ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದಂತೆ ಮಾಯವಾದನು... ಪುನೀತ್ ರಾಜಕುಮಾರ್‌ ಅವರಿಗೆ ರಘುನಾಥ ಚ.ಹ ನುಡಿನಮನ ಲೇಖನ

Last Updated 30 ಅಕ್ಟೋಬರ್ 2021, 1:05 IST
ಅಕ್ಷರ ಗಾತ್ರ

ಕನ್ನಡ ಸಿನಿಮಾ ಎನ್ನುವ ಬಳ್ಳಿಯಲ್ಲಿ ನಸುಬಿರಿದ ಹೂವೊಂದು ಇದ್ದಕ್ಕಿದ್ದಂತೆ ಉದುರಿ ಮಣ್ಣು ಸೇರಿದಂತೆ ಪುನೀತ್‌ ರಾಜ್‌ಕುಮಾರ್‌ ಸಾವಿಗೀಡಾಗಿದ್ದಾರೆ.

ನಾಲ್ಕು ದಶಕಗಳ ಹಿಂದೆ ತೆರೆಕಂಡ ‘ಚಲಿಸುವ ಮೋಡಗಳು’ ಸಿನಿಮಾದಲ್ಲಿ ‘ಕಾಣದಂತೆ ಮಾಯವಾದನು’ ಎಂದು ಹಾಡಿದ್ದ ಚೋಟುದ್ದದ ಹುಡುಗ, ‘ಅಣ್ಣಾಬಾಂಡ್‌’ ರೂಪದಲ್ಲಿ ಅದೇ ಹಾಡನ್ನು ಹೊಸಧಾಟಿಯಲ್ಲಿ ಹಾಡಿದ್ದರು. ಈಗ ತಾವೇ ಮಾಯವಾಗಿದ್ದಾರೆ.

ಪುನೀತ್‌ ಎಂದಾಕ್ಷಣ ಕಣ್ಮುಂದೆ ಬರುವುದು ಅವರ ನಗು ಮತ್ತು ಮಗುತನ. ಕುಟುಂಬದವರ ನೆಚ್ಚಿನ ‘ಅಪ್ಪು’ ನಲವತ್ತಾರು ವರ್ಷಗಳ ನಂತರವೂ ತಮ್ಮ ಆತ್ಮೀಯರಿಗೆ–ಅಭಿಮಾನಿಗಳಿಗೆ ಅಪ್ಪು ಆಗಿಯೇ ಉಳಿದದ್ದು ಅವರೊಳಗಿದ್ದ ಮಗುತನದಿಂದಲೇ. ಅಪ್ಪು ಎನ್ನುವುದು ಅವರ ಹೆಸರಷ್ಟೇ ಆಗಿರಲಿಲ್ಲ; ಎಲ್ಲರನ್ನೂ ಸ್ನೇಹದಿಂದ ಅಪ್ಪುವ ಗುಣವೂ ಆಗಿತ್ತು. ರಾಜ್‌ಕುಮಾರ್‌ ನಂತರ ಮಕ್ಕಳನ್ನು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನಾಗಿ ಪಡೆದ ಅಗ್ಗಳಿಕೆ ಅವರದ್ದೇ ಇರಬೇಕು. ಸ್ಟಾರ್‌ ನಟರ ಹೊಸ ಸಿನಿಮಾಗಳು ತೆರೆಕಂಡ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಉನ್ಮಾದದ ಯುವಕರೇ ಕಿಕ್ಕಿರಿಯುವುದು ಸಾಮಾನ್ಯ.

ಆದರೆ, ಪುನೀತ್‌ ಸಿನಿಮಾಗಳು ತೆರೆಕಂಡಾಗ ಮಹಿಳೆಯರನ್ನೂ ಮಕ್ಕಳನ್ನೂ ಕಾಣಬಹುದಿತ್ತು. ನಿಜವಾದ ಅರ್ಥದಲ್ಲಿ ಅವರು ‘ಕುಟುಂಬದ ನಟ.’ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ರಂಜಿಸಬಲ್ಲ, ಮನಸೂರೆಗೊಳ್ಳಬಲ್ಲ ಸಾಮರ್ಥ್ಯ ಅವರಿಗಿತ್ತು.

ಸಿನಿಮಾಗಳಲ್ಲಿನ ‘ಪವರ್‌ ಸ್ಟಾರ್‌’ ಮೈಕಟ್ಟು ನಿಜಜೀವನದಲ್ಲಿ ಕಾಣಿಸುತ್ತಿರಲಿಲ್ಲ. ಅವರದು ತಿದ್ದಿತೀಡಿದ ಪುತ್ಥಳಿಯಂಥ ಮೈಕಟ್ಟಾಗಿರಲಿಲ್ಲ. ಮಟ್ಟಸ ಎತ್ತರದ, ಕೃಷ್ಣವರ್ಣದ ಪುನೀತ್‌ ಎಲ್ಲರೊಳಗೊಂದಾಗುವ ಹುಡುಗನಂತಿದ್ದರು. ಗುಂಪಿನಿಂದ ಭಿನ್ನವಾಗಿ ಕಾಣಿಸುತ್ತಿದ್ದುದು ಅವರ ನಗು. ಮಗುವಿನ ಮೋರೆಯಲ್ಲಿ ಸುಳಿದುಹೋಗುವ ಮಂದಹಾಸಕ್ಕೆ ಸೋಲದವರಾರು? ಪುನೀತ್‌ರ ನಗುವೂ ಅಷ್ಟೇ – ತುಟಿಯಂಚಿನಲ್ಲಿ ಅಂತಃಕರಣವೇ ಅರಳಿದಂತಿರುತ್ತಿತ್ತು.

ಪುನೀತ್‌ ಗಳಿಸಿದ ಜನಪ್ರಿಯತೆಗೆ ನಟಿಸಿದ ಸಿನಿಮಾಗಳಷ್ಟೇ ಪ್ರಯತ್ನಪೂರ್ವಕವಾಗಿ ಅವರು ರೂಢಿಸಿಕೊಂಡ ವ್ಯಕ್ತಿತ್ವವೂ ಕಾರಣವಾಗಿತ್ತು. ರಾಜ್‌ಕುಮಾರ್‌ ಅವರನ್ನು ಪುನೀತ್‌ ಅವರಲ್ಲಿ ಕಂಡು ಪುಳಕಗೊಳ್ಳುತ್ತಿದ್ದವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿತ್ತು.

‘ಜನರ ಪ್ರೀತಿ ಅಪ್ಪ ಅಮ್ಮನ ಮೂಲಕ ಬಂದದ್ದು. ನನ್ನೆಲ್ಲ ಸಾಧನೆಗೆ ಅಪ್ಪಾಜಿ ಅಮ್ಮನ ಆಶೀರ್ವಾದವೂ ಕಾರಣ. ಬಹಳಷ್ಟು ಕಡೆ ನನ್ನನ್ನು ‘ಅಣ್ಣಾವ್ರ ಮಗ’ ಎಂದೇ ಗುರ್ತಿಸುತ್ತಾರೆ’ ಎಂದು ಹೇಳಿಕೊಳ್ಳುತ್ತಿದ್ದ ಪುನೀತ್‌, ‘ಅಣ್ಣಾವ್ರ ಮಗ’ ಗೌರವಕ್ಕೆ ತಕ್ಕಂತೆ ತಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿದ್ದರು.

‘ವೈಯಕ್ತಿಕ ಜೀವನದಲ್ಲಿ ಹಾಗೂ ತೆರೆಯ ಮೇಲೆ ಅಶ್ಲೀಲವಾಗಿ ನಡೆದುಕೊಳ್ಳೋದು ಅಥವಾ ಕಾಣಿಸಿಕೊಳ್ಳೋದು ನನಗಿಷ್ಟವಿಲ್ಲ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ರಾಜ್‌ಕುಮಾರ್‌ ಅವರ ಜೀವನದ ಆದರ್ಶ ಅವರ ಮಗನದೂ ಆಗಿತ್ತು. ತನ್ನ ಓರಗೆಯ ಅನೇಕ ನಟರು ಮನೆಯ ಜಗಳವನ್ನು ಬೀದಿಗೆ ತಂದುಕೊಂಡರೆ, ವೃತ್ತಿಜೀವನ ಹಾಗೂ ಕುಟುಂಬ ಜೀವನ – ಎರಡರಲ್ಲೂ ಪುನೀತ್‌ ಶಿಸ್ತು ಮತ್ತು ಘನತೆ ಕಾಪಾಡಿಕೊಂಡಿದ್ದರು.

ಅಪ್ಪನ ಬಿಂಬವನ್ನು ಜನ ಮಗನಲ್ಲಿ ಕಂಡರೂ, ಪುನೀತ್‌ ಅವರಿಗೆ ತಮ್ಮ ಸಾಮರ್ಥ್ಯ ಮತ್ತು ಮಿತಿಯ ಬಗ್ಗೆ ಸ್ಪಷ್ಟ ಅರಿವಿತ್ತು. ‘ಅಪ್ಪಾಜಿ ಮಟ್ಟ ತಲುಪುವುದಿರಲಿ, ಅಭಿಮಾನಿಯಾಗಿ ಅವರೊಂದಿಗೆ ಹೋಲಿಸಿಕೊಳ್ಳುವುದೂ ನನ್ನಿಂದ ಸಾಧ್ಯವಿಲ್ಲ’ ಎನ್ನುತ್ತಿದ್ದರು.

‘ಅಪ್ಪಾಜಿ ವರ್ಚಸ್ಸು ನಿಮಗೆ ಎಲ್ಲಿಂದ ಬರಬೇಕು ಎಂದು ನನ್ನ ಹೆಂಡತಿಯೇ ಆಗಾಗ ಹೇಳ್ತಿರ್ತಾಳೆ’ ಎಂದು ತಮ್ಮನ್ನು ತಾವು ತಮಾಷೆ ಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತಿತ್ತು. ಆದರೂ, ಪುನೀತ್‌ ಅವರೊಂದಿಗೆ ಒಡನಾಡಿದವರಿಗೆ, ರಾಜ್‌ ಉದಾತ್ತ ವ್ಯಕ್ತಿತ್ವದ ಬೋನ್ಸಾಯ್‌ ಕಲಾಕೃತಿಯಂತೆ ಅಪ್ಪು ಕಾಣಿಸುತ್ತಿದ್ದರು.

ಕುಟುಂಬವತ್ಸಲ

ಪುನೀತ್‌ ಕುಟುಂಬವತ್ಸಲ ವ್ಯಕ್ತಿ. ಅವರ ನಗು–ನೈತಿಕತೆಯ ಶಕ್ತಿ ಪತ್ನಿ ಅಶ್ವಿನಿ ಹಾಗೂ ಮಕ್ಕಳಾದ ಧೃತಿ ಮತ್ತು ವಂದನಾ ಆಗಿದ್ದರು. ಅನಾರೋಗ್ಯದಿಂದ ಜರ್ಝರಿತಗೊಂಡಿದ್ದ ರಾಘಣ್ಣ ಚೇತರಿಸಿಕೊಳ್ಳಲು ಎಲ್ಲ ರೀತಿಯಿಂದಲೂ ಬೆಂಬಲವಾಗಿ ನಿಂತಿದ್ದರು.

ಕಲಾವಿದನಾಗಿ ಸಿನಿಮಾಗಳಲ್ಲಿಯೂ ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವುದು ಅವರಿಗೆ ಇಷ್ಟವಾಗುತ್ತಿತ್ತು. ‘ಅರಸು’, ‘ಆಕಾಶ್‌’, ‘ಮಿಲನ’, ‘ಪೃಥ್ವಿ’, ‘ಮೈತ್ರಿ’, ‘ಪರಮಾತ್ಮ’, ‘ರಾಜಕುಮಾರ’ – ಈ ಎಲ್ಲ ಸಿನಿಮಾಗಳಲ್ಲಿನ ಸಾಮಾನ್ಯ ಅಂಶ, ಅವುಗಳು ಮನುಷ್ಯ ಸಂಬಂಧಗಳ ಬಗ್ಗೆ ಮಾತನಾಡುವುದು. ಇಂಥ ಸುಂದರ ಸ್ವಪ್ನಗಳ ಪಟ್ಟಿಯನ್ನು ಬೇರೊಬ್ಬ ಸಮಕಾಲೀನ ನಟನ ಸಿನಿಮಾಗಳಿಂದ ಹೆಕ್ಕುವುದು ಸಾಧ್ಯವಿಲ್ಲ ಎನ್ನುವುದೇ, ಕನ್ನಡ ಚಿತ್ರರಂಗದಲ್ಲಿ ಪುನೀತ್‌ರ ಸ್ಥಾನ ಏನಾಗಿತ್ತು ಹಾಗೂ ಕನ್ನಡ ಸಮಾಜಕ್ಕೆ ಪುನೀತ್‌ ಯಾಕೆ ಮುಖ್ಯವಾಗಿದ್ದರು ಎನ್ನುವುದನ್ನು ಹೇಳುವಂತಿದೆ.

ಸಿನಿಮಾಗಳಿಂದ ಸಾಮಾಜಿಕ ಪರಿಣಾಮ ಸಾಧ್ಯವಿಲ್ಲ ಎನ್ನುವಂತೆ ಯುವನಟರೆಲ್ಲ ಮನರಂಜನೆಯ ಸೂತ್ರದ ಹಿಂದೆ ಬಿದ್ದಿರುವಾಗ, ‘ಸಿನಿಮಾದಲ್ಲಿ ಸಂದೇಶ ಇರಬೇಕು. ಆದರದು ವಾಚ್ಯವಾಗಿ ಇರಬೇಕಾಗಿಲ್ಲ’ ಎನ್ನುವುದು ಪುನೀತ್‌ರ ನಂಬಿಕೆ ಯಾಗಿತ್ತು. ದೀನದುರ್ಬಲರಿಗೆ ನೆರವಾಗುವ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರೂ, ಪ್ರದರ್ಶನಪ್ರಿಯತೆಯಿಂದ ದೂರವುಳಿದಿದ್ದರು. ಫ್ಯಾಮಿಲಿ ಆ್ಯಕ್ಟರ್‌ ಎನ್ನುವ ಇಮೇಜಿದ್ದರೂ, ಅದಕ್ಕೆ ಅಂಟಿಕೊಳ್ಳಲು ಪುನೀತ್‌ ಬಯಸುತ್ತಿರಲಿಲ್ಲ. ನಟನಾಗಿ ಇಮೇಜ್‌ ನಂಬುವುದಿಲ್ಲ ಎನ್ನುತ್ತಿದ್ದ ಅವರು, ‘ಜಾಕಿ’ಯಂಥ ಸಿನಿಮಾಗಳಲ್ಲಿ ಉತ್ಸಾಹದಿಂದಲೇ
ಕಾಣಿಸಿಕೊಂಡಿದ್ದರು.

ಬಾಲನಟನಿಂದ ಆರಂಭವಾದ ಸಾರ್ಥಕ ಚಿತ್ರಯಾನ

ವರ್ಷ ತುಂಬುವ ಮೊದಲೇ ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲೋಹಿತ್‌ (ಪುನೀತ್‌ರ ಮೊದಲ ಹೆಸರು), ಬಾಲನಟನಾಗಿ ಜನಪ್ರಿಯತೆಯನ್ನೂ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿದ ಪ್ರತಿಭಾವಂತ. ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಾಗ್ಯವಂತ’ ಬಾಲನಟನಾಗಿ ಅವರಿಗೆ ಹೆಸರು ತಂದುಕೊಟ್ಟ ಕೆಲವು ಚಿತ್ರಗಳು. ‘ಭಕ್ತಪ್ರಹ್ಲಾದ’ ಚಿತ್ರದಲ್ಲಿ ರಾಜ್‌ಕುಮಾರ್‌ ಅವರ ಹಿರಣ್ಯಕಶ್ಯಪು ಪಾತ್ರದ ಆರ್ಭಟದ ಎದುರು, ಭಕ್ತಿಯೇ ಮೂರ್ತಿವೆತ್ತಂತ ಬಾಲಕ ಪ್ರಹ್ಲಾದನ ಪಾತ್ರದಲ್ಲಿ ಪುನೀತ್ ದಿಟ್ಟವಾಗಿ, ಮನೋಜ್ಞವಾಗಿ ನಟಿಸಿದ್ದರು. ಎನ್‌. ಲಕ್ಷ್ಮೀನಾರಾಯಣ್‌ ನಿರ್ದೇಶನದ ‘ಬೆಟ್ಟದ ಹೂವು’ ಚಿತ್ರದಲ್ಲಿ – ರಾಮಾಯಣ ಪುಸ್ತಕ ಹಾಗೂ ಹರಕು ಬದುಕಿನ ಆಯ್ಕೆ ಎದುರಾದಾಗ ಬದುಕಿನ ಅನಿವಾರ್ಯತೆಯನ್ನೇ ಆಯ್ದುಕೊಳ್ಳುವ ರಾಮುವಿನ ಪಾತ್ರ ನಿರ್ವಹಣೆ, ‘ಅತ್ಯುತ್ತಮ ಬಾಲನಟ’ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತ್ತು. ‘ಚಲಿಸುವ ಮೋಡಗಳು’ ಹಾಗೂ ‘ಎರಡು ನಕ್ಷತ್ರಗಳು’ ಸಿನಿಮಾಗಳಲ್ಲಿನ ನಟನೆಗಾಗಿ ಅತ್ಯುತ್ತಮ ಬಾಲನಟ ರಾಜ್ಯಪ್ರಶಸ್ತಿ ದೊರೆತಿತ್ತು.

‘ಅಪ್ಪು’ (2002) ಚಿತ್ರದ ಮೂಲಕ ಪ್ರೌಢ ನಾಯಕನಾಗಿ ಚಿತ್ರರಂಗದಲ್ಲಿ ಎರಡನೇ ಇನಿಂಗ್ಸ್‌ ಆರಂಭಿಸಿದ ಪುನೀತ್‌, ನಂತರದ ಎರಡು ದಶಕಗಳ ಸಿನಿಮಾ ಜೀವನದಲ್ಲಿ ಸೋಲು ಕಂಡಿದ್ದು ತೀರಾ ಕಡಿಮೆ. ಲಾಲಿತ್ಯ ಹಾಗೂ ಹುರುಪು ತುಂಬಿದ್ದ ನೃತ್ಯದ ಮೂಲಕ ಯುವಜನರನ್ನು ಸೆಳೆದಿದ್ದರು. ‘ಮಿಲನ’, ‘ಆಕಾಶ್‌’, ‘ಅರಸು’ ರೀತಿಯ ಚಿತ್ರಗಳೊಂದಿಗೆ ‘ಜಾಕಿ’, ‘ಹುಡುಗರು’, ‘ಅಣ್ಣಾಬಾಂಡ್‌’ನಂಥ ಒರಟು ಹುಡುಗರ ಪಾತ್ರಗಳಿಗೂ ಜೀವತುಂಬಿದ್ದರು. ‘ಮಿಲನ’, ‘ಜಾಕಿ’ ಚಿತ್ರಗಳಲ್ಲಿನ ಪಾತ್ರಪೋಷಣೆಗಾಗಿ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಪಡೆದಿದ್ದರು.

ಕಿರುತೆರೆಯ ‘ಕನ್ನಡದ ಕೋಟ್ಯ ಧಿಪತಿ’ ‍ಪುನೀತ್‌ ರಾಜ್‌ಕುಮಾರ್‌ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಿಸಿದ ಕಾರ್ಯಕ್ರಮ. ಹಿಂದಿಯಲ್ಲಿ ಅಮಿತಾಭ್‌ ಬಚ್ಚನ್‌ ನಿರ್ವಹಿಸುವ ನಿರೂಪಣೆಯ ಹೊಣೆಗಾರಿಕೆಯನ್ನು ಕನ್ನಡದಲ್ಲಿ ಪುನೀತ್‌ ನಿಭಾಯಿಸಿದ್ದರು. ಆ ಶೋನಲ್ಲಿ ಜನರ ಗಮನಸೆಳೆದದ್ದು ತಾರಾವರ್ಚಸ್ಸಲ್ಲ – ಆ ವರ್ಚಸ್ಸನ್ನು ಮೀರಿದ ಸರಳತೆ ಹಾಗೂ ಮರುಳುಗೊಳಿಸುವ ನಗು.

ಪುನೀತ್‌ ಬಹುದೊಡ್ಡ ಕನಸು ಗಾರ. ಉತ್ತಮ ಕಥೆಯೊಂದಿಗೆ ತಾಂತ್ರಿಕವಾಗಿಯೂ ಉತ್ತಮವಾಗಿರುವ ಸಿನಿಮಾಗಳನ್ನು ಕನ್ನಡದಲ್ಲಿ ರೂಪಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಅವರದಾಗಿತ್ತು. ‘ಕಥೆ, ಚಿತ್ರಕಥೆ, ತಂತ್ರಜ್ಞಾನ ಉತ್ತಮವಾಗಿರುವ ಒಳ್ಳೆಯ ಚಿತ್ರಗಳನ್ನು ನಾವು ರೂಪಿಸಬೇಕು. ಕಥೆಯೊಂದಿಗೆ, ನಿರ್ದೇಶಕ ತಾಂತ್ರಿಕವಾಗಿ ಶಕ್ತಿಶಾಲಿ ಆಗಿರೋದು ಬಹಳ ಮುಖ್ಯ’ ಎಂದು ನಂಬಿದ್ದ ಅವರು, ತಮ್ಮ ವಿಚಾರಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ನಿರ್ಮಾಣಸಂಸ್ಥೆ ಆರಂಭಿಸಿದ್ದರು; ಹೊಸ ಪ್ರತಿಭೆಗಳಿಗೆ – ಪ್ರಯೋಗಗಳಿಗೆ ಬೆಂಬಲವಾಗಿ ನಿಂತಿದ್ದರು.

ದೇಹದಂಡನೆಗೂ ರಾಜ್‌ ಪುತ್ರ ರಿಗೂ ತಾಳಮೇಳ ಇದ್ದಂತಿಲ್ಲ. ಜಿಮ್‌ನಲ್ಲಿ ಬೆವರು ಬಸಿಯುವಾಗ ಪಾರ್ಶ್ವವಾಯುವಿಗೆ ತುತ್ತಾಗಿದ್ದ ರಾಘವೇಂದ್ರ ರಾಜ್‌ಕುಮಾರ್‌ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಶಿವರಾಜ್‌ಕುಮಾರ್‌ ಹಿಂದೊಮ್ಮೆ ಅನಾರೋಗ್ಯಕ್ಕೆ ತುತ್ತಾದಾಗ, ವಿಪರೀತವಾಗಿ ದೇಹ ದಂಡಿಸಿದ್ದೇ ಕಾರಣ ಎನ್ನಲಾಗಿತ್ತು. ಈಗ
ಪುನೀತ್‌ ದೇಹದಂಡನೆ ಸಮಯದಲ್ಲೇ ಕುಸಿದು ಕೊನೆಯುಸಿರೆಳೆದಿದ್ದಾರೆ. ಶಿವರಾಜ್‌ಕುಮಾರ್‌ ವೃತ್ತಿಜೀವನಕ್ಕೆ ಇಪ್ಪತ್ತೈದು ವರ್ಷಗಳು ತುಂಬಿದ ಸಂದರ್ಭದಲ್ಲಿ ನಡೆದ ಸಂತೋಷಕೂಟದಲ್ಲಿ, ದೇಹದಾರ್ಢ್ಯ ಕಾಪಾಡಿಕೊಳ್ಳಲು ತಮ್ಮ ಮಕ್ಕಳು ಪಡುವ ಪಡಿಪಾಟಲು ಬಗ್ಗೆ ಕಾಳಜಿಯಿಂದ ಮಾತನಾಡಿದ್ದ ಪಾರ್ವತಮ್ಮನವರು – ‘ಮಕ್ಕಳ ಹೊಟ್ಟೆ ನೋಡಿದರೆ ಸಂಕಟವಾಗುತ್ತೆ’ ಎಂದು ನೊಂದುಕೊಂಡಿದ್ದರು. 2006ರಲ್ಲಿ ರಾಜ್‌ಕುಮಾರ್‌; 2017ರಲ್ಲಿ ಪಾರ್ವತಮ್ಮ; ಈಗ, 2021ರಲ್ಲಿ ಪುನೀತ್‌ ರಾಜ್‌ಕುಮಾರ್‌. ಹದಿನೈದು ವರ್ಷಗಳ ಅಂತರದ ಈ ಮೂರು ಸಾವುಗಳು ಕುಟುಂಬವೊಂದಕ್ಕಾದ ನಷ್ಟವಲ್ಲ – ‘ಕನ್ನಡ ಕುಟುಂಬ’ಕ್ಕಾದ ನಷ್ಟ.

ಗಿರಿರಾಜ್‌ ನಿರ್ದೇಶನದ ‘ಮೈತ್ರಿ’ ಸಿನಿಮಾದ ಕೊನೆಯಲ್ಲಿ, ನಾಯಕನಟ ಹಾಗೂ ಹಿರಿಯವಿಜ್ಞಾನಿ ಭೇಟಿಯಾಗುವ ಸನ್ನಿವೇಶವಿದೆ. ಮಲಯಾಳಂನ ಮೋಹನ್‌ಲಾಲ್‌ ಪೋಷಿಸಿದ್ದ ವಿಜ್ಞಾನಿಯ ಪಾತ್ರ ನಾಯಕನನ್ನು ಉದ್ದೇಶಿಸಿ – ‘ನಿಮ್ಮ ತಂದೆ ಈಗ ಇದ್ದಿದ್ದರೆ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿದ್ದರು’ ಎಂದು ಉದ್ಗರಿಸುತ್ತದೆ. ಅದು ನಾಯಕನಟನೊಬ್ಬನ ವಿಜೃಂಭಿಸುವ ಬಣ್ಣದ ಮಾತಾಗಿರದೆ, ಪುನೀತ್ ವ್ಯಕ್ತಿತ್ವಕ್ಕೆ ಹೊಂದುವ ವಿಶೇಷಣವೇ ಆಗಿದೆ. ಯಾವ ತಂದೆಯಾದರೂ ಹೆಮ್ಮೆಪಡಬಹುದಾದ ಮಗ ಅವರಾಗಿದ್ದರು. ಕನ್ನಡ ಚಿತ್ರರಂಗ ಎನ್ನುವ ಕುಟುಂಬ, ಕರ್ನಾಟಕ ಎನ್ನುವ ಕುಟುಂಬ ಹೆಮ್ಮೆಪಡಬಹುದಾದ ಕಲಾವಿದ ಹಾಗೂ ವ್ಯಕ್ತಿತ್ವ ಅವರದು. ಮೂವತ್ತಾರರ ಶಂಕರ್‌ನಾಗ್‌ ಸಾವಿಗೀಡಾದಾಗ, ಕನಸುಗಾರನೊಬ್ಬನನ್ನು ಕಳೆದುಕೊಂಡಿದ್ದಕ್ಕಾಗಿ ಕನ್ನಡಿಗರು ಮರುಗಿದ್ದರು. ಅಂತಹುದೇ ಮತ್ತೊಂದು ದುರಂತ–ಆಘಾತ ನಲವತ್ತಾರರ ಪುನೀತ್‌ ನಿಧನ. ಈ ಸಾವು ನಿತ್ಯ ಅಪೌಷ್ಟಿಕತೆಯಿಂದ ಬಳಲುತ್ತಿರುವ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಬಡವಾಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT