ಬುಧವಾರ, ಆಗಸ್ಟ್ 21, 2019
28 °C

ಕಷಾಯದಲ್ಲಿನ ಸಕ್ಕರೆ: ನಾನು ನನ್ ಜಾನು

Published:
Updated:
Prajavani

‘ನಾನು ನನ್ ಜಾನು’ ಸಿನಿಮಾದಲ್ಲಿ ಇರುವುದು ಒಂದು ಪ್ರೀತಿಯ ಕಥೆ. ‘ಪ್ರೀತಿ, ಪ್ರೇಮದ ಕಥೆ ಎಲ್ಲ ಸಿನಿಮಾಗಳಲ್ಲೂ ಇರುತ್ತದೆ. ಆದರೆ ಇದರಲ್ಲಿ ಭಿನ್ನವಾಗಿದೆ’ ಎನ್ನುವುದು ಸಿನಿಮಾ ತಂಡ ನೀಡಿರುವ ವಿವರಣೆ.

ಚಿತ್ರದ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ ಶ್ರೀಹರಿ ಸುದ್ದಿಗೋಷ್ಠಿ ಕರೆದಿದ್ದರು. ಚಿತ್ರದ ನಾಯಕ ಮನು ಸೇರಿದಂತೆ ತಂಡದ ಹಲವರು ಅಲ್ಲಿದ್ದರು. ‘ಸಿನಿಮಾ ಮಾಡಬೇಕು, ಅದು ಗೆಲ್ಲಬೇಕು ಎಂದು ಹಲವರು ಆಲೋಚಿಸುತ್ತಾರೆ. ಆದರೆ ತಾನು ಸತ್ತರೂ ಸಿನಿಮಾ ಉಳಿಯಬೇಕು ಎಂದು ಬಹುತೇಕರು ಆಲೋಚಿಸುವುದಿಲ್ಲ’ ಎನ್ನುತ್ತ ಮಾತು ಆರಂಭಿಸಿದರು ಶ್ರೀಹರಿ.

ಸಾಧನೆ ಮಾಡಬೇಕು ಎನ್ನುವ ಆಸೆ ಪ್ರತಿ ಮನುಷ್ಯನಲ್ಲೂ ಇರುತ್ತದೆ. ಆದರೆ, ಜನ ನೋಡುವುದು ಮನುಷ್ಯ ಎಷ್ಟು ಸಂಪಾದನೆ ಮಾಡುತ್ತಾನೆ ಎಂಬುದನ್ನು ಮಾತ್ರ. ಜನರ ಮಾತಿನ ಒತ್ತಡಕ್ಕೆ ತಲೆಬಾಗುವ ವ್ಯಕ್ತಿ ಏನೆಲ್ಲ ಕಳೆದುಕೊಳ್ಳುತ್ತಾನೆ ಎಂಬುದು ಚಿತ್ರದ ಕಥೆ ಎಂದರು ಶ್ರೀಹರಿ.

‘ಚಿತ್ರದಲ್ಲಿ ಒಂದು ಸ್ವಲ್ಪವೂ ಅಶ್ಲೀಲ ಅಂಶಗಳು ಇಲ್ಲ. ಇಡೀ ಸಿನಿಮಾ ಹಾಸ್ಯಮಯವಾಗಿ ಇದೆ. ಚಿತ್ರವು ಅಕ್ಟೋಬರ್‌ ವೇಳೆಗೆ ತೆರೆಗೆ ಬರಲಿದೆ’ ಎನ್ನುವ ಮಾತು ಸೇರಿಸಿದರು.

‘ಪ್ರೀತಿಯ ಕಥೆಯನ್ನು ಹಾಸ್ಯಮಯವಾಗಿ ಹೇಳಲು ನಿರ್ಧರಿಸಿದ್ದು ಏಕೆ’ ಎಂದು ಕೇಳಿದಾಗ, ‘ಕಷಾಯಕ್ಕೆ ಒಂಚೂರು ಸಕ್ಕರೆ ಬೇಕಲ್ಲ’ ಎಂದು ನಕ್ಕರು. ಚಿತ್ರದಲ್ಲಿ ಹಾಸ್ಯವನ್ನು ತುರುಕಲು ಹೋಗಿಲ್ಲ, ಸಂದರ್ಭಕ್ಕೆ ಅನುಗುಣವಾಗಿ ಅದು ವ್ಯಕ್ತವಾಗಿದೆ. ಚಿತ್ರದ ಮೂಲಕ ಸಂದೇಶ ರವಾನಿಸಬೇಕು ಎಂಬ ಹಟವೂ ತಮಗಿಲ್ಲ ಎಂದರು ಚಿತ್ರದ ಕಪ್ತಾನ. ಪಲ್ಲವಿ ಚಿತ್ರದ ನಾಯಕಿ.

ನಾಯಕ ನಟ ಮನು ಅವರಿಗೆ ಇದು ಮೂರನೆಯ ಚಿತ್ರ. ಹಿಂದೆ ‘ಮೋಜೊ’ ಎನ್ನುವ ಸಿನಿಮಾದಲ್ಲಿ ಅವರು ನಾಯಕನಾಗಿ ಕಾಣಿಸಿಕೊಂಡಿದ್ದರು. ‘ಈ ಸಿನಿಮಾದಲ್ಲಿ ನಾನು ಎರಡು ಶೇಡ್‌ಗಳಲ್ಲಿ ಕಾಣಿಸಲಿದ್ದೇನೆ. ಮೊದಲನೆಯದು, ಬೇಜವಾಬ್ದಾರಿಯಿಂದ ಇರುವ ವ್ಯಕ್ತಿಯ ಶೇಡ್‌. ಎರಡನೆಯದ್ದು ಅತ್ಯುನ್ನತ ಕೆಲಸದಲ್ಲಿ ಇದ್ದು, ಜವಾಬ್ದಾರಿಯಿಂದ ವರ್ತಿಸುವ ವ್ಯಕ್ತಿಯ ಶೇಡ್‌’ ಎಂದರು ಮನು.

ನಟನಾಗಿ ಅವರಿಗೆ ಬಹಳ ಖುಷಿ ಕೊಟ್ಟ ಸಿನಿಮಾ ಇದು. ಅಂದಹಾಗೆ, ಮಜಾ ಟಾಕೀಸ್‌ ಖ್ಯಾತಿಯ ಸೃಜನ್ ಲೋಕೇಶ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಅವರ ಪಾತ್ರದ ಪ್ರವೇಶ ಆದ ನಂತರ ಸಿನಿಮಾ ಕಥೆಗೆ ಒಂದು ತಿರುವು ದೊರೆಯುತ್ತದೆ’ ಎಂದು ಹೇಳಿದೆ ಚಿತ್ರತಂಡ.

Post Comments (+)