ಮಂಗಳವಾರ, ಸೆಪ್ಟೆಂಬರ್ 17, 2019
24 °C

ಮತ್ತೆ ಬರುವನಾ ರಿಚ್ಚಿ?!

Published:
Updated:
Prajavani

‘ಉಳಿದವರು ಕಂಡಂತೆ’ ಸಿನಿಮಾ ನೋಡಿದವರ ಪಾಲಿಗೆ ರಿಚರ್ಡ್‌ ಆ್ಯಂಟನಿ ಅಲಿಯಾಸ್ ರಿಚ್ಚಿಯ ಪಾತ್ರ ಎಂದೂ ಮರೆಯಲಾಗದ್ದು. ದ್ವೇಷ, ನಿಷ್ಠೆ, ಅವ್ಯಕ್ತ ಪ್ರೀತಿ, ಉಡಾಫೆತನ, ಸಿಟ್ಟು, ಸ್ನೇಹ, ಖುಷಿ... ಹೀಗೆ ಹತ್ತು ಹಲವು ಭಾವಗಳನ್ನು ಮೈವೆತ್ತ ಪಾತ್ರ ಅದು. ಅಂಥದ್ದೊಂದು ಪಾತ್ರವನ್ನು ಹೊಸ ತಲೆಮಾರಿನ ಸಿನಿಮಾ ವೀಕ್ಷಕರು ಕನ್ನಡ ಸಿನಿಮಾಗಳಲ್ಲಿ ಕಂಡಿದ್ದು ತೀರಾ ಅಪರೂಪ.

ರಕ್ಷಿತ್ ಶೆಟ್ಟಿ ನಿರ್ದೇಶನದ ಆ ಸಿನಿಮಾದಲ್ಲಿ ರಿಚ್ಚಿಯ ಪಾತ್ರವನ್ನು ರಕ್ಷಿತ್ ಅವರೇ ನಿಭಾಯಿಸಿದ್ದರು. ಈ ಚಿತ್ರ ತಮಿಳಿಗೆ ‘ರಿಚ್ಚಿ’ ಹೆಸರಿನಲ್ಲಿ ರಿಮೇಕ್‌ ಕೂಡ ಆಗಿತ್ತು. ಈಗ ರಿಚರ್ಡ್‌ ಆ್ಯಂಟನಿ ಎಂಬ ವ್ಯಕ್ತಿ ಪುನಃ ತೆರೆಯ ಮೇಲೆ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಗಾಂಧಿನಗರದಲ್ಲಿ ಸಿಕ್ಕಿದೆ.

ರಕ್ಷಿತ್ ಅವರಿಗೆ ಈ ಪಾತ್ರವನ್ನು ಪುನಃ ತೆರೆಯ ಮೇಲೆ ಕಾಣಿಸಬೇಕು ಎಂಬ ಇಚ್ಛೆ ಬಹುಕಾಲದಿಂದ ಇದೆ. ಈಗ ರಕ್ಷಿತ್ ಅವರು ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ಚಾರ್ಲಿ 777’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾಗಳು ತೆರೆ ಕಂಡ ನಂತರ ರಿಚ್ಚಿಗೆ ಪುನಃ ಜೀವ ಕೊಡುವ ಕೆಲಸ ಆರಂಭ ಆಗಬಹುದು ಎಂದು ರಕ್ಷಿತ್ ಆಪ್ತರೊಬ್ಬರು ತಿಳಿಸಿದ್ದಾರೆ.

ರಿಚ್ಚಿ ಪಾತ್ರ ಪುನರ್‌ ಸೃಷ್ಟಿಸುವ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಬೇಕು ಎಂಬ ತೀರ್ಮಾನ ಮೊದಲು ಆಗಿತ್ತು. ಆದರೆ ರಿಷಬ್ ಅವರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರಣ, ನಿರ್ದೇಶನದ ಕೆಲಸವನ್ನು ಇನ್ನೊಬ್ಬರಿಗೆ ವಹಿಸುವ ಇರಾದೆ ಇದೆ ಎಂದು ಗೊತ್ತಾಗಿದೆ. ರಿಚ್ಚಿ ಮತ್ತೆ ತೆರೆಯ ಮೇಲೆ ಬಂದರೆ, ಅವನ ಜೊತೆಯಲ್ಲೇ ಕರಾವಳಿಯ ಹುಲಿವೇಷ ಕೂಡ ತೆರೆಯ ಮೆಲೆ ವಿಜೃಂಭಿಸಬಹುದು ಎಂಬ ನಿರೀಕ್ಷೆ ಹೊಂದಲು ಅಡ್ಡಿಯಿಲ್ಲ!

Post Comments (+)