ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ನಿರೀಕ್ಷೆಯಲ್ಲಿ ‘ನಾನೊಂಥರ’ ನಾಯಕಿ ರಕ್ಷಿಕಾ

Last Updated 17 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಮೂಲತಃ ಫ್ಯಾಷನ್‌ ಡಿಸೈನರ್‌ ಆಗಿದ್ದ ರಕ್ಷಿಕಾ ಈಗ ಬಣ್ಣದ ಬದುಕಿನಲ್ಲಿ ಭವಿಷ್ಯ ಅರಸಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇವರು ನಾಯಕಿಯಾಗಿ ನಟಿಸಿರುವ ಚೊಚ್ಚಲ ಸಿನಿಮಾ ‘ನಾನೊಂಥರ’ ಇದೇ ಶುಕ್ರವಾರ (ಡಿ.18) ರಾಜ್ಯದಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ರಮೇಶ್ ಕಗ್ಗಲ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ನಾಯಕನಾಗಿ ತಾರಕ್‌ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರ ನಿರ್ವಹಿಸಿರುವ ಖುಷಿಯಲ್ಲಿ ರಕ್ಷಿಕಾ ‘ಪ್ರಜಾಪ್ಲಸ್‌’ ಜತೆಗೆ ಮಾತಿಗಾರಂಭಿಸಿದರು.

‘ನಾಯಕನನ್ನು ಬದಲಾಯಿಸುವಂತಹ ಪ್ರಭಾವಿ ಪಾತ್ರ ನನ್ನದು. ಅಂದರೆ ನಾಯಕ ಜವಾಬ್ದಾರಿ ರಹಿತ ವ್ಯಕ್ತಿ ಅಲ್ಲ, ಆತನಲ್ಲಿರುವ ಕೊರತೆಯೊಂದನ್ನು ಹೇಗೆ ಹಂತಹಂತವಾಗಿ ಸರಿಪಡಿಸುತ್ತಾ ಸಾಗುತ್ತೇನೆ ಎನ್ನುವುದನ್ನು ನಾನು ನಿಭಾಯಿಸುತ್ತಿರುವ ಡಾಕ್ಟರ್‌ ಪಾತ್ರ ಹೇಳಲಿದೆ. ಮೊದಲಾರ್ಧ ಡಿಗ್ಲಾಮರ್‌ ಆಗಿದ್ದರೆ, ದ್ವಿತಿಯಾರ್ಧದಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರದಲ್ಲಿ ಎರಡು ಶೇಡ್‌ಗಳಿವೆ’ ಎಂದು ಮಾತು ವಿಸ್ತರಿಸಿದರು.

ರಕ್ಷಿಕಾ ನೆಲಮಂಗಲದ ಟಿ.ಬೇಗೂರಿನವರು. ‘ನನಗೆ ಮೊದಲಿಂದಲೂ ಚಿತ್ರರಂಗಕ್ಕೆ ಬರಬೇಕು, ಚಿತ್ರನಟಿಯಾಗಬೇಕೆಂಬ ಕನಸುಗಳಿದ್ದವು. ಒಂದೊಂದು ಸಿನಿಮಾ ನೋಡಿದಾಗಲೂ ನಟಿಯಾಗುವ ಕನಸುಗಳು ಅರಳುತ್ತಿದ್ದವು. ಆದರೆ, ಸಕಾಲದಲ್ಲಿ ಅವಕಾಶಗಳು ಬರಲಿಲ್ಲ, ನಾನೂ ಅವಕಾಶಗಳ ಬೆನ್ನತ್ತಿ ಹೊರಡಲಿಲ್ಲ. ಒಳ್ಳೆಯ ಸ್ಕ್ರಿಪ್ಟ್‌, ಒಳ್ಳೆಯ ತಂಡದ ನಿರೀಕ್ಷೆಯಲ್ಲಿದ್ದೆ. ಅದೇ ವೇಳೆಗೆ ರಮೇಶ್‌ ಕಗ್ಗಲ್‌ ಅವರಿಂದ ಅವಕಾಶವೊಂದು ಹುಡುಕಿಬಂತು, ಆಡಿಷನ್‌ ಮೂಲಕವೇ ಈ ಪಾತ್ರಕ್ಕೆ ಆಯ್ಕೆಯಾದೆ. ಪಾತ್ರಕ್ಕಾಗಿ ಸಾಕಷ್ಟು ವರ್ಕ್‌ಶಾಪ್‌ ಕೂಡ ಮಾಡಿಸಿದ್ದಾರೆ ನಿರ್ದೇಶಕರು. ಒಂದು ತಂಡವಾಗಿ ಹಾಕಿರುವ ಪರಿಶ್ರಮದ ಫಲ ಈಗ ನಮ್ಮ ಮುಂದಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿರುವ ವಿಶ್ವಾಸವೂ ಇದೆ. ‘ನಾನೊಂಥರ’ ಸಿನಿಪ್ರಿಯರಿಗೂ ಸಿಕ್ಕಾಪಟ್ಟೆ ಇಷ್ಟವಾಗಲಿದೆ ಎಂಬ ನಿರೀಕ್ಷೆ ನಮ್ಮೆಲ್ಲರದು. ಅಲ್ಲದೇ ಈ ಚಿತ್ರ ನನಗಷ್ಟೇ ಅಲ್ಲ, ಇಡೀ ತಂಡಕ್ಕೆ ಒಂದು ಅಸ್ಮಿತೆಯನ್ನು ನೀಡಲಿದೆ’ ಎನ್ನುವುದು ರಕ್ಷಿಕಾ ಅವರ ಭರವಸೆಯ ಮಾತು.

‘ನಾನೊಂಥರ’ ಚಿತ್ರದ ಶೂಟಿಂಗ್‌ನ ಒಂದೊಂದು ದಿನವನ್ನು ಮೆಲುಕು ಹಾಕುವ ಇವರು, ‘ಬೆಂಗಳೂರು ಸುತ್ತಮುತ್ತವೇ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಚಿತ್ರದ ಶೂಟಿಂಗ್‌ ಮುಗಿಯುತ್ತಾ ಬಂದಾಗ ನಾವೆಲ್ಲರೂ ತುಂಬಾ ಎಮೋಷನಲ್‌ ಆಗಿದ್ದೆವು. ಶೂಟಿಂಗ್‌ ಕೊನೆಯ ದಿನ ಕುಂಬಳ ಕಾಯಿ ಒಡೆದಾಗ ನಾವೆಲ್ಲರೂ ಅಕ್ಷರಶಃ ಭಾವುಕರಾಗಿದ್ದೆವು. ಕಾರಣ ನಾವೆಲ್ಲರೂ ಒಂದೇ ಕುಟುಂಬ ದವರು ಎಂಬ ಭಾವನೆ ಬೆಳೆದು ಬಿಟ್ಟಿತ್ತು’ ಎನ್ನುವ ಮಾತು ಸೇರಿಸಿದರು.

‘ಕೊರೊನಾ ಪೂರ್ವದಲ್ಲೇ ಈ ಚಿತ್ರ ತಯಾರಾಗಿತ್ತು. ಕಳೆದ ಯುಗಾದಿಯ ಹಬ್ಬಕ್ಕೆ ತೆರೆಕಾಣಬೇಕಿತ್ತು. ಕೋವಿಡ್‌ 19 ಕಾರಣಕ್ಕೆ ಬಿಡುಗಡೆ ಮುಂದೂಡಬೇಕಾಯಿತು. ಚಿತ್ರದ ಬಿಡುಗಡೆಗಾಗಿ ಚಿತ್ರಮಂದಿರಗಳ ಬಾಗಿಲು ತೆರೆಯುವುದನ್ನು ನಾವೆಲ್ಲರೂ ಕಾತರದಿಂದ ಎದುರು ನೋಡುತ್ತಿದ್ದೆವು. ಈಗ ನಮ್ಮ ಕನಸುಗಳು ಈಡೇರುವ ದಿನ ಬಂದೇ ಬಿಟ್ಟಿತು’ ಎನ್ನುವಾಗ ಅವರ ಮಾತಿನಲ್ಲಿ ನಿರಾಳಭಾವವಿತ್ತು.

ಮುಂದಿನ ಯೋಜನೆಗಳತ್ತ ಮಾತು ಹೊರಳಿದಾಗ, ‘ಎರಡು–ಮೂರು ಸ್ಕ್ರಿಪ್ಟ್‌ಗಳು ಬಂದಿವೆ. ಇನ್ನೂ ಅಂತಿಮವಾಗಿಲ್ಲ, ಮಾತುಕತೆಯ ಹಂತದಲ್ಲಿವೆ. ನಾನು ಇಂಥದ್ದೇ ಪಾತ್ರವಾಗಬೇಕೆಂಬ ಹಠ ಸ್ವಭಾವದವಳಲ್ಲ, ಕಲಾವಿದೆಯಾಗಿ ಎಲ್ಲ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ’ ಎನ್ನಲು ರಕ್ಷಿಕಾ ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT