ಬುಧವಾರ, ಜನವರಿ 29, 2020
30 °C

ಅರಬ್ಬೀ | ಬೆಳ್ಳಿತೆರೆ ಮೇಲೆ ಅಂಗವಿಕಲ ಈಜುಪಟುವಿನ ಸಾಹಸಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತನ ಹೆಸರು ವಿಶ್ವಾಸ್‌. ಎರಡು ಕೈಗಳಿಲ್ಲ. ಆದರೆ, ಅವನಲ್ಲಿ ಆತ್ಮವಿಶ್ವಾಸಕ್ಕೆ ಕೊರತೆಯಿಲ್ಲ. ಆತ ಅಂತರರಾಷ್ಟ್ರೀಯಮಟ್ಟದ ಈಜುಪಟುವೂ ಹೌದು. ನೃತ್ಯ, ಫುಟ್‍ಬಾಲ್‌ ಆಟದಲ್ಲೂ ಪರಿಣತ. ಈಗ ‘ಅರಬ್ಬೀ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದಾರೆ. ಈ ಕಥೆಯ ನಾಯಕನದು ಸಮುದ್ರದ ಅಲೆಗಳಷ್ಟೇ ಶಾಂತ ಸ್ವಭಾವ. ಬದುಕಿನಲ್ಲಿ ಅವಮಾನವಾದಾಗ ಅಲೆಯಂತೆ ಮೇಲೆದ್ದು ಹೇಗೆ ಪ್ರಸಿದ್ಧನಾಗುತ್ತಾನೆ ಎಂಬುದೇ ಇದರ ತಿರುಳು. ಹಾಗಾಗಿಯೇ, ಈ ಚಿತ್ರಕ್ಕೆ ‘ಅರಬ್ಬೀ’ ಎಂದು ಹೆಸರಿಡಲಾಗಿದೆಯಂತೆ.

ಈ ಸಿನಿಮಾ ವಿಶ್ವಾಸ್‌ ಅವರ ಬಯೋಪಿಕ್ ಅಲ್ಲ. ಅವರ ಬದುಕಿನಲ್ಲಿ ನಡೆದ ಕೆಲವು ಘಟನೆಗಳನ್ನು ದೃಶ್ಯರೂಪದಲ್ಲಿ ಜನರ ಮುಂದಿಡುವುದೇ ನಿರ್ದೇಶಕ ರಾಜಕುಮಾರ್‌ ಅವರ ಉದ್ದೇಶವಂತೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿರುವ ಅವರು, ಎರಡು ಗೀತೆಗಳಿಗೆ ಸಾಹಿತ್ಯ ಕೂಡ ರಚಿಸಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಹದಿನೈದು ವರ್ಷಗಳ ಕಾಲ ಕನ್ನಡ, ತೆಲುಗು, ತಮಿಳಿನ ಹಲವು ನಿರ್ದೇಶಕರ ಬಳಿ ದುಡಿದ ಅನುಭವ ಅವರಿಗಿದೆ.

ಚೈತ್ರಾ ರಾವ್ ಈ ಚಿತ್ರದ ನಾಯಕಿ. ಕೋಚ್ ಪಾತ್ರದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಣ್ಣ ಹಚ್ಚಲಿದ್ದಾರೆ. ಆಯುಷ್ ಮಂಜು ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಆನಂದ್ ದಿಂಡವಾರ್ ಅವರದು. ಸುನಿಲ್‍ ಕಶ್ಯಪ್ ಅವರ ಸಂಕಲನವಿದೆ. ಕಲೆ ಮೋಹನ್‍ಕುಮಾರ್ ಅವರದು. ಅಕನ್ ಆನಂದ್ ನೃತ್ಯ ಸಂಯೋಜಿಸಿದ್ದಾರೆ.

ಅಂಗವಿಕಲರಿಗೆ ಅನುಕಂಪ ತೋರಿಸಬೇಡಿ. ಅವರ ಪ್ರತಿಭೆ ಗುರುತಿಸಿ ಅವರಿಗೂ ದಾರಿ ಮಾಡಿಕೊಡಿ ಎಂಬುದೇ ಈ ಚಿತ್ರದ ಸಂದೇಶ. ಬೆಂಗಳೂರು ಮತ್ತು ಕರಾವಳಿಯ ಸುತ್ತಮುತ್ತ ಶೂಟಿಂಗ್‌ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಬಾಲಿವುಡ್‌ ನಿರ್ದೇಶಕ ಮಹೇಶ್‍ ಭಟ್ ಈಗಾಗಲೇ ನಿರ್ದೇಶಕರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಬೇರೆ ಭಾಷೆಗಳಿಗೂ ಈ ಸಿನಿಮಾವನ್ನು ಡಬ್ಬಿಂಗ್‌ ಮಾಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರಂತೆ. ಚೇತನ್‌ ಸಿ.ಎಸ್. ಬಂಡವಾಳ ಹೂಡಿದ್ದಾರೆ. ಹಿಂದಿ, ಭೋಜ್‍ಪುರಿ, ಮಣಿಪುರಿ ಭಾಷೆಯಲ್ಲೂ ಚಿತ್ರ ನಿರ್ಮಾಣವಾಗುತ್ತಿದೆ.

ಶ್ರೀರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮೊದಲ ದೃಶ್ಯಕ್ಕೆ ಹಿರಿಯ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ಪ್ರತಿಕ್ರಿಯಿಸಿ (+)