ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಣ್ಣನ ಮಗನ ಮಾಸ್‌ ಅವತಾರ

Last Updated 17 ಜುಲೈ 2018, 16:03 IST
ಅಕ್ಷರ ಗಾತ್ರ

ರಾಜಣ್ಣ ಮಹಾಮುಗ್ಧ. ಇರುವೆಯನ್ನು ಕೊಲ್ಲುವುದೂ ಅಪರಾಧ ಎಂಬ ಮನಸ್ಥಿತಿಯವನು. ತನ್ನ ಮಗನನ್ನು ಅದೇ ಪಾಠ ಹೇಳಿ ಬೆಳೆಸಿರುತ್ತಾನೆ. ಆದರೆ ಅಂಥ ಮಗ ಕೊಲೆ ಮಾಡಿ ಜೈಲಿಗೆ ಹೋದಾಗ ಅವನಿಗೆ ಆಗುವ ಆಘಾತ ಎಂಥದ್ದು? ಜೈಲುಶಿಕ್ಷೆ ಮುಗಿಸಿ ಬಂದ ಮಗನನ್ನು ಸಮಾಜ ಮತ್ತು ತಂದೆ ಹೇಗೆ ಎದುರುಗೊಳ್ಳುತ್ತಾರೆ?

ಹೀಗೆ ಕ್ರೈಂ ಮತ್ತು ಸೆಂಟಿಮೆಂಟ್‌ ಎರಡನ್ನೂ ಇಟ್ಟುಕೊಂಡು ‘ರಾಜಣ್ಣನ ಮಗ’ ಎಂಬ ಸಿನಿಮಾವನ್ನು ಕಟ್ಟಿದ್ದಾರೆ ಕೋಲಾರ ಸೀನು. ಅಂದ ಹಾಗೆ ಈ ಚಿತ್ರದ ಶೀರ್ಷಿಕೆಗೂ ಡಾ. ರಾಜ್‌ಕುಮಾರ್ ಅವರಿಗೂ ಯಾವ ಸಂಬಂಧವೂ ಇಲ್ಲ. ಹೀಗೆ ಸ್ಪಷ್ಟಪಡಿಸಿದ್ದೂ ನಿರ್ದೇಶಕರೇ.

‘ಇದು ನನ್ನ ಎರಡನೇ ಸಿನಿಮಾ. ಹರೀಶ್‌ ಅವರನ್ನೇ ಮನಸಲ್ಲಿಟ್ಟುಕೊಂಡು ಈ ಮಾಸ್‌ ಕಥೆಯನ್ನು ಮಾಡಿದ್ದೇನೆ. ಈಗ ಡಬ್ಬಿಂಗ್ ಹಂತದಲ್ಲಿದೆ.ಆಗಸ್ಟ್‌ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಚಿತ್ರವನ್ನು ತೆರೆಗೆ ತರುವ ಯೋಚನೆ ಇದೆ’ ಎಂದು ವಿವರಿಸಿದರು ಸೀನು.

‘ಕಳೆದ ಇಪ್ಪತ್ತು ವರ್ಷಗಳಿಂದ ನಾನು ನೋಡುತ್ತ ಬಂದಿರುವ ಬೆಂಗಳೂರಿನ ರೌಡಿಸಂ ಕಥೆ ಮತ್ತು ಫ್ಯಾಮಿಲಿ ಸೆಂಟಿಮೆಂಟ್‌ ಎರಡನ್ನೂ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ’ ಎಂದರು ಅವರು.

ಹರೀಶ್‌ ಜಲಗೆರೆ ಅವರು ನಿರ್ಮಾಣ ಮಾಡಿ, ನಾಯಕನಾಗಿ ನಟಿಸುತ್ತಿದ್ದಾರೆ. ಕೋಲಾರ್ ಸೀನು ನಿರ್ದೇಶಿಸಿದ್ದ ‘ಜಸ್ಟ್‌ ಮದ್ವೆ’ ಚಿತ್ರದಲ್ಲಿಯೂ ಇವರೇ ನಾಯಕನಾಗಿ ನಟಿಸಿದ್ದರು. ಅದರಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಹರೀಶ್‌, ಇಲ್ಲಿ ಪಕ್ಕಾ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಪ್ಪ –ಮಗನ ನಡುವೆ ಒಂದು ಅವಘಡದಿಂದ ಉಂಟಾಗುವ ಬಿರುಕು ಯಾವೆಲ್ಲ ಸ್ವರೂಪ ತಾಳುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎಂದರು ಹರೀಶ್‌. ‘ರಾಜಣ್ಣನ ಮಗ’ ಚಿತ್ರದಲ್ಲಿ ಅವರ ಪಾತ್ರದ ಹೆಸರು ಶಂಕರ್‌ ಗೌರಿ.

ಚಿತ್ರದ ಟ್ರೇಲರ್‌ ಅನ್ನೂ ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ರವಿ ಬಸ್ರೂರ್‌ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚರಣ್‌ರಾಜ್‌ ನಾಯಕನ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ತುಂಬ ತೃಪ್ತಿಕೊಟ್ಟ ಪಾತ್ರ ಇದಂತೆ.

ಅಕ್ಷತಾ ಎಂಬ ಹುಡುಗಿ ಈ ಚಿತ್ರದ ನಾಯಕಿ. ಅವರು ಇಲ್ಲಿ ನಾಯಕನಿಗೆ ಬ್ಯಾಂಡೇಜ್ ಹಚ್ಚುವ ಡಾಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ‘ಮರ ಸುತ್ತುವ ರೀತಿಯ ಪ್ರೇಮ ಇದಲ್ಲ. ನಾವು ಬೀಚ್‌ನಲ್ಲಿ ಸುತ್ತುತ್ತೇವೆ’ ಎಂದು ತಮ್ಮ ಪಾತ್ರದ ಭಿನ್ನತೆಯ ಕುರಿತು ಹೇಳಿದರು.

ಕರಿಸುಬ್ಬು, ರಾಜೀವ್, ಉಗ್ರಂ ಮಂಜು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಪ್ರಮೋದ್ ಆರ್‌. ಛಾಯಾಗ್ರಹಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT