‘ದಬಾಂಗ್‌ 3’ಯಲ್ಲಿ ಸುದೀಪ್‌ ವಿಲನ್

7

‘ದಬಾಂಗ್‌ 3’ಯಲ್ಲಿ ಸುದೀಪ್‌ ವಿಲನ್

Published:
Updated:

‘ಅಭಿನಯ ಚಕ್ರವರ್ತಿ’ ಸುದೀಪ್ ‘ಪೈಲ್ವಾನ್’ ಚಿತ್ರದ ಟೀಸರ್‌ಗೆ ಸಿಕ್ಕಿರುವ ಅಭೂತಪೂರ್ವ ಸ್ಪಂದನೆಯಿಂದ ಖುಷಿಯಾಗಿದ್ದಾರೆ. ಬಾಲಿವುಡ್, ಕಾಲಿವುಡ್‌, ಟಾಲಿವುಡ್‌ನ ನಟ, ನಟಿಯರು ಕಿಚ್ಚನ ನಟನೆಗೆ ಚಿತ್‌ ಆಗಿದ್ದಾರೆ. ‘ಸುಲ್ತಾನ್’ ಚಿತ್ರ ಮಾಡಿದ್ದ ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಅವರೂ ‘ಪೈಲ್ವಾನ್‌’ನ ಆಟಕ್ಕೆ ಮನಸೋತು ಟ್ವೀಟ್‌ ಮಾಡಿದ್ದಾರೆ. ಈ ಸಂಭ್ರಮದ ನಡುವೆಯೇ ಮತ್ತೆ ಸುದೀಪ್ ಬಾಲಿವುಡ್ ಅಂಗಳ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಲ್ಮಾನ್ ಖಾನ್ ಅವರೊಟ್ಟಿಗೆ ಈ ಹಿಂದೆಯೇ ಸುದೀಪ್ ತೆರೆ ಹಂಚಿಕೊಳ್ಳಬೇಕಿತ್ತು. ಆದರೆ, ಈಗ ಬಾಲಿವುಡ್ ಅಂಗಳದಿಂದ ಹೊರಬಿದ್ದಿರುವ ಸುದ್ದಿ ಕಿಚ್ಚನ ಅಭಿಮಾನಿಗಳಲ್ಲಿ ಸಂತಸದ ಕಿಚ್ಚು ಹಚ್ಚಿಸಿರುವುದು ಸತ್ಯ. ಹಿಂದಿಯ ‘ದಬಾಂಗ್ 3’ ಸಿನಿಮಾದಲ್ಲಿ ನಟಿಸುವಂತೆ ಸುದೀಪ್‌ಗೆ ಆಫರ್‌ಗಳು ಬಂದಿವೆಯಂತೆ.‌ ಇದು ಅಧಿಕೃತವಾಗಿ ಅಲ್ಲದಿದ್ದರೂ ಬಾಲಿವುಡ್‌ ಅಂಗಳದಿಂದ ಜೋರಾಗಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ಸುದೀಪ್‌ ಅವರದ್ದು ಖಳನಟನ ಪಾತ್ರವಂತೆ.

ಸಲ್ಮಾನ್‌ ಖಾನ್ ಸಹೋದರ ಅರ್ಬಾಜ್ ಖಾನ್ ಸುದೀಪ್‌ ಅವರ ಆತ್ಮೀಯ ಗೆಳೆಯ. ಈ ಗೆಳೆತನವೇ ‘ದಬಾಂಗ್ 3’ ಸಿನಿಮಾದವರೆಗೆ ಕಿಚ್ಚನನ್ನು ಕರೆದೊಯ್ದಿದೆ. ಆದರೆ, ಅಧಿಕೃತ ಮಾಹಿತಿ ಹೊರಬೀಳಲು ಅಭಿಮಾನಿಗಳು ಕೆಲವು ದಿನಗಳವರೆಗೆ ಕಾಯುವುದು ಅನಿವಾರ್ಯ. ಈಗಾಗಲೇ,  ಹಿಂದಿಯ ‘ರಣ್’, ‘ಫೂಂಕ್’, ‘ರಕ್ತ ಚರಿತ್ರ 1, 2’ ಚಿತ್ರದಲ್ಲಿ ಸುದೀಪ್‌ ನಟಿಸಿದ್ದಾರೆ. 

ಪ್ರಭುದೇವ್‌ ‘ದಬಾಂಗ್ 3’ ನಿರ್ದೇಶಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ಈಗಾಗಲೇ ಸೆಟ್ಟೇರಬೇಕಿತ್ತು. ಆದರೆ, ಸಲ್ಲು ‘ಭಾರತ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ, ಇದು ಮುಂದಕ್ಕೆ ಹೋಗಿತ್ತು. ಮಾರ್ಚ್‌ ಅಥವಾ ಏಪ್ರಿಲ್ ಬಳಿಕ ಶೂಟಿಂಗ್‌ ಆರಂಭವಾಗುವ ಸಾಧ್ಯತೆಯಿದೆ.

ಪ್ರಸ್ತುತ ‘ಮೆಗಾಸ್ಟಾರ್’ ಚಿರಂಜೀವಿ ನಟಿಸುತ್ತಿರುವ ತೆಲುಗಿನ ‘ಸೈರಾ’ ಸಿನಿಮಾದಲ್ಲಿ ಸುದೀಪ್‌ ನಟಿಸುತ್ತಿದ್ದಾರೆ. ಬಹುನಿರೀಕ್ಷಿತ ‘ಪೈಲ್ವಾನ್’ ಸಿನಿಮಾ ಯುಗಾದಿ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ. ಈ ನಡುವೆಯೇ ‘ಕೋಟಿಗೊಬ್ಬ 3’ ಕೂಡ ಪೂರ್ಣಗೊಳ್ಳುವ ಹಂತದಲ್ಲಿದೆ. ಬಳಿಕ ದಬಾಂಗ್‌ನತ್ತ ಸುದೀ‍ಪ್‌ ಪಯಣ ಸಾಗಲಿದೆ ಎನ್ನುತ್ತವೆ ಮೂಲಗಳು.

Tags: 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !