ಭಾನುವಾರ, ಅಕ್ಟೋಬರ್ 17, 2021
23 °C

ಸೂರಜ್‌ ಗೌಡ ಸಂದರ್ಶನ: ಹೊಸ ಪ್ರಯತ್ನ ಜವಾಬ್ದಾರಿಯ ‘ಸನಿಹ’...

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಮಿಸ್ಟರ್‌ ಮೈಸೂರು, ಕರ್ನಾಟಕ, ‘ಮದುವೆಯ ಮಮತೆಯ ಕರೆಯೋಲೆ’ವರೆಗಿನ ಸಿನಿಮಾ ಪ್ರಯಾಣ ಹೇಗಿತ್ತು?

ಸಿನಿಮಾ ಪ್ರಯಾಣ ಶುರುವಾಗಿದ್ದೇ ಮಿಸ್ಟರ್‌ ಮೈಸೂರು, ಮಿಸ್ಟರ್‌ ಕರ್ನಾಟಕದಿಂದ. ತೂಗುದೀಪ ಪ್ರೊಡಕ್ಷನ್ಸ್‌ ಅಡಿ ‘ಮದುವೆಯ ಮಮತೆಯ ಕರೆಯೋಲೆ’ ಸಿನಿಮಾ ಬಂತು. ಆ ಬಳಿಕ ‘ಕಹಿ’ ಅನ್ನುವ ಸಿನಿಮಾ ಮಾಡಿದೆ. ಅದರಲ್ಲಿ ಒಂದು ಸೈಕೋಪಾತ್‌ ಪಾತ್ರ. ಮುಂದೆ ‘ಸಿಲಿಕಾನ್‌ ಸಿಟಿ’ ಅನ್ನುವ ಸಿನಿಮಾ ಮಾಡಿದೆ. ಆ ಚಿತ್ರ ಸೈಮಾ ಪ್ರಶಸ್ತಿಗೆ ನಾಮನಿರ್ದೇಶನ ಆಗಿದೆ. ಆ ಬಳಿಕ ನನಗೆ ಸೂಕ್ತ ಅನಿಸುವ ಸಿನಿಮಾಗಳು ಬರಲಿಲ್ಲ. ನಾನೇ ಏಕೆ ಕಥೆ ಬರೆದು ನಿರ್ದೇಶಿಸಬಾರದು ಎಂದು ನಿರ್ಧರಿಸಿ ‘ನಿನ್ನ ಸನಿಹಕೆ’ ಸಿನಿಮಾ ಮಾಡಿದ್ದೇವೆ.

‘ನಿನ್ನ ಸನಿಹಕೆ’ ಚಿತ್ರದಲ್ಲೇನಿದೆ?

ನಮ್ಮ ಜೀವನಕ್ಕೆ ಹತ್ತಿರವಾದ ಘಟನೆಗಳೇ ಇವೆ. ಎಲ್ಲರ ಬದುಕಿನಲ್ಲೂ ನಡೆದಿರುವ ಅಥವಾ ನಾವೆಲ್ಲೋ ನೋಡಿರುವ ಘಟನೆಗಳನ್ನು ರೊಮ್ಯಾಂಟಿಕ್‌ ಕಾಮಿಡಿ ಮೂಲಕ ಹೇಳಲು ಹೊರಟಿದ್ದೇವೆ. ಶೀರ್ಷಿಕೆಯೂ ಹಾಗೆಯೇ ನೋಡುಗರಿಗೆ ಹತ್ತಿರವಾಗಬೇಕು ಎಂಬ ಉದ್ದೇಶದಿಂದಲೇ ಇಟ್ಟಿದ್ದೇವೆ. ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಬಂದ ಜೋಡಿ ಲಿವ್‌ ಇನ್‌ ಸಂಬಂಧದಲ್ಲಿ ಜೊತೆಯಾಗಿರುತ್ತಾರೆ. ಅವರು ಎದುರಿಸುವ ಸವಾಲುಗಳನ್ನು ತಮಾಷೆಯಾಗಿ ತೋರಿಸಿದ್ದೇವೆ. ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು.

ಅಭಿನಯ– ನಿರ್ದೇಶನ ಹೊಸ ಸವಾಲು ಏನಿತ್ತು?

ಒಳ್ಳೆಯ ತಂಡ ಇತ್ತು. ಹಾಗಾಗಿ ಯಾವುದೇ ಸವಾಲು ಅನಿಸಿರಲಿಲ್ಲ. ಇಲ್ಲಿ ದೊಡ್ಮನೆ (ಡಾ.ರಾಜ್‌ಕುಮಾರ್‌ ಕುಟುಂಬ)ಯಿಂದ ಮೊದಲ ನಾಯಕಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಆ ಜವಾಬ್ದಾರಿ ಇತ್ತು. ನಿರ್ಮಾಪಕರ ಹೂಡಿಕೆ ಇದೆ. ರಘು ದೀಕ್ಷಿತ್‌ ಸಂಗೀತವನ್ನು ಸಿನಿಮಾ ಕಥೆಯ ಜೊತೆಗೇ ಒಯ್ಯುವ, ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಇತ್ತು. 

ನಿಮ್ಮ ಮತ್ತು ಧನ್ಯಾ ರಾಮ್‌ಕುಮಾರ್‌ ಕಾಂಬಿನೇಷನ್‌ ಹೇಗಿದೆ?

ತುಂಬಾ ಆತ್ಮೀಯತೆ ನಮ್ಮಿಬ್ಬರ ನಡುವಿದೆ. ಧನ್ಯಾ ಕೂಡಾ ಹಾಗೇ ಇದ್ದಾರೆ. ಪರಸ್ಪರ ತಪ್ಪುಗಳನ್ನು ತಿದ್ದಿಕೊಂಡು ನಗುನಗುತ್ತಾ ಚಿತ್ರೀಕರಣದಲ್ಲಿ ತೊಡಗಿದ್ದೆವು. ನನ್ನ ಆತ್ಮೀಯರ ಬಳಗದಲ್ಲಿ ಅವರಿದ್ದಾರೆ. ದೃಶ್ಯದ ನೈಜತೆಗಾಗಿ ಧನ್ಯಾ ಕೆನ್ನೆಗೆ ಬಾರಿಸಿದ್ದಾರೆ. ಬಾಟಲಲ್ಲಿ ಹೊಡೆದದ್ದೂ ಇದೆ...ಹಹ್ಹ ... ಮತ್ತೆ ಅವರೇ ಸಮಾಧಾನಪಡಿಸಿದ್ದೂ ಇದೆ. 

ಲಿವ್‌ ಇನ್‌ ರಿಲೇಷನ್‌ಷಿಪ್‌ ಬಗ್ಗೆ ನಿಮ್ಮ ನಿಲುವು ಏನಿದೆ?

ನೋಡಿ ಇದೆಲ್ಲಾ ಅವರವರ ಭಾವಕ್ಕೆ. ಕೆಲವರಿಗೆ ಎಲ್ಲ ಸಂಬಂಧಗಳೂ ಮದುವೆಯ ನಂತರವೇ ಇರಬೇಕು ಎಂದೆಲ್ಲಾ ನೋಡುವವರೂ ಇದ್ದಾರೆ. ಅಥವಾ ಟೇಕ್‌ ಕೊಡುವ ಮೊದಲೇ ‘ರಿಹರ್ಸಲ್‌’ ಬೇಕು ಅನ್ನುವವರೂ ಇದ್ದಾರೆ. ನಾವು ಇಲ್ಲಿ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿ ಇರುವ ಒಳ್ಳೆಯ ಅಂಶಗಳನ್ನೂ ಹೇಳಿದ್ದೇವೆ. ಇನ್ನೊಂದು ಆಯಾಮವನ್ನೂ ತೋರಿಸಿದ್ದೇವೆ. ಹಾಗಾಗಿ ಸಮಾಜದ, ಜನರ ಅಭಿಪ್ರಾಯಕ್ಕೇ ಇದನ್ನು ಬಿಟ್ಟಿದ್ದೇವೆ.

‘ನಿನ್ನ ಸನಿಹಕೆ’ ಮೇಕಿಂಗ್‌ನ ಸುಂದರ ಅನುಭವ?

ಶೂಟಿಂಗ್‌ ಸೆಟ್‌ನಲ್ಲಿ ನಾನೊಬ್ಬನೇ ಸುಂದರವಾಗಿರುವವನು ಎಂದುಕೊಂಡಿದ್ದೆ. ಆದರೆ ಒಂದು ದಿನ ಧನ್ಯಾ ಅವರ ತಂದೆ ರಾಮ್‌ ಕುಮಾರ್‌ ಬಂದರು. ನೋಡಿದ್ರೆ ನನಗಿಂತ ಅವರೇ ತುಂಬಾ ಚೆನ್ನಾಗಿದ್ದರು. ಹೌದಲ್ವಾ, ಆ ಕ್ಷಣದಿಂದ ನಾನೊಬ್ಬನೇ ಸುಂದರ ಅನ್ನುವುದನ್ನು ಬಿಟ್ಟುಬಿಟ್ಟೆ. ಪುನೀತ್‌ ರಾಜ್‌ಕುಮಾರ್‌ ಅವರೂ ಸೆಟ್‌ಗೆ ಬಂದದ್ದೂ ಖುಷಿಯ ಅನುಭವ

ಮುಂದಿನ ಯೋಜನೆಗಳು?

ಎರಡು ಸ್ಕ್ರಿಪ್ಟ್‌ ಬರೆದಿದ್ದೇನೆ. ಅದರ ಕೆಲಸವೂ ಆರಂಭವಾಗಬೇಕು. ಈಗಿನ ನಿರ್ಮಾಪಕರೇ ಆ ಚಿತ್ರವನ್ನೂ ನಿರ್ಮಿಸಲು ಮುಂದಾಗಿದ್ದಾರೆ. ಸದ್ಯ ನಿನ್ನ ಸನಿಹಕೆ ಬಿಡುಗಡೆ, ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಕುತೂಹಲವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.