ಶನಿವಾರ, ಜೂಲೈ 4, 2020
28 °C

ಭಿನ್ನ ಪಾತ್ರಗಳಲ್ಲಿ ಮಿಂಚುವಾಸೆ: ಸಂಗೀತಾ ಶೃಂಗೇರಿ

ಸುಮನಾ ಕೆ. Updated:

ಅಕ್ಷರ ಗಾತ್ರ : | |

Prajavani

ಮಾಡೆಲಿಂಗ್‌ ಲೋಕದಲ್ಲಿ ಮಿನುಗಬೇಕು ಎಂಬ ಅದಮ್ಯ ಆಸೆಯಿಟ್ಟುಕೊಂಡಿದ್ದ ಚಂದದ ಬೆಡಗಿ ಸಂಗೀತಾ ಶೃಂಗೇರಿ, ಈಗ ‘ಸ್ಯಾಂಡಲ್‌ವುಡ್‌’ನಲ್ಲಿ ನಾಯಕಿಯಾಗಿ ಗಮನ ಸೆಳೆಯುತ್ತಿದ್ದಾರೆ. ಮೊದಲ ಸಿನಿಮಾ ಹೆಚ್ಚು ಹೆಸರು ತಂದುಕೊಡದಿದ್ದರೂ, ಇವರ ನಟನೆಯನ್ನು ಗುರುತಿಸಿದ ನಿರ್ಮಾಪಕ– ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಆಹ್ವಾನಿಸುತ್ತಿದ್ದಾರೆ. ಸದ್ಯ ಸಂಗೀತಾ ಅವರ ಕೈಯಲ್ಲಿ ‘ಪಂಪ’, ‘ಚಾರ್ಲಿ 777’ ಹಾಗೂ ‘ಮಾರಿಗೋಲ್ಡ್‌’ ಚಿತ್ರಗಳಿವೆ!

ಈ ಮೂರೂ ದೊಡ್ಡ ಬ್ಯಾನರ್‌ನ ಸಿನಿಮಾಗಳು. ಹಾಗೇ ಅವುಗಳಲ್ಲಿನ ಪಾತ್ರಗಳೂ ಒಂದಕ್ಕಿಂತ ಒಂದು ಭಿನ್ನ. ಹಿರಿಯ ರಂಗಭೂಮಿ ನಟ ಕೀರ್ತಿಭಾನು, ನಟರಾದ ರಕ್ಷಿತ್ ಶೆಟ್ಟಿ, ದಿಗಂತ್‌ ಜೊತೆ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿರುವ ಖುಷಿ ಸಂಗೀತಾ ಅವರದು. 

ಮೂಲತಃ ಶೃಂಗೇರಿಯವರಾದ ಸಂಗೀತಾ ಅವರಿಗೆ ಮಾಡೆಲಿಂಗ್‌ ಬಗ್ಗೆ ಆಸಕ್ತಿ ಇತ್ತು. ಕಾಲೇಜು ದಿನಗಳಲ್ಲಿ ‘ವರ್ಲ್ಡ್‌ ಸೂಪರ್‌ ಮಾಡೆಲ್‌ ಟೀನ್’‌ಗೆ ಆಯ್ಕೆಯಾಗಿದ್ದರು. ಸ್ನೇಹಿತರ ಒತ್ತಾಯದ ಮೇರೆಗೆ ಕಿರುಚಿತ್ರವೊಂದರಲ್ಲಿ ನಟಿಸಿದ್ದರು. ಅವರ ಅಭಿನಯವನ್ನು ಮೆಚ್ಚಿದ ನಿರ್ದೇಶಕರೊಬ್ಬರು ‘ಹರ ಹರ ಮಹಾದೇವ’ ಧಾರಾವಾಹಿಯ ಆಡಿಶನ್‌ಗೆ ಭಾಗವಹಿಸುವಂತೆ ಹೇಳಿದರು. ಅದೇ ಸಂಗೀತಾ ಅವರಿಗೆ ನಟನಾಲೋಕಕ್ಕೆ ಪ್ರವೇಶಿಸಲು ಮೊದಲ ಹೆಜ್ಜೆಯಾಯಿತು. ಈ ಧಾರಾವಾಹಿಯ ಸತಿದೇವಿ ಪಾತ್ರ ಸಂಗೀತಾಗೆ ಭಾರಿ ಹೆಸರು ತಂದುಕೊಟ್ಟಿದೆ. 

‘ಹರ ಹರ ಮಹಾದೇವ’ ಪೌರಾಣಿಕ ಧಾರಾವಾಹಿ. ಸತಿ ಪಾತ್ರಕ್ಕೆ ಆಯ್ಕೆಯಾದೆ. ಪೌರಾಣಿಕ ಪಾತ್ರವಾಗಿದ್ದರಿಂದ ವೇಷಭೂಷಣ, ಆಂಗಿಕ ಅಭಿನಯ, ಭಾಷೆ ಎಲ್ಲದರಲ್ಲೂ ಹಿಡಿತ ಇರಬೇಕಾಗುತ್ತಿತ್ತು. ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಈಗ ನನ್ನನ್ನು ಎಲ್ಲ ಕಡೆ ‘ಸತಿದೇವಿ‘ ಎಂದೇ ಗುರುತಿಸುತ್ತಾರೆ. ಈ ಧಾರಾವಾಹಿಯ ಪಾತ್ರ ತುಂಬಾ ಹೆಸರು ತಂದುಕೊಟ್ಟಿತ್ತು’ ಎಂದು ಕಿರುತೆರೆ ಅನುಭವವನ್ನು ಬಿಚ್ಚಿಟ್ಟರು ಸಂಗೀತಾ. 

ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗಲೇ ಸಂಗೀತಾ ಅವರಿಗೆ ವಿಜಯ್‌ ಸೂರ್ಯ ನಿರ್ದೇಶನದ ‘ಎ+’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ದೊರಕಿತು. ಆದರೆ ಆ ಸಿನಿಮಾ ಹೆಚ್ಚು ಹಿಟ್‌ ಆಗಲಿಲ್ಲ. ‘ಆ ಸಿನಿಮಾದ ಚಿತ್ರಕತೆ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ ಅನಿಸುತ್ತದೆ. ಆ ನಂತರ ಸಿನಿಮಾ ಬಗ್ಗೆ ಚ್ಯೂಸಿಯಾಗಿದ್ದೇನೆ. ಪಾತ್ರ ಹಾಗೂ ಚಿತ್ರಕತೆಗೆ ಒತ್ತು ನೀಡುತ್ತೇನೆ’ ಎನ್ನುತ್ತಾರೆ ಅವರು. 

ಈಗ ಅಭಿನಯಿಸುತ್ತಿರುವ ಮೂರೂ ಚಿತ್ರಗಳಲ್ಲಿ ಸಂಗೀತಾ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಂದ್ರ ನಿರ್ದೇಶನದ ‘ಪಂಪ’ ಸಿನಿಮಾದಲ್ಲಿ ಫಾರಿನ್‌ ರಿಟರ್ನ್‌ ಕಾಲೇಜು ಯುವತಿ ಪಾತ್ರ. ಕನ್ನಡ ಮೇಷ್ಟ್ರು ಸುತ್ತ ಕತೆ ಇರುವ ಈ ಚಿತ್ರದಲ್ಲಿ ಮೇಷ್ಟ್ರು ಪಂಪನಾಗಿ ಹಿರಿಯ ರಂಗಭೂಮಿ ನಟ ಕೀರ್ತಿಭಾನು ನಟಿಸಿದ್ದಾರೆ. ಅವರ ಜೊತೆ ಕನ್ನಡಕ್ಕಾಗಿ ಹೋರಾಡುವ ಯುವತಿ ಪಾತ್ರ ಸಂಗೀತಾ ಅವರದ್ದು. ಈ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಬಿಡುಗಡೆಗೂ ಸಿದ್ಧವಾಗಿದೆ. 

ರಕ್ಷಿತ್‌ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘ಚಾರ್ಲಿ 777’ಗೂ ಸಂಗೀತಾ ನಾಯಕಿ. ಪ್ರಾಣಿ ರಕ್ಷಣಾ ಅಧಿಕಾರಿ ‘ದೇವಿಕಾ’ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಚಾರ್ಲಿ ಪಾತ್ರದ ನಾಯಿಯೂ ಪ್ರಮುಖ ಪಾತ್ರದಲ್ಲಿ ತೆರೆ ಹಂಚಿಕೊಂಡಿದೆ. ‘ಚಾರ್ಲಿಗೆ ಮೂರು ಟೇಕ್‌ಗಳಲ್ಲಿ ಸುಸ್ತಾಗುತ್ತಿತ್ತು. ಅದಕ್ಕೆ ಹೊಂದಿಕೊಂಡು ನಟಿಸುವುದೂ ಸವಾಲಾಗಿತ್ತು’ ಎಂದು ಹೇಳಿದರು. ಈ ಸಿನಿಮಾದಲ್ಲಿ ಇವರ ಅಭಿನಯ ಭಾಗದ ಚಿತ್ರೀಕರಣ ಮುಗಿದಿದೆ.  ಈಗ ದಿಗಂತ್‌ ನಾಯಕನಾಗಿ ನಟಿಸುತ್ತಿರುವ ‘ಮಾರಿಗೋಲ್ಡ್‌’ ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ ಸಂಗೀತಾ. ಇದು ಸಸ್ಪೆನ್ಸ್‌ ಕಾಮಿಡಿ ಥ್ರಿಲ್ಲರ್‌ ಕತೆ. 

‘ಅಭಿನಯದ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಬೇಕು. ಅದ್ಭುತ ನಟಿ ಎಂದು ಕರೆಸಿಕೊಳ್ಳಬೇಕು. ಪಾತ್ರದ ಮೂಲಕವೇ ನನ್ನನ್ನು ಗುರುತಿಸುವಂತಾದರೆ ಒಬ್ಬ ನಟಿಗೆ ಇದಕ್ಕಿಂತ ಬೇರೆ ಪ್ರಶಸ್ತಿಗಳು ಬೇಕಾಗಿಲ್ಲ’ ಎಂಬುದು ಸಂಗೀತಾ ಮಾತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು