ಸೋಮವಾರ, ಮಾರ್ಚ್ 8, 2021
31 °C

ಪರೋಪಕಾರದ ಪಾಯಿಂಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೇದಿಕೆಯ ಮೇಲೆ ಕೂತಿದ್ದ ಒಬ್ಬೊಬ್ಬರ ಹಿನ್ನೆಲೆಯಲ್ಲಿಯೂ ಒಂದೊಂದು ಕಥೆ ಇತ್ತು. ಕಡುಕಷ್ಟದಲ್ಲಿ ಬದುಕನ್ನು ಕಂಡ ಅನುಭವ ಇತ್ತು. ಆ ಎಲ್ಲ ಮುಳ್ಳುಗಳನ್ನು ದಾಟಿ ಹೂವಿನ ಹಾದಿಗೆ ಜಿಗಿಯುವ ಉತ್ಸಾಹವೂ ಇತ್ತು.

‘ಒಳಿತು ಮಾಡು ಮನುಸಾ... ನೀ ಇರೂದು ಮೂರೇ ದಿವಸ’ ಎಂಬ ಹಾಡನ್ನು ಕೇಳದವರು ಅಪರೂಪ. ಆದರೆ ಈ ಹಾಡನ್ನು ಬರೆದವರು ಯಾರು ಎಂಬುದು ಮಾತ್ರ ಬಹುತೇಕರಿಗೆ ಗೊತ್ತೇ ಇಲ್ಲ. ಈ ಹಾಡಿಗೆ ಸಾಹಿತ್ಯ ಬರೆದವರು ಋಷಿ. ತಮ್ಮ ಕಷ್ಟಕಾಲದಲ್ಲಿ ಜತೆಯಾಗಿ ನಿಂತವರು, ಸಹಾಯ ಮಾಡಿದವರು, ಅನುಕಂಪ ತೋರಿದವರಿಗಾಗಿ ಅವರೊಂದು ಸಿನಿಮಾ ಮಾಡಲು ಹೊರಟಿದ್ದಾರೆ. ಈ ಚಿತ್ರವನ್ನು ಅವರೇ ನಿರ್ಮಾಣ ಮಾಡುತ್ತಿಲ್ಲ. ಬದಲಿಗೆ ವಿವೇಕ್‌ ಮತ್ತು ಪ್ರದೀಪ್‌ ಎಂಬ ಎರಡು ಯುವ ಮನಸ್ಸುಗಳನ್ನು ನಿರ್ದೇಶಕರ ಕುರ್ಚಿಯಲ್ಲಿ ಕೂರಿಸಿ ತಾವು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಈ ಚಿತ್ರಕ್ಕೆ ‘ಭೂಮಿ ಮೇಲೆ ಸಾವು ಸಂಭ್ರಮವಾದರೆ, ದ್ವೇಷ ಸಾಯುತ್ತದೆ..!’ ಎಂಬ ಅಡಿಬರಹವೂ ಇದೆ.

‘ಒಂದು ವರ್ಷದ ಹಿಂದೆ ‘ಒನ್ ವೇ’ ಎಂಬ ಸಿನಿಮಾ ಮಾಡುತ್ತಿರುವ ಸಂದರ್ಭದಲ್ಲಿ ಎರಡು ಚೆಕ್‌ಗಳು ಬೌನ್ಸ್‌ ಆದ ಕಾರಣಕ್ಕೆ ನಾನು ಜೈಲಿಗೆ ಹೋಗಬೇಕಾಯ್ತು. ಅಲ್ಲಿ ಹೋಗುವವರೆಗೆ ಜೈಲಿನಲ್ಲಿ ಇರುವವರೆಲ್ಲ ಖಳರು ಎಂದೇ ನಂಬಿದ್ದೆ. ಆದರೆ ಒಮ್ಮೆ ಒಳಗೆ ಹೋದ ಮೇಲೆ ತಿಳಿಯಿತು. ಮಹಾನ್‌ ಕೊಲೆಗೆಡುಕರು, ವಂಚಕರು, ಖಳರು ಎಲ್ಲರೂ ಹೊರಗೇ ಇದ್ದಾರೆ; ಕಾನೂನು ಗೊತ್ತಿಲ್ಲದವರು, ಬಡಪಾಯಿಗಳು, ಅಮಾಯಕರು ಜೈಲಿನೊಳಗೆ ತುಂಬಿಕೊಂಡಿದ್ದಾರೆ ಎಂದು. ‘ಒಳಿತು ಮಾಡು ಮನುಸ’ ಹಾಡನ್ನು ಬರೆದಿದ್ದು ನಾನು ಎಂದರೆ ಯಾರೂ ನಂಬುತ್ತಲೇ ಇರಲಿಲ್ಲ. ಅಂಥದ್ದರಲ್ಲಿಯೂ ಕೆಲವರು ನಂಬಿದರು. ಸಹಾಯಕ್ಕೆ ನಿಂತರು. ಈ ಚಿತ್ರದಲ್ಲಿ ನಟಿಸಿರುವ ವಿಜಯ್ ಶಂಕರ್‌ ಮತ್ತು ಪುನೀತ್‌ ನನಗೆ ಭೇಟಿಯಾಗಿದ್ದು ಜೈಲಿನಲ್ಲಿಯೇ. ಯಾವುದೇ ಲಾಭದ ಉದ್ದೇಶದಿಂದ ಈ ಸಿನಿಮಾ ಮಾಡ್ತಿಲ್ಲ. ನನ್ನ ಸ್ನೇಹಿತರಿಗೋಸ್ಕರ, ಕಷ್ಟಕಾಲದಲ್ಲಿ ನನ್ನ ಜತೆಯಾದವರಿಗೋಸ್ಕರ ಸಿನಿಮಾ ಮಾಡ್ತೀನಿ’ ಎಂದರು ಋಷಿ.

ಸಿನಿಮಾದ ಕಥೆ ಚಿತ್ರಕಥೆ, ನಿರ್ದೇಶನವನ್ನು ಪ್ರದೀಪ್ ಮತ್ತು ವಿವೇಕ್ ಮಾಡಿದ್ದಾರೆ. ‘ನಾಲ್ಕು ಜನ ಬೇರೆ ಧರ್ಮದವರ ಮಧ್ಯೆ ಒಬ್ಬಳು ಹುಡುಗಿ ಬಂದಾಗ ಏನಾಗುತ್ತದೆ ಎನ್ನುವುದೇ ಈ ಚಿತ್ರದ ಹೂರಣ. ಒಂದು ಒಳ್ಳೆಯ ಸಂದೇಶ ಈ ಚಿತ್ರದಲ್ಲಿದೆ. ಆ ಸಂದೇಶ ಯಾವುದು ಎನ್ನುವುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಏನು ನಡೆಯುತ್ತಿದೆ, ಜನರು ಯಾವ ರೀತಿ ಯೋಚಿಸುತ್ತಾರೆ ಎನ್ನುವುದನ್ನು ಇಟ್ಟುಕೊಂಡೇ ಸಿನಿಮಾ ಮಾಡಿದ್ದೇವೆ’ ಎಂದು ವಿವರಿಸಿದರು ಅವರು. ಬೆಂಗಳೂರು ಮತ್ತು ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಸಲು ತಂಡ ಸಿದ್ಧತೆ ನಡೆಸಿಕೊಂಡಿದೆ.

ಪುನೀತ್, ಮಂಜು, ಪ್ರಭು, ಮನು ನಾಲ್ವರು ಹೊಸ ಹುಡುಗರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಕೀರ್ತಿ ಭಟ್‌ ನಾಯಕಿ. ಅವರ‍್ಯಾರಿಗೂ ಚಿತ್ರದ ಕಥೆಯನ್ನು ಇನ್ನೂ ಹೇಳಿಲ್ಲವಂತೆ. ಶ್ರೀಗುರು ಸಂಗೀತ, ಶಂಕರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು