ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೀತಿಸುವ ಮುನ್ನ’ ಕುಂದಾಪ್ರ ಕನ್ನಡದ ಕಿರುಚಿತ್ರ ಚೆನ್ನ 

Last Updated 1 ಜುಲೈ 2018, 10:03 IST
ಅಕ್ಷರ ಗಾತ್ರ

ಉಡುಪಿ ಜಿಲ್ಲೆಯ ಕುಂದಾಪುರದ ಬಹುಭಾಗಗಳಲ್ಲಿ ಬಳಸುವ ಕುಂದಾಪ್ರ ಕನ್ನಡ ತನ್ನದೇ ಆದ ವೈಶಿಷ್ಟ್ಯತೆಯಿಂದ ಗಮನ ಸೆಳೆಯುವಂತಾದ್ದು. ಕುಂದಾಪ್ರ ಕನ್ನಡವನ್ನು ಕೇಳುವುದೇ ಒಂದು ಚೆಂದ. ಇದೇ ಕನ್ನಡದಲ್ಲಿ ಬೈಂದೂರು ವಲಯದ ಯುವ ಮನಸ್ಸುಗಳು ಸೇರಿಕೊಂಡು ತಯಾರಿಸಿದ ‘ಪ್ರೀತಿಸುವ ಮುನ್ನ’ ಹೆಸರಿನ ಕಿರುಚಿತ್ರವೊಂದು ಕಳೆದ ಮೇನಲ್ಲಿ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಚಿತ್ರ ಇದೀಗ ವೀಕ್ಷಕರ ಗಮನ ಸೆಳೆಯುತ್ತಿದೆ. ಈಗಾಗಲೇ ಆರವತ್ತಾರು ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ ಎನ್ನುವುದು ಇದರ ಹೆಚ್ಚುಗಾರಿಕೆ.

ಸಂತೆಯಲ್ಲಿ ವ್ಯಾಪಾರಿಯೊಬ್ಬನ ಮಾತಿನೊಂದಿಗೆ ತೆರೆದುಕೊಳ್ಳುವ ಈ ಕಿರುಚಿತ್ರ ತನ್ನ ನಿರೂಪಣಾ ಶೈಲಿಯಿಂದ ಗಮನ ಸೆಳೆಯುತ್ತದೆ. ವೀಕ್ಷಕರಿಗೆ ನೇರವಾಗಿ ಕತೆ ಹೇಳಲು ಆರಂಭಿಸುವ ವ್ಯಾಪಾರಿ ಈಗಿನ ಕಾಲದ ಹುಡುಗರ ಪ್ರೀತಿ ಪ್ರೇಮ ತರಲೆ ಕಿತಾಪತಿಯ ಸುದ್ದಿ ಹೇಳುತ್ತಾ ತಾನು ಹೆಣ ನೋಡಲು ಹೋದದ್ದನ್ನು ತೆರೆದಿಡುತ್ತಾನೆ. ಅಲ್ಲಿ ಸಾವಿನ ಕಾರಣವನ್ನು ಯುವಕರ ಹತ್ತಿರ ವಿಚಾರಿಸಿದಾಗ ಕತೆ ಫ್ಲ್ಯಾಶ್ ಬ್ಯಾಕ್ ಗೆ ಹೊರಳುತ್ತದೆ.

ಸುನಿಲ್ ಮತ್ತು ಇಂದು ಪ್ರೇಮಿಗಳು. ಪ್ರೇಮಿಗಳ ದಿನದಂದು ಇಂದುವಿಗೆ ವಿಶ್ ಮಾಡಲು ಗುಲಾಬಿ ಹೂ ಹಿಡಿದು ಬೈಕಿನಲ್ಲಿ ತೆರಳುತ್ತಿರುವಾಗ ಸುನಿಲ್‍ಗೆ ಸ್ನೇಹಿತನ ಕಾಲ್ ಬರುತ್ತದೆ. ಮಣಿ ಆ್ಯಕ್ಸಿಡೆಂಟ್ ಆಗಿರುವುದಾಗಿ ಸ್ನೇಹಿತ ಹೇಳುತ್ತಾನೆ. ಸುನಿಲ್ ಮಣಿಯನ್ನು ನೋಡಲು ಆಸ್ಪತ್ರೆಗೆ ಹೋಗುತ್ತಾನೆ. ದಾರಿಯಲ್ಲಿ ಸ್ನೇಹಿತ ಜೀತುವಿನ ತಂಗಿಯನ್ನು ಅನಿವಾರ್ಯವಾಗಿ ಬೈಕಿನಲ್ಲಿ ಕೂರಿಸಿಕೊಳ್ಳುತ್ತಾನೆ.

ಇತ್ತಕಡೆ ಸುನಿಲ್‍ಗಾಗಿ ಸಮುದ್ರ ತೀರದಲ್ಲಿ ಕಾಯುತ್ತಿದ್ದ ಇಂದುವಿಗೆ ಮಣಿಯ ಸ್ನೇಹಿತನೊಬ್ಬ ಸಿಕ್ಕಿದಾಗ ಅವಳು ಮಣಿ ಬಗ್ಗೆ ವಿಚಾರಿಸುತ್ತಾಳೆ. ಆಗ ಅವನು ಮಣಿ ಮನೆಯಲ್ಲೇ ಇದ್ದಾನೆ. ಆತನಿಗೇನೂ ಆಗಿಲ್ಲ. ಬೇಕಾದರೆ ಬಾ ತೋರಿಸುತ್ತೇನೆ ಎಂದು ಅವಳನ್ನು ಮಣಿ ಮನೆಗೆ ಕರೆದೊಯ್ಯುತ್ತಾನೆ. ದಾರಿಯಲ್ಲಿ ಅವಳು ಬೇರೆ ಹುಡುಗಿಯ ಜೊತೆ ಸುನಿಲ್ ಬೈಕಿನಲ್ಲಿ ಹೋಗುತ್ತಿರುವುದನ್ನು ನೋಡುತ್ತಾಳೆ. ಸುನಿಲ್ ಮನೆಯ ಕೋಣೆಯಲ್ಲಿ ತನ್ನದೇ ಹತ್ತಾರು ಚಿತ್ರಗಳನ್ನು ಗೋಡೆಗೆ ಅಂಟಿಸಿದ್ದನ್ನು ನೋಡಿ ಇಂದುವಿಗೆ ಮಣಿ ತನ್ನನ್ನು ಪ್ರೀತಿಸುತ್ತಿರುವ ವಿಚಾರ ತಿಳಿಯುತ್ತದೆ.

ಸುನಿಲ್ ಇಂದುವಿನ ಪ್ರೀತಿ ಮುರಿದು ಬೀಳುತ್ತದೆ. ಸುನಿಲ್ ಭಗ್ನ ಪ್ರೇಮಿಯಾಗಿ ಪರಿತಪಿಸುತ್ತಾನೆ. ಈ ನಡುವೆ ಮಣಿ ಇಂದುವಿನ ಹೊಸ ಪ್ರೀತಿ ಶುರುವಾಗುತ್ತದೆ. ಜಾತ್ರೆಯಲ್ಲಿ ಅವರನ್ನು ಒಟ್ಟಿಗೆ ನೋಡಿ ಕೆಂಡ ಕಾರುವ ಸುನಿಲ್ ಸ್ನೇಹಿತರು ಜಿದ್ದಿಗೆ ಬೀಳುತ್ತಾರೆ. ಮಣಿ ನೀನು ‘ಒತ್ತಿನೆಣೆ ಗುಡ್ಡೆಗೆ ಬಾ ಅಲ್ಲಿ ನೋಡಿಕೊಳ್ಳುತ್ತೇನೆ’ ಎಂದು ಸವಾಲೆಸೆಯುತ್ತಾನೆ. ಸುನಿಲ್ ಅಲ್ಲಿಗೆ ಹೋಗುತ್ತಾನೆ. ಶತ್ರುಗಳ ದೊಡ್ಡ ಗುಂಪು ಅಲ್ಲಿರುತ್ತದೆ. ಎಲ್ಲರನ್ನೂ ಸದೆಬಡಿದು ಮಣಿಯನ್ನು ಹೊಡೆಯುವಾಗ, ಮಣಿ ಅವನನ್ನು ‘ಹೊಡಿ ಬಿಡಬೇಡ’ ಎಂದು ಕೂಗುವ ಇಂದುವನ್ನು ನೋಡುತ್ತಾ ಮತ್ತಷ್ಟು ಬೇಸರದಿಂದ ನೆಲಕ್ಕೆ ಕುಸಿಯುತ್ತಾನೆ. ಮಣಿ ಇದೇ ಅವಕಾಶವನ್ನು ನೋಡಿ ಸುನಿಲ್ ತಲೆಗೆ ಹೊಡೆಯುತ್ತಾನೆ. ಸುನಿಲ್ ಹೆಣವಾಗುತ್ತಾನೆ.

ಕತೆ ಇಲ್ಲಿಗೆ ಮುಗಿಯುವುದಿಲ್ಲ ಮರಾಯ್ರೆ. ಒಂದು ಅನಿರೀಕ್ಷಿತವಾದ ನಗು ಉಕ್ಕಿಸುವ ತಿರುವಿನೊಂದಿಗೆ ಕತೆ ಮುಗಿಯುತ್ತದೆ. ಅದೇನೆಂದು ಚಿತ್ರ ನೋಡಿಯೇ ತಿಳಿಯಬೇಕು.ಅಪ್ಪಟ ಕುಂದಾಪ್ರ ಕನ್ನಡದಲ್ಲಿರುವ ಚಿತ್ರ ನೋಡುಗರಿಗೆ ಮನೋರಂಜನೆ ಒದಗಿಸುತ್ತದೆ. ಚಿತ್ರದ ತುಂಬಾ ಅಲ್ಲಲ್ಲಿ ಸುಧಾರಿಸಬೇಕಾದ ಅಂಶಗಳು ಇದ್ದರೂ ಕೂಡ ಚಿತ್ರದ ಓಘದ ಮುಂದೆ ಅವು ಎದ್ದು ಕಾಣುವುದಿಲ್ಲ. ಸುಹಾಸ್ ಸೋನು ಮೊೈಲಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸುಹಾಸ್ ಸೇರಿದಂತೆ ಸುಶ್ಮಿತಾ ಕಾಳಾವರ, ಸನತ್ ಅಡಿಗ, ಶರತ್ ಶೆಟ್ಟಿ , ಪ್ರಕಾಶ್, ಅಕ್ಷಯ್, ಮಣಿ, ಕಾವ್ಯಾ, ಸುಚಿತ್ರಾ, ದರ್ಶನ್ ಖುಷಿಕೊಡುವ ರೀತಿಯಲ್ಲಿ ನಟಿಸಿದ್ದಾರೆ. ಮಾರುತಿ ಟಿ. ಡಿ. ಕತೆ ಬರೆದಿದ್ದಾರೆ. ಜಿತೇಂದ್ರ ಕುಮಾರ ಛಾಯಾಗ್ರಹಣ ಸೊಗಸಾಗಿದೆ. ‘ಕಾದು ಸೋತಿಹೆನು....’ ಹಾಡು ಗಮನ ಸೆಳೆಯುತ್ತದೆ.

ಜಾತ್ರೆಯಲ್ಲಿ ‘ಹಾಯ್ ಬ್ರೋ..’ ಎಂದು ಮಾತಿಗಿಳಿಯುವ ಗೆಳೆಯನೊಬ್ಬನಿಗೆ ಕರ್ನಾಟಕದಲ್ಲಿ ಒಟ್ಟು ಇರುವ 226 ತಾಲೂಕಿನ ಜನರು ಮಾತನಾಡುವ ಭಾಷೆ ಕುಂದಾಪುರದವರಿಗೆ ಅರ್ಥ ಆಗುತ್ತೇ ಆದರೆ ನಮ್ ಬಾಷೆ ಅಷ್ಟು ಸುಲಭಕ್ಕೆ ಯಾರಿಗೂ ಮಾತನಾಡಲಾಗದು.. ಪರಶುರಾಮ ಸೃಷ್ಟಿಯಲ್ಲಿ ಹುಟ್ಟಿ ಚಿನ್ನದಂತಹ ಕುಂದಾಪ್ರ ಕನ್ನಡ ಮಾತಾಡುವುದು ಬಿಟ್ಟು ಬೇರೆ ಜಾಗದಲ್ಲಿದ್ದು ಬಂದು ಸುಮ್ಮನೆ ಒಣ ಜಂಭ ಪ್ರದರ್ಶನ ಒಳ್ಳೆಯದಲ್ಲ ಎಂದು ಸ್ನೇಹಿತನನ್ನು ನಗುತ್ತಾ ಗದರುವ ಸನ್ನಿವೇಶದಲ್ಲಿ ಕುಂದಾಪ್ರ ಭಾಷೆಯ ಹಿರಿಮೆಯನ್ನು ಎತ್ತಿಹಿಡಿಯುವ ಪ್ರಯತ್ನ ಖುಷಿ ಕೊಡುತ್ತದೆ.

ಉಪ್ಪುಂದ ಜಾತ್ರೆಯನ್ನು ಚಿತ್ರೀಕರಿಸಿದ ರೀತಿ ಕಣ್ಣಿಗೆ ಹಬ್ಬ. ಕತೆ ಹೇಳಲು ಅಲ್ಲಲ್ಲಿ ಸಂಕೇತಗಳನ್ನು ಬಳಸಿಕೊಂಡಿರುವುದು ಪ್ರಶಂಸಾರ್ಹ. ಚಿತ್ರದುದ್ದಕ್ಕೂ ದಿನನಿತ್ಯದ ಸನ್ನಿವೇಶಗಳನ್ನೇ ಬಳಸಿಕೊಂಡು ರಂಜಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಒಟ್ಟಿನಲ್ಲಿ ಇಡೀ ಚಿತ್ರ ನೋಡಿಸಿಕೊಂಡು ಹೋಗುವಂತೆ ಮಾಡಿರುವುದರ ಶ್ರೇಯಸ್ಸು ಇಡೀ ಚಿತ್ರ ತಂಡಕ್ಕೆ ಸಲ್ಲಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT