ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿರಿವೆನ್ನೆಲ’: ಸಿನಿಮಾ ಸಾಹಿತ್ಯದ ಬೆಳದಿಂಗಳು

Last Updated 30 ನವೆಂಬರ್ 2021, 19:45 IST
ಅಕ್ಷರ ಗಾತ್ರ

ಸಿನಿಮಾ ಸಾಹಿತ್ಯ ಎಂದರೆ ಅರ್ಥವಿಲ್ಲದ ಶಬ್ದಗಳು, ಟ್ಯೂನಿನ ತಾಳಕ್ಕೋ ನಾದಕ್ಕೋ ಬಲವಂತವಾಗಿ ಪೋಣಿಸಿದ ಪದಗಳು ಎಂಬ ಟೀಕೆ ಇದೆ. ಈ ಅಭಿಪ್ರಾಯವನ್ನು ಸುಳ್ಳಾಗಿಸಿ, ಸಿನಿಮಾ ಸಾಹಿತ್ಯಕ್ಕೂ ಶುದ್ಧ ಸಾಹಿತ್ಯಕ್ಕೂ ವ್ಯತ್ಯಾಸ ಇಲ್ಲ ಎಂದು ತಮ್ಮ ಹಾಡುಗಳ ಮೂಲಕ ನಿರೂಪಿಸಿದವರು ತೆಲುಗು ಸಿನಿಮಾ ಗೀತರಚನಕಾರ ‘ಸಿರಿವೆನ್ನೆಲ’ ಸೀತಾರಾಮ ಶಾಸ್ತ್ರಿ. ಹೀಗೆ ಸಿನಿಮಾ ಹಾಡುಗಳಲ್ಲಿ ಘನವಾದ ಸಾಹಿತ್ಯವನ್ನು ಒದಗಿಸಿದ ದೇವುಲಪಲ್ಲಿ ಕೃಷ್ಣಶಾಸ್ತ್ರಿ, ವೇಟೂರಿ ಸುಂದರ ರಾಮಮೂರ್ತಿ, ಸಿ. ನಾರಾಯಣ ರೆಡ್ಡಿ, ಆತ್ರೇಯ ಇಂಥ ಧೀಮಂತರ ಸಾಲಿಗೆ ಸೇರಿದವರು ‘ಸಿರಿವೆನ್ನೆಲ’.

ಕಳಾತಪಸ್ವಿಯೆಂದೇ ಖ್ಯಾತರಾದ ಕೆ. ವಿಶ್ವನಾಥ್ ಅವರ ‘ಸಿರಿವೆನ್ನೆಲ’ (1986) ಸಿನಿಮಾಕ್ಕೆಂದು ಸೀತಾರಾಮ ಶಾಸ್ತ್ರಿ ಬರೆದ ಹಾಡುಗಳು ಎಷ್ಟು ಜನಪ್ರಿಯವಾಯಿತೆಂದರೆ ಅವರ ಹೆಸರಿನ ಜೊತೆಗೆ ಸಿನಿಮಾ ಹೆಸರೂ ಸೇರಿಕೊಂಡು ಅವರು ‘ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ’ ಎಂದೇ ಪ್ರಸಿದ್ಧರಾದರು. ಈ ಸಿನಿಮಾಕ್ಕೆ ಅವರಿಗೆ ‘ನಂದಿ’ ಪ್ರಶಸ್ತಿ ಕೂಡ ಸಂದಿತು. ಅವರಿಗೆ ಒಟ್ಟು 11 ನಂದಿ ಪ್ರಶಸ್ತಿ ಬಂದಿರುವುದು ಅವರ ಸಾಹಿತ್ಯದ ಶಕ್ತಿಗೂ ಜಪ್ರಿಯತೆಗೂ ಸಾಕ್ಷಿಯಾಗಿದೆ. ಕೆ. ವಿಶ್ವನಾಥ್‌, ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಿರಿವೆನ್ನೆಲ – ಈ ಮೂವರ ಸಾಂಗತ್ಯ ತೆಲುಗು ಸಿನಿಮಾ ಸಂಗೀತದಲ್ಲಿ ರಸಪ್ರವಾಹವನ್ನೇ
ಹರಿಸಿತು.

ಸ್ವರ್ಣಕಮಲಂ, ಶುಭಲಗ್ನಂ, ರುದ್ರವೀಣ, ಶ್ರುತಿಲಯಲು, ಗಾಯಂ, ಗಮ್ಯಂ– ಹೀಗೆ ಹಲವು ಚಿತ್ರಗಳ ಅವರ ಹಾಡುಗಳು ಸಿನಿಮಾ ರಸಿಕರ ಮನಸ್ಸನ್ನು ಆರ್ದ್ರಗೊಳಿಸಿವೆ. ‘ಸಿರಿವೆನ್ನೆಲ’ದಲ್ಲಿ ಶಿವನನ್ನು ಕುರಿತು ಅವರು ಬರೆದಿರುವ ನಿಂದಾಸ್ತುತಿಯೊಂದು ಸೀತಾರಾಮಶಾಸ್ತ್ರಿಗಳ ಕವಿತಾಶಕ್ತಿಗೆ ಶ್ರೇಷ್ಠ ಉದಾಹರಣೆಯಾಗಿದೆ. ‘ಶಿವನೇ ಜಗತ್ತಿನ ಮೊದಲ ಭಿಕ್ಷುಕ; ಅಂಥವನನ್ನು ನಾವು ಯಾವ ವರ ಕೇಳುವುದು?’ ಹೀಗೆ ಆರಂಭವಾಗುವ ಹಾಡಿನಲ್ಲಿ ಶಿವನ ಸೃಷ್ಟಿಯ ವೈರುಧ್ಯಗಳನ್ನು ವಿವರಿಸುತ್ತ, ಅವನ ಲೀಲೆಯನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಎಂದು ಧ್ವನಿಪೂರ್ಣವಾಗಿ ರಚಿಸಿರುವ ಆ ಹಾಡು ಅಪೂರ್ವ ಕಾವ್ಯಗುಣವನ್ನು ಹೊಂದಿದೆ. ಶೃಂಗಾರ, ಭಕ್ತಿ, ಶೋಕ, ಹಾಸ್ಯ, ಜೀವನೋತ್ಸಾಹ, ಸಾಮಾಜಿಕ ಕಾಳಜಿ – ಹೀಗೆ ಎಲ್ಲ ರಸ–ಭಾವಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅರ್ಥಗರ್ಭಿತ ಗೀತೆಗಳನ್ನು ರಚಿಸಿರುವ ‘ಸಿರಿವೆನ್ನೆಲ’ ತೆಲುಗು ಸಿನಿಮಾ ಸಾಹಿತ್ಯದ ಶ್ರೇಷ್ಠ ಕವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT