ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಹೀದ್ ಕಪೂರ್ ಮುಂದಿನ ಚಿತ್ರ ‘ಅಶ್ವತ್ಥಾಮ‘ನಿಗೆ ಕನ್ನಡಿಗ ಸಚಿನ್ ರವಿ ನಿರ್ದೇಶನ

Published 19 ಮಾರ್ಚ್ 2024, 15:54 IST
Last Updated 19 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಮುಂಬೈ: ತಮ್ಮ ಚೊಚ್ಚಲ ಚಿತ್ರ ‘ಅವನೇ ಶ್ರೀಮನ್ನಾರಾಯಣ’ಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕನ್ನಡಿಗ ಸಚಿನ್ ಬಿ. ರವಿ ಅವರು ಇದೀಗ ಬಾಲಿವುಡ್ ನಟ ಶಾಹೀದ್ ಕಪೂರ್ ಅವರ ‘ಅಶ್ವತ್ಥಾಮ‘ ಚಿತ್ರದ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.

ಮಂಗಳವಾರ ನಡೆದ ಪ್ರೈಮ್ ವಿಡಿಯೊ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಣ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದೆ.

‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಎಂದು ಚಿತ್ರಕ್ಕೆ ಶೀರ್ಷಿಕೆ ನೀಡಲಾಗಿದೆ. ಆಧುನಿಕ ಯುಗದ ಸವಾಲುಗಳ ನಡುವೆ, ವೈರಿಗಳನ್ನು ಎದುರಿಸುವ ನಾಯಕನ ಸಾಹಸಮಯ ಕಥೆಯುಳ್ಳ ಚಿತ್ರ ಇದಾಗಿದೆ. ವರ್ತಮಾನದ ಗೊಂದಲದಲ್ಲಿ ಗತಿಸಿಹೋದ ಘಟನೆಗಳ ರಹಸ್ಯ ಬಿಚ್ಚಿಕೊಂಡಂತೆ, ಸಾವಿರಾರು ವರ್ಷಗಳ ಹಿಂದೆ ಕಂಡ ಜಗತ್ತನ್ನು ಇಂದು ಹೇಗೆ ಸ್ವೀಕರಿಸುತ್ತಾನೆ ಎಂಬ ಕಥಾ ವಸ್ತು ಇದರದ್ದು’ ಎಂದು ಸಿನಿಮಾದ ಅಂತರ್ಜಾಲ ಪುಟದಲ್ಲಿ ಹೇಳಲಾಗಿದೆ.

‘ಸಮಕಾಲೀನ ಸಂದರ್ಭದಲ್ಲಿ ಅಮರತ್ವ ವಿಷಯ ಕುರಿತ ಕಥಾವಸ್ತುವನ್ನು ತೆರೆಯ ಮೇಲೆ ತರಲು ಉತ್ಸುಕನಾಗಿದ್ದೇನೆ’ ಎಂದು ನಿರ್ದೇಶಕ ರವಿ ಹೇಳಿದ್ದಾರೆ.

‘ಈ ಕಥೆಯಲ್ಲಿ ಅಶ್ವತ್ಥಾಮ ವರ್ತಮಾನದಲ್ಲಿರುವ ನಾಯಕ. ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಆತನದ್ದು. ಇಷ್ಟನ್ನಷ್ಟೇ ಹೇಳಬಲ್ಲೆ. ಆದರೆ ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ, ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಇರಲಿದೆ. ಕಾಲ್ಪನಿಕ ಸನ್ನಿವೇಶನಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆ ಕುರಿತು ಕಥೆ ರಚಿಸಿ, ಸಾಧ್ಯವಾಗಿಸುವುದು ಚಿತ್ರ ನಿರ್ದೇಶನಕಾಗಿ ಸವಾಲಿನ ಕೆಲಸ’ ಎಂದಿದ್ದಾರೆ.

‘ನನ್ನ ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮ ನನ್ನದು. ಈ ಚಿತ್ರದ ಹಲವು ಕುತೂಹಲಕರ ಅಂಶಗಳ ಕುರಿತು ಶಾಹೀದ್ ಕಪೂರ್ ಜತೆ ಬಹಳಷ್ಟು ಹೊತ್ತು ಕಳೆದಿದ್ದೇನೆ’ ಎಂದು ಚಿತ್ರದ ತಯಾರಿ ಕುರಿತು ತಮ್ಮ ಅನುಭವವನ್ನು ರವಿ ಹಂಚಿಕೊಂಡರು.

ಅಶ್ವತ್ಥಾಮ ಚಿತ್ರವನ್ನು ಪೂಜಾ ಎಂಟರ್ನೈನ್ಮೆಂಟ್ ಕಂಪನಿ ನಿರ್ಮಾಣ ಮಾಡುತ್ತಿದೆ. ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಗೂ ದೀಪ್ಶಿಕಾ ದೇಶಮುಖ್ ನಿರ್ಮಾಪಕರಾಗಿದ್ದಾರೆ.

ಇದಕ್ಕೂ ಪೂರ್ವದಲ್ಲಿ ‘ದಿ ಇಮ್ಮಾರ್ಟಲ್ ಅಶ್ವತ್ಥಾಮ’ ಚಿತ್ರವನ್ನು ‘ಉರಿ’ ಚಿತ್ರದ ನಾಯಕ ನಟ ವಿಕ್ಕಿ ಕೌಶಲ್ ಹಾಗೂ ನಿರ್ದೇಶಕ ಆದಿತ್ಯ ಧಾರ್ ಅವರು ಮಾಡಬೇಕಿತ್ತು. ಆದರೆ ಅದು ಸೆಟ್ಟೇರಲಿಲ್ಲ.

ಥಿಯೇಟರ್‌ನಲ್ಲಿ ತೆರೆ ಕಂಡ ಬಳಿಕ ಚಿತ್ರ ಒಟಿಟಿ ವೇದಿಕೆ ಪ್ರೈಮ್ ವಿಡಿಯೊದಲ್ಲಿ ಲಭ್ಯವಾಗಲಿದೆ. ಹೀಗೆ ಒಟಿಟಿ ವೇದಿಕೆಗೆ ಫರಾನ್ ಅಖ್ತರ್ ಅವರ ಡಾನ್‌ 3, ಸಿಂಗಮ್ ಅಗೈನ್, ಇಕ್ಕೀಸ್, ಸ್ತ್ರೀ 2, ಕಾರ್ತಿಕ್ ಆರ್ಯನ್ ಸ್ಟಾರರ್‌, ಚಂದು ಚಾಂಪಿಯನ್, ಕಂಗುವಾ, ಕಾಂತಾರ: ಚಾಪ್ಟರ್ 1, ಭಾಗಿ 4 ಹಾಗೂ ಹೌಸ್‌ಫುಲ್‌ 5 ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT