ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯ, ಸ್ಮಶಾನದೊಳಗಿನ ವಾಸ್ತವ ಚಿತ್ರಣ

Last Updated 24 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮೊದಲ ದಿನ ಪ್ರದರ್ಶನಗೊಂಡ ‘ಸ್ಮಶಾನ ಮೌನ’ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆದ ಚಿತ್ರ. ಕಥೆ, ಚಿತ್ರಕತೆ, ಕಲಾವಿದರ ಅಭಿನಯ ಕೌಶಲ, ನಿರ್ದೇಶನದ ಸಂಯಮ, ಕುತೂಹಲಕಾರಿ ಸನ್ನಿವೇಶಗಳು ಚಿತ್ರದ ಜೀವಾಳ.

ಹಿರಿಯ ನಾಗರಿಕರ ದೈನಿಕ ಬದುಕಿನ ಏರಿಳಿತಗಳು, ನಲವತ್ತು ವಯಸ್ಸು ದಾಟಿದ್ದರೂ ಕಂಕಣಭಾಗ್ಯ ಕಾಣದ ಹೆಣ್ಣು, ಆಕೆಯ ಮದುವೆಯಾಗದೆ ತಾನು ಮದುವೆಯಾಗದೇ ಉಳಿದ ನಲವತ್ತರ ಪ್ರಾಯದ ಬ್ಯಾಂಕ್ ಅಧಿಕಾರಿ ತಮ್ಮ, ಆಕೆಯನ್ನು ಮದುವೆಯಾಗಲು ಅಪೇಕ್ಷೆಪಟ್ಟು ಬರುವ ನಲವತ್ತು ದಾಟಿದ ಗಂಡುಗಳು, ಅವರ ಬಗ್ಗೆ ಆಕೆಗಿರುವ ತಿರಸ್ಕಾರ; ಮದುವೆಯಾಗುವ ಗಂಡಿನ ಬಗ್ಗೆ ಹೆಣ್ಣಿಗೆ ಇರಬೇಕಾದ ಸಹಜ ಭಾವನೆಗಳ ತಾಕಲಾಟಗಳು ಒಂದು ಬದಿಯ ಸಹಾನುಭೂತಿ ಅನುಕಂಪ ಸೃಷ್ಟಿಸುತ್ತವೆ. ಇನ್ನೊಂದು ಮಗ್ಗುಲಲ್ಲಿ ಸಿನಿಮಾ ಶೀರ್ಷಿಕೆಯ ಕತೆಯ ಭಾಗದ ಲಹರಿ ಹಾಗೂ ವಾಸ್ತವ ಬದುಕಿನ ಕಠೋರತೆಯನ್ನು ಹೇಳುತ್ತದೆ. ಸ್ಮಶಾನದಲ್ಲಿ ಹೆಣ ಸುಟ್ಟರಷ್ಟೆ ತನ್ನ ಬದುಕಿನ ಬಂಡಿ ಸಾಗುವುದು ಎಂದುಕೊಂಡವನೊಬ್ಬನ ಬದುಕು, ಕಾಲೇಜು ಶಿಕ್ಷಣ ಮುಂದುವರೆಸಬೇಕೆಂಬ ಆತನ ಮಗಳ ಆಸೆ, ಆಕಾಂಕ್ಷೆಗಳು ಕತೆಗೆ ಪೂರಕ ಸನ್ನಿವೇಶಗಳನ್ನು ನಿರ್ಮಾಣ ಮಾಡಿವೆ.

ವಯಸ್ಸಾದ ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಅರ್ಥಮಾಡಿಕೊಂಡು ಇಳಿ ವಯಸ್ಸಿನಲ್ಲೂ ಸಂತೋಷ, ಖುಷಿಯಿಂದ ಇರಬಹುದು ಎಂಬುದರ ಸಂದೇಶವನ್ನು ನಿರ್ದೇಶಕರು ಜಾಣ್ಮೆಯಿಂದ ನಿರೂಪಿಸಿದ್ದಾರೆ. ಕಿತ್ತ ಚಪ್ಪಲಿಗೆ ತಾನೇ ಮೊಳೆ ಹೊಡೆದುಕೊಳ್ಳುವ, ದಾಂಪತ್ಯದ 50ನೇ ವಾರ್ಷಿಕೋತ್ಸವದಲ್ಲಿ ಹೆಂಡತಿಯಿಂದ ಹೊಸ ಚಪ್ಪಲಿ ಉಡುಗೊರೆಯಾಗಿ ಪಡೆದರೂ, ಅದು ಕಳ್ಳನ ಪಾಲಾಗುವ ಸನ್ನಿವೇಶ, ಕಳುವಾದ ಚಪ್ಪಲಿಯಂಥದ್ದೆ ಚಪ್ಪಲಿ ಕದ್ದು, ಅದನ್ನು ಮೆಟ್ಟಿ ಮನೆಗೆ ಬಂದಾಗ ಇಡೀ ರಾತ್ರಿ ತಾನು ಪಡುವ ಮಾನಸಿಕ ವಿಹ್ವಲತೆ, ಹಿಂಸೆಯ ತೊಳಲಾಟ ವೃದ್ಧಾಪ್ಯದ ಸಹಜ ಅಭಿನಯ ನೋಡುಗನ ಮನ ತಟ್ಟುತ್ತದೆ.

ಸಾವಿನ ಸುತ್ತ ನಡೆವ ಕಥೆಗೆ ಸಾವೇ ಪರಿಹಾರವಾಗುವ ವಿಚಿತ್ರ ಘಟನಾವಳಿಗಳು ವಾಸ್ತವದ ಬದುಕಿನ ಎಳೆಗಳೂ ಈ ಚಿತ್ರದಲ್ಲಿವೆ. ನಾಯಕ ನಾಯಕಿ ಇಲ್ಲದ ಚಿತ್ರ ಅನ್ನಿಸಿದರೂ, ನಾಯಕಿಯೇ ಆಗುವ ನಲವತ್ತು ದಾಟಿದ ಹೆಣ್ಣಿನ ಪಾತ್ರ ನಿರ್ವಹಿಸಿದ ಲಕ್ಷ್ಮಿ ಭಟ್ ಅವರ ಭಾವಪೂರ್ಣ ಅಭಿನಯ ಮನದಲ್ಲಿ ನಿಲ್ಲುತ್ತದೆ. ಹಿರಿಯ ನಾಗರಿಕ ದಂಪತಿ ಪಾತ್ರ ನಿರ್ವಹಿಸಿದ ಪ್ರೇಮಕುಮಾರ್, ಪದ್ಮಾಅವರ ಸಂಯಮದ ಹಾಗೂ ವಯೋ ಸಹಜ ಅಭಿನಯ ಚಿತ್ರಕ್ಕೆ ಪ್ಲಸ್ ಅಂಕ ನೀಡುತ್ತದೆ.

ಎಂ.ಡಿ. ಕೌಶಿಕ್, ಬ್ಯಾಂಕ್ ಅಧಿಕಾರಿಯಾಗಿ, ತಮ್ಮನಾಗಿ ಜವಾಬ್ದಾರಿ ವ್ಯಕ್ತಿತ್ವದ ಅಭಿನಯ ನೀಡಿದ್ದಾರೆ. ಉಳಿದಂತೆ ಪ್ರತಿಭಾವಂತ ಕಲಾವಿದ ಬಿರಾದಾರ್ ಹಾಗೂ ಪ್ರಕಾಶ್ ಕರಿಯಪ್ಪ ಅವರುಗಳ ಅಭಿನಯವೂ ಉಲ್ಲೇಖನೀಯ. ಬಹು ವರ್ಷಗಳಿಂದ ಒಳ್ಳೆಯ ಚಿತ್ರ ನೀಡಲು ಕನಸು ಕಾಣುತ್ತ ಚಿತ್ರರಂಗದಲ್ಲಿ ದುಡಿದ ಯುವ ನಿರ್ದೇಶಕ ಮಂಜು ಪಾಂಡವಪುರ ಅಚ್ಚುಕಟ್ಟಾದ ಚಿತ್ರ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಿತ್ರದ ಛಾಯಾಗ್ರಹಣ, ಸಂಕಲನ ಉತ್ತಮವಾಗಿದೆ. ಹಿರಿಯ ಕಲಾವಿದ, ಲೇಖಕ ಎಚ್.ಜಿ. ಸೋಮಶೇಖರರಾವ್ ಅವರ ಬರಹವೊಂದರ ಆಧಾರಿತ ಈ ಚಿತ್ರದ ನಿರ್ಮಾಪಕರು ಯಶೋಧ ಪ್ರಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT