ಶುಕ್ರವಾರ, ಸೆಪ್ಟೆಂಬರ್ 17, 2021
30 °C
‘ಮೂಕವಿಸ್ಮಿತ’

ನಾಟಕಕ್ಕೆ ಸಿನಿಮಾ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿ.ಪಿ.ಕೈಲಾಸಂ ಅವರ ಪ್ರಸಿದ್ಧ ನಾಟಕಗಳಲ್ಲಿ ಒಂದಾದ ‘ಟೊಳ್ಳು-ಗಟ್ಟಿ’ ಆಧರಿಸಿ ಗುರುದತ್‌ ಶ್ರೀಕಾಂತ್‌ ನಿರ್ದೇಶಿಸಿರುವ ‘ಮೂಕವಿಸ್ಮಿತ’ ಸಿನಿಮಾ ಇದೇ 17ರಂದು ತೆರೆಗೆ ಬರಲಿದೆ.

ಈ ವಿಷಯ ಹಂಚಿಕೊಳ್ಳಲು ನಿರ್ದೇಶಕ ಗುರುದತ್‌ ಶ್ರೀಕಾಂತ್‌ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. 'ಹಾರರ್‌ ಸಿನಿಮಾ ಮಾಡುವಾಗ ಕೆಲವು ನೆಗೆಟಿವ್‌ ಶಕ್ತಿ ಅನುಭವಕ್ಕೆ ಬಂದ ಬಗ್ಗೆ ಹೇಳಿರುವುದನ್ನು ಕೇಳಿದ್ದೇನೆ. ಈ ಸಿನಿಮಾ ಮಾಡುವಾಗ ನನಗೆ ದೈವದ ಅನುಭವ ಆಯಿತು’ ಎಂದು ಮಾತು ಆರಂಭಿಸಿದರು ಈ ಯುವ ನಿರ್ದೇಶಕ.

‘ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಅದರಲ್ಲಿ ಮೂರು ಹಾಡುಗಳನ್ನು ಮೊದಲೇ ಬರೆದಾಗಿತ್ತು. ಒಂದು ಭಕ್ತಿ ಗೀತೆ ಸೇರಿಸುವ ಆಲೋಚನೆ ಬಂದಾಗ, ನನ್ನ ಇಷ್ಟದೈವ ರಾಮನ ಕುರಿತ ಹಾಡು ಸೇರಿಸುವ ಯೋಚನೆ ಬಂತು. ಶ್ರೀರಾಮನ ಬಗ್ಗೆ ಬರೆಯುವ ಯೋಗ್ಯತೆ ನನಗೆ ಇದೆಯಾ ಎನ್ನುವ ಪ್ರಶ್ನೆಯೂ ಕಾಡಿತು. ಈ ನಡುವೆ ಒಂದು ದಿನ ಸಂಧ್ಯಾವಂದನೆ ಮಾಡಲು ಕುಳಿತಾಗ, ಹಾಡಿನ ಬಗ್ಗೆಯೇ ಯೋಚಿಸುತ್ತಿದ್ದೆ. ಆಗ ರಾಮನ ಫೋಟೊದಿಂದ ಒಂದು ಹೂವು ಬಲಭಾಗದಿಂದ ನೆಲಕ್ಕೆ ಉರುಳಿತು. ಅದರಿಂದ ನನಗೆ ಒಂದು ಪ್ರೇರಣೆ ಸಿಕ್ಕಿತು. ಆಗ ನನ್ನ ಕಣ್ಣಿನಲ್ಲಿ ನೀರು ಬಂತು. ಯಾವುದೇ ಒಂದು ಸಿನಿಮಾದ ಆಡಿಯೊ ಬಿಡುಗಡೆಗೆ ಹೋಗುತ್ತಿದ್ದಾಗ ಸಿಗ್ನಲ್‌ನಲ್ಲಿ ಹೊಳೆದಿದ್ದೇ ಈ ‘ರಾಮನಾಮವೇ ಅತಿ ಮಧುರ, ಮನದಲ್ಲಿ ಮೂಡಿದೆ ಮಂದಿರ... ’ ಹಾಡು. ಸಿಗ್ನಲ್‌ನಲ್ಲೇ ಗಾಡಿ ನಿಲ್ಲಿಸಿ, ಮರೆತು ಹೋಗಬಾರದೆಂದು ಆ ಎರಡು ಸಾಲುಗಳನ್ನು ರೆಕಾರ್ಡ್‌ ಮಾಡಿಕೊಂಡೇ. ಈ ಹಾಡು ನೂರು ವರ್ಷಗಳಾದರೂ ಎವರ್‌ಗ್ರೀನ್‌ ಆಗಿ ಉಳಿಯಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಕುಟುಂಬದೊಳಗೆ ಇರುವ ಮೇಲು-ಕೀಳೆಂಬ ಭೇದಭಾವವನ್ನು ಟಿ.ಪಿ.ಕೈಲಾಸಂ ಟೊಳ್ಳು ಗಟ್ಟಿ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ನಾಟಕದ ಎಳೆ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ನಲವತ್ತು, ಐವತ್ತರ ವಯೋಮಾನದವರಿಗಷ್ಟೇ ಅಲ್ಲ, ಯುವಕರಿಗೂ ಇಷ್ಟವಾಗುವಂತಹ ಮತ್ತು ಪ್ರೇರಣೆಯಾಗುವಂತಹ ಸಿನಿಮಾ ಮಾಡಿದ್ದೇವೆ.  ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಮಲ್ಟಿಫ್ಲೆಕ್ಸ್‌ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದರು.

ಚಿತ್ರದ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿರುವ ನಟ ಸಂದೀಪ್‌ ಮಲಾನಿ, 'ಶ್ರೀದೇವಿಯವರ ‘ಡಿವೋಷನಲ್‌ ಅಭಿಮಾನಿ’ ನಾನು. ಈ ಸಿನಿಮಾ ಎರಡು ವರ್ಷಗಳ ಹಿಂದೆಯೇ ಚಿತ್ರೀಕರಣವಾಗಿತ್ತು. ಆಗ ಇನ್ನೂ ಟೈಟಲ್‌ ಇಟ್ಟಿರಲಿಲ್ಲ. ಈ ಸಿನಿಮಾ ಬಗ್ಗೆ ಶ್ರೀದೇವಿ ಅವರಿಗೆ ತಿಳಿಸಿದಾಗ ಹಾರೈಸಿದ್ದರು. ಅವರು ಬದುಕಿದ್ದರೆ ಈಗ ಮತ್ತೊಮ್ಮೆ ‘ಮೂಕವಿಸ್ಮಿತ’ಕ್ಕೆ ತುಂಬು ಹೃದಯದಿಂದ ಹರಸುತ್ತಿದ್ದರು. ನನಗೆ ದೈವದ ಮೇಲೆ ತುಂಬಾ ನಂಬಿಕೆ ಇದ್ದು, ಈ ಸಿನಿಮಾ ಖಂಡಿತಾ ಯಶಸ್ಸು ಕಾಣಲಿದೆ’ ಎಂದು ಹೇಳಿಕೊಂಡರು. 

ಚಿತ್ರದ ನಾಯಕ ಚಂದ್ರಕೀರ್ತಿ ಮತ್ತು ನಾಯಕಿ ವಾಣಿಶ್ರೀ ಭಟ್‌ ಅವರು ಈ ಸಿನಿಮಾ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. 

‘ಜೈ ಗುರು ಕ್ರಿಯೇಶನ್ಸ್’ ಅಡಿಯಲ್ಲಿ ನಿರ್ದೇಶಕ ಶ್ರೀಕಾಂತ್‌ ಗುರುದತ್‌ ಮತ್ತು ಸಮಾನ ಸಿನಿಮಾಸಕ್ತರು ಸೇರಿ ನಿರ್ಮಿಸಿರುವ‌ ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಡಾ.ಚಿನ್ಮಯ್.ಎಂ.ರಾವ್, ಛಾಯಾಗ್ರಹಣ ಸಿದ್ದು.ಜಿ.ಎಸ್, ಸಂಕಲನ ಸಂತೋಷ್.ಆರ್.ಚಾವ್ಲ ಅವರದು. ತಾರಾಗಣದಲ್ಲಿ ಮಾವಳ್ಳಿ ಕಾರ್ತಿಕ್‌, ಕೃಪಾ, ಪುಷ್ಪಾರಾಘವೇಂದ್ರ, ಪ್ರಹ್ಲಾದ್, ರಾಜೇಶ್‍ರಾವ್ ಮುಂತಾದವರು ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು