ಅಣ್ಣಾವ್ರ ಬಯೋಪಿಕ್‌ನಲ್ಲಿ ನಟಿಸುವಾಸೆ: ಪುನೀತ್ ರಾಜ್‌ಕುಮಾರ್

7
ಐ.ಟಿ ದಾಳಿಗೆ ಹೆದರಲ್ಲ

ಅಣ್ಣಾವ್ರ ಬಯೋಪಿಕ್‌ನಲ್ಲಿ ನಟಿಸುವಾಸೆ: ಪುನೀತ್ ರಾಜ್‌ಕುಮಾರ್

Published:
Updated:
Prajavani

ಬೆಂಗಳೂರು: ‘ನಾನು ಯಾವುದೇ ತೆರಿಗೆ ವಂಚನೆ ಮಾಡಿಲ್ಲ. ನನ್ನ ದಾಖಲೆಗಳು ಸಮರ್ಪಕವಾಗಿವೆ. ಹಾಗಾಗಿ, ಐ.ಟಿ. ದಾಳಿಗೆ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ನಟ ಪುನೀತ್ ರಾಜ್‌ಕುಮಾರ್‌ ಪ್ರತಿಕ್ರಿಯಿಸಿದರು.

ನಗರದಲ್ಲಿ ಸೋಮವಾರ ನಡೆದ ನಟ ನಂದಮೂರಿ ಬಾಲಕೃಷ್ಣ ನಟನೆಯ ತೆಲುಗಿನ ‘ಎನ್‌ಟಿಆರ್‌– ಕಥಾನಾಯಕುಡು’ ಚಿತ್ರದ ಟೇಲರ್‌ ಬಿಡುಗಡೆ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಐ.ಟಿ ಇಲಾಖೆಯ ಅಧಿಕಾರಿಗಳು ನನ್ನ ಮನೆಯಲ್ಲಿ ತಪಾಸಣೆ ನಡೆಸಿದರು. ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಇಲಾಖೆಯ ಕೆಲಸವನ್ನು ಅವರು ಮಾಡಿದ್ದಾರೆ. ನನ್ನ ದಾಖಲೆಗಳಲ್ಲಿ ಯಾವುದೇ ಲೋಪವಿಲ್ಲ. ಹಾಗಾಗಿ, ನಾನು ಎಂದಿಗೂ ಆತಂಕಪಡುವುದಿಲ್ಲ. ಇಲಾಖೆಯ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಪ್ಪಾಜಿಯ ಬಯೋಪಿಕ್‌ನಲ್ಲಿ ನಟಿಸುವೆ:‌

‘ನಂದಮೂರಿ ಬಾಲಕೃಷ್ಣ ಸರ್‌ ಅವರು ತನ್ನಪ್ಪ ಎನ್‌.ಟಿ. ರಾಮರಾವ್‌ ಅವರ ಜೀವನ ಚರಿತ್ರೆ ಕುರಿತ ಚಿತ್ರದಲ್ಲಿ ನಟಿಸಿದ್ದಾರೆ. ಇದು ಅವರ ವೃತ್ತಿಬದುಕಿನಲ್ಲಿ ಅವಿಸ್ಮರಣೀಯವಾದುದು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಪುತ್ರನೊಬ್ಬ ತನ್ನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಬಾಲಣ್ಣ ಆ ಸಾಧನೆ ಮಾಡಿದ್ದಾರೆ. ನನಗೂ ಅಪ್ಪಾಜಿ(ಡಾ.ರಾಜ್‌ಕುಮಾರ್)ಯ ಬಯೋಪಿಕ್‌ನಲ್ಲಿ ನಟಿಸುವ ಆಸೆಯಿದೆ. ರಾಜ್‌ಕುಮಾರ್‌ ಅವರ ಜೀವನ, ಸಾಧನೆ ಅನನ್ಯವಾದುದು. ಅದನ್ನು ತೆರೆಯ ಮೇಲೆ ಕಟ್ಟಿಕೊಡಲು ಸಾಕಷ್ಟು ಶ್ರಮವಹಿಸಬೇಕಿದೆ’ ಎಂದರು ಪುನೀತ್‌.

‘ಅಪ್ಪಾಜಿಯ ಜೀವನವನ್ನು ದೃಶ್ಯರೂಪಕ್ಕೆ ಇಳಿಸಲು ನಿರ್ದೇಶಕರು, ನಿರ್ಮಾಪಕರು ಮುಂದೆ ಬಂದರೆ ಖಂಡಿತ ನಟಿಸುತ್ತೇನೆ’ ಎಂದು ಹೇಳಿದರು. 

‌ಇದೇ ವೇಳೆ ನಂದಮೂರಿ ಬಾಲಕೃಷ್ಣ ಅವರು, ‘ರಾಜ್‌ಕುಮಾರ್‌ ಅವರ ಬಯೋಪಿಕ್‌ನಲ್ಲಿ ಪುನೀತ್‌ ನಟಿಸಬೇಕು. ಇದನ್ನು ಅಣ್ಣಾವ್ರ ಅಭಿಮಾನಿಗಳು ಇಷ್ಟಪಡುತ್ತಾರೆ’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 38

  Happy
 • 2

  Amused
 • 0

  Sad
 • 3

  Frustrated
 • 3

  Angry

Comments:

0 comments

Write the first review for this !