ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯರ್‌ ಪದ್ಮಿನಿ ತೆರೆಗೆ ಸಿದ್ಧ

Last Updated 4 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಸಿನಿಮಾ ನಿರ್ಮಾಣ ನಿಜಕ್ಕೂ ಕಷ್ಟ? ಅದು ಸುಲಭ ಸಾಧ್ಯವಾಗುವುದು ಯಾವಾಗ?

–‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ಕುಳಿತವರಿಗೆ ಈ ಪ್ರಶ್ನೆಗಳು ಕಾಡಿದವು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ಮಾಪಕಿ ಶ್ರುತಿನಾಯ್ಡು ಹಿರಿತೆರೆ ಪ್ರವೇಶಿಸಿದಾಗ ಇಲ್ಲಿನ ಏರಿಳಿತಗಳ ಕಥೆ ಕೇಳಿ ಗಾಬರಿಗೊಂಡಿದ್ದರಂತೆ. ತಮ್ಮ ಮಾತಿನ ಸರದಿ ಬಂದಾಗ ಚಿತ್ರ ನಿರ್ಮಾಣದ ಹಿಂದಿನ ಸುಖ– ದುಃಖದ ಬಗ್ಗೆ ಬೆಳಕು ಚೆಲ್ಲಿದರು ನಟ ಜಗ್ಗೇಶ್‌. ‘ಹಣ ಇರಬೇಕು. ಬ್ರೈನ್‌ ಇರಬೇಕು. ಜೊತೆಗೆ, ಟೀಂವರ್ಕ್‌ ಇದ್ದರೆ ಸಿನಿಮಾ ನಿರ್ಮಾಣ ಕಷ್ಟವಲ್ಲ’ ಎಂಬ ತ್ರಿಸೂತ್ರ ಬಿಚ್ಚಿಟ್ಟರು.

‘ಪ್ರೀಮಿಯರ್‌ ಪದ್ಮಿನಿ’ ಚಿತ್ರ ಇದೇ 26ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ‘ಸಿನಿಮಾ ನಿರ್ಮಿಸುವುದು ನಿಜಕ್ಕೂ ಸವಾಲು. ಅದನ್ನು ಬಿಡುಗಡೆಗೊಳಿಸುವುದು ಮತ್ತಷ್ಟು ತಲೆನೋವು’ ಎಂದರು ಶ್ರುತಿನಾಯ್ಡು. ಸುಗಮವಾಗಿ ಸಂಕಷ್ಟದ ಹಾದಿ ದಾಟಿದ ಖುಷಿಯಲ್ಲಿದ್ದರು.

ನಟ ಜಗ್ಗೇಶ್, ‘ಪ್ರಸ್ತುತ ಸಾಕಷ್ಟು ಸಿನಿಮಾಗಳು ಬರುತ್ತಿವೆ. ತಂತ್ರಜ್ಞಾನದಲ್ಲೂ ಬದಲಾವಣೆಯಾಗಿದೆ. ಆದರೆ, ಅದರ ಮೌಲ್ಯ ಬದಲಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರೇಕ್ಷಕರು ಹೊಸ ಪ್ರತಿಭೆಗಳಿಗೆ ಮನ್ನಣೆ ನೀಡುತ್ತಿಲ್ಲ ಎನ್ನುವ ಕೊರಗು ಅವರ ಮಾತುಗಳಲ್ಲಿತ್ತು. ‘ಕನ್ನಡವೂ ಸೇರಿದಂತೆ ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌, ಮಾಲಿವುಡ್‌ನಲ್ಲಿ ಇಬ್ಬರು ಅಥವಾ ಮೂವರು ಸ್ಟಾರ್‌ನಟರ ಸಿನಿಮಾಗಳನ್ನು ಮಾತ್ರವೇ ವೀಕ್ಷಿಸುವುದು ಸರಿಯಲ್ಲ. ಪ್ರೇಕ್ಷಕರು ಈ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಚಿತ್ರರಂಗ ಪ್ರವೇಶಿಸುವ ಹೊಸಬರ ಸಾಲು ದೊಡ್ಡದಿದೆ. ಅವರ ಕೃತಿಗಳಿಗೂ ಮನ್ನಣೆ ನೀಡಬೇಕು. ಪ್ರೇಕ್ಷಕ ನಿರ್ದಿಷ್ಟ ಚೌಕಟ್ಟು ಹಾಕಿಕೊಳ್ಳುವುದು ಚಿತ್ರರಂಗದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಲ್ಲ’ ಎಂದು ಸಲಹೆ ನೀಡಿದರು.

ಕೆಲವು ನಿರ್ದೇಶಕರಿಗೆ ತಮ್ಮ ಸಿನಿಮಾದ ಕಥೆ ಬಗ್ಗೆ ಎಳ್ಳಷ್ಟು ಪರಿಜ್ಞಾನವೂ ಇರುವುದಿಲ್ಲ ಎಂಬ ಅಸಮಾಧಾನವೂ ಅವರಲ್ಲಿತ್ತು. ‘ಇತ್ತೀಚೆಗೆ ನನಗೊಬ್ಬರು ನಿರ್ದೇಶಕರು ಕರೆ ಮಾಡಿದ್ದರು. ಅವರ ಸಿನಿಮಾದಲ್ಲಿ ನಟಿಸುವಂತೆ ಕೋರಿದರು. ಅದರಲ್ಲಿ ನನ್ನದು ಸೆಕ್ಸ್‌ ಡಾಕ್ಟರ್‌ ಪಾತ್ರವಂತೆ. ಕಥೆ ಕೇಳಿಯೇ ನಾನು ಭಯಪಟ್ಟೆ’ ಎಂದರು.

ರಮೇಶ್‌ ಇಂದಿರಾ ಈ ಚಿತ್ರ ನಿರ್ದೇಶಿಸಿದ್ದಾರೆ. ‘ಇಂದಿನ ಬದುಕಿನಲ್ಲಿ ಯಾರೊಬ್ಬರೂ ನೇರಾನೇರವಾಗಿ ಹೊಡೆದಾಡಿಕೊಳ್ಳುವುದಿಲ್ಲ. ಆಂತರಿಕ ಘರ್ಷಣೆ ಇರುತ್ತದೆ. ಈ ಭಾವನಾತ್ಮಕ ಘರ್ಷಣೆಯಿಂದ ಹೊರಬರದಿದ್ದಾಗ ಸೋಲುತ್ತಾರೆ. ಇದರ ಸುತ್ತವೇ ಕಥೆ ಹೊಸೆಯಲಾಗಿದೆ. ಎಲ್ಲಾ ವರ್ಗದವರಿಗೂ ಸಿನಿಮಾ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಅದ್ವೈತ ಗುರುಮೂರ್ತಿ ಅವರದ್ದು. ಮಧು, ಸುಧಾರಾಣಿ, ಪ್ರಮೋದ್‌, ವಿವೇಕ್ ಸಿಂಹ, ದತ್ತಣ್ಣ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT