ಬುಧವಾರ, ಆಗಸ್ಟ್ 4, 2021
22 °C

ಬಾಲಿವುಡ್‌ ನಟ, ನಿರ್ದೇಶಕ ನಾಸಿರುದ್ದೀನ್‌ ಶಾ @ 70

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ, ನಿರ್ದೇಶಕ ನಾಸಿರುದ್ದೀನ್‌ ಶಾಗೆ 70ನೇ ವರ್ಷದ ಜನ್ಮದಿನದ ಸಂಭ್ರಮ.  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಾಸಿರುದ್ದೀನ್‌ಗೆ ಖ್ಯಾತ ನಟ–ನಟಿಯರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಜುಲೈ 20, 1949ನಲ್ಲಿ ಜನಿಸಿದ ನಾಸಿರುದ್ದೀನ್ ಶಾ, 1975ರಲ್ಲಿ ಶ್ಯಾಮ್‌ಬ್ಯಾನಗಲ್‌ ನಿರ್ದೇಶನದ ‘ನಿಶಾಂತ್‌‘ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದರು. ನಂತರ 1980ರಲ್ಲಿ ತೆರೆಕಂಡ ‘ಹಮ್‌ ಪಾಂಚ್‌‘ ಸಿನಿಮಾ ಮೂಲಕ ತಮ್ಮ ಸಿನಿಪಯಣವನ್ನು ವೇಗವಾಗಿ ಮುನ್ನಡೆಸಿದರು.

ಪ್ರಯೋಗಾತ್ಮಕ ಮತ್ತು ಹೊಸ ಅಲೆಯ ಸಿನಿಮಾಗಳಲ್ಲಿ ಹೆಚ್ಚು ಮಿಂಚಿದವರು ನಾಸಿರುದ್ದೀನ್ ಶಾ. ಅಮೀರ್‌ ಖಾನ್‌ ನಟನೆಯ ‘ಸ್ಪರ್ಶ್‌‘ ಸಿನಿಮಾದಲ್ಲಿನ ವಿಲನ್ ಪಾತ್ರ ಅದ್ಭುತವಾಗಿ ಮೂಡಿಬಂದಿತ್ತು. ಆ ಸಿನಿಮಾದಲ್ಲಿನ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡರು.1985ರಲ್ಲಿ ತೆರೆಕಂಡ ‘ಪಾರ್‌‘ ಸಿನಿಮಾದಲ್ಲಿನ ನಟನೆಗೂ ರಾಷ್ಟ್ರಪ್ರಶಸ್ತಿ ಬಂದಿತ್ತು. ಆಕ್ರೋಷ್, ಚಕ್ರ ಮತ್ತು ಮಾಸೂಮ್ ಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಫಿಲ್ಮ್‍ಫೇರ್, 1987ರಲ್ಲಿ ಪದ್ಮಶ್ರೀ ಮತ್ತು 2003 ರಲ್ಲಿ ಪದ್ಮಭೂಷಣ ಗೌರವಗಳಿಗೆ ನಾಸಿರ್ ಪಾತ್ರರಾಗಿದ್ದಾರೆ.

ಇದರ ಜತೆಗೆ, ಕ್ರೋಶ್‌, ಮಿರ್ಚ್‌ ಮಸಾಲಾದಂತಹ ಸಿನಿಮಾಗಳಲ್ಲಿ ವಿಶಿಷ್ಟ ಪಾತ್ರಗಳಲ್ಲೂ ಅವರು ನಟಿಸಿದ್ದಾರೆ. ತ್ರಿದೇವ್‌, ಗುಲಾಮಿ, ವಿಶ್ವಾತ್ಮ ಖ್ಯಾತಿ ತಂದುಕೊಟ್ಟ ಚಿತ್ರಗಳು. ನೂರನೇ ಸಿನಿಮಾ ‘ಮೊಹ್ರಾ‘ದ ಖಳನಾಯಕನ ಪಾತ್ರ, ಕಮಲಹಾಸನ್ ನಿರ್ದೇಶನದ ‘ಹೇ ರಾಮ್‌‘ನಲ್ಲಿ ಗಾಂಧೀಜಿ ಪಾತ್ರಗಳು ನೆನಪಿನಲ್ಲಿ ಉಳಿಯುವಂತಹವು. 

ಇದರ ಜತೆಗೆ ಹಲವು ಇಂಗ್ಲಿಷ್ ಮತ್ತು ಕನ್ನಡ, ತೆಲುಗು ಸೇರಿದಂತೆ ಹಲವು ಪ್ರಾದೇಶಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಮನೆ ಹಾಗೂ ತಬ್ಬಲಿಯು ನಿನಾದೆ ಮಗನೆ ಸಿನಿಮಾದಲ್ಲಿ ಶಾ ನಟಿಸಿದ್ದಾರೆ.  2006ರಲ್ಲಿ ಇರ್ಫಾನ್‌ ಖಾನ್ ಮತ್ತು ಕೊಂಕಣ್‌ ಸೇನ್‌ ಶರ್ಮಾ ನಟನೆಯ ‘ಯೋನ್‌ ಹೋತಾ ತೋ ಕ್ಯಾ ಹೋತಾ‘ ಸಿನಿಮಾವನ್ನು ನಾಸಿರುದ್ದೀನ್ ನಿರ್ದೇಶಿಸಿದ್ದರು. ಇದು ಅವರು ನಿರ್ದೇಶಿಸಿದ ಏಕೈಕ ಚಿತ್ರ.

ಶುಭಾಶಯಗಳ ಮಹಾಪೂರ...

ವಿಭಿನ್ನ ನಟನೆ, ಪಾತ್ರ ಪೋಷಣೆ ಮೂಲಕ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ನಾಸಿದರುದ್ದೀನ್‌ ಶಾಗೆ, ಇಂದು ಅನೇಕ ಬಾಲಿವುಡ್‌ ನಟ–ನಟಿಯರು ಶುಭಾಶಯದ ಹೊಳೆ ಹರಿಸಿದ್ದಾರೆ.

ಅನಿಲ್‌ ಕಪೂರ್‌, ಊರ್ಮಿಳಾ ಮಾತೋಂಡ್ಕರ್‌, ಅನುಭವ ಸಿನ್ಹಾ ಸೇರಿದಂತೆ ಅನೇಕ ಬಾಲಿವುಡ್ ಸ್ನೇಹಿತರು, ಸಹೋದ್ಯೋಗಿಗಳು ಹಿರಿಯ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಟ್ವೀಟ್ ಮಾಡಿದ್ದಾರೆ.

ನಟ ಅನಿಲ್‌ಕಪೂರ್‌ 1983 ರಲ್ಲಿ ಮೊದಲ ಬಾರಿಗೆ ತೆಲಗು ಸಿನಿಮಾದಲ್ಲಿ ನಟಿಸಲು ಪ್ರೋತ್ಸಾಹಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಅವರ ಜತೆಗೆ ನಟಿಸಿರುವ ಚಿತ್ರದ ಫೋಟೊವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ, ‘ತೆಲುಗು ಚಿತ್ರದಲ್ಲಿ ನಟಿಸಲು ನನ್ನನ್ನು ಪ್ರೋತ್ಸಾಹಿಸಿದ್ದ ನಾಸಿರುದ್ದೀಶಾ, ನಟನೆಗೆ ಯಾವುದೇ ಭಾಷೆಯಿಲ್ಲ ಎಂದು ತೋರಿಸಿಕೊಟ್ಟವರು. ಅವರು ಎಲ್ಲ ನಟರಿಗೂ ಸ್ಪೂರ್ತಿ‘ ಎಂದು ಅಡಿಬರಹ ಬರೆದಿದ್ದಾರೆ.

ಶೇಖರ್ ಕಪೂರ್‌ ಅವರ ‘ಕ್ಲಾಸಿಕ್ ಮಾಸೂಮ್‘ ಸಿನಿಮಾದಲ್ಲಿ ನಾಸಿರುದ್ದೀನ್ ಮಗಳ ಪಾತ್ರದಲ್ಲಿ ನಟಿಸಿದ್ದ ‘ರಂಗೀಲಾ‘ ಬೆಡಗಿ ಊರ್ಮಿಳಾ ಮಾತೋಂಡ್ಕರ್‌, ಅವರೊಂದಿಗೆ ನಟಿಸಿದ ಎರಡು ಸಿನಿಮಾಗಳ ಫೋಟೊಗಳನ್ನು ಪೋಸ್ಟ್‌ ಮಾಡಿ, ಶುಭಾಶಯ ಕೋರಿದ್ದಾರೆ.

‘ಹುಟ್ಟು ಹಬ್ಬದ ಶುಭಾಶಯಗಳು ನಾಸಿರ್ ಭಾಯ್‌. ಫಿಟ್‌ ಆಗಿರಿ. ಮ್ಯಾಜಿಕ್‌ ಕ್ರಿಯೇಟ್ ಮಾಡುತ್ತಿರಿ. ನಿಮಗಾಗಿಯೇ ಒಂದು ಸ್ಕ್ರಿಪ್ಟ್‌ ತಯಾರಿಸಿದ್ದೇನೆ‘ ಎಂದು ನಿರ್ಮಾಪಕ ಅಭಿನವ ಸಿನ್ಹಾ ಟ್ವೀಟ್ ಮಾಡಿ, ಶುಭಾಶಯ ಹೇಳಿದ್ದಾರೆ.

ವಿಶಿಷ್ಟ ನಟನೆಯಿಂದಲೇ ಗುರುತಿಸಿಕೊಳ್ಳುವ ನಾಸಿರುದ್ದೀನ್ ಶಾ ನನ್ನಂತಹ ಲೆಕ್ಕವಿಲ್ಲದಷ್ಟು ಕಲಾವಿದರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ನಟ, ನಿರ್ದೇಶಕ ದಾನಿಶ್ ಹುಸೇನ್‌ ಶುಭಾಶಯ ಕೋರಿದ್ದಾರೆ.

(ವಿವಿಧ ಮೂಲಗಳಿಂದ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು