ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಮ್ಯಾಂಟಿಕ್‌ ಚಿತ್ರಗಳಲ್ಲಿ ಸಿದ್ದಿಕಿ!

Last Updated 15 ನವೆಂಬರ್ 2018, 19:30 IST
ಅಕ್ಷರ ಗಾತ್ರ

‘ನನ್ನದು ಹಾಲುಗೆನ್ನೆಯಲ್ಲ. ಹೀರೊಗಳ ಕೆನ್ನೆ ಸಪಾಟಾಗಿ ಹೊಳೆಯುತ್ತಿದ್ದರೆ ಒಂದಷ್ಟು ಹುಡುಗೀರು ಬೆನ್ನು ಬೀಳುತ್ತಿದ್ದರೇನೊ. ಮನಸ್ಸು ಎಷ್ಟು ಮೃದುವಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಈ ಒರಟು ಮುಖದವನೊಂದಿಗೆ ಯಾರಾದರೂ ಡೇಟಿಂಗ್‌ ಮಾಡಲು ಸಾಧ್ಯವೇ?’ ಎಂದು ಅಂದು ತಮ್ಮನ್ನೇ ಲೇವಡಿ ಮಾಡಿಕೊಂಡು ನಕ್ಕಿದ್ದರು ನವಾಜುದ್ದೀನ್‌ ಸಿದ್ದಿಕಿ.

‘ಮಾಂಟೊ’ ಸಿನಿಮಾ ಬಿಡುಗಡೆಯ ಹಿಂದಿನ ದಿನ ಅವರು ನಿರ್ದೇಶಕಿ ನಂದಿತಾ ದಾಸ್‌ ಜೊತೆ ಬೆಂಗಳೂರಿಗೆ ಬಂದಿದ್ದಾಗ ಆಡಿದ ಮಾತುಗಳವು. ನವಾಜುದ್ದೀನ್‌ ಸಿದ್ದಿಕಿಗೆ ಜೀವನಚರಿತ್ರೆ ಆಧರಿತ ಸಿನಿಮಾಗಳು, ಗಂಭೀರ ಮಾತ್ರಗಳೇ ಸೂಕ್ತ ಎಂಬ ಸಿದ್ಧಸೂತ್ರದ ಬಗ್ಗೆ ಪ್ರಸ್ತಾಪಿಸುತ್ತಾ ಡೇಟಿಂಗ್ ಮಾಡಲು ಅವಕಾಶ ಸಿಕ್ಕಿದರೆ ಯಾವ ನಟಿಯನ್ನು ಆರಿಸುತ್ತೀರಿ ಎಂದು ಕೇಳಿದ್ದಕ್ಕೆ ಅವರು ಹಾಗೆ ಪ್ರತಿಕ್ರಿಯಿಸಿದ್ದರು.

ಆದರೆ ಚಿತ್ರರಂಗದಲ್ಲಿ ಯಾವುದೂ ಅಸಾಧ್ಯವೂ ಅಲ್ಲ, ಅಸಂಭವವೂ ಅಲ್ಲ ಎಂಬುದು ಮತ್ತೆ ಸಾಬೀತಾಗಿದೆ. ನವಾಜುದ್ದೀನ್‌ ಸಿದ್ದಿಕಿ ಇದೀಗ ಬರೋಬ್ಬರಿ ನಾಲ್ಕು ಚಿತ್ರಗಳಲ್ಲಿ ಡುಯೆಟ್‌ ಹಾಡಲು ಸಜ್ಜಾಗಿದ್ದಾರೆ! 2019ರಲ್ಲಿ ಈ ನಾಲ್ಕೂ ಚಿತ್ರಗಳು ಸೆಟ್ಟೇರುವ ನಿರೀಕ್ಷೆಯಿದೆಯಂತೆ.

‘ನನಗೂ ಬದಲಾವಣೆ ಬೇಕು. ಎಲ್ಲಾ ಪಾತ್ರಗಳು ಒಂದೇ ಥರ ಅನಿಸುತ್ತಿವೆ’, ‘ಇದೇನು ನವಾಜುದ್ದೀನ್‌ ಬರೀ ಗಂಭೀರ ಪಾತ್ರಗಳನ್ನು ಮಾಡ್ತಿದ್ದಾನೆ ಎಂದು ನನ್ನ ಅಭಿಮಾನಿಗಳು ಬೇಜಾರು ಮಾಡ್ಕೊಂಡಿದ್ದಾರೆ’, ‘ನಾನು ಆರಡಿ ಇಲ್ಲ, ನೋಡೋಕೆ ಚಾಕೊಲೇಟ್‌ ಹೀರೊನಂಗಿಲ್ಲ ಚೆನ್ನಾಗಿಲ್ಲ ‌ಈ ಒರಟು ಮುಖದವನೊಂದಿಗೆ ಡುಯೆಟ್‌ ಹಾಡೋಕೆ ಯಾವ ಹೀರೊಯಿನ್‌ ರೆಡಿ ಇರ್ತಾಳೆ ನೀವೇ ಹೇಳಿ’, ‘ಮುಂದಿನ ದಿನಗಳಲ್ಲಿ ಏನಾದರೂ ಪವಾಡ ನಡೆಯುತ್ತೋ ನೋಡೋಣ’... ಇವು ಅಂದಿನ ಸಂದರ್ಶನದಲ್ಲಿ ನವಾಜುದ್ದೀನ್‌ ಗೇಲಿ ಮಾಡಿಕೊಂಡು ನಗುನಗುತ್ತಲೇ ಚಟಾಕಿ ಹಾರಿಸಿದ್ದರು.

ಕೊನೆಗೂ ಆ ಕ್ಷಣ ಬಂದೇ ಬಿಟ್ಟಿದೆ. ನವಾಜುದ್ದೀನ್‌ ಒಂದಾದ ಮೇಲೊಂದು ರೊಮ್ಯಾಂಟಿಕ್‌ ಪಾತ್ರಗಳಲ್ಲಿ ನಟಿಸಲಿದ್ದಾರೆ! ಮುಂದಿನ ವರ್ಷ ಸೆಟ್ಟೇರಲಿರುವ ಆರು ಚಿತ್ರಗಳಿಳು ಅವರ ಕೈಲಿದ್ದು, ಈ ಪೈಕಿ ನಾಲ್ಕು ಹಾಸ್ಯಮಿಶ್ರಿತ ರೊಮ್ಯಾಂಟಿಕ್‌ ಚಿತ್ರಗಳು ಎನ್ನಲಾಗಿದೆ.

ರಂಗಭೂಮಿ ಮತ್ತು ಸಿನಿಮಾ ಎಂಬ ಎರಡು ದೋಣಿಯ ಪಯಣಿಗ ಈ ಪ್ರತಿಭಾವಂತ ನಟ. ‘ಸಿನಿಮಾ ಹೊರತು ನಿಮಗೇನು ಇಷ್ಟ’ ಎಂದು ಕೇಳಿದರೆ ಥಟ್‌ ಅಂತ ಹೇಳುವುದು– ‘ರಂಗಭೂಮಿ ಮತ್ತು ಓದು ನನಗೆ ಯಾವತ್ತೂ ಅಚ್ಚುಮೆಚ್ಚು’. 1990ರ ಶುರುವಿನವರೆಗೂ ದೆಹಲಿಯಲ್ಲಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನವಾಜುದ್ದೀನ್‌, 1996ರಿಂದ ಬಾಲಿವುಡ್‌ ಓಣಿಗಳಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದರು. ಅಂತೂ, 1999ರಲ್ಲಿಅಮೀರ್‌ಖಾನ್‌ ಜೊತೆಗಿನ ‘ಸರ್ಫ್‌ರೋಶ್‌’ ಮೂಲಕ ಬಿ ಟೌನ್‌ಗೆ ಎಂಟ್ರಿ ಪಡೆದೇಬಿಟ್ಟರು. ದೇಖ್‌ ಇಂಡಿಯನ್‌ ಸರ್ಕಸ್‌, ಕಹಾನಿ, ಗ್ಯಾಂಗ್ಸ್‌ ಆಫ್‌ ವಾಸ್ಸೇಪುರ್‌, ತಲಾಶ್‌, ಮಾಂಝಿ, ರಮಣ್‌ ರಾಘವ್‌ 2.0, ಬದ್ಲಾಪುರ್‌, ರಯೀಸ್‌, ಮಾಮ್‌ ಮತ್ತು ಮಾಂಟೊದಲ್ಲಿ ನವಾಜುದ್ದೀನ್‌ ಮಾಡಿದ್ದು ಗಂಭೀರ ಪಾತ್ರಗಳನ್ನೇ.‌

ಪಾತ್ರಗಳಲ್ಲಿ ಏಕತಾನತೆ ಇದ್ದರೂ ತಮ್ಮ ನಟನೆಯ ಮೂಲಕ ಪ್ರತಿ ಪಾತ್ರಕ್ಕೂ ವಿಭಿನ್ನ ಛಾಯೆ ನೀಡುವಲ್ಲಿ ಯಶಸ್ವಿಯಾದವರು ನವಾಜ್‌ ಭಾಯ್‌. ಇದೀಗ ರೊಮ್ಯಾಂಟಿಕ್‌ ಚಿತ್ರದ ಮೂಲಕ ನಟನೆಯ ಇನ್ನೊಂದು ಆಯಾಮಕ್ಕೆ ತೆರೆದುಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT