ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾದರೆ ಹೇಳಬಾರದೇ?

Last Updated 8 ಅಕ್ಟೋಬರ್ 2018, 9:54 IST
ಅಕ್ಷರ ಗಾತ್ರ

ಹತ್ತು ವರ್ಷ ಏನು ಮಾಡ್ತಿದ್ರಂತೆ? ಎಲ್ಲಿದ್ರಂತೆ? ಈಗ ಇದ್ದಕ್ಕಿದ್ದಂತೆ ನೆನಪಾಗಿದ್ದು ಯಾಕೆ? ಹೇಳಬೇಕೆನಿಸಿದ್ದು ಯಾಕೆ? ಅದೂ ನಾನಾ ಹೌಸ್‌ಫುಲ್‌4 ಚಿತ್ರೀಕರಣದಲ್ಲಿದ್ದಾಗ...

ಅಯ್ಯೋ... ಯಾಕೀಗ ಹೇಳಬಾರದು? ಆಗ ಟ್ರೌಮ್ಯಾಟಿಕ್‌ ಸಿಚುವೇಶನ್‌ ಅದು. ಹೇಳಿದರೆ ಭವಿಷ್ಯಕ್ಕೆ ಏನಾಗುವುದೋ ಎಂಬ ಆತಂಕ ಕಾಡಿರಬಹುದು, ಅಸಹ್ಯವೆನಿಸಿರಬಹುದು. ಹೇಳಲು ಬಾಯಿ ಬಂದಿರಲಿಕ್ಕಿಲ್ಲ. ಇಷ್ಟಕ್ಕೂ ಇಷ್ಟು ವರ್ಷ ಸುಮ್ನಿದ್ದದ್ದೇ ಹೆಚ್ಚು, ಈಗಲಾದರೂ ಬಾಯ್ಬಿಟ್ಟಳಲ್ಲ.. ಯಾರಾದರೂ ಮೌನದ ಗಾಜು ಮುರಿಯಲೇಬೇಕು..

ಇದೇನಿದ್ದರೂ ಪ್ರಚಾರದ ಗಿಮಿಕ್ಕು. ಈಗ ಭಾರತಕ್ಕೆ ಮರಳಿದ್ದಾಳೆ. ಬಾಲಿವುಡ್‌ನಲ್ಲಿ ಅವಕಾಶಗಳು ಬೇಕು.. ಅದಕ್ಕಾಗಿ ಬೇರೆ ಯಾರೂ ಸಿಗಲಿಲ್ವೇನೋ..

ಹೀಗೆ ಹತ್ತು ಹಲವು ವಾದಗಳೀಗ ಬಾಲಿವುಡ್‌ನ ಪಡಸಾಲೆಯಲ್ಲಿ. ತನುಶ್ರೀ ದತ್ತಾ ಮಿಸ್‌ ಇಂಡಿಯಾ ಯುನಿವರ್ಸ್‌ ಆಗಿದ್ದ ಸುಂದರಿ. ನಂತರ ಒಂದಷ್ಟು ಚಿತ್ರಗಳಲ್ಲಿಯೂ ಮಿಂಚಿದಳು. ‘ಹಾರ್ನ್‌ ಓ.ಕೆ ಪ್ಲೀಸ್‌’ ಚಿತ್ರ ತಂಡದಲ್ಲಿದ್ದರು. ನಾನಾ ಪಾಟೇಕರ್‌ ಜೊತೆಗೆ. ನಂತರ ಆ ಚಿತ್ರ ತಂಡದಿಂದ ಹೊರಬಿದ್ದರು. ದೇಶ ಬಿಟ್ಟು ಹೊರಟರು. ತನುಶ್ರೀ ಪಾತ್ರವನ್ನು ರಾಖಿಸಾವಂತ್‌ ನಿಭಾಯಿಸಿದರು. ಬಾಲಿವುಡ್‌ನಲ್ಲಿ ಯಾರ ಪಾತ್ರಕ್ಕೆ ಯಾರು ಬಂದರು ಹೋದರು ದೊಡ್ಡ ವಿಷಯವಾಗುವುದು ಚಿತ್ರ ಹಿಟ್‌ ಆದ ನಂತರ. ಈ ಚಿತ್ರವೇನೂ ಹೇಳಿಕೊಳ್ಳುವಷ್ಟು ದುಡಿಯಲಿಲ್ಲ. ಹಾಗಾಗಿ ಆ ಬಗ್ಗೆಯೂ ಯಾವುದೇ ಸುದ್ದಿಯಾಗಲಿಲ್ಲ.

ಈಗ ಇದ್ದಕ್ಕಿದ್ದಂತೆ ನಾನಾ ಪಾಟೇಕರ್‌ ಲೈಂಗಿಕ ಕಿರುಕುಳ ಕೊಟ್ಟರು. ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇಡೀ ತಂಡದಲ್ಲಿ ಯಾರೊಬ್ಬರೂ ನನ್ನನ್ನು ಬೆಂಬಲಿಸಲಿಲ್ಲ. ಹಾಗಾಗಿ ಆಚೆ ಹೋದೆ ಅಂತ ತನುಶ್ರೀ ದತ್ತ ಬಾಯ್ಬಿಟ್ಟಿದ್ದೇ ಬಾಲಿವುಡ್‌ನಲ್ಲಿ ವಿವಿಧ ಬಗೆಯ ಮಾತುಗಳು ಕೇಳಲಾರಂಭಿಸಿವೆ.

ಪ್ರಿಯಾಂಕಾ ಚೋಪ್ರಾ, ಫರ್ಹಾನ್‌ ಅಖ್ತರ್‌, ಸೋನಂ ಕಪೂರ್‌, ರಿಚಾ ಚಡ್ಡಾ, ಅನುರಾಗ್‌ ಕಶ್ಯಪ್‌ ಇವರೆಲ್ಲ ಇದೀಗ ತನುಶ್ರೀ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಇಲ್ಲೊಂದು ಸೂಕ್ಷ್ಮವಿದೆ. ಅವರು ತನುಶ್ರೀ ಧೈರ್ಯದಿಂದ ಹೇಳುತ್ತಿರುವುದನ್ನು ಬೆಂಬಲಿಸುತ್ತಿದ್ದಾರೆ. ಲೈಂಗಿಕ ಕಿರುಕುಳ ಆಗಿದೆಯೋ ಇಲ್ಲವೋ ಆ ಬಗ್ಗೆ ತೀರ್ಮಾನಕ್ಕೆ ಬರುವುದಿಲ್ಲ. ಆದರೆ ಇಂಥದ್ದೊಂದು ಧ್ವನಿ ಎತ್ತಿರುವ ತನುಶ್ರೀಯನ್ನು ಬೆಂಬಲಿಸಬೇಕು ಎಂಬುದರ ಬಗ್ಗೆ ಅವರಲ್ಲಿ ಒಮ್ಮತವಿದೆ.

ರೇಣುಕಾ ಶಾಹನೆ ದಿಟ್ಟತನದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನಾನಾ ಕೃಷಿಕರಿಗೆ ಸಹಾಯ ಮಾಡುವ ಬಗ್ಗೆ ಗೊತ್ತಿತ್ತು. ಸ್ಲಂ ಮಕ್ಕಳಿಗೆ ಸಹಾಯ ಮಾಡಿರುವುದೂ ಗೊತ್ತಿತ್ತು. ನಾನಾ ಅವರ ಈ ಮುಖ ಗೊತ್ತಿರಲಿಲ್ಲ. ಯಾರು ಹೇಗೆ ಅಂತ ಯಾರಿಂದಲಾದರೂ ತಿಳಿಯಲೇಬೇಕು’ ಎಂದಿದ್ದಾರೆ.

ಅಮಿತಾಭ್‌ ಮಾತ್ರ ‘ಈ ಬಗ್ಗೆ ಮಾತನಾಡಲು ನಾನು ತನುಶ್ರೀ ದತ್ತಾನೂ ಅಲ್ಲ, ನಾನಾ ಪಾಟೇಕರ್‌ ಸಹ ಅಲ್ಲ. ಘಟನೆಯ ಬಗ್ಗೆ ನಾನು ಯಾವ ಅಭಿಪ್ರಾಯವನ್ನೂ ಹೇಳಲಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಉಳಿದವರೆಲ್ಲ ತುಟಿ ಬಿಗಿಹಿಡಿದ ಹೊತ್ತಿನಲ್ಲಿ ಕೇಂದ್ರ ಸಚಿವೆ ಮನೇಕಾ ಗಾಂಧಿ, ಭಾರತದಲ್ಲಿಯೂ ಮೀ ಟೂ ಚಳವಳಿ ಆರಂಭವಾಗಲಿ. ಕಿರುಕುಳಕ್ಕೆ ಒಳಗಾದವರು ಕೂಡಲೇ ದೂರು ಕೊಡಬೇಕು ಎಂದು ನಿರೀಕ್ಷಿಸುವುದೇ ತಪ್ಪು. ದೈಹಿಕ ಹಾಗೂ ಮಾನಸಿಕ ಆತಂಕ, ಆಘಾತಕ್ಕೆ ಹೆಣ್ಮ್ಮಕ್ಕಳು ಒಳಗಾಗಿರುತ್ತಾರೆ. ಅದನ್ಹೇಗೆ ಅವರು ಆಗಲೇ ಬಾಯ್ಬಿಡಲಿ ಎಂದು ನಿರೀಕ್ಷಿಸುವಿರಿ? ಯಾವಾಗ ಮಾತಾಡಬೇಕೆಂದರೂ ಅದಕ್ಕೆ ಸಾಕಷ್ಟು ಆತ್ಮಸ್ಥೈರ್ಯಬೇಕು. ಆ ದಿಟ್ಟತನವನ್ನು ಗೌರವಿಸೋಣ. ಕೂಡಲೇ ಯಾರನ್ನೂ ಅಪರಾಧಿ ಸ್ಥಾನಕ್ಕೆ ನಿಲ್ಲಿಸುವ ಅಗತ್ಯವಿಲ್ಲ, ಆದರೆ ಹೆಣ್ಣುಮಕ್ಕಳ ಅಹವಾಲಂತೂ ಕೇಳಿಸಕೊಳ್ಳಲೇಬೇಕು. ಈ ಧ್ವನಿ ಗಟ್ಟಿಯಾದಷ್ಟೂ ಕಿರುಕುಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಫ್ರೀದಾ ಪಿಂಟೊ ತನುಶ್ರೀ ಬೆನ್ತಟ್ಟಿ, ಕಿರುಕುಳಗಳ ವಿರುದ್ಧದ ಗಟ್ಟಿ ಧ್ವನಿಯಾಗು ಎಂದು ಹೇಳಿದ್ದಾರೆ. ಸದ್ಯ ಚಡ್ಡಾ ಅವರ ಮಾತು ಈ ಇಡೀ ಸನ್ನಿವೇಶಕ್ಕೆ ಕೈಗನ್ನಡಿಯಂತಿದೆ. ಕಿರುಕುಳಗಳ ಸತ್ಯಾಸತ್ಯತೆಯ ಬಗ್ಗೆ ಕೂಡಲೇ ತೆಹಕೀಕಾತ್‌ ತನಿಖೆ ಆಗಬೇಕು. ಇದು ಬರೀ ಹೆಣ್ಮಕ್ಕಳ ವಿಷಯವಲ್ಲ. ಗಂಡುಮಕ್ಕಳ ಜೀವನದ ಮೇಲೂ ಅನೇಕ ಪರಿಣಾಮಗಳಾಗುತ್ತವೆ. ಕೂಡಲೇ ತನಿಖೆ ಕೈಗೊಂಡು ಒಂದು ಅಂತಿಮ ತೀರ್ಮಾನಕ್ಕೆ ಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು’

ಕೇವಲ ಹೆಣ್ಣುಮಕ್ಕಳೆಂಬ ರಿಯಾಯ್ತಿಯನ್ನು ಅನುಭವಿಸುವವರಿಗೂ ಇದು ಬಿಸಿ ತಟ್ಟಿಸಬೇಕು. ಏನು ಮಾಡಿದರೂ ನಡೆಯುತ್ತದೆ ಎಂಬ ಪುರುಷ ಅಹಂಕಾರವನ್ನೂ ದಂಡಿಸಬೇಕು. ಇಡೀ ಸಮಾಜ ಈ ಬಗ್ಗೆ ಎಚ್ಚರಿಕೆಯಿಂದ ಮಾತಾಡುವಂತಾಗಬೇಕು.

ಇದು ಹೌದಲ್ಲವೇ?

ಮಿಟೂ #metooಚಳವಳಿ
ಕಳೆದ ಅಕ್ಟೋಬರ್‌ 5ರಂದು ಹಾಲಿವುಡ್‌ ನಿರ್ದೇಶಕರ ವಿರುದ್ಧ ಅಲಿಯಾಸ್‌ ಮಿಲಾನೋ ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್‌ ಟ್ಯಾಗ್‌ #ಬಳಸಿ ಈ ಅಭಿಯಾನವನ್ನು ಆರಂಭಿಸಿದ್ದರು. ಅವರಿಗೆ ಹಾಲಿವುಡ್‌ನ ಹಿರಿಯ ನಟಿಯರೆಲ್ಲರೂ ಬೆಂಬಲಿಸಿದ್ದರು. ಇದಕ್ಕೂ ಮುನ್ನವೇ ಈ ನುಡಿಗಟ್ಟನ್ನು 2006ರಲ್ಲಿ ಮೊದಲ ಬಾರಿಗೆ ಬಳಸಲಾಗಿತ್ತು. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹತ್ತು ಹಲವು ಕತೆಗಳು ಹರಿದಾಡಿದವು. ಈ ವರ್ಷ ಅಕ್ಟೋಬರ್‌ 5ರಂದೇ ತನುಶ್ರೀ ದತ್ತಾ ಸಹ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇದು ಕಾಕತಾಳೀಯವೇ.. ಅಥವಾ ಬಾಲಿವುಡ್‌ನಲ್ಲಿಯೂ ಇಂಥದ್ದೊಂದು ಚಳವಳಿ ಆರಂಭವಾಗಲಿ ಎಂದೇ ಈ ದಿನದವರೆಗೂ ಕಾಯ್ದಿದ್ದರೆ?

*
ಲೈಂಗಿಕ ಕಿರುಕುಳದ ಬಗೆಗಿರುವ ಮೌನದ ಗಾಜು ಒಡೆಯಲೇಬೇಕಿದೆ.
–ಮನೇಕಾ ಗಾಂಧಿ

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT