ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ರೆಜಿನಾ ಈಗ ತೆಲುಗಿನ ಸಮೀರಾ

Last Updated 22 ಆಗಸ್ಟ್ 2019, 19:32 IST
ಅಕ್ಷರ ಗಾತ್ರ

ಒಂಬತ್ತನೇ ವಯಸ್ಸಿನಲ್ಲಿ ಆ್ಯಂಕರಿಂಗ್ ಮಾಡುವ ಮೂಲಕ ಟಿವಿ ಪರದೆಯ ಮೇಲೆ ಕಾಣಿಸಿಕೊಂಡ ರೆಜಿನಾ ಕ್ಯಾಸಂದ್ರ ತಮಿಳಿನ ‘ಕಂದ ನಾಲ್ ಮುಧಲ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದವರು. ತೆಲುಗು ಹಾಗೂ ತಮಿಳು ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿ ಪಡೆದ ಇವರು ‘ಸೂರ್ಯಕಾಂತಿ’ ಸಿನಿಮಾದ ಮೂಲಕ ಚಂದನವನದಲ್ಲೂ ನಟನೆಯ ಛಾಪು ತೋರಿದ್ದರು. ಬಾಲಿವುಡ್‌ನ ‘ಏಕ್‌ ಲಡಕಿ ಕೋ ದೇಖಾ ತೋ ಏಸಾ ಲಗಾ‘ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದವರು.

ಒಟ್ಟು ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ಸಹಜ ಸುಂದರಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಈ ಸಿನಿಮಾದ ಸಮೀರಾ ಪಾತ್ರಕ್ಕೆ ಬಣ್ಣ–ಜೀವ ತುಂಬುವುದು ನಿಜಕ್ಕೂ ಸುಲಭವಾಗಿರಲಿಲ್ಲ ಎಂದಿದ್ದಾರೆ ಮುದ್ದು ಮುಖದ ಸುಂದರಿ. ಸುಮಾರು 14 ವರ್ಷಗಳಿಂದ ಸಿನಿರಂಗದಲ್ಲಿರುವ ರೆಜಿನಾ, ಈಗಾಗಲೇ ನಟಿಸಿರುವ ಮೂರು ತಮಿಳು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಎವರು ಸಿನಿಮಾದಲ್ಲಿ ಯಾವ ನಟಿಯೂ ಇಲ್ಲಿಯವರೆಗೆ ನಟಿಸಲಾರದಂತಹ ಪಾತ್ರವೊಂದರಲ್ಲಿ ನಟಿಸುವಂತೆ ನಿರ್ದೇಶಕರು ರೆಜಿನಾ ಬಳಿ ಕೇಳಿದ್ದರಂತೆ.

ಈ ಬಗ್ಗೆ ಮಾತನಾಡುವ ರೆಜಿನಾ ‘ಅದ್ವಿ ಶೇಷ್ ನನಗೆ ಪಾತ್ರದ ಕುರಿತು ವಿವರಿಸಿದ್ದರು. ಅವರು ಮೊದಲು ಪಾತ್ರದ ಬಗ್ಗೆ ಸಂಪೂರ್ಣವಾಗಿ ಕೇಳಿ ಎಂದು ಸಲಹೆ ನೀಡಿದ್ದರು. ನಿರ್ದೇಶಕ ವೆಂಕಟ್ ರಾಮ್‌ಜಿ ನನ್ನ ಬಳಿ ಮಾತನಾಡಲು ಬಂದಾಗ ನಾನು ಯಾವುದೇ ಹಿಂಜರಿಕೆ ಇಲ್ಲದೇ ಎವರು ಸಿನಿಮಾದ ಸಮೀರಾ ಪಾತ್ರಕ್ಕೆ ಬಣ್ಣ ಹಚ್ಚಲು ಓಕೆ ಎಂದಿದ್ದೆ. ಆ ಪಾತ್ರವನ್ನು ಒಂದು ಸವಾಲಿನಂತೆ ಸ್ವೀಕರಿಸಿದ್ದಕ್ಕೆ ನನಗೆ ನಿಜಕ್ಕೂ ಸಂತೋಷವಾಗಿದೆ’ ಎಂದಿದ್ದಾರೆ.

‘ಸಮೀರಾಳದ್ದು ಕೆಟ್ಟ ಪಾತ್ರವೇ ಇರಬಹುದು. ಆದರೆ ಈ ಪಾತ್ರ ಹೇಗೆಂದರೆ ಅವಳ ಸಮಸ್ಯೆಗೆ ಅವಳೇ ಪರಿಹಾರದ ದಾರಿ ಕಂಡುಕೊಳ್ಳುವಂತಹದ್ದು. ಇಂತಹ ‍‍ಪಾತ್ರಗಳನ್ನು ನಿರ್ವಹಿಸುವುದು ನಿಜಕ್ಕೂ ಸವಾಲು. ಆದರೆ ನಾನು ಇದನ್ನು ಎಂಜಾಯ್ ಮಾಡಿದ್ದೇನೆ. ಸಾಂಪ್ರದಾಯಿಕ ಪಾತ್ರಗಳಿಗೆ ಬಣ್ಣ ಹಚ್ಚುವುದರಲ್ಲಿ ಯಾವುದೇ ವಿನೋದವಿರುವುದಿಲ್ಲ. ತಮಿಳೇ ಆಗಿರಲಿ ತೆಲುಗೇ ಆಗಿರಲಿ, ವಿಭಿನ್ನ ಪಾತ್ರಗಳಿಗೆ ಜೀವ ತುಂಬುವಾಸೆ ನನ್ನದು’ ಎಂದಿದ್ದಾರೆ ರೆಜಿನಾ.

ನಟನೆಯ ಸವಾಲಿನೊಂದಿಗೆ ರೆಜಿನಾ ಈ ಸಿನಿಮಾಕ್ಕೆ ತಾವೇ ಡಬ್ ಮಾಡುವ ಸಾಹಸಕ್ಕೂ ಕೈ ಹಾಕಿದ್ದಾರೆ. ಈವರೆಗೆ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರೂ ಇದೇ ಮೊದಲ ಬಾರಿಗೆ ತಮ್ಮ ಪಾತ್ರಕ್ಕೆ ತಾವೇ ದನಿಯಾಗಿದ್ದಾರೆ.

‘ಡಬ್ ಮಾಡುವುದು ನಿಜಕ್ಕೂ ಸುಲಭದ ಮಾತಲ್ಲ. ಡಬ್ಬಿಂಗ್ ಎನ್ನುವುದು ಒಂದು ಕಲಾಪ್ರಕಾರ. ಸಿನಿಮಾದ ಭಾವನೆಗಳನ್ನು ವ್ಯಕ್ತಪಡಿಸುವಾಗ ನಾನು ನಿರ್ದೇಶಕರ ಬಳಿ ಕುಳಿತು ಇಂಚಿಂಚನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದೆ. ಕೆಲವೊಮ್ಮೆ ಒಂದು ವಾಕ್ಯವನ್ನು 12ರಿಂದ 13 ಬಾರಿ ಹೇಳಿದ್ದೇನೆ. ನನಗೆ ತುಂಬಾ ದಣಿವಾಗುತ್ತಿತ್ತು. ಆದರೂ ಪ್ರತಿ ಸೀನ್‌ಗೂ ನನ್ನದೇ ನಟನೆ ಹಾಗೂ ಸ್ವರದ ಸಮ್ಮಿಳಿತವನ್ನು ಕೇಳಿದಾಗ ಸಂತೃಪ್ತಿಗೊಂಡಿದ್ದೆ. ವೃತ್ತಿಪರ ಡಬ್ಬಿಂಗ್ ಕಲಾವಿದರನ್ನು ನಾನು ಹೊಗಳುವುದಿಲ್ಲ. ಆದರೆ ನಮ್ಮದೇ ಸ್ವರದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದು ನಿಜಕ್ಕೂ ನಮ್ಮ ನಟನೆಯ ಪರಧಿಯನ್ನು ಇನ್ನಷ್ಟು ವಿಸ್ತರಿಸುತ್ತದೆ’ ಎಂದು ಅನುಭವ ಹಂಚಿಕೊಂಡಿದ್ದಾರೆ.

‘ತಮಿಳು ನನ್ನ ಮಾತೃಭಾಷೆ. ಹಾಗಾಗಿ ತಮಿಳಿನಲ್ಲಿ ಮಾತನಾಡುವುದು ದೊಡ್ಡ ವಿಷಯವಲ್ಲ. ತೆಲುಗಿನಲ್ಲಿ ನಾನೇ ಡಬ್‌ ಮಾಡಲು ಇಷ್ಟು ಸಮಯ ತೆಗೆದುಕೊಂಡೆ. ಆದರೆ ನನ್ನ ಪ್ರಯತ್ನಕ್ಕೆ ಈ ಸಿನಿಮಾ ಮೂಲಕ ಫಲ ಸಿಗುತ್ತದೆ ಎಂಬುದು ನನ್ನ ನಂಬಿಕೆ’ ಎಂದಿದ್ದಾರೆ.

ಎವರು ಸಿನಿಮಾದ ನಂತರ ರೆಜಿನಾ ಯಾವುದೇ ಪಾತ್ರಕ್ಕೂ ಸಹಿ ಮಾಡಿಲ್ಲ. ‘ನನಗೆ ಅನೇಕ ಅವಕಾಶಗಳು ಬಂದಿವೆ. ಆದರೆ ನನ್ನ ನಟನೆಯ ಆಳವನ್ನು ಇನ್ನಷ್ಟು ವಿಸ್ತರಿಸುವ ಪಾತ್ರಗಳು ಬೇಕು ಎಂಬ ಕಾರಣಕ್ಕೆ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ’ ಎಂಬುದು ಅವರ ಹೇಳಿಕೆ. ‌ಏಕ್‌ ಲಡಕಿ ಕೋ ದೇಖಾ ತೋ ಏಸಾ ಲಗಾ ಸಿನಿಮಾದಲ್ಲಿ ಸಲಿಂಗಕಾಮಿ ಪಾತ್ರದಲ್ಲಿ ರೆಜಿನಾ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT