ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಗಲ್ಲಾ‍ಪೆಟ್ಟಿಗೆಯಲ್ಲಿ ಹಿಂದೆ ಬಿದ್ದ ‘ಸೈರಾ’!

Last Updated 28 ಅಕ್ಟೋಬರ್ 2019, 12:54 IST
ಅಕ್ಷರ ಗಾತ್ರ

ಅಪ್ಪ ‘ಮೆಗಾಸ್ಟಾರ್‌’ ಚಿರಂಜೀವಿ ಅವರ ಗರಡಿಯಲ್ಲಿಯೇ ಪಳಗಿದವರು ರಾಮ್‌ ಚರಣ್‌. ಅಪ್ಪನನ್ನು ನೋಡುತ್ತಲೇ ನಟನೆಯ ಪಟ್ಟುಗಳನ್ನು ಕರಗತ ಮಾಡಿಕೊಂಡ ಅವರು ಈಗ ಟಾಲಿವುಡ್‌ನ ಬಹುಬೇಡಿಕೆಯ ನಟ. ಕಳೆದ ವರ್ಷ ತೆರೆಕಂಡ ಅವರು ನಾಯಕನಾಗಿದ್ದ ಪಿರಿಯಾಡಿಕ್‌ ಆ್ಯಕ್ಷನ್ ಚಿತ್ರ ‘ರಂಗಸ್ಥಳಂ’ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿತ್ತು. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದುಸುಕುಮಾರ್.

ಭಾಗಶಃ ಶ್ರವಣದೋಷವುಳ್ಳ ವ್ಯಕ್ತಿಯ ಪಾತ್ರದಲ್ಲಿನ ಅವರ ಮನೋಜ್ಞ ನಟನೆ ಸಿನಿಪ್ರಿಯರ ಮನ ಗೆದ್ದಿತ್ತು. ಅವರಿಗೆ ತಕ್ಕ ಸಾಥ್ ನೀಡಿದ್ದು ನಟಿ ಸಮಂತಾ ಅಕ್ಕಿನೇನಿ. ಪರದೆ ಮೇಲೆ ತೆರೆದುಕೊಳ್ಳುವ ಚಿಟ್ಟಿಬಾಬು ಮತ್ತು ರಂಗಲಕ್ಷ್ಮಿಯ ಬದುಕಿನ ತಲ್ಲಣ ಸಹೃದಯರ ಮನಸ್ಸನ್ನು ಕಲಕಿತ್ತು. ಮತ್ತೊಂದೆಡೆ ಗ್ರಾಮೀಣ ಜಗತ್ತಿನ ನೆಮ್ಮದಿ ಕದಡುತ್ತಿರುವ ಪಟ್ಟಭದ್ರರಿಂದ ಅನುಭವಿಸಬೇಕಾದ ಎಣೆಯಿಲ್ಲದ ಸಂಕಟಗಳ ಕಥೆಯನ್ನು ಸಿನಿಮಾ ತೆರೆದಿಟ್ಟಿತ್ತು. ಸ್ಥಳೀಯ ಸರ್ಕಾರಗಳ ಮಟ್ಟದಲ್ಲಿನ ಅಧಿಕಾರ ದುರುಪಯೋಗದ ಕೆಡುಕನ್ನು ನಿರ್ದೇಶಕರು ಬಿಡಿಸಿಟ್ಟ ಬಗೆಗೆ ಮೆಚ್ಚುಗೆವ್ಯಕ್ತವಾಗಿತ್ತು.

ಮತ್ತೊಂಡೆದೆ ರಾಮ್‌ ಚರಣ್‌ ಅವರು ಚಿರಂಜೀವಿ ಅವರ 150ನೇ ಚಿತ್ರ ‘ಕೈದಿ ನಂ. 150’ಕ್ಕೆ ಆರ್ಥಿಕ ಇಂಧನ ಒದಗಿಸುವ ಮೂಲಕ ನಿರ್ಮಾಪಕರೂ ಆದರು. ಬಯೋಪಿಕ್‌ ಸಿನಿಮಾದಲ್ಲಿ ನಟಿಸುವುದು ಚಿರಂಜೀವಿ ಅವರ ಜೀವನದ ಕಸನಾಗಿತ್ತಂತೆ. ಕ್ರಾಂತಿಕಾರಿ ಭಗತ್‌ ಸಿಂಗ್ ಅವರ ಬಯೋಪಿಕ್‌ನಲ್ಲಿ ನಟಿಸುವ ಬಗ್ಗೆಯೂ ಅವರು ಆಲೋಚಿಸಿದ್ದರಂತೆ. ಈ ನಿಟ್ಟಿನಲ್ಲಿಯೂ ಚಿತ್ರಕಥೆ ಹೆಣೆಯುವ ಕೆಲಸ ಶುರುವಾಗಿತ್ತಂತೆ. ಆದರೆ, ಆ ‍ಪಯಣ ಅರ್ಧಕ್ಕೆ ಮೊಟಕುಗೊಂಡಿತಂತೆ.

ಕೊನೆಗೆ, ಚಿರಂಜೀವಿ ಅವರ ವೃತ್ತಿಬದುಕಿನ ಕನಸನ್ನು ಈಡೇರಿಸಿದ್ದು ‘ಸೈರಾ ನರಸಿಂಹ ರೆಡ್ಡಿ. ಇದು ಅವರ 151ನೇ ಚಿತ್ರ. ಇದಕ್ಕೆ ಬಂಡವಾಳ ಹೂಡಿದ್ದು, ರಾಮ್‌ ಚರಣ್‌. ಕಳೆದ ಅಕ್ಟೋಬರ್‌ 2ರಂದು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ತೆರೆಕಂಡ ಈ ಚಿತ್ರ ಈಗಲೂ ‍ಪ್ರದರ್ಶನ ಕಾಣುತ್ತಿದೆ.

ಆದರೆ, ತೆಲುಗು ಅವತರಣಿಕೆಗೆ ಹೋಲಿಸಿದರೆ ಈ ಚಿತ್ರದ ಹಿಂದಿ ಅವತರಣಿಕೆಯು ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಲಾಭಗಳಿಸುವಲ್ಲಿ ಹಿಂದೆ ಬಿದ್ದಿದೆ ಎಂಬ ಸುದ್ದಿ ಹೊರಬಿದ್ದಿದೆ. ಇತ್ತೀಚೆಗೆ ಮಾಧ್ಯಮದ ಪ್ರತಿನಿಧಿಗಳ ಜೊತೆಗೆ ನಡೆದ ಸಂವಾದವೊಂದರಲ್ಲಿ ರಾಮ್‌ ಚರಣ್‌ ಅವರೇ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸೈರಾದ ತೆಲುಗು ಅವತರಣಿಕೆಯು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದೆಯಂತೆ. ಆದರೆ, ಹಿಂದಿ ಅವತರಣಿಕೆಯು ಅವರ ನಿರೀಕ್ಷೆ ಈಡೇರಿಸಿಲ್ಲ. ಇದಕ್ಕೆ ನೈಜ ಕಾರಣವನ್ನೂ ಅವರೇ ತೆರೆದಿಟ್ದಿದ್ದಾರೆ.

‘ಸೈರಾ ಚಿತ್ರ ಬಿಡುಗಡೆಗೊಂಡ ವೇಳೆಯ ೃತಿಕ್‌ ರೋಷನ್‌ ಮತ್ತು ಟೈಗರ್‌ ಶ್ರಾಫ್‌ ಮುಖ್ಯಭೂಮಿಕೆಯಲ್ಲಿದ್ದ ಹಿಂದಿಯ ‘ವಾರ್‌’ ಸಿನಿಮಾ ತೆರೆ ಕಂಡಿತು. ಇದರಿಂದ ಸೈರಾದ ಗಳಿಕೆಗೆ ದೊಡ್ಡ ಪೆಟ್ಟು ಬಿದ್ದಿತು. ಹಿಂದಿಯಲ್ಲಿಯೂ ಈ ಚಿತ್ರದ ತಾಂತ್ರಿಕ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿದ್ದೇವು. ಆದರೆ, ಸೈರಾಕ್ಕಿಂತಲೂ ದೊಡ್ಡ ಚಿತ್ರ ಎನ್ನುವುದನ್ನು ‘ವಾರ್‌’ ಚಿತ್ರ ಸಾಬೀತುಪಡಿಸಿದೆ’ ಎಂದು ರಾಮ್‌ ಚರಣ್‌ ಹೇಳಿದ್ದಾರೆ.

ಚಿರಂಜೀವಿ ಅವರು ‘ಸೈರಾ’ದಲ್ಲಿ ಸ್ವಾತಂತ್ರ್ಯ ಸೇನಾನಿ ಉಯ್ಯಾಲವಾಡ ನರಸಿಂಹರೆಡ್ಡಿ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್‌ ಬಚ್ಚನ್‌, ಸುದೀಪ್‌, ನಯನತಾರಾ, ತಮನ್ನಾ ಭಾಟಿಯಾ, ಸೇತುಪತಿ ನಟಿಸಿರುವ ಈ ಚಿತ್ರ ನಿರ್ದೇಶಿಸಿದ್ದು ಸುರೇಂದರ್‌ ರೆಡ್ಡಿ. ಕೊನಿಡೇಲಾ ಪ್ರೊಡಕ್ಷನ್‌ನಡಿ ನಿರ್ಮಾಣಗೊಂಡಿದ್ದ ಈ ಚಿತ್ರಕ್ಕೆ ಅಮಿತ್‌ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ‘ಸೈರಾ’ ಸಿನಿಮಾ ಅಂದಾಜು ₹ 275 ಕೋಟಿ ಗಳಿಸಿದರೆ; ‘ವಾರ್‌’ ₹ 300 ಕೋಟಿ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT