ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಸೊಗಡಿನ ನಟಿ ನಿಮಿಷಾ

Last Updated 23 ಜನವರಿ 2020, 19:30 IST
ಅಕ್ಷರ ಗಾತ್ರ

ಮಲಯಾಳ ಚಿತ್ರರಂಗದಲ್ಲಿ ಗ್ರಾಮೀಣ ಸೊಗಡಿನ ಪಾತ್ರಗಳಿಗೆ ತನ್ನದೇ ಆದ ಮಹತ್ವವಿದೆ. ಇಂತಹ ಪಾತ್ರಗಳಿಗೆ ಜೀವ ತುಂಬುವ ಮೂಲಕ ನಟಿ ನಿಮಿಷಾ ಸಜಯನ್ ಮಾಲಿವುಡ್ ಅಂಗಳದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

2017ರಲ್ಲಿ ಬಿಡುಗಡೆಗೊಂಡ ದಿಲೀಶ್ ಪೋತನ್ ನಿರ್ದೇಶನದ ‘ತೊಂಡಿಮುದಲುಂ ದೃಕ್ ಸಾಕ್ಷಿಯುಂ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿರಿಸಿದ ಈಕೆ ಇದೀಗ ಮಲಯಾಳದ ಬ್ಯುಸಿ ನಟಿಯಾಗಿ ಬೆಳೆದಿದ್ದಾರೆ. ‘ತೊಂಡಿಮುದಲುಂ ದೃಕ್ ಸಾಕ್ಷಿಯುಂ’ ಸಿನಿಮಾದಲ್ಲಿ ಪ್ರಸಿದ್ಧ ನಟರಾದ ಫಹದ್ ಫಾಝಿಲ್, ಸೂರಜ್ ವೆಂಞರಮೂಡು ಅವರೊಂದಿಗೆ ತೆರೆಹಂಚಿಕೊಂಡಿದ್ದ ನಿಮಿಷಾ ಮೊದಲ ಸಿನಿಮಾದ ನಟನೆಯಲ್ಲೇ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು.

ಬಸ್‌ನಲ್ಲಿ ಚಿನ್ನದ ಸರ ಕಳೆದುಕೊಂಡು ಅದನ್ನು ಮರಳಿ ಪಡೆಯಲು ಪೊಲೀಸ್ ಠಾಣೆಗೆ ಓಡಾಡುವ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಿಮಿಷಾ ನಟಿಸಿದ್ದರು.ಮುಗ್ಧ ಮುಖದ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಅನಂತರ ಅಂತಹ ಪಾತ್ರಗಳೇ ಅವರನ್ನು ಹೆಚ್ಚು ಹೆಚ್ಚಾಗಿ ಹುಡುಕಿಕೊಂಡುಬಂದಿವೆ. ಈಚೆಗೆ ಬಿಡುಗಡೆಗೊಂಡಿರುವ ಲಾಲ್ ಜೋಸ್ ನಿರ್ದೇಶನದ ‘41’ ಚಿತ್ರದಲ್ಲೂ ಇವರು ಗ್ರಾಮೀಣ ಪ್ರದೇಶದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಬಿಜು ಮೆನನ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಅವರ ಪ್ರೇಯಸಿಯ ಪಾತ್ರದಲ್ಲಿ ನಿಮಿಷಾ ಕಾಣಿಸಿಕೊಂಡಿದ್ದಾರೆ. ನಾಸ್ತಿಕನಾದ ನಾಯಕ ಅನಿವಾರ್ಯ ಕಾರಣಗಳಿಂದ ಶಬರಿಮಲೆಗೆ ತೆರಳಲು ಮಾಲೆ ಧಾರಣೆ ಮಾಡುತ್ತಾನೆ. ಆ ಯಾತ್ರೆ ಅವನ‌ ಬದುಕಿನಲ್ಲಿ ಹಲವು ತಿರುವುಗಳಿಗೆ ಕಾರಣವಾಗುತ್ತದೆ ಇದು ಈ ಚಿತ್ರದ ಕಥಾಹಂದರ.

2018ರಲ್ಲಿ ಬಿಡುಗಡೆಗೊಂಡ ‘ಈಡ’ ಚಿತ್ರದಲ್ಲೂ ನಿಮಿಷಾ ಅನನ್ಯ ಅಭಿನಯ ನೀಡಿದ್ದರು. ಈ ಚಿತ್ರದ ಅಭಿನಯವು ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತ್ತು. ಬಿ.ಅಜಿತ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಯುವ ನಟ ಶೇನ್ ನಿಗಮ್ ಜೊತೆ ನಾಯಕಿಯಾಗಿ ಅವರು ನಟಿಸಿದ್ದರು. ರಾಜಕೀಯ, ಕೊಲೆ, ಪ್ರೇಮ ಮೊದಲಾದ ವಿಷಯಗಳನ್ನು ಆಧರಿಸಿದ ಈ ಚಿತ್ರದಲ್ಲಿ ಇವರು ವಿದ್ಯಾರ್ಥಿನಿಯ ಪಾತ್ರದಲ್ಲಿ ಅಭಿನಯಿಸಿದ್ದರು.

ಸೌಮ್ಯ ಸದಾನಂದನ್ ನಿರ್ದೇಶನದಲ್ಲಿ ಅದೇ ವರ್ಷ ಬಿಡುಗಡೆಗೊಂಡಿದ್ದ ‘ಮಾಂಗಲ್ಯಂ ತಂತು ನಾನೇನ’ ಚಿತ್ರದಲ್ಲಿ ಜನಪ್ರಿಯ ನಟ ಕುಂಜಾಕೊ ಬೋಬನ್ ನಾಯಕಿಯಾಗಿಯೂ ನಿಮಿಷಾ ನಟಿಸಿದ್ದರು. ಈ ಸಿನಿಮಾದಲ್ಲಿ ಅಪ್ಪಟ ಗೃಹಿಣಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿತ್ತು ಜೊತೆಗೆ ನಿಮಿಷಾ ಅವರಿಗೆ ಅವಕಾಶಗಳ‌ ಹೆಬ್ಬಾಗಿಲನ್ನೇ ತೆರೆಯಿತು. ಅದೇ ವರ್ಷ ತೆರೆಕಂಡಿದ್ದ ಮಧುಪಾಲ್ ನಿರ್ದೇಶನದ ‘ಒರು ಕುಪ್ರಸಿದ್ಧ ಪಯ್ಯನ್’ ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ವಕೀಲೆಯ ಪಾತ್ರದಲ್ಲಿ ಅಭಿನಯಿಸಿದ್ದ ನಿಮಿಷಾ ಮೋಡಿ ಮಾಡಿದ್ದರು. ಈ ಸಿನಿಮಾದಲ್ಲಿ ಟೊವಿನೊ ಥೋಮಸ್ ನಾಯಕನಾಗಿ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕೆ 2018ರ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಗೂ ನಿಮಿಷಾ ಭಾಜನರಾಗಿದ್ದರು.

ಈಚೆಗೆ ಬಿಡುಗಡೆಗೊಂಡ ಸನಲ್ ಕುಮಾರ್ ಶಶಿಧರನ್ ನಿರ್ದೇಶನದ ‘ಚೋಲ’ ಚಿತ್ರದಲ್ಲಿ ಅವರು ವಿಭಿನ್ನ ಗೆಟ‍ಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸನಲ್ ಕುಮಾರ್ ಅವರು ತಮ್ಮ ಹಿಂದಿನ ಚಿತ್ರ ‘ಎಸ್. ದುರ್ಗಾ’ದಂತೆ ಈ ಚಿತ್ರವನ್ನೂ ಸಾಮಾಜಿಕ ಸಮಸ್ಯೆಯನ್ನು ಪ್ರಧಾನ ವಸ್ತುವಾಗಿಟ್ಟುಕೊಂಡು ನಿರ್ಮಿಸಿದ್ದಾರೆ.

ವಿಧು ವಿನ್ಸೆಂಟ್ ನಿರ್ದೇಶನದ ‘ಸ್ಟ್ಯಾಂಡ್ ಅಪ್’ ಚಿತ್ರದಲ್ಲೂ ನಿಮಿಷಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಂತೋಷ್ ವಿಶ್ವನಾಥ್ ನಿರ್ದೇಶನದ ‘ಒನ್’, ರಾಜೀವ್ ರವಿ ನಿರ್ದೇಶನದ ‘ತುರಮುಖಂ’, ಮಹೇಶ್ ನಾರಾಯಣನ್ ನಿರ್ದೇಶನದ ‘ಮಲಿಕ್’, ಸಿದ್ಧಾರ್ಥ್ ಭರತನ್ ನಿರ್ದೇಶನದ ‘ಜಿನ್ನ್’ ಚಿತ್ರಗಳು ನಿರ್ಮಾಣ ಹಂತದಲ್ಲಿದ್ದು, ಈ ಚಿತ್ರಗಳಲ್ಲಿ ನಿಮಿಷಾ ನಾಯಕಿಯಾಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT