ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬನಿ ತಬ್ಬಿದ ವಿಹಾನ್‌–ಅಂಕಿತಾ!

Last Updated 22 ಆಗಸ್ಟ್ 2022, 7:17 IST
ಅಕ್ಷರ ಗಾತ್ರ

ಸಿಂಪಲ್‌ಸ್ಟಾರ್‌ ರಕ್ಷಿತ್‌ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್‌ ‘777 ಚಾರ್ಲಿ’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಹೊಸ ಸಿನಿಮಾವೊಂದನ್ನು ತಿಂಗಳ ಹಿಂದೆ ಘೋಷಿಸಿತ್ತು. ಆದರೆ ಶೀರ್ಷಿಕೆಯನ್ನು ಅದು ಬಹಿರಂಗಪಡಿಸಿರಲಿಲ್ಲ. ‘ಪಂಚತಂತ್ರ’ ಖ್ಯಾತಿಯ ವಿಹಾನ್‌ ಹಾಗೂ ‘ನಮ್ಮನೆ ಯುವರಾಣಿ’ ಖ್ಯಾತಿಯ ಅಂಕಿತಾ ಅಮರ್‌ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಶೀರ್ಷಿಕೆ ಇದೀಗ ಅನಾವರಣಗೊಂಡಿದೆ.

ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ ಅವರು ಸೃಷ್ಟಿಸಿದ ‘ಇಬ್ಬನಿ ತಬ್ಬಿದ ಇಳೆಯಲಿ’ ವಿಹಾನ್‌–ಅಂಕಿತಾ ಜೋಡಿಯಾಗಿ ಹೆಜ್ಜೆಹಾಕಲಿದ್ದಾರೆ.ಪ್ರೀತಿ ಎಂದರೆ ಏನು? ಹಳೆಯ ನೆನಪುಗಳಾ? ನಾಳೆ ಜೊತೆಯಾಗಿರಬೇಕು ಎಂಬ ಕನಸುಗಳಾ? ದೂರವಾದ ನಂತರದ ಚಡಪಡಿಕೆಯಾ? ಇದೆಲ್ಲದರ ಸಂಗಮವೇ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಎಂದು ವ್ಯಾಖ್ಯಾನಿಸಿದೆ ಚಿತ್ರತಂಡ.

‘ಇದೊಂದು ಕಾವ್ಯಾತ್ಮಕ ಪ್ರೇಮಕಥೆ. ಬೇಷರತ್ತಾಗಿ ಪ್ರೀತಿಸುವುದನ್ನು ಸಂಭ್ರಮಿಸುವ ಚಿತ್ರವಿದು. ನಿನ್ನೆ, ಇಂದು ಮತ್ತು ನಾಳೆಯ ಪ್ರೀತಿಯನ್ನು ತೋರಿಸುವ ಚಿತ್ರ. ಪ್ರೇಕ್ಷಕರು ಚಿತ್ರವನ್ನು ನೋಡುತ್ತಾ, ಹಾಡುತ್ತಾ, ನಲಿಯುತ್ತಾ, ತಮ್ಮನ್ನೇ ತಾವು ಮರೆಯುವಂತಹ ಚಿತ್ರ. ಕಾಲೇಜಿನಿಂದ ಪ್ರಾರಂಭವಾಗುವ ಈ ಕಥೆಯು ಪ್ರೌಢಾವಸ್ಥೆಯಲ್ಲಿ ಅಂತ್ಯವಾಗುತ್ತದೆ. ಹೀಗೆ ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಚಿತ್ರವು ಸೂಕ್ಷ್ಮವಾಗಿ ತೋರಿಸಲಿದ್ದು, ಇಲ್ಲಿ ಹಸಿರು ಎಷ್ಟು ಮುಖ್ಯವೋ, ಆಧುನಿಕ ನಗರದ ದೃಶ್ಯಗಳು ಅಷ್ಟೇ ಪ್ರಮುಖ ಪಾತ್ರವಹಿಸುತ್ತವೆ. ಅಷ್ಟೇ ಅಲ್ಲ, ಬೇಸಿಗೆಯ ಘಮ, ಚಳಿಗಾಲದ ಹಿತ ಮತ್ತು ಮಳೆಗಾಲದ ಮಾಧುರ್ಯವೂ ಈ ಚಿತ್ರದಲ್ಲಿರಲಿದೆ’ ಎಂದಿದ್ದಾರೆ ಚಂದ್ರಜಿತ್‌.

ಈ ಹಿಂದೆ ರಕ್ಷಿತ್ ಶೆಟ್ಟಿ ಅವರ ಸೆವೆನ್ ಆಡ್ಸ್ ಚಿತ್ರಕಥಾ ವಿಭಾಗದಲ್ಲಿ ಕೆಲಸ ಮಾಡಿ ‘ಕಿರಿಕ್ ಪಾರ್ಟಿ’ ಮತ್ತು ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ಮತ್ತು ‍‘ಕಥಾಸಂಗಮ’ ಚಿತ್ರದ ‘ರೇನ್ಬೋ ಲ್ಯಾಂಡ್’ ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್ ಬೆಳ್ಳಿಯಪ್ಪ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಅಂಕಿತಾ ಅಮರ್ ಚಿತ್ರದ ಲೀಡ್‌ ನಾಯಕಿಯಾಗಿದ್ದು, ಎರಡನೇ ನಾಯಕಿ ಯಾರು ಎಂಬುವುದನ್ನು ತಂಡ ಶೀಘ್ರದಲ್ಲೇ ಘೋಷಿಸಲಿದೆ.

ಇದು ಸಂಗೀತಮಯ ಪ್ರೇಮಕಥೆಯಾಗಿದ್ದು, ಗಗನ್ ಬದೇರಿಯಾ ಸಂಗೀತ ನಿರ್ದೇಶನ ಚಿತ್ರಕ್ಕಿದೆ.ಅಮೆರಿಕಾದ ನ್ಯೂಯಾರ್ಕ್‌ ಫಿಲಂ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್‌ ಸೆಲ್ವರಾಜನ್‌ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ‘ಕಥಾಸಂಗಮ’ ಚಿತ್ರದ ‘ಗಿರ್ಗಿಟ್ಲೆ’ ಕಥೆಯನ್ನು ನಿರ್ದೇಶಿಸದ್ದ ಶಶಿಕುಮಾರ್, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, 2023ರಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT