ಬುಧವಾರ, ಸೆಪ್ಟೆಂಬರ್ 18, 2019
25 °C

ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ ' ಗೀತಾ'

Published:
Updated:
Prajavani

ಕರ್ನಾಟಕದಲ್ಲಿ ಹಲವು ಚಳವಳಿಗಳು ನಡೆದಿವೆ. ಆ ಪೈಕಿ ತಾತ್ವಿಕ ನೆಲೆಗಟ್ಟು ಹೊಂದಿದ ಗೋಕಾಕ್‌ ಚಳವಳಿಯೂ ಒಂದಾಗಿದೆ. ಈ ಹೋರಾಟದ ಹಿಂದಿರುವ ಕೆಲವು ಸತ್ಯಗಳು ಯಾರಿಗೂ ಗೊತ್ತಿಲ್ಲದೆ ಚರಿತ್ರೆಯ ಮಣ್ಣಿನಲ್ಲಿ ಹುದುಗಿಹೋಗಿವೆ. ಇಂದಿನ ಯುವಜನರಿಗೆ ಆ ಕುರಿತು ಅರಿವು ಇಲ್ಲ. ಅದರ ಸುತ್ತವೇ ‘ಗೀತಾ’ ಚಿತ್ರದ ಕಥೆ ಹೆಣೆಯಲಾಗಿದೆ.

ನಟ ಗಣೇಶ್‌ ನಟನೆಯ ಈ ಚಿತ್ರ ಇದೇ 27ರಂದು ಬಿಡುಗಡೆಯಾಗಲಿದೆ. 80ರ ದಶಕದ ಕಥೆ ಇದು. ಹಾಗಾಗಿ, ರೆಟ್ರೊ ಫೀಲ್‌ ಕೂಡ ಇದೆಯಂತೆ. 

ಗಣೇಶ್‌ಗೆ ಪಾರ್ವತಿ ಅರುಣ್‌, ಶಾನ್ವಿ ಶ್ರೀವಾಸ್ತವ ಮತ್ತು ಪ್ರಯಾಗ ಮಾರ್ಟಿನ್ ಜೋಡಿಯಾಗಿದ್ದಾರೆ. ಟೈಟಲ್‌ನಲ್ಲಿ ಗೀತಾ ಹೆಸರಿದೆ. ಈ ಮೂವರು ಕಥೆಯಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ಎನ್ನುವುದೇ ಸಿನಿಮಾದ ತಿರುಳು. ‘ಗೀತಾ’ ಯಾರು ಎನ್ನುವುದಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ಉತ್ತರ ಸಿಗಲಿದೆ ಎನ್ನುವುದು ಚಿತ್ರತಂಡದ ಅಂಬೋಣ.

ಸಿನಿಮಾ ಬಗ್ಗೆ ನಿರ್ದೇಶಕ ವಿಜಯ್‌ ನಾಗೇಂದ್ರ ವಿವರಿಸುವುದು ಹೀಗೆ: ‘ಕಳೆದ ನಾಲ್ಕು ದಶಕಗಳಿಂದ ಇಲ್ಲಿಯವರೆಗೆ ನಡೆದಿರುವ ಚಳವಳಿಗಳ ಬಗ್ಗೆ ನಮಗೆ ಇರುವ ಅರಿವು ಅತ್ಯಲ್ಪ. ಚಿತ್ರಕ್ಕೆ ಗೋಕಾಕ್‌ ಚಳವಳಿಯ ಸ್ಪರ್ಶವಿದೆ. ಜೊತೆಗೆ, ಈಗಿನ ಕಾಲದ ಕಥೆಯೂ ಇದೆ. ನೋಡುಗರಿಗೆ ಹೊಸ ತರಹದ ಟ್ರೀಟ್‌ ಸಿಗಲಿದೆ’ ಎನ್ನುತ್ತಾರೆ.

‘ಗಣೇಶ್‌ಗೆ ಕಥೆ ಹೊಸೆಯುವಾಗ ಗೋಕಾಕ್‌ ಚಳವಳಿ ನಮ್ಮ ಮುಂದಿತ್ತು. ಅದಕ್ಕೊಂದು ಪ್ರೇಮ ಕಥನ ಬೆಸೆದಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಈ ಚಳವಳಿ ಕುರಿತು ಸಿನಿಮಾ ಮಾಡಿಲ್ಲ. ಲವ್‌ಸ್ಟೋರಿ ಎಂದಾಕ್ಷಣ ಬೇರೆ ತರಹದ ಕಥೆಯಲ್ಲ. ಒಬ್ಬ ವ್ಯಕ್ತಿಗೆ ತನ್ನ ಭಾಷೆ ಮತ್ತು ವ್ಯಕ್ತಿತ್ವದ ಜೊತೆಗೆ ಇರುವ ಸಂಬಂಧದ ಬಗ್ಗೆಯೂ ಹೇಳಿದ್ದೇವೆ’ ಎನ್ನುತ್ತಾರೆ. 

ಇದನ್ನೂ ಓದಿ....ಗೋಲ್ಡನ್ ಸ್ಟಾರ್ ಗಣೇಶ್‌ರ ಮತ್ತೊಬ್ಬ ಸೋದರ ಸೂರಜ್ ಕೃಷ್ಣ ಚಿತ್ರರಂಗ ಪ್ರವೇಶ

‘ಪ್ರಸ್ತುತ ಕರ್ನಾಟಕದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಬೇಕು ಎಂಬ ಕೂಗು ಮಾರ್ದನಿಸುತ್ತಿದೆ. ಕನ್ನಡ ಚಳವಳಿ ಹೊಸ ಸ್ವರೂಪ ಪಡೆಯಲು ತವಕಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ಸಿನಿಮಾ ಕನ್ನಡಿಗರ ಹೃದಯ ತಟ್ಟಲಿದೆ’ ಎಂಬ ವಿಶ್ವಾಸ ಅವರದು. ಮೈಸೂರು, ಬೆಂಗಳೂರು, ಕೋಲ್ಕತ್ತ, ಮನಾಲಿಯಲ್ಲಿ ಶೂಟಿಂಗ್‌ ನಡೆಸಲಾಗಿದೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಸೈಯದ್‌ ಸಲಾಂ, ಶಿಲ್ಪಾ ಗಣೇಶ್‌ ಬಂಡವಾಳ ಹೂಡಿದ್ದಾರೆ. ಆರು ಹಾಡುಗಳಿಗೆ ಅನೂಪ್‌ ರುಬೆನ್ಸ್‌ ಸಂಗೀತ ನೀಡಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸುಧಾರಾಣಿ, ದೇವರಾಜು, ರಂಗಾಯಣ ರಘು, ಅಚ್ಯುತ್‌ ಕುಮಾರ್ ತಾರಾಗಣದಲ್ಲಿದ್ದಾರೆ. 

Post Comments (+)