ಗುರುವಾರ , ನವೆಂಬರ್ 14, 2019
18 °C

ಹಿರಿಯ ನಟಿ ಪದ್ಮಾದೇವಿ ಇನ್ನಿಲ್ಲ 

Published:
Updated:

ಬೆಂಗಳೂರು:  ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ ‘ಭಕ್ತಧ್ರುವ’ದಲ್ಲಿ ಅಭಿನಯಿಸಿದ್ದ ನಟಿ ಎಸ್.ಕೆ. ಪದ್ಮಾದೇವಿ (95) ಗುರುವಾರ ನಿಧನರಾದರು. 

ಅವರಿಗೆ ಪುತ್ರ, ನಿರ್ದೇಶಕ ನಂದಕಿಶೋರ್‌ ಇದ್ದಾರೆ.  ಬೆಂಗಳೂರಿನವರಾದ ಅವರನ್ನು ಬಳ್ಳಾರಿ ರಾಘವಾಚಾರ್ಯರು ರಂಗಭೂಮಿಗೆ ಪರಿಚಯಿಸಿದರು. ಹೆಚ್.ಎಲ್.ಎನ್.ಸಿಂಹ ಅವರ ನಾಟಕ ಕಂಪೆನಿಯಲ್ಲಿ ನಟಿಯಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ಸ್ವಂತ ನಾಟಕ ಸಂಸ್ಥೆ ‘ಜನತಾಕಲಾ’ವನ್ನೂ ಕಟ್ಟಿದರು. ಸಿನಿಮಾ ಕ್ಷೇತ್ರಕ್ಕಿಂತಲೂ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದರು.

ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್, ಶೇಷಕಮಲ ಕಲಾ ಮಂಡಳಿ, ಯುನೈಟೆಡ್ ಆರ್ಟಿಸ್ಟ್ ಕಂಬೈನ್ಸ್, ಜನತಾ ಕಲಾ ಸಂಗೀತ ನಾಟಕ ಮಂಡಳಿ ಹೀಗೆ ಹಲವು ಕಂಪೆನಿಗಳಲ್ಲಿ ಅವರು ದುಡಿದಿದ್ದಾರೆ. ರಾಜ್ಯದಾದ್ಯಂತ ಸುಮಾರು 5 ಸಾವಿರಕ್ಕೂ ಹೆಚ್ಚು ರಂಗಪ್ರದರ್ಶನ ನೀಡಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟಾಗ ಪದ್ಮಾವತಿ ಅವರಿಗೆ ಒಂಬತ್ತರ ಹರೆಯ. 1934ರಲ್ಲಿ ಸೆಟ್ಟೇರಿದ ‘ಭಕ್ತಧ್ರುವ’ ಚಿತ್ರದಲ್ಲಿ ಸಖಿಯ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯ ಪಯಣ ಆರಂಭಿಸಿದ್ದರು. ಸಾಮಾಜಿಕ ಚಿತ್ರ ‘ಸಂಸಾರನೌಕೆ’ (1936) ಅವರಿಗೆ ಹೆಸರು ತಂದು
ಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದ್ದರು. ಜತೆಗೆ ಸ್ವತಃ ವೀಣೆ ನುಡಿಸಿ ಒಂದು ಹಾಡು ಹಾಡಿದ್ದರು. ‘ವಸಂತ ಸೇನ’, ‘ಜಾತಕ ಫಲ’, ‘ಮುಕ್ತಿ’, ‘ಅಮರ ಮಧುರ ಪ್ರೇಮ’, ‘ಸಂಕ್ರಾಂತಿ’ ಚಿತ್ರಗಳಲ್ಲಿ ನಟಿಸಿದ್ದರು.

ತಮಿಳಿನಲ್ಲಿ ‘ಗಂಗಾವತರಣ’, ತೆಲುಗಿನಲ್ಲಿ ‘ಸತ್ಯಭಾಮಾ’, ‘ಹರವಿಲಾಸಂ’ ಸಿನಿಮಾದಲ್ಲೂ ಅಭಿನಯಿಸಿದ್ದರು.  ಆಕಾಶವಾಣಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದರು. ಕನ್ನಡ, ತಮಿಳು, ಮಲಯಾಳದಲ್ಲಿ ಬಾನುಲಿ ನಾಟಕಗಳನ್ನು ನಿರ್ದೇಶಿಸಿದ ಹಿರಿಮೆ ಅವರದು.

ಪದ್ಮಾದೇವಿ ಅವರ ಮೊಮ್ಮಗ ಪ್ರದ್ಯುಮ್ನ ಸಿಂಗಪುರದಲ್ಲಿ ಉದ್ಯೋಗದಲ್ಲಿದ್ದು, ಅವರು ಬಂದ ಬಳಿಕ ಶುಕ್ರವಾರ ಸಂಜೆ 4 ಗಂಟೆಗೆ ಬನಶಂಕರಿಯ ವಿದ್ಯುತ್‌ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.

ಪ್ರತಿಕ್ರಿಯಿಸಿ (+)