ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಸ್‌ ನಟನೆಯ ‘ಸಲಾರ್‌’ ಚಿತ್ರ ಬಿಡುಗಡೆ ಮುಂದಕ್ಕೆ

Published 13 ಸೆಪ್ಟೆಂಬರ್ 2023, 6:14 IST
Last Updated 13 ಸೆಪ್ಟೆಂಬರ್ 2023, 6:14 IST
ಅಕ್ಷರ ಗಾತ್ರ

ಪ್ರಭಾಸ್‌–ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಸಲಾರ್‌’ ಸಿನಿಮಾ ಬಿಡುಗಡೆ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ. ಸೆ.28ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಪರಿಷ್ಕೃತ ಬಿಡುಗಡೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಿಸುವುದಾಗಿ ಹೊಂಬಾಳೆ ಫಿಲ್ಮ್ಸ್‌ ಬುಧವಾರ ತಿಳಿಸಿದೆ. 

ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾ ‘ಕೆ.ಜಿ.ಎಫ್‌.’ನಂತೆ ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಸಿನಿಮಾದ ಮೊದಲ ಭಾಗಕ್ಕೆ ‘ಸೀಸ್‌ ಫೈರ್‌’ ಎಂಬ ಅಡಿಬರಹವಿದೆ. ‘ಸಲಾರ್‌’ ಬಿಡುಗಡೆ ಮುಂದಕ್ಕೆ ಹೋಗಲಿದೆ ಎನ್ನುವ ಮಾತುಗಳು ಹಿಂದೆಯೇ ಕೇಳಿಬಂದಿತ್ತು. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ‘ಬಾನದಾರಿಯಲ್ಲಿ’ ಸಿನಿಮಾ ಬಿಡುಗಡೆ ಸೆ.28ಕ್ಕೆ ನಿಗದಿಯಾದಾಗಲೇ ಇದು ಖಚಿತವಾಗಿತ್ತು. ಆದರೆ ಚಿತ್ರ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್‌’ ಈ ಬಗ್ಗೆ ಅಧಿಕೃತವಾಗಿ ಘೋಷಿಸಿರಲಿಲ್ಲ.

ಬುಧವಾರ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಹೊಂಬಾಳೆ, ‘ಸಲಾರ್‌ಗೆ ನೀವು ನೀಡುತ್ತಿರುವ ಬೆಂಬಲಕ್ಕೆ ಆಭಾರಿ. ಕಾರಣಾಂತರಗಳಿಂದ ಸೆ.28ರಂದು ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಬಹಳ ಎಚ್ಚರಿಕೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇವೆ. ಅದ್ಭುತವಾದ ಸಿನಿಮಾ ಅನುಭವವನ್ನು ನೀಡುವ ಗುರಿ ನಮ್ಮದು. ಅತ್ಯುತ್ತಮ ಗುಣಮಟ್ಟದ ಸಿನಿಮಾವನ್ನು ನಿಮ್ಮ ಮುಂದೆ ಇಡಬೇಕು ಎನ್ನುವುದಕ್ಕೆ ತಂಡವು ಶ್ರಮಿಸುತ್ತಿದೆ. ಶೀಘ್ರದಲ್ಲೇ ಬಿಡುಗಡೆಯ ಪರಿಷ್ಕೃತ ದಿನಾಂಕವನ್ನು ಘೋಷಿಸುತ್ತೇವೆ. ‘ಸಲಾರ್‌’ಗೆ ಅಂತಿಮ ಸ್ಪರ್ಶ ನೀಡಲಾಗುತ್ತಿರುವ ಈ ಸಂದರ್ಭದಲ್ಲಿ ನೀವೆಲ್ಲರೂ ಜೊತೆಗಿರಿ’ ಎಂದು ಉಲ್ಲೇಖಿಸಿದೆ. 

ಹೊಂಬಾಳೆ ಫಿಲ್ಮ್ಸ್‌ನಡಿ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿ ಬಳಿ 14 ಬೃಹತ್‌ ಸೆಟ್‌ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಸನ್ ಹೀಗೆ ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ‘ಸಲಾರ್‌’ ಚಿತ್ರತಂಡದಲ್ಲಿದ್ದಾರೆ. ಸುಮಾರು ₹400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಚಿತ್ರಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸಲಾರ್‌ ಪೋಸ್ಟರ್‌ 
ಸಲಾರ್‌ ಪೋಸ್ಟರ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT