ಸಂಕಟಗಳ ಕಾಲಕ್ಕೆ ರಾಜಮದ್ದು

ಬುಧವಾರ, ಮೇ 22, 2019
29 °C
ಮಾನವೀಯತೆ, ಸರಳತೆ ಹಾಗೂ ನೈತಿಕತೆಗೆ ರಾಜ್‌ ಸಿನಿಮಾಗಳೇ ಪಠ್ಯಗಳು!

ಸಂಕಟಗಳ ಕಾಲಕ್ಕೆ ರಾಜಮದ್ದು

Published:
Updated:
Prajavani

ಸೂರ್ಯೋದಯ ಎನ್ನುವುದು ಪರಿಸರದಲ್ಲಿ ಜೀವಸಂಚಾರ ಉಂಟಾಗುವ ಅಮೃತಕ್ಷಣ. ಚಿ. ದತ್ತರಾಜ್‌ ನಿರ್ದೇಶನದ ‘ಕಾಮನಬಿಲ್ಲು’ ಸಿನಿಮಾದಲ್ಲೂ ಸೂರ್ಯೋದಯದೊಂದಿಗೆ ಜೀವಸಂಚಾರವಿದೆ. ಆದರೆ, ಇಲ್ಲಿನ ಜೀವದಾಯಿನಿ ಸೂರ್ಯನೇ ಬೇರೆ. ಈ ಸೂರ್ಯನಾರಾಯಣ ಭಗವಂತನಲ್ಲ – ಮನುಷ್ಯ!

ಸಿನಿಮಾ ಆರಂಭವಾಗುವುದು ಕಥಾನಾಯಕ ಸೂರ್ಯನಾರಾಯಣ, ಮೇಷ್ಟ್ರ ಮನೆಗೆ ಕಾಫಿ ಕುಡಿಯಲು ಬರುವುದರೊಂದಿಗೆ. ಮೇಷ್ಟ್ರ ಹೆಂಡತಿ ಅಂಬಕ್ಕನಿಗೆ, ಸೂರ್ಯನಾರಾಯಣನಿಗೆ ಕಾಫಿ ಮಾಡಿಕೊಡುವ ಮೂಲಕವೇ ದಿನಚರಿ ಆರಂಭವಾಗಬೇಕು. ‘ಜಗತ್ತಿಗೆಲ್ಲ ಒಂದು ಸೂರ್ಯೋದಯವಾದರೆ, ಸೂರ್ಯನಾರಾಯಣ ತಮ್ಮ ಮನೆಗೆ ಕಾಲಿಟ್ಟಾಗಲೇ ಸೂರ್ಯೋದಯ’ ಎನ್ನುವ ನಂಬಿಕೆ ಮೇಷ್ಟರದು. ಆ ಮನೆಯ ಮುದ್ದಿನ ಮಗಳು ಪದ್ಮಜಾ ಪೋಲಿಯೊಪೀಡಿತೆ. ಅಮ್ಮ ಕೊಟ್ಟ ರವೆ ಉಂಡೆಯನ್ನು ಬಚ್ಚಿಟ್ಟುಕೊಂಡು ಕೊಡುವಷ್ಟು ಅವಳಿಗೆ ಸೂರ್ಯನಾರಾಯಣನ ಬಗ್ಗೆ ಅಕ್ಕರೆ. ಮೇಷ್ಟ್ರ ಮನೆಯವರ ಪ್ರೀತಿಯನ್ನುಂಡ ನಂತರ ಕಥಾನಾಯಕನ ಸವಾರಿ ಶೆಟ್ಟರ ಅಂಗಡಿ ಕಡೆಗೆ. ‘ಸೂರ್ಯನಾರಾಯಣ ವಚ್ಚಾಡು’ ಎಂದು ದೇವರೇ ಬಂದಷ್ಟು ಸಂಭ್ರಮಿಸುವ ಶೆಟ್ಟರು ಹಾಗೂ ಅವರ ಪತ್ನಿ ಇಬ್ಬರೂ ಕಥಾನಾಯಕನಿಗೆ ಮಿಠಾಯಿ ತಿನ್ನಿಸುತ್ತಾರೆ. ಅವರ ಪಾಲಿಗೆ ಸೂರ್ಯನಾರಾಯಣ ತಾವು ಕಳೆದುಕೊಂಡ ಮಗನ ಜೀವಂತರೂಪ. ಹೀಗೆ ಸೂರ್ಯನಾರಾಯಣ ಎನ್ನುವ ಯುವಕ ಊರಿನ ಹಲವರಿಗೆ ಸಂತಸದ ಬೆಳಕು ಹಂಚುವ ರಾಯಭಾರಿಯಂತೆ ಕಾಣಿಸುತ್ತಾನೆ.

‘ಕಾಮನಬಿಲ್ಲು’ ಚಿತ್ರದ ಆರಂಭದ ದೃಶ್ಯಗಳನ್ನು ನೆನಪಿಸಿಕೊಳ್ಳಲಿಕ್ಕೆ ಕಾರಣ, ಕಥಾನಾಯಕ ಸೂರ್ಯನಾರಾಯಣನಿಗೂ ಆ ಪಾತ್ರವನ್ನು ಪೋಷಿಸಿರುವ ರಾಜ್‌ಕುಮಾರ್‌ ಅವರಿಗೂ ಇರುವ ಅಭಿನ್ನತೆ. ಸೂರ್ಯನಾರಾಯಣನನ್ನು ಕಂಡು ಊರಿನ ಜನ ಸಂತಸಪಟ್ಟಂತೆ, ರಾಜ್‌ ಅವರನ್ನು ಕಂಡು–ನೆನೆದು ನಾಡಿನ ಜನರೂ ಸಂತಸಪಟ್ಟಿದ್ದಾರೆ. ಸಿನಿಮಾದ ಕಥಾನಾಯಕ ಯಾರೋ ಒಬ್ಬರಿಗೆ ಮಗನಾದಂತೆ, ಗೆಳೆಯನಾದಂತೆ, ಸಖನಾದಂತೆ, ರಾಜ್‌ ಅವರೂ ನಾಡಿನ ಜನಸಾಮಾನ್ಯರ ಪಾಲಿಗೆ ಅವರ ಅಂತರಂಗದ ಒಡನಾಡಿಯಾಗಿ ಒದಗಿಬಂದಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಇಂಥ ವ್ಯಕ್ತಿತ್ವ–ವರ್ಚಸ್ಸು ಸಿನಿಮಾ ಮಾತ್ರವಲ್ಲ, ಸಮಾಜದ ಯಾವ ಕ್ಷೇತ್ರದ ನಾಯಕನಲ್ಲೂ ಇಲ್ಲ ಎನ್ನುವುದು ರಾಜ್‌ರ ಅನನ್ಯತೆಯನ್ನು ಮತ್ತೂ ಹೆಚ್ಚಿಸುವಂತಿದೆ.

ರಾಜ್‌ಕುಮಾರ್‌ ಅವರನ್ನು ಕನ್ನಡಿಗರು ಬರಿಯ ನಟನಾಗಿಯಷ್ಟೇ ನೋಡಲಿಲ್ಲ. ಉದಾರಚರಿತರನ್ನು ಗೌರವಿಸುತ್ತಲೇ ಅಂತರದಲ್ಲಿಡುವಂತೆ ದೂರ ಮಾಡಲೂ ಇಲ್ಲ. ತಮ್ಮ ಭಾವಕೋಶದ ಒಂದು ಭಾಗವಾಗಿ ವರನಟನನ್ನು ಗುರ್ತಿಸಿಕೊಳ್ಳುವ ಮೂಲಕ ರಾಜ್‌ ಹಾಗೂ ತಮ್ಮ ನಡುವಿನ ಅಂತರವನ್ನು ಕುಗ್ಗಿಸಿದರು. ಇಷ್ಟಪಡಲಿಕ್ಕೆ, ಪ್ರೀತಿಸಲಿಕ್ಕೆ, ಆರಾಧಿಸಲಿಕ್ಕೆ ನಮ್ಮ ನಡುವೆ ಸಾಕಷ್ಟು ನಟರಿದ್ದಾರೆ, ಕಲಾವಿದರಿದ್ದಾರೆ. ಆದರೆ, ಅವರಲ್ಲಿ ಅಂತರಂಗದಲ್ಲಿ ಸ್ಥಾನ ಪಡೆಯುವವರು ಎಷ್ಟು ಜನ? ಅಂಥ ಅಪೂರ್ವ ಸಾಧ್ಯತೆ ಕನ್ನಡ ಸಂದರ್ಭದಲ್ಲಿ ಬಹು ವ್ಯಾಪಕವಾಗಿ ದೊರೆತದ್ದು ರಾಜ್‌ಗೆ ಮಾತ್ರ. ಕನ್ನಡ ಮಾತ್ರವೇನು, ಹೀಗೆ ಜನಮಾನಸದ ಭಾಗವಾದ ಭಾಗ್ಯ ಭಾರತದಲ್ಲಿ ದೊರೆತಿರುವುದು ಬೆರಳೆಣಿಕೆ ಚೇತನಗಳಿಗೆ ಮಾತ್ರ. ಅಂತಹವರಲ್ಲಿ ರಾಜ್‌ ಒಬ್ಬರೆನ್ನುವುದು ಕನ್ನಡನಾಡಿನ ಹೆಮ್ಮೆ.

ರಾಜ್‌ ಜನರೊಂದಿಗೆ ಒಡನಾಡಿ ಅವರ ಪ್ರೀತಿ ಗಳಿಸಲಿಲ್ಲ. ಸಿನಿಮಾಗಳ ಪಾತ್ರಗಳ ಮೂಲಕವೇ ಸಹೃದಯರಿಗೆ ಹತ್ತಿರವಾದರು. ತೆರೆಯ ಮೇಲೆ ನಾವು ನೋಡುತ್ತಿರುವ ವ್ಯಕ್ತಿ ಬೇರೆ, ನಿಜಜೀವನದ ನಾಯಕ ಬೇರೆ ಎಂದು ನೋಡುಗರಿಗೆ ಅನ್ನಿಸಲಿಲ್ಲ. ಪಾತ್ರಗಳ ಮೂಲಕವೇ ನೆಚ್ಚಿನನಟ ತಮ್ಮೊಂದಿಗೆ ಒಡನಾಡುತ್ತಿದ್ದಾರೆ ಎಂದು ಜನರಿಗೆ ಅನ್ನಿಸಿದ ಕಾರಣದಿಂದಲೇ, ‘ಬಂಗಾರದ ಮನುಷ್ಯ’ದಂಥ ಚಿತ್ರ ಯುವಜನರು ತಮ್ಮೂರುಗಳತ್ತ ಹೊರಳಿನೋಡಲು ಪ್ರೇರಣೆಯಾಯಿತು.

ರಾಜ್‌ರ ಬಹುತೇಕ ಚಿತ್ರಗಳು ಕೌಟುಂಬಿಕ ಮೌಲ್ಯವೊಂದನ್ನು ಬಲಪಡಿಸಲು ರೂಪುಗೊಂಡಂತೆ ಕಾಣಿಸುತ್ತವೆ. ಕನ್ನಡದ ಅತ್ಯುತ್ತಮ ಚಿತ್ರಗಳಲ್ಲೊಂದಾದ ‘ಹಾಲುಜೇನು’ ಸಿನಿಮಾ ನೆನಪಿಸಿಕೊಳ್ಳಿ. ಸಿಂಗೀತಂ ಶ್ರೀನಿವಾಸರಾವ್‌ ನಿರ್ದೇಶನದ ಈ ಸಿನಿಮಾ, ಕ್ಯಾನ್ಸರ್‌ಪೀಡಿತ ಪತ್ನಿಯನ್ನು ಉಳಿಸಿಕೊಳ್ಳಲು ಕಥಾನಾಯಕ ಎತ್ತುವ ‘ಅವತಾರ’ಗಳ ಕಥೆ. ನಾಯಕನ ಪಡಿಪಾಟಲುಗಳು ನೋಡುಗರನ್ನು ರಂಜಿಸುತ್ತವೆ. ಆದರೆ, ಈ ರಂಜನೆಯಾಚೆಗೆ ದಾಂಪತ್ಯದ ಚೆಲುವು ಮತ್ತು ಸಾರ್ಥಕತೆಯ ಕುರಿತು ಸಿನಿಮಾ ಮಾತನಾಡುತ್ತದೆ. ಗಂಡನೊಬ್ಬ ತನ್ನ ಪತ್ನಿಯ ಬಗ್ಗೆ ಹೊಂದಿರುವ ಪ್ರೇಮದ ಪರಾಕಾಷ್ಠೆಯಂತೆ ‘ಹಾಲುಜೇನು’ ಮುಖ್ಯವೆನ್ನಿಸುತ್ತದೆ. ಬಳಲಿದ ಹೆಂಡತಿಯನ್ನು ಕೂರಿಸಿ ಉಪಚರಿಸುವ, ‘ಈ ದಿನವಾದರೂ ನಿನ್ನ, ಸೇವೆಯ ಮಾಡುವೆ ಚಿನ್ನ’ ಎಂದು ಹಾಡುವ ನಾಯಕ ಯಾವ ಹೆಣ್ಣಾದರೂ ಹಂಬಲಿಸುವಂತಹ ಗಂಡು.

ದೊರೈ–ಭಗವಾನ್‌ ನಿರ್ದೇಶನದ ‘ಜೀವನಚೈತ್ರ’ ಮದ್ಯಪಾನದ ವಿರುದ್ಧ ಸೊಲ್ಲೆತ್ತುವ ಪ್ರಯತ್ನವಾಗಿ ಗುರ್ತಿಸಿಕೊಂಡಿದ್ದರೂ, ಮಾತೃವಾತ್ಸಲ್ಯ ಹಾಗೂ ಅವಿಭಕ್ತ ಕುಟುಂಬದ ಚೆಲುವು ಕೂಡ ಚಿತ್ರಕಥೆಯ ಪ್ರಮುಖ ಕಾಳಜಿಗಳಾಗಿವೆ. ತಾಯಿ–ಮಗನ ಅನುಬಂಧವನ್ನು ಮನಮುಟ್ಟುವಂತೆ ಹೇಳುವ ‘ಜೀವನಚೈತ್ರ’ ಸಿನಿಮಾದಲ್ಲಿ ಕುಟುಂಬದ ಒಡಕಿಗೂ ಊರಿನ ಕೆಡುಕಿಗೂ ಸಂಬಂಧವಿರುವ ಸೂಚನೆಯೂ ಇದೆ. ‘ಜೀವನಚೈತ್ರ’ ಮಾತ್ರವಲ್ಲ – ರಾಜ್‌ರ ಅನೇಕ ಚಿತ್ರಗಳು ಕರುಳಿನ ಕಥನಗಳಾಗಿವೆ. ‘ಅನುರಾಗ ಅರಳಿತು’ ಚಿತ್ರದ ನಾಯಕ ಅಮ್ಮನ ಆರೋಗ್ಯಕ್ಕಾಗಿ ‘ಶ್ರೀಕಂಠ ವಿಷಕಂಠ’ ಎಂದು ಉರುಳುಸೇವೆ ಮಾಡುವುದು ಹಾಗೂ ‘ಅಮ್ಮ ನೀನು ನಮಗಾಗಿ, ಸಾವಿರ ವರ್ಷ ಸುಖವಾಗಿ, ಬಾಳಲೆ ಬೇಕು ಈ ಮನೆ ಬೆಳಕಾಗಿ’ ಎಂದು ‘ಕೆರಳಿದ ಸಿಂಹ’ದ ಸಹೋದರರು ಹಾಡುವುದನ್ನು ಚಿತ್ರರಸಿಕರು ಮರೆಯುವುದುಂಟೆ? ‘ಬಂಗಾರದ ಮನುಷ್ಯ’, ‘ಗುರಿ’ ಚಿತ್ರಗಳ ಸೋದರ, ‘ಚಲಿಸುವ ಮೋಡಗಳು’ ಸಿನಿಮಾದ ಗೆಳೆಯನ ಪಾತ್ರಗಳೂ ನೋಡಿದಾಗಲೆಲ್ಲ ಮನಸ್ಸಿನಲ್ಲಿ ಕಂಪನಗಳನ್ನೆಬ್ಬಿಸುವಷ್ಟು ಆರ್ದ್ರವಾಗಿವೆ.

ಕೌಟುಂಬಿಕ ಸಂಬಂಧಗಳು ಮಾತ್ರವಲ್ಲ, ಸಮಾಜದ ಹಲವು ಮುಖಗಳನ್ನು ಪ್ರತಿನಿಧಿಸುವಲ್ಲೂ ರಾಜ್‌ಗೆ ಸರಿಸಾಟಿಯಿಲ್ಲ. ಕಮ್ಮಾರ, ಕುಂಬಾರ, ಕಬೀರ, ಕುರಿಗಾಹಿ, ಗೊಲ್ಲ, ರೈತ – ರಾಜ್‌ ಮಾಡದೆ ಉಳಿದ ಪಾತ್ರವಾದರೂ ಯಾವುದು? ಈ ಪಾತ್ರಗಳ ಮೂಲಕ ಆಯಾ ಸಮುದಾಯಗಳ ಸ್ವಾಭಿಮಾನವನ್ನು ರಾಜ್‌ ಹೆಚ್ಚಿಸಿದ್ದಾರೆ, ಆ ಸಮುದಾಯ ತಮ್ಮ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಾರೆ. ‘ಅಲ್ಲಾ ಅಲ್ಲಾ’ ಎಂದು ಹಾಡುವ ಮೂಲಕ ಮುಸ್ಲಿಂ ಸಮುದಾಯವೂ ‘ಇವ ನಮ್ಮವ’ ಎನ್ನುವಂತಾದರು. ಕಣ್ಣಪ್ಪ, ಕನಕ, ಪುರಂದರ, ಸರ್ವಜ್ಞ, ತುಕಾರಾಂ, ರಾವಣ, ಹಿರಣ್ಯಕಶಿಪು, ಕೃಷ್ಣ, ಹರಿಶ್ಚಂದ್ರ, ಮಯೂರ, ಪುಲಿಕೇಶಿ, ಕಂಠೀರವ, ಕೃಷ್ಣದೇವರಾಯ, ಮುಂತಾದ ಸಾಂಸ್ಕೃತಿಕ–ಚಾರಿತ್ರಿಕ ಸ್ಮೃತಿಗಳನ್ನು ಹಲವು ತಲೆಮಾರುಗಳಿಗೆ ಮುಟ್ಟಿಸಿದ ಕೀರ್ತಿಯೂ ರಾಜ್‌ ಅವರಿಗೆ ಸಲ್ಲಬೇಕು.

ಸಿನಿಮಾಗಳನ್ನು ಕನಸುಗಳ ಮಾರಾಟದ ವಾಹಕಗಳಂತೆ ನೋಡುವ ಕ್ರಮವಿದೆ. ಆ ಕನಸುಗಳಾದರೂ ಎಂತಹವು? ನಾಯಕ ಅಸಹಾಯಶೂರ, ಒಬ್ಬಂಟಿಯಾಗಿ ನೂರಾರು ಮಂದಿಯನ್ನು ಹೊಡೆದುರುಳಿಸಬಲ್ಲ. ನಾಯಕ–ನಾಯಕಿಯರಂತೂ ಗಿಡಮರಬಳ್ಳಿಗಳಿಗೂ ತಮ್ಮ ಪ್ರೇಮದ ಉನ್ಮತ್ತತೆಯನ್ನು ಸೋಂಕಿಸಬಲ್ಲ ಚದುರರು. ಇಂಥ ಅದ್ಭುತ–ರಮ್ಯ ಕಥನಗಳಲ್ಲಿ ರಾಜ್‌ಕುಮಾರ್‌ ಕೂಡ ನಟಿಸಿದ್ದಾರೆ. ಆದರೆ, ಜನಸಾಮಾನ್ಯರ ಬದುಕಿನ ಭಾಗವೇ ಆದ ಬಡತನ, ಹಸಿವು, ಸ್ವಾಭಿಮಾನ, ಅವಮಾನಗಳ ಕಥನಗಳಿಗೂ ಜೀವತುಂಬಿದ್ದಾರೆ. ಸಾಮಾನ್ಯವಾಗಿ, ‘ರಾಜಕುಮಾರ’ ಎಂದರೆ ಜನಸಾಮಾನ್ಯರ ಪಾಲಿಗೆ ಅರಮನೆಯೆನ್ನುವ ದಂತಗೋಪುರದಲ್ಲಿನ ಸುಂದರಬಿಂಬ. ಆದರೆ, ಈ ರಾಜ್‌ಕುಮಾರ ಜನಸಾಮಾನ್ಯರ ಬದುಕಿನ ಬಿಂಬವೇ ಆದುದು ಚಿತ್ರೋದ್ಯಮದಲ್ಲೂ ಸಂಭವಿಸಿರುವ ಪವಾಡ.

ಈ ತಲೆಮಾರಿಗೆ ಕೂಡ ರಾಜ್‌ ಸಿನಿಮಾಗಳಲ್ಲಿ ಜೀವನದ ಪಾಠಗಳಿವೆ. ಅಮ್ಮನನ್ನು ನೋಡಿಕೊಳ್ಳುವುದು ಹೇಗೆ? ಸಂಗಾತಿಯನ್ನು ಪ್ರೇಮಿಸುವುದು ಹೇಗೆ? ಊರಿಗೆ ಉಪಕಾರಿಯಾಗಿ ಬದುಕುವುದು ಹೇಗೆ? ಜೀವನದಲ್ಲಿ ಯಾವುದು ಮುಖ್ಯ? – ಇಂಥವನ್ನೆಲ್ಲ ರಾಜ್‌ ಸಿನಿಮಾಗಳಂತೆ ರಸವತ್ತಾಗಿ ಹಾಗೂ ಮನಸ್ಸು ಮುಟ್ಟುವಂತೆ ಹೇಳುವ ಸಶಕ್ತ ಕೃತಿಗಳನ್ನು ಯಾವ ಮಾಧ್ಯಮದಲ್ಲಾದರೂ ಕಾಣುವುದು ಕಷ್ಟ.

ಸಮಕಾಲೀನ ಸಂದರ್ಭ ನೋಡಿ. ಸಮಾಜದ ಎಲ್ಲ ವರ್ಗಗಳು ತಮ್ಮೊಂದಿಗೆ ಸಮೀಕರಿಸಿಕೊಳ್ಳಬಹುದಾದ ಅನುಕರಣೀಯ ವ್ಯಕ್ತಿಗಳೇ ಸಮಾಜದಲ್ಲಿಲ್ಲ. ‘ಅಚ್ಛೇ ದಿನ’ದ ವ್ಯಾಪಾರಿಗಳ ವೇಷದ ನಾಯಕರ ಪಾಲಿಗೆ ಹಸಿವು, ಬಡತನ, ಅವಮಾನಗಳೆಲ್ಲ ಕ್ಲೀಷೆಗಳಾಗಿ ಕಾಣಿಸುತ್ತಿವೆ. ದೇಶಪ್ರೇಮ–ಧರ್ಮದ ಹುಸಿ ಭಾವುಕತೆಯಲ್ಲಿ ಈ ನೆಲದ ಬಹುತ್ವದ ಚಹರೆಗಳು ಮಸುಕಾಗುತ್ತ, ಇವತ್ತಿನ ಸಮಾಜ ಒಡಕಲು ಬಿಂಬಗಳ ಕೊಲಾಜ್‌ನಂತೆ ಕಾಣಿಸುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್‌ರಂತಹ ನೆಲದ ಸ್ಮೃತಿಗಳು ನಮ್ಮ ವಿವೇಕವನ್ನು ಕಾಪಾಡುವ ಹಾಗೂ ಮುನ್ನಡೆಸುವ ಶಕ್ತಿಗಳಾಗಬೇಕು.

ರಾಜ್‌ಕುಮಾರ್‌ ಬೋಧಿಸಲಿಲ್ಲ, ಜಾತೀಯತೆಯನ್ನು ಪಾಲಿಸಲಿಲ್ಲ. ಅವರು ಬದುಕಿದ್ದು ಹಾಗೂ ತಮ್ಮ ಸಿನಿಮಾಗಳ ಮೂಲಕ ಅಭಿವ್ಯಕ್ತಿಸಿದ್ದು ಮನುಷ್ಯಧರ್ಮವನ್ನು, ಬದುಕಿಗೆ ಅಗತ್ಯವಾದ ನೈತಿಕತೆ ಮತ್ತು ಸರಳತೆಯನ್ನು. ಮಾನವೀಯತೆ ಹಾಗೂ ನೈತಿಕತೆ ಎರಡೂ ದುಬಾರಿಯಾಗಿರುವ ಸಂದರ್ಭದಲ್ಲಿ, ಸರಳತೆ ಬಡವರ ಪಾಲಿನ ಅನಿವಾರ್ಯ ಕರ್ಮವಾಗಿದೆ. ಸಂಕಟಗಳೇ ಸುತ್ತುವರಿದಿರುವ ವರ್ತಮಾನದಲ್ಲಿ, ಮಾನವೀಯತೆ–ನೈತಿಕತೆಯನ್ನು ನವೀಕರಿಸಿಕೊಳ್ಳಬಹುದಾದ ಪ್ರೇರಣೆಪಠ್ಯಗಳಾಗಿ ರಾಜ್‌ ಸಿನಿಮಾಗಳು ನಮ್ಮ ಜೊತೆಗಿವೆ.

ಕೃಪೆ: ಸುಧಾ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !