ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ ಕೇಸ್: ಆರ್ಯನ್ ಬಗ್ಗೆ ಸಿಕ್ಕಿದೆ ಭಾರೀ ಸಾಕ್ಷಿ.. ಎನ್‌ಸಿಬಿ ಹೇಳಿದ್ದೇನು?

Last Updated 13 ಅಕ್ಟೋಬರ್ 2021, 12:20 IST
ಅಕ್ಷರ ಗಾತ್ರ

ಮುಂಬೈ: ಐಷಾರಾಮಿ ಹಡಗಿನಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೊ ಆಕ್ಷೇಪ ವ್ಯಕ್ತಪಡಿಸಿದೆ.

ಈವರೆಗೆ ನಡೆದಿರುವ ತನಿಖೆಯಲ್ಲಿ ಪಿತೂರಿ, ಕಾನೂನುಬಾಹಿರ ಮಾದಕ ವಸ್ತು ಖರೀದಿ ಮತ್ತು ಡ್ರಗ್ಸ್ ಸೇವನೆ ಕುರಿತಂತೆ ಆರ್ಯನ್ ವಿರುದ್ಧ ಸಾಕ್ಷಿ ಸಿಕ್ಕಿವೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಡ್ರಗ್ಸ್ ಖರೀದಿಗಾಗಿ ಆರ್ಯನ್ ಖಾನ್ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾನೆ, ಅವರು ಅಂತರರಾಷ್ಟ್ರೀಯ ಡ್ರಗ್ ನೆಟ್‌ವರ್ಕ್‌ನ ಭಾಗವಾಗಿರುವಂತೆ ತೋರುತ್ತಿದೆ ಎಂದು ಎನ್‌ಸಿಬಿ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.

ವಿದೇಶದಲ್ಲಿ ಮಾಡಿದ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‌ಸಿಬಿ ಹೇಳಿದೆ.

‘ಆರಂಭಿಕ ತನಿಖೆಯ ಸಮಯದಲ್ಲಿ, ಈ ಅರ್ಜಿದಾರ (ಆರ್ಯನ್ ಖಾನ್)ರಿಗೆ ಸಂಬಂಧಿಸಿದ ಕೆಲವು ಅಂತರರಾಷ್ಟ್ರೀಯ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ, ಇದು ಕಾನೂನುಬಾಹಿರ ಡ್ರಗ್ಸ್ ಖರೀದಿಯನ್ನು ಸೂಚಿಸುತ್ತದೆ. ಈ ಸಂಬಂಧಿತ ವಿದೇಶಿ ಏಜೆನ್ಸಿಯನ್ನು ಸಂಪರ್ಕಿಸಲು ತನಿಖಾ ತಂಡಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ’ಎಂದು ಅಫಿಡವಿಟ್ ಹೇಳಿದೆ.

ಆರ್ಯನ್ ಖಾನ್ ಸೇರಿದಂತೆ ಎಲ್ಲ ಆರೋಪಿಗಳ ನಡುವೆ ನಿಕಟ ಸಂಪರ್ಕ ಇದ್ದು, ಒಟ್ಟಾಗಿಯೇ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹಾಗಾಗಿ, ಪ್ರತಿ ಆರೋಪಿ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದಿಲ್ಲ ಎಂದು ಅಫಿಡವಿಟ್‌ನಲ್ಲಿ ಎನ್‌ಸಿಬಿ ಹೇಳಿದೆ.

‘ಆರೋಪಿಗಳನ್ನು ಬೇರ್ಪಡಿಸಿ ವಿಚಾರಣೆ ನಡೆಸುವುದು ಸಾಧ್ಯವಿಲ್ಲ. ಈ ಅರ್ಜಿದಾರ (ಆರ್ಯನ್ ಖಾನ್)ರಿಗೆ ಅಪರಾಧ, ಸಿದ್ಧತೆ, ಉದ್ದೇಶ ಎಲ್ಲಾ ಅಂಶಗಳಲ್ಲೂ ಪಾಲಿದೆ’ಎಂದು ಅಫಿಡವಿಟ್ ಹೇಳಿದೆ.

ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಎನ್‌ಸಿಬಿ ಇಂದು ತನ್ನ ಆಕ್ಷೇಪಣೆ ಸಲ್ಲಿಸಿದೆ.

ಅಕ್ಟೋಬರ್ 3 ರಂದು ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ, ಆರ್ಯನ್ ಖಾನ್ ಅವರನ್ನು ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT