ರಿಮೇಕ್‌ ಕವಚ ತೊಟ್ಟ ಶಿವಣ್ಣ

7

ರಿಮೇಕ್‌ ಕವಚ ತೊಟ್ಟ ಶಿವಣ್ಣ

Published:
Updated:
Deccan Herald

ಮಲಯಾಳ ಭಾಷೆಯ ‘ಒಪ್ಪಂ’ ಸಿನಿಮಾದ ರಿಮೇಕ್‌ ‘ಕವಚ’ದಲ್ಲಿ ಶಿವರಾಜ್‌ಕುಮಾರ್‌ ನಟಿಸುತ್ತಿದ್ದಾರೆ. ರಿಮೇಕ್‌ ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ತಮ್ಮ ಪ್ರತಿಜ್ಞೆಯನ್ನು ಅವರು ಮುರಿದಿದ್ದಾರೆ. ಜಿಆರ್‌ವಿ ವಾಸು ನಿರ್ದೇಶನದ ‘ಕವಚ’ ಚಿತ್ರದಲ್ಲಿ ಅಂಧನಾಗಿ ನಟಿಸುತ್ತಿರುವ ಶಿವಣ್ಣನ ಜತೆ ನಡೆಸಿದ ಮಾತುಕತೆ ಇಲ್ಲಿದೆ.

**

* ರೀಮೇಕ್‌ ಸಿನಿಮಾ ಮಾಡುವುದಿಲ್ಲ ಎಂಬ ನಿಮ್ಮ ಮಾತನ್ನು ‘ಕವಚ’ ಸಿನಿಮಾ ಮೂಲಕ ಮುರಿಯುತ್ತಿದ್ದೀರಿ? ಅಂಥ ವಿಶೇಷತೆ ಈ ಸಿನಿಮಾದಲ್ಲಿ ಏನಿದೆ?

ಇದೇ ಮೊದಲ ಬಾರಿಗೆ ನಾನು ಅಂಧ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದೆ ನಾನು ರಿಮೇಕ್ ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ್ದು ನಿಜ. ಆದರೆ ಒಂದು ಒಳ್ಳೆಯ ಕಥೆ ಸಿಕ್ಕಾಗ ರೀಮೇಕ್‌ ಸಿನಿಮಾ ಆದರೂ ನಟಿಸಬೇಕು ಎಂದು ಈಗ ಅನಿಸುತ್ತಿದೆ. ಅದರಲ್ಲಿ ತಪ್ಪೇನೂ ಇಲ್ಲ. ಆ ಮೂಲ ಸಿನಿಮಾವನ್ನು ನನ್ನ ಸ್ಟೈಲ್‌ನಲ್ಲಿ ಹೇಗೆ ಬದಲಾಯಿಸಬಹುದು ಎಂದು ಯೋಚಿಸಬೇಕು. 

‘ಕವಚ’ ಸಿನಿಮಾದಲ್ಲಿಯೂ ಅಂಥ ಹಲವು ಬದಲಾವಣೆಗಳಿವೆ. ಕಥೆ ಮೂಲ ಮಲಯಾಳಂ ‘ಒಪ್ಪಂ’ ಸಿನಿಮಾದ್ದೇ ಆದರೂ ಹಲವು ತಾರ್ಕಿಕವಾಗಿ ಹಲವು ವಿಷಯಗಳನ್ನು ಸೇರಿಸಲಾಗಿದೆ. ಯಾವ್ಯಾವ ಪಾತ್ರಗಳಿಗೆ ಹೆಚ್ಚು ಮಹತ್ವ ಕೊಡಬೇಕು ಎಂದು ಯೋಚಿಸಿ ಅವುಗಳನ್ನು ಇನ್ನಷ್ಟು ಹುರಿಗೊಳಿಸಿದ್ದಾರೆ. ಶೇ 25 ರಿಂದ 30 ಬದಲಾವಣೆ ಮಾಡಿದ್ದಾರೆ. 

* ಮುಂದೆಯೂ ರೀಮೇಕ್‌ ಚಿತ್ರಗಳಲ್ಲಿ ನಟಿಸುತ್ತೀರಾ?

ಮೋಟಿವೇಷನ್‌ ಸಿನಿಮಾಗಳು ರೀಮೇಕ್‌ ಆದರೂ ನಟಿಸುತ್ತೇನೆ. ಕೆಲವು ಕಥೆಗಳನ್ನು ಕೇಳಿದಾಗ ನನಗೆ ನಟಿಸಲೇಬೇಕು ಅನಿಸುತ್ತದೆ. ಆ ಪಾತ್ರಕ್ಕೆ ಹೊಸತಾಗಿ ನಾನೇನೋ ಕೊಡಬಹುದು ಅನಿಸುತ್ತದೆ. ಅಂಥ ಸಿನಿಮಾಗಳು ರೀಮೇಕ್‌ ಆದರೂ ನಟಿಸುತ್ತೇನೆ. 

* ‘ಕವಚ’ ಸಿನಿಮಾದಲ್ಲಿ ಮೊದಲ ಬಾರಿಗೆ ಅಂಧನಾಗಿ ನಟಿಸಿದ ಅನುಭವ ಹೇಗಿತ್ತು?

ನಿಜಕ್ಕೂ ನನಗೆ ಅದೊಂದು ಸವಾಲಾಗಿತ್ತು. ಸಾಮಾನ್ಯವಾಗಿ ಅಂಧ ಎಂದ ತಕ್ಷಣ ಕಣ್ಣುಗಳನ್ನು ಬೇರೆ ಬೇರೆ ರೀತಿ ಇಟ್ಟುಕೊಂಡು ನಟಿಸುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಈ ಚಿತ್ರದ ನಾಯಕ ಸಂಪೂರ್ಣ ಕುರುಡ. ಹಾಗಿರುವಾಗ ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟ. ಯಾಕೆಂದರೆ ಒಬ್ಬ ನಟನಿಗೆ ಭಾವಾಭಿವ್ಯಕ್ತಿಗೆ ಕಣ್ಣುಗಳು ತುಂಬ ಮುಖ್ಯ. ನಾನು ಈ ಪಾತ್ರಕ್ಕೆ ನನ್ನ ಕೈಲಾದಮಟ್ಟಿಗೆ ನ್ಯಾಯ ಒದಗಿಸಿದ್ದೇನೆ. ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. 

ಇಡೀ ಚಿತ್ರ ಅದ್ಭುತವಾಗಿ ಬರುವಲ್ಲಿ ನಿರ್ದೇಶಕ ಜಿಆರ್‌ವಿ ವಾಸು ಅವರ ಶ್ರಮ ದೊಡ್ಡದಿದೆ. ಈ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳು ಇವೆ. ಆದರೆ ಇದು ಪೂರ್ಣ ಪ್ರಮಾಣದ ಕಮರ್ಷಿಯಲ್ ಸಿನಿಮಾ ಅಲ್ಲ. ತಾಂತ್ರಿಕವಾಗಿಯೂ ಅಷ್ಟೇ ಗಟ್ಟಿಯಾದ ಸಿನಿಮಾ ಇದು. 

* ಮಲಯಾಳಂನಲ್ಲಿ ಮೋಹನ್‌ಲಾಲ್‌ ಮಾಡಿದ ಪಾತ್ರವನ್ನು ನೀವು ಮಾಡುತ್ತಿದ್ದೀರಿ. ನಿಮ್ಮಿಬ್ಬರ ನಟನೆಯ ಪ್ಯಾಟರ್ನ್‌ ಬೇರೆ. ನಿರೀಕ್ಷೆಯೂ ಹೆಚ್ಚಿರುತ್ತದೆ ಅಲ್ಲವೇ?

ನೂರಕ್ಕೆ ನೂರು ನಿಜ. ನಾನು ಯಾರನ್ನೂ ಅನುಕರಿಸಲು ಪ್ರಯತ್ನಿಸಿಲ್ಲ. ಪ್ರಯತ್ನಿಸುವುದೂ ಇಲ್ಲ. ಈಗಾಗಲೇ ಹೇಳಿದಂತೆ ಈ ಸಿನಿಮಾ ನಾಯಕ ಅಂಧ. ನಾನೇ ಅಂಧನಾದರೆ ಹೇಗಿರುತ್ತದೆ ಎಂದು ಭಾವಿಸಿಕೊಂಡು, ಆ ಪಾತ್ರದ ಭಾವಗಳನ್ನು ಆವಾಹಿಸಿಕೊಂಡು ಈ ಪಾತ್ರಕ್ಕೆ ಜೀವ ತುಂಬಿದ್ದೇನೆ. ನನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದ್ದೇನೆ.ಬದುಕಿನ ಪರಿಸ್ಥಿತಿಗಳು ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಕ್ಕಾಗಲ್ಲ. ಯಾಕೆಂದರೆ ನಮ್ಮ ಪಕ್ಕದಲ್ಲಿಯೇ ವಂಚಕ ಮನಸ್ಸುಗಳು ಇರಬಹುದು. ಮನಸ್ಸಿನ ಭಾವನೆಗಳ ಹೊಯ್ದಾಟ ಮತ್ತು ಕುಟುಂಬ ಎರಡನ್ನೂ ಸಮದೂಗಿಸುವ ಜವಾಬ್ದಾರಿ ಇರುವ ವ್ಯಕ್ತಿ ಈ ಸಿನಿಮಾದ ನಾಯಕ. ಆ ಪಾತ್ರಕ್ಕೆ ಹೊಂದಿಕೊಳ್ಳಲು ಕಷ್ಟವಾಗಿದ್ದು ನಿಜ. ಯಾಕೆಂದರೆ ಸಿನಿಮಾದ ಕೆಲವು ಸನ್ನಿವೇಶಗಳೇ ಹಾಗಿದ್ದವು. ಆದರೆ ನಿರ್ದೇಶಕರು, ಇಡೀ ತಂಡದ ಸಹಾಯದಿಂದ ಸಾಧ್ಯವಾಯಿತು.

* ಈ ವರ್ಷ ಸುಮಾರು ಇನ್ನೂರ ಇಪ್ಪತ್ತು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ ಗೆಲುವಿನ ಪ್ರಮಾಣ ತುಂಬ ಕಡಿಮೆ ಇದೆ. ಇದಕ್ಕೆ ಕಾರಣ ಏನಿರಬಹುದು?

ಸೋಲಿಗೆ ಇದೇ ಕಾರಣ ಎಂದು ಹೇಳುವುದು ತುಂಬ ಕಷ್ಟ. ಇದೇ ಸಿನಿಮಾ ಗೆಲ್ಲುತ್ತದೆ ಎಂದು ಹೇಳಕ್ಕಾಗಲ್ಲ. ಎಲ್ಲರೂ ಗೆಲ್ಲಬೇಕು ಎಂದೇ ಸಿನಿಮಾ ಮಾಡುತ್ತಾರೆ. ಆದರೆ ಜನರು ಸಿನಿಮಾ ತಿರಸ್ಕರಿಸುತ್ತಾರೆ. ಇದು ನಮ್ಮ ಭಾಷೆ ಮಾತ್ರವಲ್ಲ; ಎಲ್ಲ ಭಾಷೆಗಳಲ್ಲಿಯೂ ಪರಿಸ್ಥಿತಿ ಹೀಗೆಯೇ ಇದೆ. ಸಿನಿಮಾ ಮಾಡುವುದು ಯಾವಾಗಲೂ ರಿಸ್ಕ್‌. ನಾವು ಆ ರಿಸ್ಕ್‌ ತೆಗೆದುಕೊಳ್ಳಬೇಕು ಅಷ್ಟೆ. 

* ವೃತ್ತಿಪರತೆಯ ಕೊರತೆಯೂ ಒಂದು ಕಾರಣ ಇರಬಹುದಾ? 

ನಾನು ಹಾಗೆ ಹೇಳಲಾರೆ. ಎಷ್ಟೋ ಸಲ ನಾವೇ ಮಿಸ್ಟೇಕ್ ಮಾಡ್ತೀವಿ. ನಾನು ‘ಲೀಡರ್‌’ ಅಂತ ಒಂದು ಸಿನಿಮಾ ಮಾಡಿದೆ. ಅದು ಚೆನ್ನಾಗಿ ಹೋಗಲಿಲ್ಲ. ಒಂದೊಂದು ಸಲ ನಮಗೇ ಲೆಕ್ಕಾಚಾರ ತಪ್ಪುತ್ತದೆ. ಹಾಗಾಗಿ ಬೇರೆಯವರ ಕುರಿತು ನಾನು ಹೇಗೆ ಹೇಳಲಿ?

* ಅಂಬರೀಷ್‌ ಅಗಲಿದ ನಂತರ ಕನ್ನಡ ಚಿತ್ರರಂಗಕ್ಕೆ ಒಬ್ಬ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ. ಶಿವಣ್ಣ ನಾಯಕತ್ವ ವಹಿಸಿಕೊಳ್ಳಬಹುದಾ?

ಆ ಕುರಿತು ಮಾತನಾಡಲು ಇದು ಸರಿಯಾದ ಸಮಯ ಅಲ್ಲ. ಅಂಬರೀಷ್ ಮಾಮ ಹೋಗಿ ಕೆಲವೇ ದಿನಗಳಾಗಿವೆಯಷ್ಟೆ. ಈಗ ಅದರ ಬಗ್ಗೆ ಯೋಚನೆಯನ್ನೂ ಮಾಡಬಾರದು. ಅವರು ಹೇಳಿದ ಮಾತುಗಳು ಇನ್ನೂ ನಮ್ಮ ಕಿವಿಗಳಲ್ಲಿ ಹಾಗೆಯೇ ಇದೆ. ಅದನ್ನು ಮೀರಿ ಹೋಗುವುದಿಲ್ಲ ನಾವ್ಯಾರೂ.

ಹಿರಿಯರಾದ ಶ್ರೀನಾಥ್‌, ಅನಂತ್‌ನಾಗ್ ಎಲ್ಲ ಇದ್ದಾರೆ. ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕಾದ ವಿಷಯ ಅದು. ನಾನು ಲೀಡರ್‌ಷಿಪ್‌ ತೆಗೆದುಕೊಳ್ತೀನಿ ಎಂದು ಹೇಳುವುದಿಲ್ಲ. ಆದರೆ ನಾವೆಲ್ಲರೂ ಒಟ್ಟಿಗೆ ಹೋಗಬೇಕು ಅಷ್ಟೆ. ಅಂಬರೀಷ್‌ ಮಾಮ ನಡೆಸಿಕೊಂಡು ಬಂದಿದ್ದ ಮಾದರಿಯನ್ನು ಮುರಿಯದೆಯೇ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕಾಗಿದೆ.

* ಈಗ ವಿಷ್ಣುವರ್ಧನ್ ಸ್ಮಾರಕದ ವಿವಾದ ನಡೆಯುತ್ತಿದೆ. ಅದರ ಕುರಿತು ಏನು ಹೇಳಬಯಸುತ್ತೀರಿ?

ಸ್ಮಾರಕ ಆಗಬೇಕು ಅಂತಿದ್ದರೆ ಖಂಡಿತ ಆಗಿಯೇ ಆಗುತ್ತದೆ. ಅದರ ಬಗ್ಗೆ ಎರಡು ಮಾತಿಲ್ಲ. ವಿಳಂಬವಾಗಿದೆ. ಯಾಕೆ ವಿಳಂಬ ಆಗಿದೆ ಎನ್ನುವುದನ್ನೇ ಮತ್ತೆ ಮತ್ತೆ ಹೇಳುವುದನ್ನು ಬಿಟ್ಟು ಎಷ್ಟು ಬೇಗ ಸ್ಮಾರಕ ನಿರ್ಮಾಣ ಆಗುತ್ತದೆ ಎನ್ನುವುದನ್ನು ನೋಡಬೇಕು. ಒಂದು ಮೂಡ್‌ ಆ್ಯಂಡ್‌ ಮೂವ್‌ಮೆಂಟ್‌ ಅಂತಿರುತ್ತದೆ. ಒತ್ತಡ ಇರುತ್ತದೆ. ಅವೆಲ್ಲವನ್ನೂ ಮೀರಿ ನಡೆಯಬೇಕು. ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಎಲ್ಲವೂ ಆ ಭಗವಂತನ ಕೈಯಲ್ಲಿ ಇದೆ. ಅವನು ಹೇಗೆ ನಡೆಸುತ್ತಾನೋ ಹಾಗೆ ಆಗುತ್ತದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !