‘ಅಮ್ಮನ ಮನೆ’ಯಲ್ಲಿ ಮಗು ನಾನು: ರಾಘವೇಂದ್ರ ರಾಜ್‌ಕುಮಾರ್‌

7

‘ಅಮ್ಮನ ಮನೆ’ಯಲ್ಲಿ ಮಗು ನಾನು: ರಾಘವೇಂದ್ರ ರಾಜ್‌ಕುಮಾರ್‌

Published:
Updated:

ಹದಿನಾಲ್ಕು ವರ್ಷಗಳ ನಂತರ ಮತ್ತೆ ರಾಘವೇಂದ್ರ ರಾಜ್‌ಕುಮಾರ್ ಅವರು ನಾಯಕನಾಗಿ ನಟಿಸುತ್ತಿರುವ ಚಿತ್ರ ‘ಅಮ್ಮನ ಮನೆ’. ನಿಖಿಲ್‌ ಮಂಜೂ ನಿರ್ದೇಶನದ ಈ ಚಿತ್ರದ ಮುಹೂರ್ತ ಇಂದು (ಆಗಸ್ಟ್ 15) ಕಂಠೀರವ ಸ್ಟುಡಿಯೊದಲ್ಲಿ ನಡೆಯಿತು. ಇಂದು ರಾಘಣ್ಣನ ಹುಟ್ಟಿದ ದಿನವೂ ಹೌದು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಆಡಿದ ಮಾತುಗಳ ಅಕ್ಷರರೂಪ ಇಲ್ಲಿದೆ:

ಆಕಾಶದಿಂದ ಮೊಡದ ಪರದೆ ಸರಿಸಿ ಇಳೆಯ ಸಮಾಚಾರದತ್ತ ವರುಣ ಇಣುಕು ನೋಟ ಬೀರುವ ಹಾಗೆ ಒಂದೊಂದೇ ಹನಿಯನ್ನು ಕೆಡವುತ್ತಿದ್ದ. ಕಂಠೀರವ ಸ್ಟುಡಿಯೊದ ಒಂದು ಭಾಗದಲ್ಲಿ ನೆರೆದಿದ್ದ ಸಂದಣಿಗೆ ಅದರ ಪರಿವೆಯೇ ಇರಲಿಲ್ಲ. ದೊಡ್ಡದೊಂದು ಬ್ಯಾನರ್‌ನಲ್ಲಿ ಮನೆಯ ರೇಖಾಕೃತಿ. ಅದರ ನಡುವೆ ‘ಅಮ್ಮನ ಮನೆ’ ಎಂಬ ಕೈಬರಹದಂಥ ಅಕ್ಷರಗಳು. ಅದರ ಮೇಲಕ್ಕಿದ್ದ ದೊಡ್ಡ ಕೆಂಪು ಬೊಟ್ಟೇ ಕನ್ನಡ ಚಿತ್ರರಂಗಕ್ಕೇ ಬಹುಕಾಲ ‘ಅಮ್ಮ’ನಾಗಿದ್ದ ಪಾರ್ವತಮ್ಮ ಅವರನ್ನು ನೆನಪಿಸುತ್ತಿತ್ತು. ಅದರಾಚೆಗಿನ ವೇದಿಕೆಯ ಮೇಲೆ ಈಗಷ್ಟೇ ಮುಹೂರ್ತ ಮುಗಿಸಿ, ರಾಘವೇಂದ್ರ ರಾಜ್‌ಕುಮಾರ್‌ ಪತ್ರಕರ್ತರೊಂದಿಗೆ ಮಾತನಾಡಲು ಕೂತಿದ್ದರು. ಅವರ ಇಕ್ಕೆಲಗಳಲ್ಲಿ ‘ಅಮ್ಮನ ಮನೆ’ಯ ನಿರ್ದೇಶಕ ನಿಖಿಲ್‌ ಮಂಜೂ ಲಿಂಗಯ್ಯ ಮತ್ತು ನಿರ್ಮಾಪಕ ಆರ್.ಎಸ್‌. ಕುಮಾರ್‌ ಇದ್ದರು. ಒಂದು ಮೂಲೆಯಲ್ಲಿ ರಾಜ್‌ಕುಮಾರ್‌ ಮತ್ತು ಪಾರ್ವತಮ್ಮನವರ ಜೋಡಿ ಚಿತ್ರದ ಮುಂದಿನ ಅಗರಬತ್ತಿ ಮಳೆಬಿದ್ದಾಗ ಎದ್ದ ದೂಳಕಂಪಿನೊಟ್ಟಿಗೆ ತನ್ನ ಅಸ್ತಿತ್ವಕ್ಕಾಗಿ ಸೆಣೆಸಾಡುತ್ತಿತ್ತು.  ಫ್ರೇಮಿನೊಳಗಿನ ಅಪ್ಪಾಜಿ ಅಮ್ಮ ಇಬ್ಬರೂ ಎದೆಯೊಳಗಿನ ಸಿಹಿಯನ್ನೆಲ್ಲ ಜಗಕೆ ಉಣಿಸುವರಂತೆ ನಗುತ್ತಿದ್ದರು. 

ಸರಿಸುಮಾರು ಹದಿನಾಲ್ಕು ವರ್ಷಗಳ ನಂತರ ತನ್ನ ಸಿನಿಮಾ ಕುರಿತು ಮಾತನಾಡಲು ಪತ್ರಿಕೆಯವರ ಮುಂದೆ ಕೂತಿದ್ದ ರಾಗಣ್ಣನವರ ಕಣ್ಣುಗಳಲ್ಲಿ ಹೊಳಪಿತ್ತು. ‘ಅಪ್ಪಾಜಿ..’ ಎಂದು ಎಲ್ಲರನ್ನೂ ಅಕ್ಕರೆಯಿಂದ ಮಾತನಾಡಿಸಿದ ಅವರು ಕೈಗೆ ಮೈಕ್‌ ಸಿಕ್ಕಾಗ ನೆನೆಸಿಕೊಂಡಿದ್ದು ಅಮ್ಮನನ್ನೇ. ವಿನಮ್ರತೆ, ಸ್ಪಷ್ಟತೆ, ಪ್ರಬುದ್ಧತೆಗಳ ಮಿಳಿತವಾಗಿದ್ದ ಅವರ ಮಾತುಗಳು ಹೊಸ ತಲೆಮಾರಿನ ಹಲವು ನಟರಿಗೆ ಪಠ್ಯವಾಗುವಂತಿದ್ದವು. 

ಮುಂದಿನದ್ದು ರಾಘಣ್ಣನ ಮಾತುಗಳು:

‘‘ಅಪ್ಪಾಜಿ.., ನಿಮ್ಮೆಲ್ಲರಲ್ಲಿ ನಂದು ಒಂದೇ ಒಂದು ಬೇಡಿಕೆ ಇದೆ ಅಪ್ಪಾಜಿ... ದಯವಿಟ್ಟು ‘ಅಮ್ಮನ ಮನೆ’ ರಾಘಣ್ಣನ ಸಿನಿಮಾ ಅಂತ ಆಗ್ಬಾರ್ದು. ಒಂದು ಒಳ್ಳೆಯ ಸಿನಿಮಾ ಬರ್ತಾ ಇದೆ. ಅದರಲ್ಲಿ ರಾಘಣ್ಣ  ನಟಿಸುತ್ತಿದ್ದಾರೆ ಎಂದು ಆಗಬೇಕು. ರಾಘಣ್ಣನ ಕಮ್‌ಬ್ಯಾಕ್‌ಗೋಸ್ಕರ ಮಾಡ್ತಾ ಇರುವ ಸಿನಿಮಾ ಅಲ್ವೇ ಅಲ್ಲ. ರಾಘಣ್ಣ ಮತ್ತೆ ನಟಿಸುತ್ತಾ ಇರೋದು ಬಾರಿ ದೊಡ್ಡ ಸುದ್ದಿನೇ ಅಲ್ಲ. ‘ಅಮ್ಮನ ಮನೆ’ ಎನ್ನುವುದು ಒಂದು ಒಳ್ಳೆಯ ಸಿನಿಮಾ. ಅದರಲ್ಲಿ ರಾಘಣ್ಣ ಕೆಲಸ ಮಾಡುತ್ತಿದ್ದಾನೆ ಅಷ್ಟೆ. 
1988ರಲ್ಲಿ ನಾನು ಮೊದಲನೇ ಸಲ ಬಣ್ಣ ಹಚ್ಚಿದ್ದು. ಅವತ್ತು ನನ್ನ ತಂದೆ, ತಾಯಿ ಎಲ್ಲ ಇದ್ರು. ಪಕ್ಕದಲ್ಲಿ ಅವರೆಲ್ಲ ಇದ್ದಾರಲ್ಲಾ ಎಂಬ ಧೈರ್ಯ ಇತ್ತು. ಈವತ್ತು ನಟನೆಗೆ ಬಂದು ಮೂವತ್ತು ವರ್ಷ ಆಯ್ತು. ಹದಿನಾಲ್ಕು ವರ್ಷಗಳ ನಂತರ ಈಗ ಮತ್ತೆ ನಟಿಸುತ್ತಿದ್ದೇನೆ. ಈಗ ಅಪ್ಪ ಅಮ್ಮ ಇಬ್ಬರೂ ಇಲ್ಲ. ಆದರೆ ನಾನು ಈ ಕಥೆಯಲ್ಲಿ, ಈ ತಂಡದಲ್ಲಿ ನನ್ನ ತಂದೆ ತಾಯಿಯನ್ನು ನೋಡ್ತಾ ಇದ್ದೀನಿ. ಅದು ನನಗೆ ತುಂಬ ತೃಪ್ತಿ ಕೊಟ್ಟಿದೆ. 

ನನಗೆ ಅನಾರೋಗ್ಯ ಆಗಿತ್ತು. ಸ್ಕ್ರೋಕ್‌ ಆಗಿತ್ತು. ಹೇಗೆ ನಟಿಸುತ್ತಾರೆ ಎಂಬ ಅನುಮಾನ ಎಲ್ಲರಿಗೂ ಇದೆ. ನನಗೂ ಆ ಅನುಮಾನ ಇತ್ತು. ಕಥೆ ಕೇಳಿ ನನಗೆ ಇಷ್ಟವಾದ ನಂತರ ನಾನು ನಿರ್ದೇಶಕರನ್ನು ಅದೇ ಪ್ರಶ್ನೆ ಕೇಳಿದೆ. ಅವರು ‘ನಾನು ರಾಘಣ್ಣ ನಂಜುಂಡಿ ಕಲ್ಯಾಣ ಸಿನಿಮಾ ಮಾಡಿದ ನಟ ಅಂತ ಬಂದಿಲ್ಲ. ನನ್ನ ರಾಘಣ್ಣ ಬೇರೆಯೇ. ಈಚೆಗೆ ಹದಿನೈದು ವರ್ಷದಿಂದ ಟೀವಿಯಲ್ಲಿ ನೋಡ್ತಾ ಇದ್ದೀನಿ. ಮನೆಯಲ್ಲಿ ಏನಾದ್ರೂ ತೊಂದರೆಯಾದ್ರೆ, ಅಪ್ಪಾಜಿ ಅವರು ಕಾಡಲ್ಲಿದ್ದಾಗ, ಅಪ್ಪಾಜಿ, ಅಮ್ಮನ ಕಳೆದುಕೊಂಡಾಗ ಜನರ ಎದುರು ರಾಘಣ್ಣ ಬಂದು ನಿಂತು ಸ್ಥೈರ್ಯದಿಂದ ಮಾತಾಡುತ್ತಿದ್ರಲ್ಲಾ, ಅಂದರೆ ಮನೆಯ ಜವಾಬ್ದಾರಿ ತಗೊಂಡು, ಅಭಿಮಾನಿಗಳು, ಮನೆಯ ಕೆಲಸಗಳನ್ನು ಸಮದೂಗಿಸಿಕೊಂಡು, ಮಕ್ಕಳನ್ನೂ ನಟನೆಗೆ ತಂದು, ಮಧ್ಯ ಆದ ಅನಾರೋಗ್ಯವನ್ನೂ ತಡೆದುಕೊಂಡು ಎಷ್ಟೆಲ್ಲ ಜವಾಬ್ದಾರಿ ನಿಭಾಯಿಸುತ್ತಿದ್ದಾನಲ್ಲ, ಆ ರಾಘಣ್ಣನನ್ನು ನೋಡಿಕೊಂಡು ಬಂದಿದ್ದು ನಾನು’ ಎಂದು ಹೇಳಿದರು.

ಈ ಚಿತ್ರದ ಸ್ಕ್ರಿಪ್ಟ್‌ ನನಗೆ ತುಂಬ ಇಷ್ಟವಾಯ್ತು. ‘ಅಮ್ಮ ನ ಮನೆ’ ಚಿತ್ರದ ಸ್ಕ್ರಿಪ್ಟ್‌ನಲ್ಲಿ ನನಗೆ ನನ್ನ ಅಮ್ಮ ಕಾಣಿಸುತ್ತಿದ್ದರು. ಅಮ್ಮನ ಒಪ್ಪಿಕೊಳ್ಳಲು ಏನು ಕಾರಣ ಎಂದು ಕೇಳಿದರೆ ಏನು ಹೇಳಲಿ? ಅಮ್ಮನನ್ನು ಒಪ್ಪಿಕೊಳ್ಳಲು, ಅಮ್ಮನನ್ನು ನೋಡಲು ನಮಗೆ ಕಾರಣ ಬೇಕಾ? ಅಮ್ಮ ಬೇಕು ಅಷ್ಟೆ ನಮಗೆ. ಈ ಚಿತ್ರದಲ್ಲಿ ಅಮ್ಮ ಸಿಕ್ಕಿದ್ದಾರೆ. 

ಭಾವನಾತ್ಮಕವಾಗಿ ಯಾರನ್ನೂ ಪ್ರಭಾವಿಸುವುದು ನನ್ನ ಉದ್ದೇಶ ಅಲ್ಲ. ಆದರೆ ಕೆಲವು ಸಂಗತಿಗಳನ್ನು ನಾನು ಹಂಚಿಕೊಳ್ಳಲೇಬೇಕು.

ಆರು ವರ್ಷಗಳ ಹಿಂದೆ ನನಗೆ ಸ್ಟ್ರೋಕ್‌ ಆಯಿತು. ಅವತ್ತು ನನ್ನ ಹೆಂಡತಿ ಡಾಕ್ಟರ್‌ ಜತೆ ಮಾತಾಡ್ತಾ ಇದ್ದಳು. ನನ್ನ ಹೆಂಡತಿ ‘ಇವರು ಮತ್ತೆ ನಟನೆ ಮಾಡಬಹುದಾ?’ ಎಂದು ಕೇಳಿದಳು. ಅದಕ್ಕೆ ಡಾಕ್ಟರ್ ‘ಅಯ್ಯೋ ಬದುಕಿ ಮನೆಗೆ ಬರ್ತಾರಾ ಅಂತ ಯೋಚನೆ ಮಾಡಿ ಮೊದಲು, ಆಮೇಲೆ ನಟನೆಯ ಬಗ್ಗೆ ಯೋಚಿಸುವಿರಂತೆ’ ಅಂದರು. ಇದನ್ನು ನಾನು ಕಿವಿಯಾರ ಕೇಳಿಸಿಕೊಂಡಿದ್ದೇನೆ.

ಇವತ್ತು ನಾನು ನಾನು ಮತ್ತೆ ಬಣ್ಣ ಹಚ್ಚುತ್ತಿದ್ದೇನೆ. ಇದೆಲ್ಲ ಹೇಗೆ ಸಾಧ್ಯ? ಯಾರು ಆಡಿಸುವವರು ಇದನ್ನೆಲ್ಲ? ನಮ್ಮ ಅಪ್ಪ ಅಮ್ಮ ಮಾಡ್ತಿರೋದಾ? ದೇವರಾ? ಅಭಿಮಾನಿಗಳಾ?  ನನಗೆ ಗೊತ್ತೇ ಆಗ್ತಿಲ್ಲ. ಆದರೆ ನನ್ನ ಪಾಲಿಗೆ ಮತ್ತೆ ನಟನೆ ಬಂದಿದೆ. ಇದನ್ನು ಪ್ರಸಾದ ಅಂತ ಕಣ್ಣಿಗೊತ್ತಿಕೊಂಡು ಭಕ್ತಿಯಿಂದ ಮಾಡ್ತೀನಿ. 

ಅಪ್ಪಾಜಿ ಒಂದು ಘಟನೆ ಹೇಳ್ತಿದ್ರು ನಟನೆಯ ಕುರಿತು. ‘ನಾನು ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡುವಾಗ ಸ್ವಾಮಿಗಳನ್ನೇನೂ ನೋಡಿರಲಿಲ್ಲ ಕಂದಾ... ನಿರ್ದೇಶಕರನ್ನು ಕೇಳಿದೆ. ನೀವು ರಾಘವೇಂದ್ರ ಸ್ವಾಮಿಗಳನ್ನು ನೋಡಿದೀರಾ? ಇಲ್ಲ ಅಂದರು. ನನ್ನಲ್ಲ ನಿಮಗೆ ರಾಘವೇಂದ್ರ ಸ್ವಾಮಿಗಳು ಕಾಣ್ತಿದ್ದಾರಾ ಅಂತ ಕೇಳಿದೆ. ಹೌದು ಅಂದರು. ಹಾಗಾದ್ರೆ ಮಾಡಿಸಪ್ಪಾ ಎಂದು ಅವರಿಗೆ ಕೊಟ್ಟುಕೊಂಡೆ’.

ನಾನೂ ಅಷ್ಟೆ. ನನ್ನಲ್ಲಿ ಈಗ ಏನೂ ಇಲ್ಲ. ನಾನೊಂದು ಬಿಳಿಯ ಹಾಳೆಯ ರೀತಿಯಲ್ಲಿ ನಿರ್ದೇಶಕರ ಬಳಿ ಹೋಗುತ್ತಿದ್ದೇನೆ. ಅವರಿಗೆ ಹೇಗೆ ಬೇಕೋ ಹಾಗೆ ಬರೆದುಕೊಳ್ಳಬೇಕು. ಅವರು ಬರೆದ ಹಾಗೆ ಬರೆಸಿಕೊಂಡು ನಟಿಸುತ್ತೇನೆ. 

ನನಗೆ ಈಗ ತಂದೆ ತಾಯಿ ಎಲ್ಲರೂ ಅವರೇ. ಈ ತಂಡವೆಂಬ ಕುಟುಂಬದಲ್ಲಿ ನಾನೊಬ್ಬ ಕೆಲಸಗಾರ ಅಷ್ಟೆ. ನಿರ್ದೇಶಕರು ನನ್ನಿಂದ ಸರಿಯಾದ ಕೆಲಸ ಮಾಡಿಸುತ್ತಾರೆ ಎಂಬ ನಂಬಿಕೆ ಇದೆ. ಅವರು ಮಾಡಿಸಿದ್ದನ್ನು ಕಣ್ಣಿಗೊತ್ತಿಕೊಂಡು ಮಾಡುತ್ತೇನೆ. ಯಾಕೆಂದರೆ ಈ ಸಿನಿಮಾ ದೊಡ್ಡದು. ಇನ್ನು ಐವತ್ತರವತ್ತು ವರ್ಷ ಆದ ಮೇಲೆ ನಾನು ಇರಲ್ಲ. ನಿರ್ದೇಶಕರೂ ಇರಲ್ಲ. ಆದರೆ ಸಿನಿಮಾ ಇರತ್ತೆ. ಆ ಪಾತ್ರ ಉಳಿದುಕೊಳ್ಳುತ್ತದೆ. ಅದಿನ್ನೂ ಬದುಕುತ್ತಿರುತ್ತದೆ. ನೀವು ಆ ಪಾತ್ರವನ್ನು, ಸಿನಿಮಾವನ್ನು ಬದುಕಿಸಿ ಅಂತಷ್ಟೇ ನಾನು ನಿರ್ದೇಶಕರನ್ನು ಕೇಳಿಕೊಳ್ಳುವುದು. 

ನಿರ್ದೇಶಕರನ್ನು ಒಪ್ಪಿಸುವುದು ನನ್ನ ಜನವಾಬ್ದಾರಿ. ಜನರನ್ನು ಒಪ್ಪಿಸುವುದು ನಿರ್ದೇಶಕರ ಜವಾಬ್ದಾರಿ. ನಿರ್ದೇಶಕರನ್ನು ತೃಪ್ತಿ ಪಡಿಸಿದರೆ ನನ್ನ ಕೆಲಸ ಮುಗೀತು. ಜನರನ್ನು ತೃಪ್ತಿ ಪಡಿಸುವುದು ಅವರ ಕೆಲಸ; ನನ್ನ ಕೆಲಸ ಅಲ್ಲ. ನಾನಿಲ್ಲಿ ನಿರ್ದೇಶಕರ ವಿದ್ಯಾರ್ಥಿ.  ಸಿನಿಮಾ ಮುಗಿಯುವವರೆಗೂ ಹೀಗೆಯೇ ಇರುತ್ತೇನೆ. ಈ ಸಿನಿಮಾಕ್ಕೆ ನಾನು ಮಗ. 

ನನ್ನ ಸೆಕೆಂಡ್‌ ಇನಿಂಗ್ಸ್‌ನಲ್ಲಿ ಇದುವರೆಗೆ ಮಾಡದೆ ಇರುವ ಸಿನಿಮಾ ಸಿಕ್ತಾ ಇರುವುದು ನನ್ನ ಪುಣ್ಯ ಎಂದುಕೊಳ್ತೀನಿ. ಇದು ನನಗೆ ಸಿನಿಮಾ ಅಲ್ಲ, ಟ್ರೀಟ್‌ಮೆಂಟ್‌. ಇದನ್ನು ಭಕ್ತಿಯಿಂದ ಮಾಡ್ತೀನಿ. 

ನನಗೆ ಆ ಸಿನಿಮಾ ಬಹಳ ಸುಂದರವಾಗಿ ಕಾಣುತ್ತಿದೆ ಆ ಸಿನಿಮಾ. ಯಾಕೆಂದರೆ ಅಲ್ಲಿ ನನ್ನಮ್ಮ ಕಾಣಿಸುತ್ತಿದ್ದಾರೆ. ಅಮ್ಮ ಸಾಯುವಾಗ ಕ್ಯಾನ್ಸರ್ ಎಂಬ ರೋಗದಿಂದ ನರಳುತ್ತಿದ್ದರು. ಅಮ್ಮನಿಗೆ ಒಂದು ನೋವಿತ್ತು. ಕೊನೆಕೊನೆಯ ದಿನಗಳಲ್ಲಿ ಅವರು ‘ನಾನೇ ನಿನ್ನನ್ನು ಹಾಳು ಮಾಡಿಬಿಟ್ಟೆ ಕಣೋ’ ಅಂತಿದ್ರು. ನಾನು ‘ಯಾಕಮ್ಮಾ?’ ಎಂದು ಕೇಳಿದರೆ ‘ಇಲ್ಲ ಕಣೋ, ನಟನೆಯಲ್ಲಿದ್ದ ನಿನ್ನ ಕರೆದು, ಆಫೀಸು ನೋಡ್ಕೋ, ತಮ್ಮನನ್ನು ನೋಡ್ಕೊ ಅಂತೆಲ್ಲ  ಜವಾಬ್ದಾರಿ ಕೊಟ್ಟು ಬಿಟ್ಟೆ. ನನ್ನ ದೆಸೆಯಿಂದ ನಿನ್ನ ನಟನೆ ನಿಂತು ಹೋಯ್ತು, ಸಾರಿ’ ಅಂದ್ರು. ‘ಅಮ್ಮಾ, ನೀನು ಹೀಗೆ ಅಂದುಕೊಂಡು ಪ್ರಾಣ ಬಿಡಬೇಡ. ಅದು ನಿನ್ನ ಆತ್ಮಕ್ಕೆ ಕಷ್ಟವಾಗತ್ತೆ. ನಾನು ಮತ್ತೆ ಸಿನಿಮಾ ಮಾಡ್ತೀನಿ’ ಅಂತ ಹೇಳಿದ್ದೆ. ಅಮ್ಮ ನಮ್ಮನ್ನು ಬಿಟ್ಟು ಹೋದ ಸುಮಾರು ದಿನ ನನಗೆ ತುಂಬ ಕಷ್ಟವಾಯ್ತು. ಅವರ ಮಾತುಗಳು ನೆನಪಾಗುತ್ತಿದ್ದವು. ಅಂಥ ಸಮಯದಲ್ಲಿಯೇ ‘ಅಮ್ಮನ ಮನೆ’ ಸಿನಿಮಾ ಸಿಕ್ತು.

ಈ ಸಿನಿಮಾ ಅವತ್ತೇ ಶುರುವಾಗಬೇಕಾಗಿತ್ತು. ಆದ್ರೆ ನಾನು ಅಮ್ಮ ತೀರಿ ಒಂದು ವರ್ಷ ಆಗುವವರೆಗೂ ನಾನು ಮಾಡುವುದಿಲ್ಲ, ನಿಮಗೆ ಅವಸರ ಇದ್ರೆ ಬೇರೆ ಯಾರನ್ನಾದರೂ ಹಾಕಿಕೊಂಡು ಸಿನಿಮಾ ಮಾಡಿ ಅಂತ ಕೇಳಿದೆ. ನಿರ್ದೇಶಕರು ಒಪ್ಪದೆ ಈ ಸಿನಿಮಾಕ್ಕೆ ನಾನೇ ಬೇಕು ಎಂದು ಹೇಳಿ ಒಂದು ವರ್ಷ ಕಾದು ಸಿನಿಮಾ ಮಾಡುತ್ತಿದ್ದಾರೆ. 

ಈಗ ಸಿನಿಮಾ ಶುರುವಾಗಿದೆ. ಈ ಸಿನಿಮಾದ ಹಲವು ಸನ್ನಿವೇಶದಲ್ಲಿ ಅಮ್ಮ ಕಾಣ್ತಾರೆ. ಅದು ನಿಮಗೂ ಕಾಣಿಸುತ್ತದೆ. ಯಾಕೆಂದರೆ ನೀವೆಲ್ಲ ನನ್ನ ಅಮ್ಮನನ್ನು ನೋಡಿದ್ದಾರೆ.

ಈ ಸಿನಿಮಾ ನೋಡಿದ ಎಲ್ಲರಿಗೂ ‘ನನ್ನ ಹೆಂಡತಿಯಲ್ಲಿ ಅಮ್ಮನನ್ನು ಯಾಕೆ ನೋಡಬಾರದು? ಅವಳು ನನ್ನ ಮಕ್ಕಳಿಗೆ ಅಮ್ಮ ಅಲ್ವಾ? ನನಗೂ ಯಾಕೆ ಅಮ್ಮ ಆಗಬಾರದು ?’ ಎಂಬ ಪ್ರಶ್ನೆ ಬರುತ್ತದೆ. ಜನರು ನನ್ನ ಪಾತ್ರದಲ್ಲಿ ಅವರನ್ನು ಕಾಣಬಹುದು. ಈ ಚಿತ್ರದ ಶಿರ್ಷಿಕೆಯೇ ಜನರನ್ನು ಕರೆದುಕೊಂಡು ಬರುತ್ತಾರೆ. 

ಮೊನ್ನೆ ಒಬ್ಬರು ಹೆಣ್ಣುಮಗಳು ನನ್ನ ಬಳಿ ಈ ಚಿತ್ರದ ಶೀರ್ಷಿಕೆ ಇಷ್ಟ ಆಯ್ತು ಅಂದರು. ಯಾಕಮ್ಮಾ ಅಂತ ಕೇಳಿದೆ. ‘ಅಮ್ಮನ ಮನೆ ಅಂದ್ರೆ ಏನು? ಹೆಣ್ಣುಮಕ್ಕಳಿಗೆ ಅದು ತವರು. ತವರು ಯಾಕೆ ಇಷ್ಟ ಅಂತ ಕೇಳಿದ್ರೆ ಏನು ಹೇಳಲಿ?’ ನನ್ನನ್ನೇ ಕೇಳಿದಳು. ಆಗ ನನಗೆ ಈ ಸಿನಿಮಾ ಆಯ್ದುಕೊಂಡಿದ್ದು  ಸರಿ ಎಂದು ಮನದಟ್ಟಾಯ್ತು.’’

ರಾಘಣ್ಣ ಮಾತು ಮುಗಿಸುವಷ್ಟರಲ್ಲಿ ಮಳೆಹನಿ ದಪ್ಪ ದಪ್ಪವಾಗಿ ಬೀಳತೊಡಗಿತ್ತು. ಪಾರ್ವತಮ್ಮನ ಭಾವಚಿತ್ರದ ಮೇಲೆ ಬಿದ್ದ ಒಂದು ಹನಿ ಕೆಳಗೆ ಹನಿಯುತ್ತಿದ್ದದ್ದು ಮಗನ ಮಾತು ಕೇಳಿ ಅಮ್ಮ ಸುರಿಸಿದ ಆನಂದಬಾಷ್ಪದ ಹಾಗೆ ಕಾಣುತ್ತಿತ್ತು.

****
ಜೀವನ್ಮುಖಿ ಸಿನಿಮಾ

ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರು ಪಿಟಿ ಮಾಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಣ್ಣಪುಟ್ಟ ದೈಹಿಕ ನ್ಯೂನತೆಗಳಿದ್ದ ಮಗುವನ್ನು ತಾಯಿ ಜಗತ್ತನ್ನೇ ಎದುರು ಹಾಕಿಕೊಂಡು ಒಬ್ಬಂಟಿಯಾಗಿ ಬೆಳೆಸಿರುತ್ತಾಳೆ. ಕೊನೆಗೆ ಆ ತಾಯಿ ಯಾವುದೋ ಕಾರಣಕ್ಕಾಗಿ ದುರ್ಬಲಳಾದಾಗ ಮಗ ಅವಳನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವುದೇ  ಈ ಚಿತ್ರದ ಕಥೆ. ಬಿ. ಜಯಶ್ರೀ ರಾಘಣ್ಣನ ಅಮ್ಮನಾಗಿ ನಟಿಸುತ್ತಿದ್ದಾರೆ. ನಾನು ಇದುವರೆಗೂ ಜೀವನ್ಮುಖಿ ಸಿನಿಮಾಗಳನ್ನೇ ಮಾಡಿಕೊಂಡು ಬಂದವನು. ಈ ಚಿತ್ರವೂ ಅದೇ ರೀತಿಯದ್ದು. ಇಂದು ನಾವು ತಂದೆ ತಾಯಿಗಳನ್ನು ಅಲಕ್ಷ್ಯದಿಂದ ನೋಡುತ್ತೇವೆ. ಮುಂದೊಂದು ದಿನ ನಾವೂ ಅವರ ಹಾಗೆಯೇ ವೃದ್ದರಾಗುತ್ತೇವೆ ಎಂಬ ಕಲ್ಪನೆಯೇ ಇಲ್ಲದೆ ಅವರನ್ನು ನಡೆಸಿಕೊಳ್ಳುತ್ತೇವೆ. ಇಂಥ ಮನಸ್ಥಿತಿಯವರಿಗೆ ಒಳ್ಳೆಯ ಸಂದೇಶವನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇವೆ. ಇನ್ನು ಮೂರು ತಿಂಗಳಲ್ಲಿ ಚಿತ್ರವನ್ನು ಪೂರ್ತಿಗೊಳಿಸಿ ತೆರೆಗೆ ತರುವ ಆಲೋಚನೆ ಇದೆ. 
– ನಿಖಿಲ್‌ ಮಂಜೂ ಲಿಂಗಯ್ಯ, ನಿರ್ದೇಶಕ

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !