ಶನಿವಾರ, ಮಾರ್ಚ್ 6, 2021
21 °C

‘ಪ್ರೇಮಲೋಕ’ದಲ್ಲಿ ಸೂರ್ಯ ಸಂಚಾರ

ಪ್ರಕಾಶ ನಾಯ್ಕ್ ಎಸ್. Updated:

ಅಕ್ಷರ ಗಾತ್ರ : | |

Prajavani

ಬಾ ಲ್ಯದಿಂದಲೂ ಚಿತ್ರರಂಗಕ್ಕೆ ಬರಬೇಕೆಂಬ ಹಂಬಲ ಇಟ್ಟುಕೊಂಡೇ ಬೆಳೆದವರು ನಟ ವಿಜಯಸೂರ್ಯ. ತಮ್ಮ ಬಾಲ್ಯದ ಕನಸಿನಂತೆಯೇ ಅವರು ಸದ್ಯ ನಟ, ರೂಪದರ್ಶಿ ಹಾಗೂ ನಿರೂಪಕನಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಒಳ್ಳೆಯ ಪಾತ್ರಗಳಿಗೆ ಜೀವತುಂಬಿ ನಟಿಸಿ, ಪ್ರೇಕ್ಷಕರ ಮನಸಿನಲ್ಲೂ ಜಾಗ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ದಾಂಪತ್ಯ ಬದುಕಿಗೆ ಕಾಲಿಟ್ಟಿರುವ ಅವರು, ಬಣ್ಣದ ಬದುಕಿನಲ್ಲಿ ತಮಗೆ ದಕ್ಕಿದ ಅನುಭವಗಳನ್ನು ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಅಭಿನಯಲೋಕವನ್ನು ಹೇಗೆ ಪ್ರವೇಶಿಸಿದ್ದೀರಿ? ಎಂದು ಅವರನ್ನು ಮಾತಿಗೆಳೆದಾಗ, ‘ನಾನು ಚಿಕ್ಕ ವಯಸ್ಸಿನಲ್ಲಿರುವಾಗಲೇ ನನ್ನ ತಂದೆ–ತಾಯಿ ದಿನನಿತ್ಯ ಕನ್ನಡ, ಇಂಗ್ಲಿಷ್ ಸಿನಿಮಾ ತೋರಿಸುತ್ತಾ, ಚಿತ್ರರಂಗದತ್ತ ಆಸಕ್ತಿ ಮೊಳೆಯುವಂತೆ ಮಾಡಿದರು. ಸಿನಿಮಾಗಳನ್ನು ನೋಡುತ್ತಲೇ, ಈ ರಂಗದಲ್ಲಿ ಕಲಾವಿದನಾಗಿ ತೊಡಗಿಸಿಕೊಳ್ಳಬೇಕೆಂಬ ಕನಸು, ಹಂಬಲ ಇಟ್ಟುಕೊಂಡೇ ಬೆಳೆದವನು ನಾನು. ಓದಿನಲ್ಲಿ ಆಸಕ್ತಿ ಇಲ್ಲದಿರುವುದನ್ನು ಹೆತ್ತವರಿಗೆ ತಿಳಿಸಿ, ಮುಂಬೈನ ಸುಭಾಷ್ ಘಾಯ್‌ ಅವರ ಫಿಲಂ ಸ್ಕೂಲ್‌ ‘ವಿಸ್ಲಿಂಗ್ ವುಡ್ಸ್ ಅಕಾಡೆಮಿ’ ಸೇರಿಕೊಂಡೆ. ಅಲ್ಲಿ ಎರಡು ವರ್ಷ ಡಿಪ್ಲೊಮಾ ಮತ್ತು ಫಿಲ್ಮ್‌ ಮೇಕಿಂಗ್‌ ಕೋರ್ಸ್‌ನಲ್ಲಿ ತರಬೇತಿ ಪಡೆದುಕೊಂಡೆ. ಅದೇ ಸಮಯದಲ್ಲಿ ಕವಿತಾ ಲಂಕೇಶ್‌ ಅವರ ಕ್ರೇಜಿಲೋಕ ಆಡಿಷನ್ ನಡೆಯುತ್ತಿತ್ತು. ಅದರಲ್ಲಿ ಭಾಗವಹಿಸಿ ಆಯ್ಕೆ ಕೂಡ ಆದೆ. ಆ ಚಿತ್ರದಲ್ಲಿ ರವಿಚಂದ್ರನ್ ಅವರ ಮಗನ ಪಾತ್ರ ನನ್ನದು. ಅಪ್ಪನಿಗೆ ಸರಿಸಮಾನವಾದ ಪಾತ್ರ ನನ್ನನ್ನು ಅಭಿನಯ ಲೋಕಕ್ಕೆ ಕರೆತಂದಿತು’ ಎನ್ನುವ ಮಾತು ಸೇರಿಸಿದರು.

ಧಾರಾವಾಹಿಗಳಲ್ಲಿ ಅವಕಾಶ ಪಡೆದುಕೊಂಡ ಬಗ್ಗೆಯೂ ಮಾತು ವಿಸ್ತರಿಸಿದ ವಿಜಯ ಸೂರ್ಯ, ‘ಸಿನಿಮಾದಲ್ಲಿ ನಟಿಸಿದ ನಂತರ ವಯಸ್ಸಿಗೆ ತಕ್ಕಂತ ಪಾತ್ರಗಳು ಸಿಗದೆ ಕೆಲ ಕಾಲ ಸುಮ್ಮನಿದ್ದೆ. ಹೆತ್ತವರ ಸಲಹೆಯಂತೆ, ಕಿರುತೆರೆಯಲ್ಲಿ ಅವಕಾಶಗಳಿಗಾಗಿ ಹುಡುಕಾಡಿದೆ. ಈ ಟಿ.ವಿಯಲ್ಲಿನ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ನಟನೆಯ ಅವಕಾಶ ಸಿಕ್ಕಿತು. ನನಗೂ ಅಭ್ಯಾಸ ನಡೆಸಿದ ಅನುಭವ ಸಿಗುತ್ತದೆಂದು ಒಪ್ಪಿಕೊಂಡೆ. ನಂತರ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿನ ಲೀಡ್‌ ರೋಲ್‌ ಆದ ಸಿದ್ಧಾರ್ಥ್ ಪಾತ್ರದಲ್ಲಿ ನಟಿಸುವ  ಅವಕಾಶ ಸಿಕ್ಕಿತು. ಈ ಧಾರಾವಾಹಿಯಲ್ಲಿ ಐದು ವರ್ಷಗಳ ಕಾಲ ನಟಿಸಿದ್ದೇನೆ. ಸಿದ್ಧಾರ್ಥ್‌ ಪಾತ್ರಕ್ಕೆ ವೀಕ್ಷಕರಿಂದಲೂ ಅಪಾರ ಮೆಚ್ಚುಗೆ ಸಿಕ್ಕಿದೆ. ಆ ಪಾತ್ರದ ಮೂಲಕ ಪ್ರೇಕ್ಷಕರು ನನ್ನನ್ನು ಮೆಚ್ಚಿ, ಅಪಾರ ಪ್ರೀತಿ ತೋರಿಸುತ್ತಿದ್ದಾರೆ’ ಎಂದರು.

‘ನಮಗೆ ಸಿಕ್ಕ ಪಾತ್ರ ಯಾವುದೇ ಆಗಿರಲಿ ಅದರಲ್ಲಿ ಚೆನ್ನಾಗಿ ನಟಿಸಿ, ನ್ಯಾಯ ಒದಗಿಸಿದರೆ ಪ್ರೇಕ್ಷಕರು ಕಿರುಚಿತ್ರವಾಗಲಿ, ಧಾರಾವಾಹಿಯಾಗಲಿ ಅಥವಾ ಸಿನಿಮಾವೇ ಆಗಿರಲಿ ಭೇದಭಾವ ಮಾಡದೆ ಅಪ್ಪಿ–ಒಪ್ಪಿಕೊಳ್ಳುತ್ತಾರೆ’ ಎನ್ನುವ ಮಾತನ್ನು ಹೇಳಲು ಅವರು ಮರೆಯಲಿಲ್ಲ.

ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದಿದ್ದೀರಾ? ಎಂದು ಕೇಳಿದರೆ, ‘ಆ ಧಾರಾವಾಹಿಯಲ್ಲಿ ನಾನು ಈಗ ನಟಿಸುತ್ತಿಲ್ಲ. ಸದ್ಯ ಅದರಿಂದ ಹೊರ ಬಂದಿದ್ದೇನೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಯಕೆಯಿಂದಷ್ಟೇ ಆ ನಿರ್ಧಾರ ತೆಗೆದುಕೊಂಡಿದ್ದೇನೆ. ಮೈಸೂರು ಮಂಜು ನಿರ್ದೇಶನದ ‘ಪ್ರೇಮಲೋಕ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಈ ಧಾರಾವಾಹಿಯ ಕಥೆಯು ತುಂಬಾ ಚೆನ್ನಾಗಿದೆ. ನಾನು ಹಿಂದೆ ಮಾಡಿದಂತಹ ಧಾರಾವಾಹಿಗಿಂತಲೂ ಗಂಭೀರ ಪಾತ್ರ ಇದರಲ್ಲಿದೆ. ದೊಡ್ಡ ಮನಸ್ಸಿನ ಯುವಕನಾಗಿದ್ದು, ಕಾಲೇಜಿಗೆ ಹೋಗುವುದು ಮತ್ತು ಆಫೀಸ್‌ ನಿರ್ವಹಣೆ ಮಾಡುವಂತಹ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎನ್ನುವ ಉತ್ತರ ನೀಡಿದರು.

ನಿಜ ಹೇಳಬೇಕೆಂದರೆ ‌ನಿರೂಪಣೆ ಎನ್ನುವುದು ಕಷ್ಟದ ಕೆಲಸ. ಮೊದಲಿನಿಂದಲೂ ಟಿ.ವಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಬೇಕೆಂಬ ಆಸೆ ಇತ್ತು. ಆದರೆ, ವೀಕ್ಷಕರು ನನ್ನನ್ನು ಕಾರ್ಯಕ್ರಮ ನಿರೂಪಕನಾಗಿ ಒಪ್ಪುತ್ತಾರೋ ಇಲ್ಲವೋ ಎನ್ನುವ ಅಂಜಿಕೆಯೂ ಇತ್ತು. ಅದನ್ನು ಸವಾಲಾಗಿ ತೆಗೆದುಕೊಂಡು, ಧೈರ್ಯದಿಂದ ಈ ಸಾಹಸಕ್ಕೆ ಕೈ ಹಾಕಿದೆ. ನಿರೂಪಕನಾಗಿಯೂ ವೀಕ್ಷಕರನ್ನು ತಲುಪಿದ ತೃಪ್ತಿ ಸಿಕ್ಕಿದೆ. ನಿರೂಪಣೆಯಲ್ಲೂ ನಾವು ಸಾಕಷ್ಟು ಕಲಿಯುವುದು ಸಾಕಷ್ಟು ಇದೆ. ಸ್ಟೇಜ್ ಮೇಲೆ ನಿಂತುಕೊಂಡು ಮಾತನಾಡುವುದು, ಸ್ಟೇಜ್‌ ನಿರ್ವಹಿಸುವುದು ಸುಲಭದ ಕೆಲಸ ಅಲ್ಲ. ನಟನೆಗೆ ನಿರ್ದಿಷ್ಟ ಸ್ಕ್ರಿಪ್ಟ್‌ ಇರುತ್ತದೆ. ಆದರೆ, ಇದು ಹಾಗಲ್ಲ. ನಿರೂಪಣೆ ಕೆಲಸವೂ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎನ್ನುತ್ತಾರೆ ವಿಜಯ ಸೂರ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು