‘ಮಹಾನಟಿ’ ಜತೆಗೊಂದಿಗಿಷ್ಟು ಮಾತು

7

‘ಮಹಾನಟಿ’ ಜತೆಗೊಂದಿಗಿಷ್ಟು ಮಾತು

Published:
Updated:
Deccan Herald

ಅದು ಬೆಳಗಿನ 11ರ ಸಮಯ… ಜಯನಗರದ ರಸ್ತೆಯೊಂದರಲ್ಲಿ ಜನ ಸಾಗರವೇ ತುಂಬಿತ್ತು. ಅಲ್ಲಿ ನೆರೆದಿದ್ದವರ ಕಣ್ಣಲ್ಲಿ ಯಾರನ್ನೋ ಕಾಣುವ ತವಕ ಎದ್ದು ಕಾಣುತ್ತಿತ್ತು. ಆ ಕಾತುರಕ್ಕೆ ಕಾರಣ ಮಹಾನಟಿ ಖ್ಯಾತಿಯ ‘ಕೀರ್ತಿ ಸುರೇಶ್’.

ತವಕದಿಂದ ಕಾಯುತ್ತಿದ್ದ ಅಭಿಮಾನಿಗಳನ್ನು ಬೇಸರ ಪಡಿಸದೇ ಸರಿಯಾದ ಸಮಯಕ್ಕೆ ಕಾರಿನಲ್ಲಿ ಬಂದಿಳಿದರು ಕೀರ್ತಿ. ಧರಿಸಿದ್ದ ಕ್ರೀಮ್ ಬಣ್ಣದ ಬಟ್ಟೆಯ ಮೇಲೆ ಅಲ್ಲಲ್ಲಿ ಕಸೂತಿ ಕೆಲಸವಿರುವ ಚೂಡಿದಾರ್‌ ಮಲ್ಲಿಗೆ ತೂಕವಿರುವ ಆಕೆಯ ದೇಹಕ್ಕೆ ಭಾರವೆನ್ನಿಸುವಂತಿತ್ತು. ಮುಖಕ್ಕೆ ಕ್ರೀಮ್, ತುಟಿಗೆ ಕೆಂಪು ರಂಗಿನ ಲಿಪ್‌ಸ್ಟಿಕ್‌, ಕಿವಿಯೋಲೆ ಧರಿಸಿದ್ದ ಅವರು ತುಂಬಾ ಸರಳವಾಗಿ ಸಿಂಗರಿಸಿಕೊಂಡಿದ್ದರು. ನೀಳ ಕೂದಲನ್ನು ಹಾಗೆ ಇಳಿಬಿಟ್ಟು ಬಂದ ಸಹಜ ಸುಂದರಿ ಕಾರಿನಿಂದ ಕಾಲು ನೆಲಕ್ಕಿಡುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಒಂದಷ್ಟು ಜನ ಮಹಾನಟಿಯೊಂದಿಗೆ ಸೆಲ್ಪೀ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಅಭಿಮಾನಿಗಳೊಂದಿಗೆ ನಗು ಮೊಗದಿಂದಲೇ ಮಾತನಾಡಿದ ಕೀರ್ತಿ ನಂತರ ಗುಲ್‌ಮೊಹರ್‌ ನೊಂದಿಗೆ ಕೆಲ ಕಾಲ ಮಾತನಾಡಿದರು.

‘ನಾನು ಒಂದು ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಬಂದಿದ್ದು ಇದೇ ಮೊದಲು. ನನಗೆ ಬೆಂಗಳೂರಿನಲ್ಲಿ ಇಷ್ಟೊಂದು ಮಂದಿ ಅಭಿಮಾನಿಗಳಿರು ವುದನ್ನು ನೋಡಿ ತುಂಬಾನೇ ಖುಷಿ ಆಯ್ತು. ಇಲ್ಲಿನ ಜನ ನನ್ನ ಮೇಲೆ ತೋರುತ್ತಿರುವ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ನನಗೆ ಬೆಂಗಳೂರಿನಲ್ಲಿ ತುಂಬಾ ಮಂದಿ ಸ್ನೇಹಿತರಿದ್ದಾರೆ. ಬೆಂಗಳೂರಿನಲ್ಲಿ ಬಂದು ಇದ್ದಿದ್ದು ಕಡಿಮೆಯಾದರೂ, ಇಲ್ಲಿನ ಬಗ್ಗೆ ಸ್ನೇಹಿತರಿಂದ ಕೇಳಿ ತಿಳಿದುಕೊಂಡಿದ್ದೇನೆ’ ಎಂದು ಬೆಂಗಳೂರಿನ ಬಗ್ಗೆ ಅಭಿಮಾನದಿಂದ ನುಡಿದರು.

ಕನ್ನಡ ಚಿತ್ರಗಳಲ್ಲಿ ನಟಿಸುವ ಇರಾದೆಯಿದೆಯೇ ಎಂಬ ಪ್ರಶ್ನೆಗೆ ‘ನನಗೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ನನ್ನ ಅಮ್ಮ ರಾಜ್‌ಕುಮಾರ್ ಅವರ ‘ಸಮಯದ ಗೊಂಬೆ’ ಚಿತ್ರದಲ್ಲಿ ನಟಿಸಿದ್ದರು. ನನಗೆ ಅವಕಾಶ ಸಿಕ್ಕಾಗ ಖಂಡಿತವಾಗಿಯೂ ನಟಿಸುತ್ತೇನೆ’ ಎಂದು ಭರವಸೆ ವ್ಯಕ್ತಪಡಿಸಿದರು. 

ಮಹಾನಟಿ ಸಿನಿಮಾದ ಬಗ್ಗೆ ಹೇಳುತ್ತಾ ‘ಈ ಸಿನಿಮಾದ ಬಗ್ಗೆ ಕೆಲವೊಂದು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇದು ನನ್ನ ಸಿನಿ ಪಯಣದಲ್ಲೇ ಅತಿ ಉತ್ತಮವಾದ ಸಿನಿಮಾ. ಇದರಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ನಿಜಕ್ಕೂ ತುಂಬಾನೇ ಸಂತೋಷವಿದೆ. ಅದಕ್ಕಾಗಿ ನಾನು ಆ ಇಡೀ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಮಹಾನಟಿಗಿಂತ ಉತ್ತಮ ಪಾತ್ರ ಇನ್ನೊಂದು ಸಿಗುತ್ತದೆ ಎಂದು ಹೇಳುವುದು ಕಷ್ಟ. ಈ ಚಿತ್ರದಲ್ಲಿ ನಟಿಸಿದ ಮೇಲೆ ಕನಸಿನ ಪಾತ್ರ ಎಂಬುದನೆಲ್ಲಾ ಮರೆತಿದ್ದೇನೆ. ಅಂತಹ ಮಹತ್ತರವಾದ ಪಾತ್ರವಿದು’ ಎಂದು ಹೃದಯ ತುಂಬಿ ಹೇಳಿದರು.

‘ನನ್ನ ಸಿನಿ ಪಯಣ ಆರಂಭವಾಗಿದ್ದು ಆಕಸ್ಮಿಕವಾಗಿಯೇ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನಟಿಸಲು ಅವಕಾಶ ಒದಗಿ ಬಂತು. ನಮ್ಮ ತಂದೆ-ತಾಯಿ ಇಬ್ಬರಿಗೂ ನಾನು ನಟಿಯಾಗಬೇಕು ಎಂಬುದಿತ್ತು, ಹಾಗಾಗಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ಮಲಯಾಳಂ ಚಿತ್ರದ ಮೂಲಕ ನಾನು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದೆ’ ಎಂದು ಸಿನಿಮಾ ಜರ್ನಿಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !