ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಮಾನ್ ಮತ್ತೆ ಬೇಕು!

Last Updated 30 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಒಂದು ಕಾಲದ ಸೂಪರ್‌ ಹಿಟ್ ‘ರಾಮಾಯಣ’ ಧಾರಾವಾಹಿ ದೂರದರ್ಶನ ವಾಹಿನಿಯಲ್ಲಿ ಮರುಪ್ರಸಾರ ಆರಂಭಿಸಿದೆ. ಇದೇ ರೀತಿ, ಕೆಲವು ಟಿ.ವಿ. ವಾಹಿನಿಗಳು ತಮ್ಮಲ್ಲಿ ಹಿಂದೆ ಪ್ರಸಾರ ಆಗಿದ್ದ ಸೂಪರ್ ಹಿಟ್ ಧಾರಾವಾಹಿಗಳ ಮರುಪ್ರಸಾರಕ್ಕೆ ಸಮಯ ಹೊಂದಿಸಿಕೊಳ್ಳುವ ಕಾರ್ಯದಲ್ಲಿ ನಿರತವಾಗಿರುವ ಸುದ್ದಿ ಬಂದಿದೆ.

‘ರಾಮಾಯಣ ಧಾರಾವಾಹಿಯ ಮರುಪ್ರಸಾರ ಆರಂಭಿಸಿದ್ದೀರಿ. ಅದರ ಜೊತೆಯಲ್ಲೇ, ನಮ್ಮ ಇಷ್ಟದ ಶಕ್ತಿಮಾನ್‌ ಧಾರಾವಾಹಿಯನ್ನೂ ಪುನಃ ಪ್ರಸಾರ ಮಾಡಿ’ ಎನ್ನುವ ಬೇಡಿಕೆಯನ್ನು ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಇರಿಸಿದ್ದಾರೆ. ಕೆಲವರು ಈ ಬೇಡಿಕೆಯನ್ನು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಟ್ವಿಟರ್ ಮೂಲಕ ನೇರವಾಗಿ ತಲುಪಿಸಿದ್ದಾರೆ.

1997ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಈ ಧಾರಾವಾಹಿ 2005ರವರೆಗೆ ಪ್ರಸಾರ ಆಗಿತ್ತು. ಮುಕೇಶ್ ಖನ್ನಾ ಅವರು ‘ಶಕ್ತಿಮಾನ್’ ಆಗಿ ಕಾಣಿಸಿಕೊಂಡಿದ್ದ ಈ ಧಾರಾವಾಹಿಯನ್ನು ದೂರದರ್ಶನ ವಾಹಿನಿಯು 2005ರವರೆಗೆ ಪ್ರಸಾರ ಮಾಡಿತ್ತು. ಖನ್ನಾ ಅವರು ಇದರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ನಿಭಾಯಿಸಿದ್ದ ಇನ್ನೊಂದು ಪಾತ್ರ ಪಂಡಿತ್ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರನಾಥ್ ಶಾಸ್ತ್ರಿ. ‘ಶಕ್ತಿಮಾನ್’ ಅತ್ಯಂತ ಸ್ಥಿತಪ್ರಜ್ಞ. ಆದರೆ ಪಂಡಿತ್ ಗಂಗಾಧರ್ ಚೇಷ್ಟೆಯ ವ್ಯಕ್ತಿ, ಗಾಂಭೀರ್ಯ ಅಂದರೆ ಏನೆಂಬುದು ಗೊತ್ತಿಲ್ಲದ ಮನುಷ್ಯ ಆತ.

ಗೀತಾ ವಿಶ್ವಾಸ್ (ಈ ಪಾತ್ರವನ್ನು ವೈಷ್ಣವಿ ಮಹಾಂತ್ ನಿಭಾಯಿಸಿದ್ದರು) ಈ ಧಾರಾವಾಹಿಯ ಮತ್ತೊಂದು ಪ್ರಮುಖ ಪಾತ್ರ. ಶಕ್ತಿಮಾನ್‌ನ ಸುದ್ದಿಯನ್ನು ಮೊದಲ ಬಾರಿ ಬ್ರೇಕ್ ಮಾಡಿದ ಪತ್ರಕರ್ತೆ ಈಕೆ. ಶಕ್ತಿಮಾನ್ ಸಂದರ್ಶನ ಕೊಡುವುದು ಈಕೆಗೆ ಮಾತ್ರ. ಈ ಧಾರಾವಾಹಿಯಲ್ಲಿ ಶಕ್ತಿಮಾನ್‌, ಬೆಳಕನ್ನು ಪ್ರತಿನಿಧಿಸುತ್ತಾನೆ. ಅವನ ಎದುರಾಳಿ ಖಿಲ್ವಿಶ್, ಅಂಧಕಾರವನ್ನು ಪ್ರತಿನಿಧಿಸುತ್ತಾನೆ.

‘ಈ ಧಾರಾವಾಹಿಯನ್ನು ಪುನಃ ಪ್ರಸಾರ ಮಾಡಬೇಕು. ಶಕ್ತಿಮಾನ್‌ ಭಾರತವನ್ನು ಪ್ರತಿನಿಧಿಸುತ್ತಾನೆ. ಭಾರತ ಯಾವತ್ತಿಗೂ ಕೆಟ್ಟದ್ದರ ವಿರುದ್ಧ ಹೋರಾಟ ನಡೆಸುತ್ತ ಇರುತ್ತದೆ. ಈಗ ಎದುರಾಗಿರುವ ಕೊರೊನಾ ವೈರಾಣು ಎಂಬ ಮಾರಿಯು, ಖಿಲ್ವಿಶನ ಸೈನಿಕ ಇದ್ದಂತೆ. ಅದನ್ನು ಭಾರತ ಸೋಲಿಸುತ್ತದೆ’ ಎಂದು ಖಿಲ್ವಿಶ್ ಪಾತ್ರ ನಿಭಾಯಿಸಿದ್ದ ಸುರೇಂದ್ರ ಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಹೊಸ ಸುದ್ದಿಯೊಂದನ್ನು ಸ್ವತಃ ಮುಕೇಶ್ ಖನ್ನಾ ಹೊರಗೆಡಹಿದ್ದಾರೆ. ಶಕ್ತಿಮಾನ್ ಧಾರಾವಾಹಿಯ ಮುಂದುವರಿದ ಭಾಗದ ಕೆಲಸಗಳು ನಡೆದಿವೆ ಎಂದು ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ‘ಶಕ್ತಿಮಾನ್ ಧಾರಾವಾಹಿಯಲ್ಲಿ ಮುಂದೆ ಏನಾಯಿತು ಎಂಬುದನ್ನು ತಿಳಿಯಲು ಜನ ಬಯಸುತ್ತಾರೆ. ಹೊಸ ಕಥೆಯು ಸಮಕಾಲೀನ ಆಗಿರುತ್ತದೆ’ ಎಂದು ಖನ್ನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT