ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೊಬ್ಬರ ಏಳಿಗೆಗೆ ಸ್ವಜನಪಕ್ಷಪಾತ ಅಡ್ಡಿ ಸಲ್ಲದು: ಪ್ರೀತಿ ಜಿಂಟಾ

Last Updated 26 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ ನೆಲೆಕಂಡುಕೊಂಡಿದೆ. ಕೆಲವೊಮ್ಮೆ ಅದು ಇತರ ಕಲಾವಿದರಿಗೆ ತೊಡಕಾಗುತ್ತದೆ. ಆದರೆ, ಸಾಧಿಸುವ ಹಸಿವುಳ್ಳವರಿಗೆ ಅದು ಅಡ್ಡಿಯಾಗದು. ಅವರನ್ನು ಅದು ತಡೆಯಲು ಸಾಧ್ಯವಿಲ್ಲ...

ಹೀಗೆಂದವರು ಬಾಲಿವುಡ್ ಗುಳಿಕೆನ್ನೆ ಚೆಲುವೆ ನಟಿ ಪ್ರೀತಿ ಜಿಂಟಾ. ಈಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

‘ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಹಾಗೂ ಸಂದರ್ಶನಗಳಲ್ಲಿ ಸ್ವಜನಪಕ್ಷಪಾತದ ಕುರಿತು ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅದು ಬಾಲಿವುಡ್‌ಗೆ ಹೊಸತೇನಲ್ಲ. ಹಾಗಂತ ಅದು ತಪ್ಪೇನಲ್ಲ. ಪೋಷಕರು ತಮ್ಮ ಮಕ್ಕಳಿಗೆ ಸ್ವಾಭಾವಿಕವಾಗಿಯೇ ಚಿತ್ರರಂಗದಲ್ಲಿ ನೆಲೆಯೂರಲು ಸಹಾಯ ಮಾಡುತ್ತಾರೆ’ ಎಂದಿದ್ದಾರೆ 43ರ ಚೆಲುವೆ ಜಿಂಟಾ.

‘ಸ್ವಜನಪಕ್ಷಪಾತ ಎಂಬುದು ಹಿಂದೆಯಿಂದಲೂ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಆದರೂ, ಶಾರುಖ್‌ ಖಾನ್, ಅಕ್ಷಯ್‌ಕುಮಾರ್, ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ ಹಾಗೂ ಮುಂತಾದವರು ಇಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಅವರೆಲ್ಲರೂ ಸಿನಿಮಾ ರಂಗದಿಂದ ಬಂದವರಲ್ಲ. ಅವರೀಗ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು’ ಎಂದಿದ್ದಾರೆ.

‘ಇಂಡಸ್ಟ್ರಿಯಲ್ಲಿ ಮುಂದೆಯೂ ಸ್ಜಜನಪಕ್ಷಪಾತ ಎಂಬುದು ಇರುತ್ತದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆ ಹೆಸರಿನಲ್ಲಿ ಇತರರನ್ನು ತುಳಿಯುವುದಾಗಲಿ, ತುಚ್ಛವಾಗಿ ಕಾಣುವುದಾಗಲಿ ಮಾಡಬಾರದು. ಸಾಧಿಸುವ ಹಸಿವುಳ್ಳವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದ್ದಾರೆ.

ಬಾಲ್ಯ ಹಾಗೂ ಸಿನಿರಂಗಕ್ಕೆ ಕಾಲಿಟ್ಟ ಸಂದರ್ಭದ ಬಗ್ಗೆಯೂ ಮಾತನಾಡಿದ ಅವರು, ‘ನಾನು ಚಿಕ್ಕವಳಿದ್ದಾಗಲೇ ನನ್ನ ತಂದೆ ಮೃತಪಟ್ಟರು. ಆಗ ಕುಟುಂಬ ಸಂಕಷ್ಟದಲ್ಲಿತ್ತು. ನನ್ನೆಲ್ಲ ಕಷ್ಟಗಳಿಂದ ಹೊರಬರಲು ಆರ್ಥಿಕವಾಗಿ ನಾನು ಸದೃಢವಾಗಬೇಕಿತ್ತು. ಹೀಗಾಗಿಯೇ, ಕಷ್ಟಪಟ್ಟು ಸಿನಿಮಾ ರಂಗದಲ್ಲಿ ನೆಲೆಕಂಡುಕೊಂಡೆ’ ಎಂದರು.

‘ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ, ಸಿನಿಮಾದ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ಕಠಿಣ ಪರಿಶ್ರಮದಿಂದ ಇಲ್ಲಿ ಅಸ್ತಿತ್ವ ಕಂಡುಕೊಂಡೆ. ‘ದೊಡ್ಡ ನಟಿ ಅಥವಾ ಸ್ಟಾರ್ ಆಗುತ್ತೇನೆ’ ಎಂದು ನಾನು ಭಾವಿಸಿರಲಿಲ್ಲ. ನಾನು ಕಠಿಣ ಪರಿಶ್ರಮದಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ನಟಿಸುವಉತ್ಸಾಹ ಇರುವವರೆಗೆ ಚಿತ್ರರಂಗದಲ್ಲಿರುತ್ತೇನೆ’ ಎಂದಿದ್ದಾರೆ.

‘ವೀರ್ ಜಾರಾ’ ಮತ್ತು ‘ಸಲಾಂ ನಮಸ್ತೆ’ ಸಿನಿಮಾಗಳಲ್ಲಿ ನಟಿಸಿದ ಬಳಿಕ ಪ್ರೀತಿ ಜಿಂಟಾ ಅವರಲ್ಲಿ ಹೊಸ ಭರವಸೆ ಹುಟ್ಟಿಕೊಂಡಿತಂತೆ. ಆ ಬಳಿಕವೇ ಅವರು ಹೊಸ ಹೊಸ ಪಾತ್ರಗಳಿಗೆ ತನ್ನನ್ನು ತಾನು ತೆರೆದುಕೊಂಡರಂತೆ.

ಸದ್ಯ ಅವರು, ‘ಬೈಯ್ಯಾಜಿಸೂಪರ್ ಹಿಟ್’ ಸಿನಿಮಾದದಲ್ಲಿ ಸನ್ನಿ ಡಿಯೋಲ್ ಜೊತೆ ನಟಿಸುತ್ತಿದ್ದಾರೆ. ತನ್ನ ಒಡೆತನದ ಪಂಜಾಬ್ ಕಿಂಗ್ಸ್ ಇಲೆವೆನ್ ಐಪಿಎಲ್ ತಂಡದ ಬಗ್ಗೆ ಗಮನಹರಿಸುವ ಸಲುವಾಗಿ ಚಿತ್ರರಂಗದಿಂದ ಇಷ್ಟುದಿನ ಅವರು ಬ್ರೇಕ್ ತೆಗೆದುಕೊಂಡಿದ್ದರು.

‘ವಿಭಿನ್ನವಾಗಿ ಏನನ್ನಾದರೂ ಮಾಡುವಾಗ ನನಗೆ ಭಯವಾಗುತ್ತೆ. ಕ್ರೀಡಾಲೋಕಕ್ಕೆ ಕಾಲಿಡುವ ಉತ್ಸಾಹದಲ್ಲಿದ್ದಾಗಲೂ ಭಯವಾಗಿತ್ತು. ದೃಢ ನಿರ್ಧಾರ ಮಾಡಿ ಮುನ್ನುಗ್ಗಿದೆ. ನನಗೆ ಅವಕಾಶ ಕೊಟ್ಟ ನಿರ್ದೇಶಕರು, ನಿರ್ಮಾಪಕರ ಬಳಿ ಹೋಗಿ, ಯಾವುದೇ ಸಿನಿಮಾಗಳಿಗೂ ನನ್ನನ್ನು ಆಯ್ಕೆ ಮಾಡಬೇಡಿ ಎಂದು ಕೇಳಿಕೊಂಡೆ. ನನ್ನ ನಿರ್ಧಾರ ಕೇಳಿ ಅವರು ಅಚ್ಚರಿಗೊಂಡಿದ್ದರು. ಉದ್ಯಮಿಯಾಗಬೇಕು ಎಂಬ ಕನಸು ಕ್ರೀಡಾಲೋಕದಿಂದ ನನಸಾಗಿದೆ’ ಎಂದು ನೆನೆದಿದ್ದಾರೆ ಅವರು.

‘ಈ ಸಿನಿಮಾದಲ್ಲಿ ನಟಿಸುವ ಸಂಬಂಧಸನ್ನಿ ಡಿಯೋಲ್ ನನಗೆ ಕರೆ ಮಾಡಿದ್ದರು. ಅದಕ್ಕಾಗಿ ಅವರಿಗೆ ಕೃತಜ್ಞಳಾಗಿರುತ್ತೇನೆ. ಹೊಸದಾಗಿ ವಿಭಿನ್ನವಾಗಿ ಏನನ್ನಾದರೂ ಮಾಡಲು ತುಡಿಯುತ್ತಿದ್ದ ನನಗೆ ಅದಕ್ಕೆ ಪೂರಕವಾದ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ.ಚಿತ್ರದ ಕಥೆ ಕೇಳಿ ಇಷ್ಟಪಟ್ಟೆ. ಕಥೆ ಕೇಳುವಾಗ ನಾನು ಸಿಕ್ಕಾಪಟ್ಟೆ ನಕ್ಕಿದ್ದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT