ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kannada Movies | ಚಂದನವನ ಈಗ ‘ಬೆಂಬಲ’ವನ

Published 25 ಆಗಸ್ಟ್ 2023, 0:43 IST
Last Updated 25 ಆಗಸ್ಟ್ 2023, 0:43 IST
ಅಕ್ಷರ ಗಾತ್ರ

‘ರಾಜ್‌ ಬಿ.ಶೆಟ್ಟಿ ಒಂದು ಸಿನಿಮಾ ಕಥೆ ಬರೆದಿದ್ದಾರೆ, ನಟನೆ ಮಾಡಿದ್ದಾರೆ ಎಂದರೆ ನನಗೆ ಯಾವತ್ತೂ ಕುತೂಹಲ ಇರುತ್ತದೆ. ‘ಕ್ಷೇತ್ರಪತಿ’ ಸಿನಿಮಾ ನೋಡಿದೆ. ಎಂತಹ ಪ್ರತಿಭಾನ್ವಿತ ನಟ ನವೀನ್‌ ಶಂಕರ್‌. ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾ ಬಿಡುಗಡೆಗೆ ಕಾಯಲು ಸಾವಿರ ಕಾರಣಗಳಿವೆ...’

ಹೀಗೆ ತಮ್ಮ ಮುಂದಿನ ಸಿನಿಮಾ ‘ಸಪ್ತ ಸಾಗರದಾಚೆ ಎಲ್ಲೋ’ ರಿಲೀಸ್‌ ಹೊಸ್ತಿಲಲ್ಲೂ ಇತರೆ ಸಿನಿಮಾಗಳ, ಅದರ ಹೀರೊಗಳ ಬೆಂಬಲಕ್ಕೆ ನಿಂತು ಮಾತನಾಡಿದ್ದು ನಟ ರಕ್ಷಿತ್‌ ಶೆಟ್ಟಿ.

****

‘ಟೋಬಿ’ ರಿಲೀಸ್‌ ಆದ ಒಂದು ವಾರದಲ್ಲೇ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲರೂ ಕಾಂಪಿಟೀಷನ್‌ ಎನ್ನುವಾಗ ರಕ್ಷಿತ್‌ ನನ್ನ ಜೊತೆ ಕೂತು ‘ಟೋಬಿ’ ಚೆನ್ನಾಗಿದೆ ನೋಡಿ ಎನ್ನುತ್ತಾರೆ. ರಕ್ಷಿತ್‌ ಶೆಟ್ಟಿಯ ಅಸಂಖ್ಯ ದೊಡ್ಡ ಅಭಿಮಾನಿಗಳಲ್ಲಿ ನಾನೂ ಒಬ್ಬ. ರಕ್ಷಿತ್‌ ಯಾವಾಗ ‘ಉಳಿದವರು ಕಂಡಂತೆ’ ಸಿನಿಮಾ ಮಾಡಿದರೋ, ಅದರಿಂದಾಗಿ ರಾಜ್‌ ಬಿ.ಶೆಟ್ಟಿ ಮಂಗಳೂರು ಕನ್ನಡದ ಸಿನಿಮಾ ಮಾಡಿದ. ಸ್ಫೂರ್ತಿ ಪಡೆದವರ ಜೊತೆ ಯಾವ ಸ್ಪರ್ಧೆ?...’

‘ರಕ್ಷಿತ್‌–ರಾಜ್‌ ನಡುವೆ ಸ್ಪರ್ಧೆ’ ಎಂಬ ಮಾತು ಕೇಳಿಬಂದಾಗ ರಾಜ್‌ ಬಿ.ಶೆಟ್ಟಿ ಕೊಟ್ಟ ಉತ್ತರವಿದು.

ಹೀಗೊಂದು ‘ಬೆಂಬಲ’ವನವೀಗ ಚಂದನವನದಲ್ಲಿ ಚಿಗುರೊಡೆದಿದೆ. ಒಬ್ಬ ಹೀರೊ ತನ್ನ ಸಿನಿಮಾವನ್ನಷ್ಟೇ ಅಲ್ಲದೆ ಮತ್ತೊಂದು ಸಿನಿಮಾಗೆ, ಅದರ ಕಲಾವಿದರಿಗೆ ಬೆಂಬಲವಾಗಿ ನಿಲ್ಲುವ ಒಂದು ಆರೋಗ್ಯಕರ ಬೆಳವಣಿಗೆ ಕನ್ನಡ ಚಿತ್ರರಂಗದಲ್ಲಿ ಪ್ರಾರಂಭವಾಗಿದೆ. ಇದು ಇಂದಿನ ಅಗತ್ಯವೂ ಆಗಿದೆ. ಹೀಗಂದ ಮಾತ್ರಕ್ಕೆ ಈ ಬೆಳವಣಿಗೆ ಹೊಸದೇನಲ್ಲ. ನಟರಾದ ಶಿವರಾಜ್‌ಕುಮಾರ್‌, ಸುದೀಪ್‌, ನಿರ್ದೇಶಕ ಯೋಗರಾಜ್‌ ಭಟ್‌ ಹೀಗೆ ಹಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಇತರರ ಸಿನಿಮಾಗಳಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಆದರೆ, ಸದ್ಯ ಈ ಉತ್ತೇಜನಕಾರಿ ವಾತಾವರಣ ವೇದಿಕೆಗಳ ಮೂಲಕ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುತ್ತಿದೆ. 2023ರ ಮೊದಲಾರ್ಧದಲ್ಲಿ ಪ್ರೇಕ್ಷಕರ ಕೊರತೆಯಿಂದ ಕನ್ನಡ ಚಿತ್ರಮಂದಿರಗಳು ಇನ್ನೇನು ಉಸಿರಾಟ ನಿಲ್ಲಿಸಲಿವೆ ಎನ್ನುವ ಕ್ಷಣದಲ್ಲಿ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಚಿತ್ರಮಂದಿರಗಳ ಕಳೆ ಹೆಚ್ಚಿಸಿತು. ಸಿನಿಮಾ ಗೆಲುವಿನ ಹಿಂದೆ ಸ್ಟಾರ್‌ ನಟರ ಪಾತ್ರ ಪ್ರಮುಖವಾಗಿತ್ತು ಎನ್ನುವುದು ನಿರ್ದೇಶಕ ನಿತಿನ್‌ ಕೃಷ್ಣಮೂರ್ತಿ ಅನಿಸಿಕೆ. 

‘ನಮ್ಮ ಮೊದಲ ಹೆಜ್ಜೆಯಲ್ಲೇ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು ಪುನೀತ್‌ ರಾಜ್‌ಕುಮಾರ್. ಶೀರ್ಷಿಕೆ ಅನಾವರಣವನ್ನು ವಿಭಿನ್ನವಾಗಿ ಮಾಡಿದ್ದೆವು. ಶೀರ್ಷಿಕೆ ಅನಾವರಣ ಮಾಡಿ ಬೈಯಬೇಕು ಎಂದು ನಾವು ಕೇಳಿಕೊಂಡಾಗ, ಅಯ್ಯೋ ನಾನು ಬೈಯಲ್ಲ ಎಂದಿದ್ದರು. ನಾವು ಮೊದಲ ಬಾರಿ ಶೂಟ್ ಮಾಡಿದ್ದಾಗ ಹೆಚ್ಚಿನ ಜೋಕ್‌ಗಳು ಲ್ಯಾಂಡ್‌ ಆಗಿರಲಿಲ್ಲ. ಹೀಗಾಗಿ ಅವರು ಮರುದಿನ ಮತ್ತೊಮ್ಮೆ ಶೂಟ್‌ ಮಾಡೋಣ ಎಂದರು. ಅಲ್ಲಿಂದ ಹಿಡಿದು ನಟರಾದ ಸುದೀಪ್‌ ಸರ್, ರಕ್ಷಿತ್‌ ಸರ್‌, ರಿಷಬ್‌ ಸರ್‌, ರಮ್ಯಾ ಅವರು ಹೀಗೆ ಬಹುತೇಕ ಖ್ಯಾತ ನಟರು ನಮಗೆ ಬೆಂಬಲವಾಗಿ ನಿಂತರು. ಒಂದು ಹೊಸ ತಂಡಕ್ಕೆ ಇಷ್ಟೆಲ್ಲ ಬೆಂಬಲ ನೀಡುವ ಯಾವ ಅವಶ್ಯಕತೆಯೂ ಅವರಿಗೆ ಇರಲಿಲ್ಲ. ಆದರೆ ಅವರೆಲ್ಲರೂ ಬೆನ್ನುತಟ್ಟಿದರು. ಒಂದು ವಾರದಲ್ಲಿ ಐದು ಕನ್ನಡ ಸಿನಿಮಾ ಬಂದರೂ ಎಲ್ಲರಿಗೂ ಸಮಾನವಾದ ಸ್ಪೇಸ್‌ ಇದೆ. ಮಾರುಕಟ್ಟೆ ಅಷ್ಟೇ ದೊಡ್ಡದಿದೆ. ಇವುಗಳನ್ನು ಸ್ಪರ್ಧೆ ಎಂದುಕೊಳ್ಳಲೇಬಾರದು’ ಎನ್ನುತ್ತಾರೆ ನಿತಿನ್‌. 

‘ಡೆವಿಲ್‌’ ಗೆಲುವಿನ ಹಿಂದೆ ‘ಡಾಲಿ’: ‘ನಮ್ಮ ಇಡೀ ಚಿತ್ರತಂಡ ಒಂದು ಹೂದೋಟದಂತಿತ್ತು. ಆಗಷ್ಟೇ ಚಿಗುರಿದ ಹೂವಿನ ಸಸಿಗಳು. ಬೇರೆ ಬೇರೆ ಜಾತಿಯದ್ದು, ಬಣ್ಣದ್ದು. ಎಲ್ಲದಕ್ಕೂ ನೀರು ಹಾಕಿ ಮೊಗ್ಗು ಹೂವಾಗಿ ಅರಳುವಂತೆ ಮಾಡಿದ್ದು ನಮ್ಮ ಡಾಲಿ’ ಎನ್ನುತ್ತಾರೆ ‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರದ ನಿರ್ದೇಶಕ ಶಶಾಂಕ್‌ ಸೋಗಲ್‌. 

‘ತೆರೆ ಮೇಲೆ ಹೀರೊ ಆಗಿ ಜನರನ್ನು ರಂಜಿಸುವುದು ದೊಡ್ಡ ಸಾಧನೆ. ತೆರೆಯ ಆಚೆ ಇಂಡಸ್ಟ್ರಿಗೆ ಬರುವ ಹೊಸಬರಿಗೆ, ಗೆಳೆಯರಿಗೆ ಹೀರೊ ಆಗುವವರು ವಿರಳ. ಧನಂಜಯ ಅವರು ಈ ರೀತಿಯ ಹೀರೊ. ಸಿನಿಮಾಗೆ ಬ್ರ್ಯಾಂಡ್‌ ವ್ಯಾಲ್ಯೂ ತಂದವರು ಇವರು. ಸೆಲೆಬ್ರಿಟಿ ಪ್ರೀಮಿಯರ್‌ ಶೋ ಅನ್ನು ಆಯೋಜಿಸಿ ಹಬ್ಬದಂತೆ ಸಂಭ್ರಮಿಸಿದರು. ಸ್ಟಾರ್‌ಗಳಿಲ್ಲದ ಸಿನಿಮಾಗೆ ಬೇಡಿಕೆಯೇ ಇಲ್ಲದ ಸಂದರ್ಭದಲ್ಲಿ ಎಲ್ಲ ವೇದಿಕೆಗಳಿಗೂ ಸಿನಿಮಾ ತಲುಪುವಂತೆ ಮಾಡಿದವರು ಧನಂಜಯ’ ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ ಶಶಾಂಕ್‌. 

‘ಸಂಸಾರ ಸಮೇತ ಕರೆಯೋಲೆ’

‘ಇಂಡಸ್ಟ್ರಿ ಎನ್ನುವುದು ಒಂದು ಕುಟುಂಬ. ಪ್ರತಿಯೊಂದು ಸಿನಿಮಾವೂ ಜನರನ್ನು ತಲುಪಬೇಕು. ಹೀಗಾಗಿ ಸಣ್ಣ ಉತ್ತೇಜನವೂ ಬಹಳ ಮುಖ್ಯವಾಗುತ್ತದೆ. ಸುದೀಪ್‌ ಅವರಂತಹ ಮೇರುನಟ ‘ಕಾಂತಾರ’ ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ಒಂದು ಸುದೀರ್ಘ ಪತ್ರದ ಮುಖೇನ ವ್ಯಕ್ತಪಡಿಸಿದ್ದರು. ಅದೇ ರೀತಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಟ್ರೈಲರ್‌ ನೋಡಿ ಸುದೀಪ್‌ ಅವರು ಟ್ವೀಟ್ ಮಾಡಿ ಅನಿಸಿಕೆ ಹಂಚಿಕೊಳ್ಳುತ್ತಾರೆ. ‘ಹಾಸ್ಟೆಲ್‌ ಹುಡುಗರು..’ ಸಿನಿಮಾಗೆ ಧ್ರುವ ಸರ್ಜಾ ಅವರು ಸಾಥ್‌ ನೀಡಿದರು. ನಾನು, ರಾಜ್‌ ಹಾಗೂ ರಕ್ಷಿತ್‌ ಪರಸ್ಪರ ಸಿನಿಮಾಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಹಿರಿಯ ನಟರು ಸೇರಿದಂತೆ ಪ್ರಸ್ತುತ ಇರುವ ಸ್ಟಾರ್‌ ನಟರು ಹಾಗೂ ಈಗ ಇಂಡಸ್ಟ್ರಿಗೆ ಹೆಜ್ಜೆ ಇಡುತ್ತಿರುವ ಪ್ರತಿಭಾನ್ವಿತ ನಟರು ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು ಸಿನಿಮಾವನ್ನು ಹೆಚ್ಚು ಜನರಿಗೆ ತಲುಪಿಸಬಹುದು. ‘ರಾಮ ರಾಮ ರೇ’ ಸಿನಿಮಾ ಕೂಡ ಇದೇ ರೀತಿಯ ಬೆಂಬಲದಿಂದ ಹಿಟ್‌ ಆಯಿತು. ‘ಕ್ಷೇತ್ರಪತಿ’ಗೂ ಈ ರೀತಿ ಬೆಂಬಲ ಸಿಕ್ಕಿದೆ. ಇಡೀ ಇಂಡಸ್ಟ್ರಿ ಒಟ್ಟಾಗಿ ಹೋದಾಗ ಜನರಿಗೂ ಖುಷಿಯಾಗುತ್ತದೆ. ಜನರಿಗೆ ಬೇಕಾಗಿರುವುದು ಇದೇ. ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು, ಜನರಿಗೆ ಒಂದು ಸಿನಿಮಾದ ಕರೆಯೋಲೆಯನ್ನು ಸಂಸಾರ ಸಮೇತ ಹೋಗಿ ನೀಡಿದಂತೆ’ ಎನ್ನುತ್ತಾರೆ ನಟ ರಿಷಬ್‌ ಶೆಟ್ಟಿ. 

ಇಂತಹ ಬೆಂಬಲ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿಲ್ಲ; ಧನಂಜಯ ಅವರು ಹಲವು ಸಿನಿಮಾಗಳ ಹಾಡಿಗೆ ಸಾಹಿತ್ಯ ಬರೆದೂ ಬೆನ್ನುತಟ್ಟಿದ್ದಾರೆ. ಹಲವು ಸಿನಿಮಾಗಳ ಟೀಸರ್‌ಗೆ ಧ್ವನಿಯಾಗುವ ಮೂಲಕ ಸುದೀಪ್‌ ಅವರ ಜೊತೆ ಹೆಜ್ಜೆ ಹಾಕಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್‌ ಮೂಲಕ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಕೆಲ ನಿರ್ದೇಶಕರು ಜೊತೆಯಾಗಿದ್ದಾರೆ. ಹೀಗೆ ಇನ್ನಷ್ಟು ಕಲಾವಿದರು ತಮ್ಮ ವ್ಯಾಪ್ತಿಯೊಳಗೆ ಇತರರ ಸಿನಿಮಾಗಳನ್ನು ಬೆಂಬಲಿಸುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ನಟರ ನಡುವೆ ಈ ಬೆಂಬಲ ಮುಂದುವರಿದರೆ ಸಿನಿಮಾಗಳೂ ಗೆಲ್ಲಲಿವೆ, ಚಿತ್ರಮಂದಿರಗಳೂ ಉಸಿರಾಡಲಿವೆ.   

toby
toby
ಹಾಸ್ಟೆಲ್‌ 
ಹಾಸ್ಟೆಲ್‌ 
sudeep 
sudeep 
suni 
suni 
shivrajkumar
shivrajkumar

ಇನ್ನೊಬ್ಬನ ಏಳಿಗೆಯನ್ನು ತಡೆಯೋಕೆ ತುಳಿಯೋಕೆ ಯೋಚನೆ ಮಾಡುವ ಬದಲು ಆದಷ್ಟು ತಬ್ಬಿಕೊಂಡು ಕೈಹಿಡಿದುಕೊಂಡು ಹೋದರೆ ಬಹಳಷ್ಟು ಸಾಧನೆ ಮಾಡಬಹುದು.

–ಧನಂಜಯ ನಟ(ಕ್ಷೇತ್ರಪತಿ ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ)

****

ಶೀರ್ಷಿಕೆಯಲ್ಲೇ ಸುನಿ ಚಮಕ್‌

ಪ್ರತಿ ವಾರ ರಿಲೀಸ್‌ ಆಗುವ ಸಿನಿಮಾಗಳ ಶೀರ್ಷಿಕೆಗಳನ್ನು ಒಟ್ಟುಗೂಡಿಸಿ ಹಾರೈಸುವುದು ನಿರ್ದೇಶಕ ಸಿಂಪಲ್‌ ಸುನಿ ಟ್ರೇಡ್‌ ಮಾರ್ಕ್‌. ‘ನಾನು ಸಹಾಯಕ ನಿರ್ದೇಶಕನಾಗಿದ್ದಾಗಲೇ ಫೇಸ್‌ಬುಕ್‌ನಲ್ಲಿ ಈ ರೀತಿ ಬರೆದುಕೊಳ್ಳುತ್ತಿದ್ದೆ. ಆದರೆ ನನಗೆ ಫಾಲೋವರ್ಸ್‌ ಹೆಚ್ಚು ಇರಲಿಲ್ಲ. ಈಗ ಟ್ವಿಟರ್‌ನಲ್ಲಿ (ಎಕ್ಸ್‌) ಹಾಕುತ್ತಿದ್ದೇನೆ. ಎಲ್ಲವೂ ಶೇರ್‌ ಮಾಡಿದರೆ ಅಥವಾ ಅನಿಸಿಕೆ ಹಂಚಿಕೊಂಡರೆ ಬೆಲೆ ಇರುವುದಿಲ್ಲ. ಆದರೆ ಕೆಲವು ಪ್ರಯೋಗಗಳಿಗೆ ಹೊಸಬರ ಪ್ರಯತ್ನಗಳಿಗೆ ಮನಸ್ಸು ತುಂಬಿ ಬೆಂಬಲ ನೀಡಬೇಕು. ಕೋವಿಡೋತ್ತರ ಕಾಲದಲ್ಲಿ ಇಡೀ ಇಂಡಸ್ಟ್ರಿ ಗೆಲ್ಲಬೇಕು ಎನ್ನುವ ಅನಿಸಿಕೆ ಎಲ್ಲರಲ್ಲಿದೆ’ ಎನ್ನುವುದು ಸುನಿ ಮಾತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT