ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೈರಸಿ’ ತಡೆಗೆ ಈಗ ರಾಮಬಾಣ ಸಿದ್ಧ

Last Updated 1 ಡಿಸೆಂಬರ್ 2020, 8:03 IST
ಅಕ್ಷರ ಗಾತ್ರ

ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾಗಿದ್ದರೂ ‘ಕುತಂತ್ರಜ್ಞಾನ’ದಿಂದ ಮಾಹಿತಿ ಕದಿಯುವುದು, ನಕಲು ಮಾಡುವುದು ಎಲ್ಲಾ ಕ್ಷೇತ್ರದಲ್ಲೂ ಇದ್ದೇ ಇದೆ. ಹಾಗೆಯೇ ಚಿತ್ರೋದ್ಯಮಕ್ಕೆ ದೊಡ್ಡ ಸವಾಲಾಗಿದ್ದ ತೊಂದರೆ ಎಂದರೆ ಪೈರಸಿ. ಚಿತ್ರಮಂದಿರಗಳಲ್ಲಿ ನಡೆಯುವ ಪೈರಸಿ ತಡೆಯುವಂತಹ ರಾಮಬಾಣವೊಂದನ್ನು ಟೆಕಿಗಳ ತಂಡವೊಂದು ಸಿದ್ಧಪಡಿಸಿದೆ. ಆ ರಾಮಬಾಣ ಸಾಫ್ಟ್‌ವೇರ್‌ ಹೆಸರು ‘ಫೆಂಡೆ’.

ವಿಶಿಷ್ಟ ತಂತ್ರಜ್ಞಾನವೆನಿಸಿರುವ ‘ಫೆಂಡೆ’ ಸಾಫ್ಟ್‌ವೇರ್‌ ಅನ್ನು ಚಿತ್ರಮಂದಿರದಲ್ಲಿ ಅಳವಡಿಸಿದರೆ, ಪ್ರೇಕ್ಷಕ ಅಥವಾ ಪೈರಸಿ ಮಾಡುವವ ಮೊಬೈಲ್‌ ಅಥವಾ ವಿಡಿಯೊ ಕ್ಯಾಮೆರಾದಿಂದ ಸೆರೆಹಿಡಿಯುವ ದೃಶ್ಯಗಳು ರೆಕಾರ್ಡ್ ಆದರೂ ಧ್ವನಿ ಮಾತ್ರ ದಾಖಲಾಗುವುದಿಲ್ಲ. ಜತೆಗೆ ಈ ಸಾಫ್ಟ್‌ವೇರ್‌ನ ಇನ್ನೊಂದು ವಿಶಿಷ್ಟ ಗುಣವೆಂದರೆ, ಪ್ರೇಕ್ಷಕ ಯಾವ ಸೀಟಿನಲ್ಲಿ ಕುಳಿತುಕೊಂಡು ದೃಶ್ಯ ಸೆರೆ ಹಿಡಿಯುತ್ತಿದ್ದಾನೆ ಎನ್ನುವ ಮಾಹಿತಿಯನ್ನು ಇದು ಕ್ಷಣಾರ್ಧದಲ್ಲಿ ಪತ್ತೆ ಹಚ್ಚುತ್ತದೆ. ಚಿತ್ರ ಪ್ರದರ್ಶನ ನಡೆಯುವಾಗ ಪೈರಸಿ ನಡೆದರೆ ತಕ್ಷಣವೇ ಚಿತ್ರಮಂದಿರದ ಮಾಲೀಕ ಮತ್ತು ಆ ಚಿತ್ರಮಂದಿರದ ವ್ಯಾಪ್ತಿಯ ಪೊಲೀಸ್ ಠಾಣೆಗೆ ಈ ಸಾಫ್ಟ್‌ವೇರ್‌ನಿಂದ ಮಾಹಿತಿ ರವಾನೆಯಾಗುತ್ತದೆ.

ಈಗ ‌ಆವಿಷ್ಕರಿಸಿರುವ ಸಾಫ್ಟ್‌ವೇರ್‌ನಲ್ಲಿ ಇಷ್ಟು ಸೌಲಭ್ಯಗಳಿದ್ದು, ದೃಶ್ಯಗಳನ್ನು ಸೆರೆ ಹಿಡಿಯಲು ಆಗದಿರುವಂತಹ ಸಾಫ್ಟ್‌ವೇರ್‌ ಮುಂದಿನ ತಿಂಗಳುಗಳಲ್ಲಿ ಪರಿಚಯಿಸಲಿದ್ದೇವೆ ಎನ್ನುತ್ತಾರೆ ಈ ಸಾಫ್ಟ್‌ವೇರ್‌ ಹಿಂದಿರುವ ರೂವಾರಿಗಳಾದ ಕಾಂಟ್ರಫೈನ್ ಸಂಸ್ಥೆಯ ದುರ್ಗಾಪ್ರಸಾದ್ ಮತ್ತು ರಾಹುಲ್‌ರೆಡ್ಡಿ.

ಫೆಂಡೆ ಸಾಫ್ಟ್‌ವೇರ್‌ಗೆ ಚಾಲನೆ ನೀಡಿದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ‘ಹೊಸ ತಂತ್ರಜ್ಞಾನದ ಯುಗದಲ್ಲಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯುವುದು ಒಂದು ವಾರ ಮಾತ್ರ. ಪೈರಸಿ ಎನ್ನುವುದು ವಿಡಿಯೋ ತಂತ್ರಜ್ಞಾನ ಬಂದಾಗಿನಿಂದಲೂ ಇದೆ. ಈಗ ಎಲ್ಲರು ಸಿನಿಮಾ ಮೇಕರ‍್ಸ್ ಆಗಿದ್ದಾರೆ. ತಮ್ಮ ಜೇಬಿನಲ್ಲಿ ಇಟ್ಟುಕೊಂಡ ಸಾಧನದಿಂದ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟಾಗ ಅದು ಪೈರಸಿ ಎನಿಸಿಕೊಳ್ಳುತ್ತದೆ. ಯುವ ಟೆಕಿಗಳು ಕಂಡುಹಿಡಿದಿರುವ ಫೆಂಡೆ ಚಿತ್ರೋದ್ಯಮಕ್ಕೆ ವರವಾಗಲಿ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

‘ದೇಶದ ಬೆನ್ನಲುಬು ರೈತ. ರೈತನ ಉಳಿವಿಗಾಗಿ ಎಲ್ಲರೂ ಪ್ರಯತ್ನಿಸುತ್ತೇವೆ. ಅದರಂತೆ ಚಿತ್ರರಂಗದ ಅನ್ನದಾತ ನಿರ್ಮಾಪಕ. ನಿರ್ಮಾಪಕ ಮತ್ತು ಚಿತ್ರೋದ್ಯಮದ ಉಳುವಿಗಾಗಿ ಇಂತಹ ತಂತ್ರಜ್ಞಾನ ಅವಶ್ಯವಿತ್ತು. ಪೈರಸಿ ತಡೆಯಲು ಇಂತಹ ವಿನೂತನ ಪ್ರಯೋಗವನ್ನು ಕನ್ನಡಿಗ ತಂತ್ರಜ್ಞರು ನಡೆಸಿರುವುದು ಕಲಾವಿದೆಯಾಗಿ ನನಗೂ ಖುಷಿ ಕೊಟ್ಟಿದೆ. ದೇಶದಲ್ಲಿಯೂ ಆಗದಿದ್ದ ಇಂತಹ ಪ್ರಯತ್ನಕ್ಕೆ ಕನ್ನಡಿಗರು ಕೈಹಾಕಿದ್ದು ಹೆಮ್ಮೆ ನೀಡಿದೆ’ ಎನ್ನುವ ಮಾತು ಸೇರಿಸಿದರು ನಟಿ ಮತ್ತು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶೃತಿ.

ಫೆಂಡೆಗೆ ಚಾಲನೆ ನೀಡಿದಾಗ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ಬಾಬು, ದಿನಕರ ತೂಗದೀಪ ಹಾಗೂ ಶ್ರುತಿ ಅವರು ಮೊಬೈಲ್‌ನಲ್ಲಿ ದೃಶ್ಯ ರೆಕಾರ್ಡ್‌ ಮಾಡಿ ಪರಿಶೀಲಿಸಿದರು. ಆಗ ವಿಡಿಯೊ ಮಾತ್ರ ದಾಖಲಾಗಿ, ಇನ್ನು ಧ್ವನಿ ಕರ್ಕಶವಾಗಿದ್ದನ್ನು ಖಾತ್ರಿಪಡಿಸಿಕೊಂಡು ‘ಫೆಂಡೆ’ ತಂತ್ರಜ್ಞಾನದ ಫಲಿತಾಂಶಕ್ಕೆ ಸಂತಸ ವ್ಯಕ್ತ‍‍ಡಿಸಿದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ, ನಿರ್ಮಾಪಕರಾದ ಕೆ.ಸಿ.ಎನ್. ಚಂದ್ರಶೇಖರ್, ಬಾ.ಮ. ಹರೀಶ್, ಆರ್.ಎಸ್. ಗೌಡ, ಎನ್.ಎಂ. ಸುರೇಶ್, ನವರಸನ್ ಮುಂತಾದವರು ಈ ಸನ್ನಿವೇಶಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT