ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುಟ್‌ಬುಡ್ತೀವಾ’ ಅನ್ನುತ್ತಲೇ ಗೆದ್ದವಳು!

‘ಕನ್ನಡ ಕಣ್ಮಣಿ’ ಸಂಹಿತಾ ಜಿ.ಪಿ.ತುಮರಿ
Last Updated 11 ಜುಲೈ 2019, 19:30 IST
ಅಕ್ಷರ ಗಾತ್ರ

‘ಮಾತು ಸಿಡಿಗುಂಡಿನಂತಿರಬೇಕು’ ಎಂಬ ಅರ್ಥಕ್ಕೆ ಅನ್ವರ್ಥದಂತೆ ಇದ್ದಾಳೆ ಉಡುಪಿಯ ಸಂಹಿತಾ ಜಿ.ಪಿ.ತುಮರಿ. ಏಕೆಂದರೆ ಇವಳ ಪ್ರತಿ ಮಾತಿನಲ್ಲೂ ವಿಷಯದ ಹೊಳಪು, ತೀಕ್ಷ್ಣತೆ ಝಳಪಿಸುತ್ತದೆ. ವೇದಿಕೆ ಮೇಲೆ ನಿಂತು ವಿಷಯ ಮಂಡಿಸುವ ನಡುವೆ ‘ಬುಟ್‌ಬುಡ್ತೀವಾ’ ಎಂಬ ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಜನರ ಮನಗೆದ್ದ ಈ ಹುಡುಗಿ, ತನ್ನ ಮಾಸ್‌ ಡೈಲಾಗ್‌ಗೆ ತಕ್ಕಂತೆ ‘ಕನ್ನಡ ಕಣ್ಮಣಿ’ ರಿಯಾಲಿಟಿ ಶೋನಲ್ಲಿ ಗೆದ್ದು ಟ್ರೋಫಿ ಎತ್ತಿಹಿಡಿದ್ದಾಳೆ.

ಮಕ್ಕಳ ಮಾತುಗಾರಿಕೆ ಕಲೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಜೀ ವಾಹಿನಿಯ ‘ಕನ್ನಡ ಕಣ್ಮಣಿ’ ರಿಯಾಲಿಟಿ ಶೋ ಸೀಸನ್‌ 1ರ ವಿಜೇತೆ ಈಕೆ. ಮಣಿಪಾಲದ ಮಾಧವಕೃಪಾ ಶಾಲೆಯಲ್ಲಿ ಏಳನೇ ತರಗತಿ ಕಲಿಯುತ್ತಿರುವ ಸಂಹಿತಾಗೆ ಸ್ಟೇಜ್ ಮೇಲೆ ನಿಂತು ಮಾತನಾಡುವುದೆಂದರೆ ಬಾಳೆಹಣ್ಣು ತಿಂದಷ್ಟೇ ಸುಲಭ.

‘ಕನ್ನಡ ಕಣ್ಮಣಿ ಸೀಸನ್ 1ರ ಟ್ರೋಫಿ ಗೆದ್ದಿದ್ದು ತುಂಬ ಖುಷಿ ಕೊಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಹುಟ್ಟಿದ ಊರು ಉಡುಪಿಯ ಕೀರ್ತಿಯನ್ನು ಎತ್ತಿಹಿಡಿದೆ ಎಂಬ ಹೆಮ್ಮೆ ನನಗಿದೆ. ಮಾತಿನ ಕಲೆಯನ್ನೇ ಪ್ರಧಾನವಾಗಿಟ್ಟುಕೊಂಡಂತಹ ರಿಯಾಲಿಟಿ ಶೋ ಇದುವರೆಗೂ ಕನ್ನಡದ ಯಾವ ಚಾನೆಲ್‌ನಲ್ಲೂ ಬಂದಿರಲಿಲ್ಲ. ಜೀ ವಾಹಿನಿಯವರು ಅಂತಹದ್ದೊಂದು ಪ್ರಯತ್ನ ಮಾಡಿದ್ದಕ್ಕೆ ಅವರಿಗೆ ಅಭಿನಂದನೆ ಹೇಳಬೇಕಿದೆ’ ಎನ್ನುತ್ತಾಳೆ ಸಂಹಿತಾ.

ಪುಟಾಣಿ ಸಂಹಿತಾಳ ವ್ಯಕ್ತಿತ್ವದಲ್ಲಿ ಭಾಷಣ ಕಲೆ ಹರಳುಗಟ್ಟಲು ಮುಖ್ಯ ಕಾರಣ ಅವಳ ತಂದೆ ಪ್ರಭಾಕರ ತುಮರಿ. ಅರಳುಹುರಿದಂತೆ ಮಾತನಾಡಲು ಈಕೆಗೆ ತಂದೆಯೇ ಸ್ಫೂರ್ತಿಯಂತೆ.

‘ಎಳೆವೆಯಿಂದಲೂ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದೆ. ನಾನು ಅದ್ಭುತ ಮಾತುಗಾರ್ತಿಯಾಗಲು ಅಪ್ಪನೇ ಸ್ಫೂರ್ತಿ. ನನ್ನ ಅಪ್ಪ ವಿವಿಧ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಿದ್ದರು. ಆಗ ಅವರ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದೆ. ನಾನು ಕೂಡ ಅಷ್ಟೇ ಚೆನ್ನಾಗಿ ಮಾತನಾಡಬೇಕು ಎಂದು ಅಂದುಕೊಳ್ಳುತ್ತಿದ್ದೆ. ಓದುವ ಕುತೂಹಲ ಬೆಳೆದ ನಂತರ ನನ್ನ ಜ್ಞಾನದ ಹರವು ವಿಸ್ತಾರಗೊಳ್ಳುತ್ತಾ ಹೋಯಿತು. ಯಾವುದೇ ವಿಷಯ ಕೊಟ್ಟರೂ ಮಾತನಾಡುವ ಧೈರ್ಯ ಬೆಳೆಯಿತು. ಭಾಷೆಯ ಬಳಕೆಯಲ್ಲಿ ಸ್ಪಷ್ಟತೆ ಮೂಡಿತು. ಧ್ವನಿಯಲ್ಲಿನ ಏರಿಳಿತದ ಬಗ್ಗೆ ಅರಿತುಕೊಂಡೆ. ಮಾತಿನ ಶೈಲಿ ಬದಲಾಯಿತು. ಜನರ ಮನಸ್ಸಿಗೆ ತಟ್ಟುವ ರೀತಿಯಲ್ಲಿ ಮಾತನಾಡುವ ಕಲೆ ಮೈಗೂಡಿತು’ ಎನ್ನುತ್ತಾಳೆ ಸಂಹಿತಾ.

ಮೂರೂವರೆ ತಿಂಗಳ ಕಾಲ ನಡೆದ ‘ಕನ್ನಡ ಕಣ್ಮಣಿ’ ರಿಯಾಲಿಟಿ ಶೋನ ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಕಳೆದಿರುವ ಸಂಹಿತಾಗೆ, ಈ ಜರ್ನಿಯಲ್ಲಿ ಹಲವು ಹೊಸ ವಿಚಾರಗಳ ಕಲಿಕೆ ಜತೆಗೆ, ಉತ್ತಮ ಸ್ನೇಹಿತರು ಸಿಕ್ಕಿದ್ದಾರಂತೆ. ಈ ಶೋನಲ್ಲಿ ಭಾಗವಹಿಸುವುದಕ್ಕೂ ಮುನ್ನ ಡ್ರಾಮಾ ಜೂನಿಯರ್ ಆಡಿಷನ್‌ನಲ್ಲಿ ಪಾಲ್ಗೊಂಡಿದ್ದ ಸಂಹಿತಾ, ಕಾರಣಾಂತರಗಳಿಂದ ಅಲ್ಲಿ ಆಯ್ಕೆಯಾಗಲಿಲ್ಲ. ಆದರೆ, ಆ ಆಡಿಷನ್‌ನಲ್ಲಿ ಭಾಗವಹಿಸಿದಾಗ ಸಿಕ್ಕ ಅನುಭವವನ್ನೇ ದುಡಿಸಿಕೊಂಡು ‘ಕನ್ನಡ ಕಣ್ಮಣಿ’ಯಾದಳು.

ವಿಷಯದ ಆಯ್ಕೆ, ಅದಕ್ಕೆ ಅಗತ್ಯವಿರುವ ವಿಷಯ ಸಂಗ್ರಹಣೆ ಮಾಡುತ್ತಿದ್ದ ಬಗೆ ಕುರಿತಂತೆ ಸಂಹಿತಾ ವಿವರಿಸುವುದು ಹೀಗೆ: ‘ಕೆಲವೊಮ್ಮೆ ಅವರೇ ಟಾಪಿಕ್ ಕೊಡುತ್ತಿದ್ದರು. ಅದು ನನಗೆ ಒಪ್ಪಿಗೆಯಾದರೆ ಅದನ್ನೇ ಆಯ್ಕೆ ಮಾಡುತ್ತಿದ್ದೆ, ಇಲ್ಲದಿದ್ದರೆ ಬೇರೆ ವಿಷಯವನ್ನು ನಾನೇ ಆರಿಸಿಕೊಳ್ಳುತ್ತಿದ್ದೆ. ಮೊದಲಿಗೆ ನಾನು ಆಯ್ಕೆ ಮಾಡಿಕೊಂಡ ವಿಷಯ ಕುರಿತು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಆನಂತರ ಅದನ್ನು ಅಪ್ಪನಿಗೆ ತೋರಿಸುತ್ತಿದ್ದೆ. ಅವರ ಅದಕ್ಕೆ ವ್ಯಾಲ್ಯೂ ಆ್ಯಡ್‌ ಮಾಡುತ್ತಿದ್ದರು. ನನಗೆ ಕಂಠಪಾಠ ಮಾಡಿ ತೀರ್ಪುಗಾರರ ಮುಂದೆ ಗಿಳಿಪಾಠ ಒಪ್ಪಿಸುವುದಕ್ಕೆ ಇಷ್ಟ ಇರಲಿಲ್ಲ. ಪ್ರತಿಯೊಂದು ಪದವನ್ನೂ ಅರ್ಥೈಸಿಕೊಂಡು, ಅನುಭಾವಿಸಿ ಮಾತನಾಡುತ್ತಿದ್ದೆ. ನನ್ನ ಮಾತುಗಾರಿಕೆ ಎಲ್ಲರಿಗೂ ಇಷ್ಟವಾಗುತ್ತಿದ್ದುದು ಇದೇ ಕಾರಣಕ್ಕೆ. ಎಲ್ಲರೂ ನನ್ನನ್ನು ಎಕ್ಸ್‌ಪ್ರೆಷನ್ ಕ್ವೀನ್ ಎಂತಲೇ ಕರೆಯುತ್ತಿದ್ದರು’.

ರಿಯಾಲಿಟಿ ಶೋನಲ್ಲಿ ಗೆದ್ದ ನಂತರ ಸಂಹಿತಾ ಅನೇಕ ಮಕ್ಕಳಿಗೆ ಪ್ರೇರಣೆಯಾಗಿದ್ದಾಳೆ. ಆಕೆ ಕಲಿಯುತ್ತಿರುವ ಶಾಲೆಯಲ್ಲಿ ಈಗ ಅವಳೇ ಪುಟಾಣಿ ಸೆಲಬ್ರಿಟಿಯಾಗಿದ್ದಾಳೆ.

‘ರಿಯಾಲಿಟಿ ಶೋ ಗೆದ್ದ ನಂತರ ನನ್ನ ಶಾಲೆಯಲ್ಲಿ ಸ್ನೇಹಿತರು ಮತ್ತು ಶಿಕ್ಷಕರು ನನ್ನನ್ನು ವಿಶೇಷ ಅಕ್ಕರೆಯಿಂದ ಕಾಣುತ್ತಾರೆ. ‘ಯು ಆರ್ ದಿ ಪ್ರೈಡ್ ಆಫ್ ಮಾಧವ ಕೃಪಾ ಸ್ಕೂಲ್’ ಅಂತ ಹೇಳಿ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರು ಮತ್ತು ಸ್ನೇಹಿತರ ಸಹಕಾರವನ್ನು ಮರೆಯುವಂತಿಲ್ಲ’ ಎಂದು ಹೇಳುವ ಸಂಹಿತಾಗೆ ಮುಂದೆ ಐಎಎಸ್ ಅಧಿಕಾರಿ ಆಗುವ ಕನಸಿದೆ.

‘ನನ್ನ ಬದುಕು ಮತ್ತೊಬ್ಬರಿಗೆ ಪ್ರೇರಣೆ ಆಗಬೇಕು. ಆ ರೀತಿ ಬದುಕಿ ತೋರಿಸುತ್ತೇನೆ’ ಎನ್ನುವಾಗ ಅವಳ ಕಂಗಳಲ್ಲಿ ಜೋಡಿ ದೀಪದ ಪ್ರಕಾಶವಿತ್ತು.v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT