ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಅನ್ನೋದು ಅಡುಗೆ ಇದ್ದ ಹಾಗೆ | ರಾಜ್‌ ಶೆಟ್ಟಿ ವಿಶೇಷ ಸಂದರ್ಶನ

ಸಿನಿಮಾ, ಲೈಫು, ಫೇಮು, ಫಿಲಾಸಪಿ ಇತ್ಯಾದಿ...
Last Updated 7 ಮೇ 2020, 13:54 IST
ಅಕ್ಷರ ಗಾತ್ರ
ADVERTISEMENT
""
""

‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಮೂಲಕ ಪರಿಚಿತರಾಗಿ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದರೂ ರಾಜ್‌ ಬಿ. ಶೆಟ್ಟಿ ಇಂದಿಗೂ ‘ಮೊಟ್ಟೆ ಶೆಟ್ರು’ ಆಗಿಯೇ ಆಪ್ತರು. ಸಿನಿಮಾ ಮಾಧ್ಯಮವನ್ನು ತುಂಬ ಗಂಭೀರವಾಗಿ ಪರಿಗಣಿಸಿರುವ ಕನ್ನಡ ಚಿತ್ರರಂಗದ ವಿರಳಾತಿವಿರಳ ನಿರ್ದೇಶಕರಲ್ಲಿ ಒಬ್ಬರಾದ ಅವರು, ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದ ತಮ್ಮದೇ ವಿಗ್ರಹವನ್ನು ಭಂಜಿಸಲು ಹಿಂಜರಿಯದವರು. ‘ಜನರ ಕಣ್ಣಲ್ಲಿ ಬೆಳೆಯಬೇಕು ಎಂಬ ವ್ಯಾಮೋಹಕ್ಕೆ ಒಳಗಾಗಿ ನನ್ನ ಸ್ವಾತಂತ್ರ್ಯವನ್ನು ಅವರ ಕೈಯಲ್ಲಿ ಕೊಡಲಾರೆ’ ಎಂದು ದಿಟ್ಟವಾಗಿ ನುಡಿಯುವ ರಾಜ್‌ ಜೊತೆಗಿನ ಈ ಮಾತುಕತೆ ಅವರ ಸಂವೇದನೆಯ ಹಲವು ಕವಲುಗಳನ್ನು ಪರಿಚಯಿಸುವಂತಿದೆ.

* ಸದ್ಯಕ್ಕೆ ಯಾವ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಿ?
‘ತುರ್ತು ನಿರ್ಗಮನ’ ಇನ್ನೂ ಬಿಡುಗಡೆಯಾಗಬೇಕಿದೆ. ನಟೇಶ ಹೆಗಡೆ ಅವರ ‘ಪೆದ್ರೊ’ ಸಿನಿಮಾದಲ್ಲಿ ನಟಿಸಿದ್ದೇನೆ. ಉಳಿದಂತೆ, ಯಾವ ಹೊಸ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ.

*ನಿಮ್ಮ ಎರಡನೇ ಸಿನಿಮಾ ‘ಗರುಡ ಗಮನ; ವೃಷಭ ವಾಹನ’ ಯಾವ ಹಂತದಲ್ಲಿದೆ?
ಚಿತ್ರೀಕರಣ ಮುಗಿದು, ಸಂಕಲನವೂ ನಡೆಯುತ್ತಿದೆ. ಸಂಗೀತದ ಕೆಲಸ ನಡೆಯುತ್ತಿದೆ.

*ಸಿನಿಮಾ ಹೆಸರು ವಿಚಿತ್ರವಾಗಿದೆ. ಫಸ್ಟ್ ಲುಕ್, ಸೆಕೆಂಡ್ ಲುಕ್‌ ಎಲ್ಲವೂ ಅಷ್ಟೇ ವಿಚಿತ್ರವಾಗಿದ್ದವು. ಇದು ಯಾವ ರೀತಿಯ ಸಿನಿಮಾ?
ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ. ಮಂಗಳೂರಿನ ರೌಡಿಸಂ ಬಗ್ಗೆ ಇರುವ ಸಿನಿಮಾ. ಫಸ್ಟ್ ಲುಕ್‌ನಲ್ಲಿ ಎರಡು ಪಾತ್ರಗಳನ್ನು ಪರಿಚಯಿಸುತ್ತಿದ್ದೇವೆ. ‘ಗರುಡ ಗಮನ; ವೃಷಭ ವಾಹನ’ ಎಂದರೆ ಅದು ಎರಡು ತತ್ತ್ವಗಳನ್ನು ಹೇಳುತ್ತದೆ. ಗರುಡ ಗಮನ ಎಂದರೆ ವಿಷ್ಣು. ವೃಷಭ ವಾಹನ ಎಂದರೆ ಶಿವ. ಒಂದು ನಿರ್ವಹಣೆಯ ತತ್ತ್ವ ಸೂಚಿಸಿದರೆ, ಇನ್ನೊಂದು ಲಯತತ್ತ್ವವನ್ನು ಅಂದರೆ ನಾಶವನ್ನು ಪ್ರತೀಕಿಸುತ್ತದೆ. ಇಬ್ಬರೂ ರೌಡಿಗಳೂ ಅದೇ ತತ್ತ್ವದಲ್ಲಿ ಇದ್ದರೆ, ಅವರ ನಡುವಿನ ಘರ್ಷಣೆ ಹೇಗಿರಬಹುದು? ಏನಾಗಬಹುದು ಎಂಬುದು ಸಿನಿಮಾ ಕಥೆ.

*ನಿಮ್ಮ ಮೊದಲನೇ ಸಿನಿಮಾ ‘ಒಂದು ಮೊಟ್ಟೆಯ ಕಥೆ’ ಪೂರ್ತಿಯಾಗಿ ಕಾಮಿಡಿ ಸಿನಿಮಾ. ಈಗ ಗ್ಯಾಂಗ್‌ಸ್ಟರ್ ಕಥೆಗೆ ಜಂಪ್ ಆಗಿದ್ದೀರಿ. ಹೊಸ ಪ್ರಕಾರದಲ್ಲಿ ಕಥೆ ಹೇಳುವಾಗ ನೀವು ಎದುರಿಸಿದ ಸವಾಲುಗಳೇನು?
ನಾನು ಆ ಚಾಲೆಂಜ್ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಈ ಸಿನಿಮಾವನ್ನು ಇಷ್ಟಪಟ್ಟು ಮಾಡುತ್ತಿರುವುದು. ‘ಒಂದು ಮೊಟ್ಟೆಯ ಕಥೆ’ ಸಿನಿಮಾ ನಮ್ಮ ಮಿತಿಗಳ ನಡುವೆಯೇ ಮಾಡಿದ ಸಿನಿಮಾ. ನಮ್ಮತ್ರ ಇರುವ ಬಜೆಟ್, ನಟರು ಎಂಥವರು, ನಮ್ಮ ಸಂಪನ್ಮೂಲಗಳೇನು ಎಂಬುದನ್ನೆಲ್ಲ ಯೋಚಿಸಿ ಆ ಮಿತಿಗೆ ಹೊಂದುವ ಹಾಗೆಯೇ ಬರೆದ ಸಿನಿಮಾ. ‘ಗರುಡ ಗಮನ; ವೃಷಭ ವಾಹನ’ ಕೂಡ ನಮ್ಮ ಮಿತಿಗಳನ್ನು ತಲೆಯಲ್ಲಿಟ್ಟುಕೊಂಡೇ ಬರೆದ, ಆದರೆ ಆ ಮಿತಿಗಳನ್ನು ಮೀರಲೇಬೇಕು ಎಂದುಕೊಂಡೇ ಮಾಡಿದ ಸಿನಿಮಾ. ಎರಡೂ ಸಿನಿಮಾಗಳನ್ನು ಮಾಡುವಾಗಲೂ ಲಿಮಿಟೇಷನ್ಸ್ ಇದ್ದವು. ಒಂದು ಸಿನಿಮಾ ಲಿಮಿಟೇಷನ್‌ಗಳನ್ನು ದಾಟಲಾರದೇ ಬರೆದ ಸಿನಿಮಾ. ಇನ್ನೊಂದು ಲಿಮಿಟೇಷನ್‌ಗಳನ್ನು ದಾಟಲೇಬೇಕು ಎಂದು ಬರೆದ ಸಿನಿಮಾ.

ಒಂದು ಮೊಟ್ಟೆಯ ಕಥೆ ಹೇಗೆ ಬಹಳಷ್ಟನ್ನು ಕಲಿಸಿದೆಯೋ, ಈ ಸಿನಿಮಾವೂ ನಮಗೆ ಸಾಕಷ್ಟು ಕಲಿಸಿದೆ. ಒಂದು ಮೊಟ್ಟೆಯ ಕಥೆ ಎಷ್ಟು ಒಳಾಂಗಣದಲ್ಲಿ ಚಿತ್ರೀಕರಣ ಮಾಡಿದೆವೋ, ಇದನ್ನು ಅಷ್ಟೇ ಹೊರಾಂಗಣದಲ್ಲಿ ಚಿತ್ರೀಕರಿಸಿದ್ದೇವೆ. ಒಂದು ಮೊಟ್ಟೆಯ ಕಥೆ, ಮಂಗಳೂರಿನ ಒಂದು ಭಾಗವನ್ನು, ಒಬ್ಬ ವ್ಯಕ್ತಿಯನ್ನು ಮತ್ತು ಅವನ ಅಂತರಂಗವನ್ನು ತೋರಿಸುತ್ತದೆ. ಈ ಸಿನಿಮಾದಲ್ಲಿ ಇಬ್ಬರು ಇದ್ದಾರೆ. ಜೊತೆಗೆ ಇಡೀ ಮಂಗಳೂರೇ ಒಂದು ಪಾತ್ರವಾಗಿರುತ್ತದೆ.

*ಸಿನಿಮಾ ನಿರ್ಮಿತಿಯ ಪ್ರಕ್ರಿಯೆಯಲ್ಲಿ ಯಾವ ಹಂತ ನಿಮಗೆ ತುಂಬ ಮುಖ್ಯವಾದದ್ದು ಅನಿಸುತ್ತದೆ?
ಯಾವತ್ತಿಗೂ ಸ್ಕ್ರಿಪ್ಟ್ ತುಂಬ ಮುಖ್ಯ. ನಾನು ಯಾವತ್ತೂ ಸಿನಿಮಾವನ್ನು ಅಡುಗೆಗೆ ಹೋಲಿಸುತ್ತಿರುತ್ತೇನೆ. ಅಡುಗೆ ಪ್ರಕ್ರಿಯೆಯಲ್ಲಿ ಯಾವುದು ಹೆಚ್ಚು ಶ್ರೇಷ್ಠವಾದದ್ದು ಎಂದರೆ ಆ ಪ್ರಶ್ನೆಯೇ ಅಡುಗೆಗೆ ಅನ್ವಯ ಆಗುವುದಿಲ್ಲ. ಯಾಕೆಂದರೆ ತರಕಾರಿ ಕತ್ತರಿಸಿ ಸ್ವಚ್ಛಮಾಡುವುದು, ಅದನ್ನು ಪಕ್ವವಾಗಿ ಬೇಯಿಸುವುದು, ಉಪ್ಪು ಹಾಕುವುದರಿಂದ ಹಿಡಿದು ಆಮೇಲೆ ಸರಿಯಾದ ಬಿಸಿಯಲ್ಲಿ ಅದನ್ನು ಬಡಿಸುವುದರವರೆಗೂ ಎಲ್ಲವೂ ಮುಖ್ಯವೇ. ಹೀಗಾಗಿ ನನಗೆ ಸಿನಿಮಾ ಮಾಡುವ ಪ್ರಕ್ರಿಯೆಯಲ್ಲಿ ಯಾವುದು ಇಷ್ಟ ಎಂದು ಕೇಳಿದರೆ ಇಡೀ ಪ್ರಕ್ರಿಯೆಯೇ ಇಷ್ಟ ಎನ್ನುತ್ತೇನೆ. ಸಿನಿಮಾ ರೆಡಿಯಾಗಿ ಚಿತ್ರಮಂದಿರಕ್ಕೆ ಹೋಗಿ ಜನರಿಂದ ಸಿಗುವ ಪ್ರತಿಸ್ಪಂದನ ಕೊಡುವ ಖುಷಿ ಕೇವಲ ಶೇ. 1. ಉಳಿದ ಖುಷಿಯನ್ನೆಲ್ಲ ನಾನು ಅನುಭವಿಸುವುದು ಸಿನಿಮಾ ಮಾಡುವಾಗಲೇ.

ನಿಮ್ಮ ಮನಸಲ್ಲಿದ್ದ ಸಿನಿಮಾವನ್ನು ಕಾಗದದ ಮೇಲೆ ಹಾಕಿ, ಅದಕ್ಕೊಂದು ಬಣ್ಣ ರೂಪುರೇಷೆ ಬಂದು, ಅದೇ ಬಣ್ಣವನ್ನು ಅದಕ್ಕಿಂತ ಭಿನ್ನವಾದ ಬಣ್ಣಗಳನ್ನು ಕಲಾವಿದರು ನೀಡಿ, ಆಮೇಲೆ ಅದನ್ನು ನೋಡಿದಾಗ ನಿಮ್ಮನ್ನೇ ಅದು ಅಚ್ಚರಿಗೊಳಿಸುತ್ತದಲ್ಲ... ಆ ಇಡೀ ಪ್ರಕ್ರಿಯೆಯಲ್ಲಿ ನೀರಸ ಎನ್ನುವುದು ಎಲ್ಲಿಯೂ ಇರುವುದಿಲ್ಲ. ನನಗೆ ಕುವೆಂಪು ಅವರ ಒಂದು ಮಾತು ತುಂಬ ಇಷ್ಟ. ‘ಸೃಷ್ಟಿಕಾರ್ಯವಲ್ಲದ ಸರ್ವಕಾರ್ಯವೂ ನೀರಸ’ ಎನ್ನುವ ಮಾತದು. ಸಿನಿಮಾ ಸೃಷ್ಟಿಕಾರ್ಯವಾದ ಕಾರಣ ಇಲ್ಲಿ ನೀರಸವಾದದ್ದು ಅಥವಾ ಅಮುಖ್ಯ ಅನ್ನುವಂಥ ಭಾಗ ಇರುವುದಿಲ್ಲ. ನನಗೆ ನೀರಸ ಅನ್ನಿಸುವಂಥದ್ದು ಸಿನಿಮಾ ಪ್ರಮೋಷನ್. ಆದ್ರೆ ಏನ್ಮಾಡೋದು? ಅದನ್ನು ಮಾಡಲೇಬೇಕು. ಯಾಕೆಂದರೆ ಅದು ಅನಿವಾರ್ಯ.

ಗರುಡ ಗಮನ ಚಿತ್ರದ ಪೋಸ್ಟರ್‌

*ಸಿನಿಮಾ ನಿರ್ದೇಶಕನಾಗಿ, ನಟನಾಗಿ ನಿಮ್ಮದೊಂದು ಇಮೇಜ್‌ ಜನರ ಮನಸಲ್ಲಿ ರೂಪುಗೊಂಡಿರುತ್ತದೆ. ಮೊದಲಾದರೆ ಸೆಲೆಬ್ರಿಟಿಗಳಿಗೆ ಅವರ ವೈಯಕ್ತಿಕ ಒಲವು ನಿಲುವಿನ ಆಚೆಗೆ ತೆರೆಯ ಮೇಲಿನ ಪಾತ್ರ, ಚಿತ್ರಗಳಿಂದಲೇ ಒಂದು ಗಟ್ಟಿಯಾದ ಇಮೇಜ್ ರೂಪುಗೊಳ್ಳುತ್ತಿತ್ತು. ಆದರೆ ಈಗ ಬೆಳಿಗ್ಗೆ ಒಬ್ಬ ನಟನ ಸಿನಿಮಾ ನೋಡಿ ಮೆಚ್ಚಿಕೊಂಡವನು ಸಂಜೆ ಅವನ ಫೇಸ್‌ಬುಕ್‌ ಸ್ಟೇಟಸ್‌ ನೋಡಿ ದ್ವೇಷಿಸಲಾರಂಭಿಸುತ್ತಾನೆ. ಇಂಥ ವೈರುಧ್ಯಗಳನ್ನು ಹೇಗೆ ನೋಡುತ್ತೀರಿ ನೀವು?

ಕಲಾವಿದನಿಗೆ ಅಭಿಮಾನಿಗಳಷ್ಟು ದೊಡ್ಡ ದೇವರು ಯಾವುದೂ ಇಲ್ಲ; ಅಭಿಮಾನಿಗಳಷ್ಟು ದೊಡ್ಡ ಜೈಲೂ ಯಾವುದೂ ಇಲ್ಲ. ಯಾಕೆಂದರೆ, ಕಲಾವಿದನನ್ನು ಬಿಡೋಣ, ಒಬ್ಬ ಲೀಡರ್ ಎಂದುಕೊಳ್ಳೋಣ. ರಾಜಕೀಯ ಲೀಡರ್ ಇರಬಹುದು; ಆಧ್ಯಾತ್ಮಿಕ ಲೀಡರ್ ಇರಬಹುದು.

ಒಬ್ಬ ಲೀಡರ್ ಒಂದು ಸಲ ತನ್ನ ಅನುಯಾಯಿಗಳಿಗೆ ‘ಮಹಾತ್ಮ’ ಎಂದು ತೋರಿಸಿಕೊಟ್ಟರೆ ಆಮೇಲೆ ಅವನು ಅವನ ಹಿಂಬಾಲಕರ ಕಣ್ಣಲ್ಲಿ ಮಹಾತ್ಮನಾಗಿಯೇ ಇರಬೇಕು. ‘ಅವನು ಮೂರೂವರೆಗೆ ಏಳಬೇಕು. ಹಾಗಿದ್ದರೆ ಮಾತ್ರ ಅವನು ಮಹಾತ್ಮ’ ಎಂಬ ಷರತ್ತನ್ನು ಅವನ ಹಿಂಬಾಲಕರು ಹಾಕಿದರೆ, ಇವನು ಪಾಪ, ತನ್ನ ಮಹಾತ್ಮ ಪಟ್ಟವನ್ನು ಉಳಿಸಿಕೊಳ್ಳಲು ಮೂರೂವರೆಗೇ ಏಳಬೇಕಾಗುತ್ತದೆ; ರಾತ್ರಿ ಒಂದೂವರೆಗೆ ಮಲಗಿದ್ದರೂ! ಲೀಡರ್‌ಗಳು ಅನುಯಾಯಿಗಳನ್ನು ಮುನ್ನಡೆಸುವುದು ಮಾತ್ರವಲ್ಲ; ಎಷ್ಟೋ ಸಲ ಅನುಯಾಯಿಗಳು ಲೀಡರ್‌ಗಳನ್ನು ನಡೆಸುತ್ತಾರೆ. ಜನರ ಕಣ್ಣಲ್ಲಿ ಬೆಳೆಯಬೇಕು ಎಂಬ ಹಂಬಲವಿರುವವನು ಅವರ ಕೈಗೆ ತನ್ನ ಸ್ವಾತಂತ್ರ್ಯವನ್ನು ಕೊಡಲು ಸಿದ್ಧನಾಗಿರಬೇಕು.

ಎಂಥ ದೊಡ್ಡ ನಟನೇ ಇರಲಿ, ಸಾಧಕನೇ ಇರಲಿ – ತನ್ನ ಅಭಿಮಾನಿಗಳು ಇಷ್ಟಪಡುವಂಥ ಒಂದು ಮಾತು ಆಡುವುದರ ಮೂಲಕ ಅವರಿಗೆ ಇನ್ನಷ್ಟು ಹತ್ತಿರ ಆಗಿಬಿಡಬಹುದು. ಮತ್ತಷ್ಟು ಜನರ ದ್ವೇಷಕ್ಕೂ ಗುರಿಯಾಗಬಹುದು. ತುಂಬ ಜನರ ಪ್ರೀತಿಗೂ ದ್ವೇಷಕ್ಕೂ ನಡುವೆ ಒಂದು ‘ಒಪೀನಿಯನ್‌’ನ ಅಂತರ ಅಷ್ಟೇ ಇರುವುದು.

ನನ್ನ ನಂಬಿಕೆ ಏನೆಂದರೆ ಮನುಷ್ಯನಿಗೆ –ಲೀಡರೇ ಇರಲಿ; ಸಾಮಾನ್ಯನೇ ಇರಲಿ– ಸಂತೃಪ್ತಿ ತುಂಬ ಮುಖ್ಯ. ನಾವು ಏನಾದರೂ ಕೆಲಸ ಮಾಡುವುದಾದರೆ ಆ ಸಂತೃಪ್ತಿಗೋಸ್ಕರ ಮಾಡಬೇಕು. ಏನಾದರೂ ಮಾತಾಡುವುದಾದರೂ ಆ ಸಂತೃಪ್ತಿಗೋಸ್ಕರವೇ ಮಾತಾಡಬೇಕು. ಅದನ್ನು ಬಿಟ್ಟು ಇದನ್ನು ಹೇಳಿದರೆ ನಾನು ಜನರ ಕಣ್ಣಿನಲ್ಲಿ ದೊಡ್ಡವನಾಗಿ ಕಾಣಿಸಬಹುದಾ? ಜನರ ಕಣ್ಣಿನಲ್ಲಿ ಸಣ್ಣವನಾಗಬಹುದಾ, ಈ ಸಿನಿಮಾವನ್ನು ಮಾಡಿದರೆ ದೊಡ್ಡವನಾಗಿ ಕಾಣಿಸಬಹುದಾ, ಸಣ್ಣವನಾಗಿ ಕಾಣಿಸಬಹುದಾ ಎಂಬುದು ತಲೆಯಲ್ಲಿ ಬಂದರೆ – ಆ ಆಲೋಚನೆ ಬಂದಾಗಲೇ ನೀವು ಸಣ್ಣವರಾಗಿ ಆಗಿದೆ. ಅದಕ್ಕಿಂತ ಸಣ್ಣವರಾಗುವುದು ಏನೂ ಉಳಿದಿಲ್ಲ. ಯಾಕೆಂದರೆ ನಿಮ್ಮ ಬದುಕು ನಿಮ್ಮ ಕೈಯಲ್ಲಿಲ್ಲ. ಯಾರೋ ಒಬ್ಬರು ಹೇಳ್ತಾರೆ, ‘ಸರ್ ನೀವು ತುಂಬ ಚೆನ್ನಾಗಿ ಕಾಮಿಡಿ ಮಾಡ್ತೀರಾ. ಅದನ್ನೇ ಮುಂದುವರಿಸಬೇಕು’ ಎಂದು. ಅವನು ನನ್ನನ್ನು ಹೊಗಳುತ್ತಿದ್ದಾನೆ ಎಂದು ಉಬ್ಬಿದರೆ ಅದು ತಪ್ಪು ತಿಳಿವಳಿಕೆ. ಯಾಕೆಂದರೆ ಅವನು ನನ್ನನ್ನು ಸೀಮಿತಗೊಳಿಸುತ್ತಿದ್ದಾನೆ. ನಾನು ಅದನ್ನು ಅನುಸರಿಸಲೇಬೇಕು; ಯಾಕೆಂದರೆ ಅವನು ತುಂಬ ಸ್ವೀಟ್ ಆಗಿ ಹೇಳ್ತಿದ್ದಾನೆ. ನೀವು ಅವನ ಮಾತನ್ನು ಮೀರಲು ಯತ್ನಿಸಿದರೆ ಅವನಿಗೆ ನಿಮ್ಮ ಮೇಲಿದ್ದ ಅಭಿಮಾನ ಹೊರಟು ಹೋಗಬಹುದು. ಅಲ್ಲಿಗೆ ನಮ್ಮ ಕತೆ ಮುಗಿಯಿತು.

ನಾನು ಇದನ್ನೆಲ್ಲ ಮೀರಿ ಬೆಳೆದಿದ್ದೀನಿ ಎಂದು ಹೇಳುವುದಿಲ್ಲ. ಆದರೆ ಆ ಪ್ರಯತ್ನದಲ್ಲಿದ್ದೇನೆ. ಜನರ ಸ್ವೀಕಾರ, ತಿರಸ್ಕಾರಗಳನ್ನು ಅಷ್ಟಾಗಿ ಮನಸ್ಸಿಗೆ ತೆಗೆದುಕೊಳ್ಳದ ರೀತಿಯಲ್ಲಿ ಬದುಕಬೇಕು ಎಂಬುದು ನನ್ನ ಆಲೋಚನೆ. ಹಾಗಾಗಿ ಈವತ್ತಿಗೂ ನಾನು ಹಂಚಿಕೊಳ್ಳುವ ಮಾತುಗಳು, ಫೋಟೊಗಳು ಎಲ್ಲವೂ ಸಾಮಾನ್ಯವಾಗಿಯೇ ಇರುತ್ತವೆಯೇ ಹೊರತು, ನಾನೇನೋ ಆಗಿಬಿಟ್ಟಿದೀನಿ ಅಂತ ಪ್ರೂವ್ ಮಾಡಿಕೊಳ್ಳುವ ಹಂಬಲ ಖಂಡಿತ ನನಗಿಲ್ಲ. ಯಾಕೆಂದರೆ ನಾನು ಏನೂ ಆಗಿಲ್ಲ ಅನ್ನೋದು ನನಗೆ ಗೊತ್ತು. ಏನಾದ್ರೂ ಆಗಿದ್ರೆ ಅದು ಜನರ ಕಣ್ಣಿನಲ್ಲಿ; ಅದು ಅವರ ಅನಿಸಿಕೆ. ನಾನದಕ್ಕೆ ಹೇಗೆ ಜವಾಬ್ದಾರನಾಗಲಿ?

*ಆದರೆ ನಟನೆಯ ವೈಯಕ್ತಿಕ ಒಲವು ನಿಲುವುಗಳ ಕಾರಣ ಒಡ್ಡಿ ಆ ನಟ/ನಟಿಯ ಸಿನಿಮಾವನ್ನು ನೋಡಬೇಕೆ ಬೇಡವೇ ಎಂದು ನಿರ್ಧಾರವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಅಲ್ಲವೇ?
‘ನಾನು ಒಂದು ಪಂಥದವನು’ ಎಂಬುದು ತುಂಬ ತಪ್ಪು ವ್ಯಾಖ್ಯಾನ ಅನಿಸುತ್ತದೆ ನನಗೆ. ನಾನು ಹಿಂದೂ ಧರ್ಮದವನು; ಆದರೆ ನಾನೇ ಹಿಂದೂ ಧರ್ಮ ಅಲ್ಲ. ನಾನು ಕರಾವಳಿ ಪ್ರದೇಶದವನು; ನಾನೇ ಕರಾವಳಿ ಅಲ್ಲ. ನಾನು ಮನುಷ್ಯ. ಈ ಎರಡರ ನಡುವಿನ ವ್ಯತ್ಯಾಸ ಇದೆಯಲ್ಲ. ಆ ವ್ಯತ್ಯಾಸ ಇಂದು ಮಸುಕಾಗಿದೆ. ನನ್ನ ಪಕ್ಕದಲ್ಲಿ ಕೂತವನೊಬ್ಬ, ‘ನಾನೊಬ್ಬ ಮುಸ್ಲಿಮ್ ಧರ್ಮದವನು’ ಎಂದಾಕ್ಷಣ ನನಗೆ ಯಾಕೆ ಸಿಟ್ಟು ಬರಬೇಕು? ನಾನೂ ಒಂದಕ್ಕೆ ಸೇರಿದೀನಿ, ನೀನೂ ಒಂದಕ್ಕೆ ಸೇರಿದೀಯಾ. ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ಅದೂ ನಾನು ನನ್ನ ದಾರಿಯನ್ನು ಅನುಸರಿಸುತ್ತೇನೆ ಅನ್ನುವುದಾದರೆ ಮಾತ್ರ. ಎಷ್ಟೋ ಜನಕ್ಕೆ ಆ ದಾರಿ ಗೊತ್ತಿಲ್ಲ, ಅದರ ಭಾವ ಗೊತ್ತಿಲ್ಲ. ಅದರ ಧ್ವನಿ ಗೊತ್ತಿಲ್ಲ. ಈ ಎಲ್ಲವೂ ಗೊತ್ತಿರುವವರಿಗೆ ಬೇರೆಯವರ ದಾರಿಯ ಬಗ್ಗೆಯೂ ಗೌರವ ಇದ್ದೇ ಇರುತ್ತದೆ.

ರಾಮಕೃಷ್ಣ ಪರಮಹಂಸರು ಒಮ್ಮೆ ಜ್ಞಾನೋದಯ ಆದಮೇಲೆ ಎಷ್ಟೋ ತಿಂಗಳ ಕಾಲ ಮುಸ್ಲಿಮ್ ಆಗಿದ್ದರಂತೆ. ಕಾಳಿದೇವಿಯ ಪೂಜೆಯನ್ನೂ ಮಾಡ್ತಿರ್ಲಿಲ್ವಂತೆ. ಆ ದಾರಿಯಲ್ಲಿಯೂ ಅವರು ಸಾಕ್ಷಾತ್ಕಾರ ಪಡೆದುಕೊಂಡು ಮತ್ತೊಂದು ದಾರಿಗೆ ಹೋದರಂತೆ. ಹೀಗೆ ಎಲ್ಲ ದಾರಿಗಳಲ್ಲಿಯೂ ಸಾಕ್ಷಾತ್ಕಾರ ಮಾಡಿಕೊಂಡು ಅವರು ಹೇಳಿದ್ದು, ‘ಈಗ ನಾನು ತುಂಬಾ ಖಚಿತವಾಗಿ ಹೇಳಬಲ್ಲೆ; ಎಲ್ಲ ದಾರಿಗಳೂ ಒಂದೇ ಕಡೆಗೆ ನಮ್ಮನ್ನು ತಲುಪಿಸುತ್ತವೆ’. ನಾನು ಅಧ್ಯಾತ್ಮದ ಪಥದಲ್ಲಿದ್ದರೆ, ನಾನದನ್ನು ಓದಿಕೊಂಡಿದ್ದರೆ, ಇನ್ನೂ ನಾನು ನನ್ನದು ಅವನದು ಎಂದು ತರತಮ ಮಾಡುತ್ತೇನೆಂದರೆ ಅದು ನನ್ನ ಅಹಂಕಾರದ ಪ್ರತಿಫಲ ಮಾತ್ರ.

ಮನುಷ್ಯ ತಾನು ಪೊಳ್ಳು ಎನ್ನುವುದನ್ನು ಹೇಗೋ ಅರ್ಥ ಮಾಡ್ಕೊಂಡಿದಾನೆ. ಆದರೆ ಆ ಖಾಲಿತನವನ್ನು ದಿಟ್ಟಿಸುವುದಕ್ಕೆ ಅವನಿಗೆ ಆಗ್ತಾ ಇಲ್ಲ. ನಾನು ನಟ ಎಂಬುದನ್ನು ಬಿಟ್ಟು ಬೇರೆ ಏನಾದರೂ ನೆಚ್ಚಿಕೊಳ್ಳಲಿಕ್ಕೆ ಇದ್ದರೆ ಮಾತ್ರ ನಾನು ರಸ್ತೆಯಲ್ಲಿ ಆರಾಮವಾಗಿ ಓಡಾಡಬಹುದು. ಅದಿಲ್ಲದಿದ್ದರೆ ಪ್ರತಿಸಲವೂ ನಾನು ನಟ ಎಂಬುದನ್ನು ಸಾಬೀತುಮಾಡುವ ದರ್ದಿಗೆ ಬೀಳುತ್ತೇನೆ. ಯಾಕೆಂದರೆ ಅದೊಂದು ಅಸ್ಮಿತೆ ಬಿದ್ದು ಹೋದರೆ ಯಾವುದೂ ಇರುವುದಿಲ್ಲ. ಎಲ್ಲ ಜನರೂ ಯಾವುದೋ ಒಂದು ಅಸ್ಮಿತೆಗಾಗಿ ಹುಡುಕಾಡುತ್ತಿರುತ್ತಾರೆ. ತಮ್ಮೊಳಗಿನ ಖಾಲಿತನವನ್ನು ಮುಚ್ಚಿಕೊಳ್ಳಲು ಏನೇನೋ ಮಾಡುತ್ತಿರುತ್ತಾರೆ. ಯಾವಾಗ ನಾವು ನಮ್ಮೊಳಗಿನ ಖಾಲಿತನವನ್ನು ದಿಟ್ಟಿಸಿ ನೋಡುವ ಸ್ಥೈರ್ಯ ಪಡೆದುಕೊಳ್ಳುತ್ತೇವೆಯೋ, ಅದರ ಜೊತೆಗೆ ಮಾತಾಡಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳುತ್ತೇವೆಯೋ ಆಗ ನಮಗೆ ನಿಜವಾಗಲೂ ಯಾವುದು ಮುಖ್ಯ ಎಂಬುದು ತಿಳಿಯುತ್ತದೆ.

ಗರುಡ ಗಮನ ಚಿತ್ರದ ಪೋಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT