ್ರದ್ದು.

ಈ ಹಿಂದೆ ಬರಗೂರು ನಿರ್ದೇಶಿಸಿರುವ ‘ಶಾಂತಿ’, ‘ಏಕಲವ್ಯ’, ‘ಉಗ್ರಗಾಮಿ’, ‘ಭೂಮಿತಾಯಿ’, ‘ಶಬರಿ’, ‘ಮರಣದಂಡನೆ’ ಚಿತ್ರಗಳು ಚಿತ್ರಯಾತ್ರೆ ಮೂಲಕ ಜನಸಮುದಾಯವನ್ನು ತಲುಪಿವೆ.

‘ಮೂಕನಾಯಕ’ ಸಿನಿಮಾ ಮೂಗನಾಗಿರುವ ಒಬ್ಬ ಚಿತ್ರ ಕಲಾವಿದನ ಕಥೆ. ಆತನ ಹೆಸರು ಸೂರ್ಯ. ಆತ ಅನಾಥ. ತನ್ನ ವಿಧವೆ ಅಕ್ಕ ಕಾವೇರಿಯೇ ಅವನಿಗೆ ಆಸರೆ. ಕಾವೇರಿ ಕೂಲಿ ಮಾಡುತ್ತಲೇ ತಮ್ಮನ ಚಿತ್ರಕಲೆಗೆ ಪ್ರೋತ್ಸಾಹಿಸುತ್ತಿರುತ್ತಾಳೆ. ಊರಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಅವರ ಪರವಾಗಿ ಧ್ವನಿ ಎತ್ತುತ್ತಾಳೆ. ಆಕೆಯೇ ಸೂರ್ಯನಿಗೆ ಸಾಮಾಜಿಕ ಸ್ಫೂರ್ತಿ. 

ದೊಡ್ಡಆಲದ ಮರದ ಆವರಣದಲ್ಲಿ ಸೂರ್ಯ ಚಿತ್ರ ಬಿಡಿಸುತ್ತಿರುತ್ತಾನೆ. ಅಲ್ಲಿಗೆ ಬರುವ ಸಾಹುಕಾರನ ಪುತ್ರಿ ಗೌರಿಯ ಚಿತ್ರವನ್ನೂ ಬಿಡಿಸುತ್ತಾನೆ. ಅವಳಲ್ಲಿ ಅನುರಕ್ತನಾಗುತ್ತಾನೆ. ಆದರೆ, ಆಕೆ ಶಾಲಾ ಶಿಕ್ಷಕ ರಾಜುವಿನಲ್ಲಿ ಅನುರಕ್ತಳಾಗಿರುತ್ತಾಳೆ. ಕೊನೆಗೆ, ಕಾವೇರಿ ಮತ್ತು ಸೂರ್ಯ ಸಾಹುಕಾರನಿಗೆ ಎದುರಾಗಿ ಗೌರಿ ಮತ್ತು ರಾಜುವಿನ ಪರ ನಿಲ್ಲುವ ಸನ್ನಿವೇಶ ಸೃಷ್ಟಿಯಾಗುತ್ತದೆ.

ಈ ಚಿತ್ರ ಕಲೆ ಮತ್ತು ಸಾಮಾಜಿಕ ಬದುಕಿನ ಸಂಬಂಧವನ್ನು ಅನಾವರಣಗೊಳಿಸುತ್ತದೆ. ಆಲದಮರದ ರೂಪಕದ ಮೂಲಕ ಬದುಕಿನ ವ್ಯಾಪಕತೆ, ನಿಗೂಢತೆ ಮತ್ತು ವೈರುಧ್ಯವನ್ನು ಅಭಿವ್ಯಕ್ತಿಗೊಳಿಸುತ್ತದೆ.

ಕೋಲಾರ 5, ತುಮಕೂರು 5, ಚಿತ್ರದುರ್ಗ 10, ದಾವಣಗೆರೆ 3, ಹಾವೇರಿ 5, ಶಿವಮೊಗ್ಗ 5, ಧಾರವಾಡ 3, ಬೆಳಗಾವಿ 10, ರಾಮನಗರ 5, ಹಾಸನ 3, ಬೀದರ್‌ 5, ಬಳ್ಳಾರಿ 3, ಚಿಕ್ಕಮಗಳೂರು 2, ಮಂಡ್ಯ 9, ಚಾಮರಾಜನಗರ 10, ಮೈಸೂರು 6, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 30 ಪ್ರದರ್ಶನ ಏರ್ಪಡಿಸಲಾಗಿದೆ.

ಬಾಲರಾಜ್ ಎಂ. ಸಂಜೀವ್ ಮತ್ತು ರೂಪಾ ರವೀಂದ್ರನ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ನಾಗರಾಜ ಆದವಾನಿ ಅವರದ್ದು. ಶಮಿತಾ ಮಲ್ನಾಡ್‌ ಸಂಗೀತ ಸಂಯೋಜಿಸಿದ್ದಾರೆ. ಕುಮಾರ್‌ ಗೋವಿಂದ್‌, ಸುಂದರ್‌ರಾಜ್‌, ರೇಖಾ, ಶೀತಲ್‌ ಶೆಟ್ಟಿ, ಯತಿರಾಜ್, ವೆಂಕಟರಾಜು, ಭೋಗಾನರಸಿಂಹ, ಪೂರ್ಣಿಮಾ ಸುರೇಶ್‌, ಶಿವಲಿಂಗ ಪ್ರಸಾದ್‌, ವೆಂಕಟೇಶ್ ಪ್ರಸಾದ್‌, ಸುಂದರರಾಜ ಅರಸು ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !