ಶನಿವಾರ, ಅಕ್ಟೋಬರ್ 19, 2019
27 °C

‘ಪೆನ್ಸಿಲ್‌’ ನಾನಿ ಗ್ಯಾಂಗ್ ಕಥೆ

Published:
Updated:

ಟಾಲಿವುಡ್‌ನಲ್ಲಿ ‘ಗ್ಯಾಂಗ್‌ಲೀಡರ್‌’ ಚಿತ್ರ ಶೀರ್ಷಿಕೆ ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು, ಮೆಗಸ್ಟಾರ್ ಚಿರಂಜೀವಿ ಅಭಿನಯದ ಈ ಚಿತ್ರ 1991ರಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು. ಟಾಲಿವುಡ್‌ನ ನ್ಯಾಚುರಲ್‌ ಸ್ಟಾರ್‌ ಎಂದೇ ಖ್ಯಾತಿಗಳಿಸಿರುವ ನಾನಿ ಇದೇ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಕಳೆದವಾರ ತೆರೆಕಂಡಿರುವ ‘ನಾನಿಸ್‌ ಗ್ಯಾಂಗ್‌ ಲೀಡರ್‌’ ಚಿತ್ರಕ್ಕೆ ಫ್ಯಾಮಿಲಿ ಎಂಟರ್‌ಟೈನರ್‌ ಎಂಬು ಮುದ್ರೆಯೂ ಬಿದ್ದಿದೆ. ಈ ಚಿತ್ರ ಆಂಧ್ರ ಮತ್ತು ತೆಲಂಗಾಣದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

ಚಿರಂಜೀವಿಯ ಗ್ಯಾಂಗ್‌ಲೀಡರ್‌ ಚಿತ್ರ ಮಾಸ್‌ ಪ್ರೇಕ್ಷಕರ ಮನಸೂರೆಗೊಂಡಿತ್ತು. ಈ ಚಿತ್ರ ಎಲ್ಲ ಪ್ರೇಕ್ಷಕರ ರಂಜಿಸುವ ಕಥೆಯನ್ನೊಳಗೊಂಡಿದೆ ಎಂದು ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಹೇಳಿಕೊಂಡಿತ್ತು.

ಜೆರ್ಸಿ ಚಿತ್ರದಿಂದ ಯಶಸ್ಸಿನ ಹಳಿಗೆ ಮರಳಿದ್ದ ನಾನಿ, ನಿರ್ದೇಶಕ ವಿಕ್ರಮ್‌ ಕೆ. ಕುಮಾರ್ ಅವರ ನಿರ್ದೇಶನದಲ್ಲಿ ನಟಿಸುತ್ತಾರೆ ಎಂಬ ಮಾಹಿತಿ ಹೊರಬಿದ್ದಾಗಲೇ ಸಿನಿಪ್ರೇಮಿಗಳ ಆಸಕ್ತಿ ಹೆಚ್ಚಾಗಿತ್ತು. ಕಾರಣ 24, ಮನಂ, ಇಷ್ಕ್‌, 13ಬಿ ಅಂತಹ ವಿಶೇಷ ಚಿತ್ರಗಳ ಮೂಲಕ ಅವರು ರಂಜಿಸಿದ್ದರು.

ನಿರೀಕ್ಷೆ ತಕ್ಕಂತೆ, ಪತ್ತೆದಾರಿ ಕಥೆಗಳನ್ನು ಬರೆಯುವ ಲೇಖಕನಾಗಿ (ಪೆನ್ಸಿಲ್‌ ಪಾರ್ಥಸಾರಥಿ) ವಿಶೇಷ ಪಾತ್ರವನ್ನು ನಾನಿ ಗ್ಯಾಗ್‌ಲೀಡರ್‌ನಲ್ಲಿ ಪೋಷಿಸಿದ್ದಾರೆ. ವಿವಿಧ ವಯೋಮಾನದ ಐವರು ಮಹಿಳೆಯರ ಸುತ್ತ ಹೆಣೆದಿರುವ ಈ ಕಥೆಯಲ್ಲಿ ಗ್ಯಾಂಗ್‌ ಯಾವುದು, ಗ್ಯಾಂಗ್ ಲೀಡರ್‌ ಯಾರು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

‘ಮುದ್ದು ಮುದ್ದಾಗಿ’ ಕಿರುಚಿತ್ರದಲ್ಲಿನ ನಟನೆಗಾಗಿ ಕಲಬುರ್ಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ಬಾಲನಟಿ ಪುರಸ್ಕಾರ ಪಡೆದಿರುವ ಬೆಂಗಳೂರಿನ ಪ್ರಾಣ್ಯ ಪಿ. ರಾವ್‌ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾಳೆ. ಚಿತ್ರದಲ್ಲಿ ಪ್ರಾಣ್ಯ ನಟನೆಗೆ ತೆಲುಗು ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.

ಆರ್‌ಎಕ್ಸ್‌ 100 ಚಿತ್ರದ ಮೂಲಕ ಸದ್ದು ಮಾಡಿದ್ದ ಕಾರ್ತಿಕೇಯ ಈ ಚಿತ್ರದಲ್ಲಿ ಖಳನಾಯಕನಾಗಿ ಹೊಸ ಪ್ರಯೋಗಕ್ಕೆ ಮಾಡಿದ್ದಾರೆ. ಪಂಚಭಾಷಾ ನಟಿ ಲಕ್ಷ್ಮಿ ಅವರಿಗೂ ಚಿತ್ರದಲ್ಲಿ ವಿಶೇಷ ಪಾತ್ರ ನೀಡಲಾಗಿದೆ. ವೆನ್ನೆಲ ಕಿಶೋರ್ ಮತ್ತು ಪ್ರಿಯದರ್ಶಿ ಹಾಸ್ಯ ಕಲಾವಿದರಾಗಿ ಚಿತ್ರದಲ್ಲಿ ನಟಿಸಿದ್ದಾರೆ.

ಅನಿರುಧ್‌ ರವಿಚಂದರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಮನ ಸೆಳೆದಿವೆ. ಕೋನ ವೆಂಕಟ್‌ ಸಂಭಾಷಣೆ ಬರೆದಿದ್ದು,  ನವೀನ್‌ ಎರಿನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಮೋಹನ್‌ ಚಿತ್ರವನ್ನು ನಿರ್ಮಿಸಿದ್ದಾರೆ.

Post Comments (+)