ಭಾನುವಾರ, ಏಪ್ರಿಲ್ 18, 2021
33 °C

ಶಾಕುಂತಲೆಯಾಗಿ ತೆರೆ ಮೇಲೆ ಬರಲಿದ್ದಾರೆ ಸಮಂತಾ ಅಕ್ಕಿನೇನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಣಶೇಖರ್‌ ನಿರ್ದೇಶನದ ಪೌರಾಣಿಕ ಸಿನಿಮಾ ‘ಶಾಕುಂತಲಂ’ ನಲ್ಲಿ ಶಾಕುಂತಲೆಯಾಗಿ ತೆರೆ ಮೇಲೆ ಬರಲಿದ್ದಾರೆ ದಕ್ಷಿಣದ ಖ್ಯಾತ ನಟಿ ಸಮಂತಾ ಅಕ್ಕಿನೇನಿ. ಈ ಚಿತ್ರದ ಮುಹೂರ್ತ ಇಂದು ನೆರವೇರಿತು.

ಚಿತ್ರದ ಶೂಟಿಂಗ್‌ ಅನ್ನು ಮುಂದಿನ ವಾರದಿಂದ ಆರಂಭಿಸುವ ಯೋಚನೆಯಲ್ಲಿದೆ ಚಿತ್ರತಂಡ. ಬಿಳಿ ಸೀರೆಯುಟ್ಟು ಮುಹೂರ್ತ ಕಾರ್ಯಕ್ರಮದಲ್ಲಿ ಹಾಜರಿದ್ದ ಸಮಂತಾ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು.

ಮಾಧ್ಯಮಗಳೊಂದಿಗೆ ಪಾತ್ರದ ಬಗ್ಗೆ ಮಾತನಾಡಿದ ಈ ಬೆಡಗಿ ‘ನಾನು ನನ್ನ ಇಲ್ಲಿಯವರೆಗಿನ ಸಿನಿ ಪಯಣದಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ. ಕಮರ್ಷಿಯಲ್ ಸಿನಿಮಾದಿಂದ ಥ್ರಿಲ್ಲರ್‌ ಸಿನಿಮಾದವರೆಗೆ ಎಲ್ಲಾ ಪ್ರಕಾರಗಳ ಸಿನಿಮಾಗಳಲ್ಲೂ ನಟಿಸಿದ್ದೇನೆ. ಆದರೆ ನನಗೆ ಮೊದಲಿನಿಂದಲೂ ರಾಣಿ ಪಾತ್ರ ಮಾಡಬೇಕು ಎಂಬ ಆಸೆ ಇತ್ತು. ಅಲ್ಲದೇ ಬಹಳ ಸಮಯದಿಂದ ಶಾಕುಂತಲಂನಂತಹ ಸಿನಿಮಾದಲ್ಲಿ ನಟಿಸಲು ಕಾಯುತ್ತಿದ್ದೆ. ಈ ಸಿನಿಮಾದ ಆರಂಭಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

ಈ ಸಿನಿಮಾದಲ್ಲಿ ದುಷ್ಯಂತನಾಗಿ ದೇವ್‌ ಮೋಹನ್ ನಟಿಸಲಿದ್ದಾರೆ. ಈ ಹಿಂದೆ ಸಿನಿಮಾದ ಬಗ್ಗೆ ಮಾತನಾಡಿದ ಗುಣಶೇಖರ್‌ ‘ಮಹಾಭಾರತದ ಆದಿಪರ್ವದಲ್ಲಿ ದುಷ್ಯಂತ ಹಾಗೂ ಶಾಕುಂತಲೆಯ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಈ ಸಿನಿಮಾವು ಕಾಳಿದಾಸ ಬರೆದಿರುವ ಅಭಿಜ್ಞಾನ ಶಾಕುಂತಲೆಯನ್ನು ಆಧರಿಸಿದೆ. ಇದು ತುಂಬಾ ಪವಿತ್ರವಾದ ಪ್ರೇಮಕಥೆಯಾಗಿದೆ. ಈ ಸಿನಿಮಾವನ್ನು ಹಿಮಾಲಯದಲ್ಲಿ ಶೂಟ್ ಮಾಡಲಿದ್ದೇವೆ. ಲಾಕ್‌ಡೌನ್ ಸಮಯದಲ್ಲಿ ನಾನು ಈ ಚಿತ್ರ ಮಾಡುವ ಬಗ್ಗೆ ಯೋಚಿಸಿದೆ’ ಎಂದಿದ್ದಾರೆ.

ಈ ಚಿತ್ರವನ್ನು ನೀಲಿಮಾ ಗುಣ ಹಾಗೂ ದಿಲ್‌ ರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವು ಮುಂದಿನ ವರ್ಷ ತೆರೆ ಕಾಣುವ ಸಾಧ್ಯತೆ ಇದ್ದು ಟಾಲಿವುಡ್‌ ಬಿಗ್‌ಬಜೆಟ್‌ ಸಿನಿಮಾಗಳಲ್ಲಿ ಇದೂ ಒಂದಾಗಲಿದೆ. ಈ ಸಿನಿಮಾದ ನಂತರ ಗುಣಶೇಖರ್ ರಾನಾ ದುಗ್ಗುಬಾಟಿ ನಟನೆಯ ಹಿರಣ್ಯಕಶ್ಯಪ್‌ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.