ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

90ನೇ ವಸಂತಕ್ಕೆ ಕಾಲಿಟ್ಟ ಗಾಯಕಿ ಆಶಾ ಭೋಸ್ಲೆ: ಪ್ರಜಾವಾಣಿ ಜೊತೆ ಮಾತಿನ ನೆನಪು

Last Updated 8 ಸೆಪ್ಟೆಂಬರ್ 2022, 7:00 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರಿಗೆ ಇಂದು(ಸೆ.8) ಜನ್ಮದಿನ.90 ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಆಶಾ ಅವರಿಗೆ ಚಿತ್ರರಂಗದವರು, ಗಣ್ಯರು ಸೇರಿದಂತೆ ಅನೇಕ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

1933 ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ್ದ ಆಶಾ ಅವರು ಸಂಗೀತ ಅಭ್ಯಾಸದ ನಂತರ1943 ರಿಂದ ಹಿನ್ನೆಲೆ ಗಾಯನ ವೃತ್ತಿಗೆ ಧುಮುಕಿದರು. ಅಲ್ಲಿಂದ ಇಲ್ಲಿಯವರೆಗೆ ಅವರು ಸಾವಿರಾರು ಗೀತೆಗಳನ್ನು ಹಾಡಿ ಸಂಗೀತ ಪ್ರಿಯರಿಗೆ ಸಂತಸ ನೀಡಿದ್ದಾರೆ.

ಹಿನ್ನೆಲೆ ಗಾಯನದ ಜೊತೆ ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ, ನಟಿ, ರಿಯಾಲಿಟಿ ಶೊತೀರ್ಪುಗಾರರಾಗಿಕೂಡ ಆಶಾ ಅವರು ಹೆಸರು ಮಾಡಿದ್ದಾರೆ. ಪದ್ಮವಿಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಸೇರಿದಂತೆ ಅನೇಕ ಉನ್ನತ ಪ್ರಶಸ್ತಿಗಳು ಆಶಾ ಅವರಿಗೆ ಸಂದಿವೆ.

ಈ ಹಿನ್ನೆಲೆಯಲ್ಲಿ ಪ್ರಜಾವಾಣಿಯಲ್ಲಿ19 ಜೂನ್ 2018 ರಂದು ಪ್ರಕಟಗೊಂಡಿದ್ದ ಆಶಾ ಭೋಸ್ಲೆ ಅವರ ಸಂದರ್ಶನ ಇಲ್ಲಿದೆ.. ಓದಿಗಾಗಿ

****

ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದೀರಿ. ಹೇಗನ್ನಿಸುತ್ತೆ?

ಹೌದು. ಸುಮಾರು ವರ್ಷಗಳ ನಂತರ ಬೆಂಗಳೂರಿಗೆ ಬಂದಿರುವೆ. ಮೊದಲ ಬಾರಿಗೆ ಅಮ್ಮನೊಂದಿಗೆ ಬೆಂಗಳೂರಿಗೆ ಬಂದಿದ್ದ ನೆನಪುಗಳು ಎದೆಯಂಗಳಕೆ ಮತ್ತೆ ಮರುಕಳಿಸುತ್ತಿವೆ. ಈ ಬಾರಿ ಸಂಗೀತ ಕಾರ್ಯಕ್ರಮ ನೀಡಲು ಬಂದಿರುವುದು ತುಂಬಾ ಖುಷಿಯಾಗಿದೆ.

ದಕ್ಷಿಣ ಭಾರತದ ಭಾಷೆಗಳಲ್ಲಿ ಹಾಡಿದ ಅನುಭವ ಹೇಗಿತ್ತು?

ಇಳಯರಾಜ ಮತ್ತು ಎ.ಆರ್‌.ರೆಹಮಾನ್‌ ಅವರ ಸಂಗೀತ ನಿರ್ದೇಶನದಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದೇನೆ. ‘ಎಂದ್‌ ಊರು ಕಾದಲ ಪತಿ ಎನ್ನ’ ಎನ್ನುವ ತಮಿಳು ಹಾಡು ಇಳಯರಾಜ ಅವರೊಂದಿಗೆ ಹಾಡಿದ ಮೊದಲನೇ ಹಾಡು. ಕನ್ನಡ, ಮಲಯಾಳಿ ಭಾಷೆಗಳಲ್ಲೂ ಹಾಡಿದ್ದೇನೆ. ಸಿಂಗಪುರದಲ್ಲಿ ಮಲಯಾಳಿ ಭಾಷೆಯಲ್ಲಿ ಹಾಡಿದಾಗ ಪ್ರೇಕ್ಷರೆಲ್ಲ ವ್ಹಾ... ವ್ಹಾ... ಬಹೊತ್‌ ಅಚ್ಚಾ ಹೈ ಎಂದಿದ್ದರು. ಹಿಂದಿ ಹಾಡಿಗೆ ಅಂಥ ಉದ್ಘೋಷ ಸಿಗಲಿಲ್ಲ (ಜೋರಾದ ನಗು)...

83ರ ಹರೆಯದಲ್ಲೂ ಇಷ್ಟೊಂದು ಉತ್ಸಾಹದಿಂದಿದ್ದೀರಿ. ನಿಮ್ಮ ಕ್ರಿಯಾಶೀಲತೆಯ ಗುಟ್ಟೇನು?

ಗುಟ್ಟೇನೂ.... ಇಲ್ಲ. ನಿಮ್ಮಂತೆಯೇ ನನ್ನ ಬದುಕು. ಸಂಗೀತವೇ ಇದಕ್ಕೆಲ್ಲ ಕಾರಣ. ನನ್ನ ಅಮ್ಮ ನನ್ನನ್ನು ಚೆನ್ನಾಗಿ ಬೆಳೆಸಿದ್ದಾರೆ. ಕೆಲಸವಿಲ್ಲದೆ ಸುಮ್ಮನೆ ಕೂಡುವುದು ನನಗೆ ಇಷ್ಟವಾಗಲ್ಲ. ಅಡುಗೆ, ಮನೆಗೆಲಸ, ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇರ್ತೀನಿ. ಸದ್ಯ 75 ವರ್ಷಗಳ ಸಂಗೀತ ಪಯಣ ಪೂರೈಸಿದ್ದೇನೆ. ಇಷ್ಟೊಂದು ಹಾಡುಗಳನ್ನು ಹೇಗೆ ಹಾಡಿದೆ ಎನ್ನುವುದೇ ಗೊತ್ತಾಗಲಿಲ್ಲ. ನನ್ನನ್ನು ನಾನು ಗಮನಿಸಿಕೊಳ್ಳಲು, ಊಟ, ತಿಂಡಿಗೂ ಪುರುಸೊತ್ತು ಇರುತ್ತಿರಲಿಲ್ಲ. ಚಹಾ ಕುಡಿದೇ ದಿನಗಳನ್ನು ದೂಡಿದ್ದುಂಟು.

ಒಂದು ದಿನಕ್ಕೆ ಆರೇಳು ಹಾಡುಗಳ ಧ್ವನಿ ಮುದ್ರಣಕ್ಕೆ (ರೆಕಾರ್ಡಿಂಗ್‌) ಹೋಗಬೇಕಾಗುತ್ತಿತ್ತು. ಬೆಳಗ್ಗೆ 7 ಗಂಟೆಗೆ ರೆಕಾರ್ಡಿಂಗ್‌ಗಾಗಿ ಹೋಗಬೇಕಾಗುತ್ತಿತ್ತು, ರಾತ್ರಿಯಿಡಿ ಅದೇ ಕೆಲಸ ಮಾಡಬೇಕಾಗ್ತಿತ್ತು. ಗೊತ್ತೇ ಆಗಲಿಲ್ಲ, ಇಲ್ಲೀತನಕ ಸಾಗಿ ಬಂದ ದಾರಿ. ಎಲ್ಲ ದೇವರ ಆಶೀರ್ವಾದ. ಇವತ್ತು ನಿಮ್ಮ ಜೊತೆಯಲ್ಲಿದ್ದೇನೆ.

ಅಂದಿನ ಮತ್ತು ಇಂದಿನ ಸಂಗೀತದ ಬಗ್ಗೆ ನಿಮ್ಮ ಅಭಿಪ್ರಾಯ?

ಇಂದಿಗೂ ರಫೀ, ಇಳಯರಾಜ, ಕಿಶೋರ್‌ ಅವರ ಸಂಗೀತ, ಸಾಹಿತ್ಯ ಅಂತ ಗುರ್ತಿಸಿ ಹಾಡುತ್ತೇವೆ, ಸ್ಮರಿಸುತ್ತೇವೆ. ಅಂದಿನ ಸಾಹಿತ್ಯದಲ್ಲಿ ಮನಸಿಗೆ ಮುದನೀಡುವಂತಹ ಶಕ್ತಿಯಿತ್ತು. ಹಾಗಂತ ಇಂದಿನ ಸಾಹಿತ್ಯದಲ್ಲಿ ಅದು ಇಲ್ಲ ಅಂತಲ್ಲ. ಅಂದು ಸಾಹಿತ್ಯ ರಚನೆ, ಸಂಗೀತ ಸಂಯೋಜನೆಯಲ್ಲಿ ನಿರ್ದೇಶಕ, ನಿರ್ಮಾಪಕ, ಎಲ್ಲರೂ ಒಂದೆಡೆ ಸೇರಿ ಚರ್ಚಿಸುವ ಮೂಲಕ ಅದ್ಭುತ ಸಾಹಿತ್ಯ, ಸಂಗೀತ ಹೊರಹೊಮ್ಮುತ್ತಿತ್ತು. ಎಲ್ಲ ಕೆಲಸವನ್ನು ಒಟ್ಟಾಗಿ ಸೇರಿ, ಆಸಕ್ತಿ, ಜವಾಬ್ದಾರಿಯಿಂದ ಮಾಡುತ್ತಿದ್ದೆವು. ಆದರೆ, ಇದೀಗ ದಿನಕ್ಕೊಬ್ಬನಿರ್ದೇಶಕ, ಅವರು ಬರೆದದ್ದೇ ಸಾಹಿತ್ಯ ಹಾಡಿದ್ದೇ ಸಂಗೀತ ಎನ್ನುವಂತಾಗಿದೆ. ಟ್ಯೂನ್‌ ನೆನಪಿದ್ದರೇ ಸಾಹಿತ್ಯ ನೆನಪಿರಲ್ಲ. ಹಾಗಂತ ಹೊಸಬರು ಹೊಸ ಪ್ರಯತ್ನಗಳನ್ನು ಮಾಡಬಾರದಂತಲ್ಲ, ನಿಮ್ಮ ಹೊಸ ಪ್ರಯತ್ನಗಳು ಜನರನ್ನು ರಂಜಿಸುವುದರ ಜೊತೆಗೆ ನೂರಾರು ಕಾಲ ಸ್ಮರಿಸುವಂತಿರಲಿ. ಸಂಗೀತ ಕೇವಲ ನೃತ್ಯ‌ಕ್ಕಾಗಿ ಮಾತ್ರ ಮೀಸಲಾಗದಿರಲಿ.

ಯುವ ಗಾಯಕರಿಗೆ ಏನು ಹೇಳಲು ಬಯಸುತ್ತೀರಿ?

ಎಂಥದ್ದೇ ಸಂಗೀತ, ನೃತ್ಯ ಕಲಿಯುವ ಮುನ್ನ, ಶಾಸ್ತ್ರೀಯವಾಗಿ ಅಧ್ಯಯನ ಮಾಡಿ. ಭವಿಷ್ಯದಲ್ಲಿ ಅದು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲದು. ಆತ್ಮವಿಶ್ವಾಸದಿಂದ ಮುನ್ನಡೆದಾಗ ನೀವು ನಟ, ಗಾಯಕ, ನೃತ್ಯಗಾರ ಎಲ್ಲವೂ ಆಗಬಲ್ಲಿರಿ. ಪ್ರತಿ ಹಾಡನ್ನು ಮೊದಲ ಹಾಡೆಂದೇ ಹಾಡಿ. ಅದುವೇ ನನ್ನ ಯಶಸ್ಸಿನ ಗುಟ್ಟು. ಪ್ರತಿ ಕೆಲಸವನ್ನೂ ಮೊದಲ ಕೆಲಸವೆಂದೇ ಆರಂಭಿಸಿ, ಸಾಧ್ಯವೆಂಬುದನ್ನು ಮರೆತು ಸಾಧನೆಯತ್ತ ಸಾಗಿ.

ಆರೋಗ್ಯದ ಕಾಳಜಿ, ಮಾನಸಿಕ ಸಮತೋಲನ ಹೇಗೆ ಕಾಪಾಡಿಕೊಳ್ತೀರಿ?

ಮನಸಾರೆ ಅಡುಗೆ ಮಾಡುವೆ. ಕಾರದ ತಿಂಡಿಗಳು ಇಷ್ಟ. ಮೊಸರು, ಐಸ್‌ಕ್ರೀಂ, ತಣ್ಣನೆ ಪದಾರ್ಥಗಳನ್ನು ತಿನ್ನಲ್ಲ. ಸಂಗೀತ ಸಾಧನೆಯಿಂದಲೇ ಮಾನಸಿಕ ನೆಮ್ಮದಿ ಪಡೆಯುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT