ಶುಕ್ರವಾರ, ನವೆಂಬರ್ 22, 2019
22 °C

ಕನ್ನಡದಲ್ಲಿ ಮಾತನಾಡಿದ ಆ್ಯಕ್ಷನ್‌ ಪ್ರಿಯರ ‘ಐಕಾನ್‌’ ಅರ್ನಾಲ್ಡ್‌!

Published:
Updated:
Prajavani

ಅರ್ನಾಲ್ಡ್‌ ಶ್ವಾಜ್‌ನೇಗರ್‌ ಹೆಸರು ಯಾರಿಗೆ ಗೊತ್ತಿಲ್ಲ? ಹಾಲಿವುಡ್‌ ಆ್ಯಕ್ಷನ್‌ ಚಿತ್ರಗಳ ಪ್ರೇಕ್ಷಕರಿಗೆ ಮತ್ತು ಅದರಲ್ಲೂ ದೇಹದಾರ್ಢ್ಯ ಪ್ರಿಯರಿಗೆ ಈತ ಒಂದು ರೀತಿಯಲ್ಲಿ ಆರಾಧ್ಯ ದೈವ ಇದ್ದಂತೆ ಎಂದರೂ ಅತಿಶಯವಲ್ಲ. ಅಷ್ಟರ ಮಟ್ಟಿಗೆ ಅರ್ನಾಲ್ಡ್‌ ಪ್ರಭಾವ ಹಾಲಿವುಡ್‌ ಚಿತ್ರರಸಿಕರ ಮನಸನ್ನು ಆವರಿಸಿಕೊಂಡಿದೆ. 

ನಟ, ಬಾಡಿ ಬಿಲ್ಡರ್‌, ರಾಜಕಾರಣಿ, ಉದ್ಯಮಿ.... ಹೀಗೆ ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಜನಪ್ರಿಯಗೊಂಡ ಅರ್ನಾಲ್ಡ್‌ಗೆ ಈಗ 72ರ ಹರೆಯ. ಅರ್ನಾಲ್ಡ್‌ ವಿಷಯ ಈಗೇಕೆ ಎನ್ನುವ ಪ್ರಶ್ನೆಯೇ? ಹಾಲಿವುಡ್‌ನಲ್ಲಿ ಮೂರೂವರೆ ದಶಕಗಳಿಂದ ಅಕ್ಷರಶಃ ಮಿಂಚು ಹರಿಸುತ್ತಿರುವ ಈ ನಟ ಈಗ ಕನ್ನಡಕ್ಕೂ ಬರುತ್ತಿದ್ದಾರೆ! ಹೇಗೆ ಅಂತೀರಾ? ಅರ್ನಾಲ್ಡ್‌ ನಟನೆಯ ‘ಟರ್ಮಿನೇಟರ್‌– ಡಾರ್ಕ್‌‍ ಫೇಟ್‌’ ಚಿತ್ರ ಕನ್ನಡಕ್ಕೂ ಡಬ್‌ ಆಗಿದ್ದು, ನವೆಂಬರ್‌ 1ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಅಷ್ಟೇ ಅಲ್ಲ, ಈ ಇಂಗ್ಲಿಷ್‌ ಸಿನಿಮಾ ಅಂದು ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. 

2017ರಲ್ಲಿ ಬಿಡುಗಡೆಯಾದ ಇಲಿಯಟ್‌ ಲೆಸ್ಟರ್‌ ನಿರ್ದೇಶನದ ‘ಆಫ್ಟರ್‌ಮಾಥ್‌’ ಸಿನಿಮಾದಲ್ಲಿ ನಟಿಸಿದ್ದ ಆರ್ನಾಲ್ಡ್‌ ಮತ್ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಎರಡು ವರ್ಷಗಳ ನಂತರ ಅವರು ಮತ್ತೆ ತೆರೆಯ ಮೇಲೆ ಮಿಂಚು ಹರಿಸಲಿದ್ದಾರೆ. ಈ ಚಿತ್ರ ಜಗತ್ತಿನಾದ್ಯಂತ ಆ್ಯಕ್ಷನ್‌ ಚಿತ್ರರಸಿಕರನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. 

 

ಕನ್ನಡದ ಅವತರಣಿಕೆಯಲ್ಲಿರುವ ‘ಟರ್ಮಿನೇಟರ್‌– ಡಾರ್ಕ್‌‍ ಫೇಟ್‌’ ಚಿತ್ರದ ಟ್ರೇಲರ್‌ ಅನ್ನು ನಟ ಸುದೀಪ್‌ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿ, ನೆಚ್ಚಿನ ನಟನ ಅಭಿಯನವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಟ್ರೈಲರನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಟರ್ಮಿನೇಟರ್ ಎಂದಾಕ್ಷಣ ನಮಗೆ ನಮ್ಮ ಬಾಲ್ಯ ನೆನಪಾಗುತ್ತದೆ. ಅರ್ನಾಲ್ಡ್ ದೊಡ್ಡ ಆ್ಯಕ್ಷನ್ ಹೀರೊಗಳಲ್ಲಿ ಒಬ್ಬರು. ನಾನು ಅವರ ಅಭಿಮಾನಿ ಕೂಡ. ಫಾಕ್ಸ್ ಸ್ಟೂಡಿಯೋಸ್‍ಗಾಗಿ ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ್ದೇನೆ. ಈಗ ಇದೇ ಫ್ರ್ಯಾಂಚೈಸ್‌ನಿಂದ ಇನ್ನೊಂದು ಪಾರ್ಟ್ ಬರುತ್ತಿದೆ. ಟ್ರೈಲರ್ ನೋಡಿ ನನಗೆ ಸಂತೋಷವಾಗಿದೆ’ ಎಂದು ಕಿಚ್ಚ ವಿಡಿಯೊವೊಂದರಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

‘ನನ್ನ ಹೆಸರು ಸಾರಾ ಕ್ಯಾನರ್‌, ನಾನು ಟರ್ಮಿನೇಟರ್‌ ಬೇಟೆಯಾಡಲು ಬಂದಿದ್ದೇನೆ’ ಎಂದು ಹಾಲಿವುಡ್‌ ನಟಿ ಲಿಂಡಾ ಹ್ಯಾಮಿಲ್ಟನ್‌ ಕೈಯಲ್ಲಿ ಹಿಡಿದ ಮಷಿನ್‌ ಗನ್‌ನಿಂದ ಟರ್ಮಿನೇಟರ್‌ ಕಡೆಗೆ ಬೆಂಕಿಯುಗುಳುವ ಟ್ರೈಲರ್‌, ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ಇದು ಅಮೆರಿಕದ ವೈಜ್ಞಾನಿಕ–ಕಾಲ್ಪನಿಕ ಚಿತ್ರ. ಟರ್ಮಿನೇಟರ್‌ ಸರಣಿಯ ಮುಂದುವರಿದ ಭಾಗ ಎನ್ನಬಹುದು. ‘ಡೆಡ್‌ಪೂಲ್’ ಹಾಸ್ಯಪ್ರಧಾನ ಚಿತ್ರವನ್ನು ನಿರ್ದೇಶಿಸಿದ್ದ ಅಮೆರಿಕದ ನಿರ್ದೇಶಕ ಟಿಮ್‌ ಮಿಲ್ಲರ್‌ ‘ಟರ್ಮಿನೇಟರ್‌– ಡಾರ್ಕ್‌‍ ಫೇಟ್‌’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಛಾಯಾಗ್ರಹಣ ಕೆನ್‌ ಶೆಂಗ್‌ ಅವರದ್ದು.

ಆ್ಯಕ್ಷನ್‌ ಚಿತ್ರಗಳ ಐಕಾನ್‌

ಉಕ್ಕಿನಂತಹ ಮೈಕಟ್ಟಿಗೆ ಖ್ಯಾತಿ ಪಡೆದ‌ ಆಸ್ಟ್ರಿಯಾ ಸಂಜಾತ, ಅಮೆರಿಕದ ನಟ ಅರ್ನಾಲ್ಡ್‌ ಶ್ವಾಜ್‌ನೇಗರ್‌, ಅತ್ಯಂತ ಕಿರಿಯ ವಯಸ್ಸಿನಲ್ಲೇ ದೇಹದಾರ್ಢ್ಯದಲ್ಲಿ ಹಲವು ಪ್ರಶಸ್ತಿಗಳ ಕಿರೀಟಗಳನ್ನು ಮುಡಿಗೇರಿಸಿಕೊಂಡವರು. ಒಮ್ಮೆ ‘ಮಿಸ್ಟರ್‌ ಯೂನಿವರ್ಸ್‌’, ಇನ್ನೊಮ್ಮೆ ‘ಮಿಸ್ಟರ್‌ ಒಲಿಂಪಿಯಾ’ ಕಿರೀಟವನ್ನು ಧರಿಸಿದ್ದಾರೆ. ಬಾಡಿ ಬಿಲ್ಡರ್‌ಗಳಿಗಷ್ಟೇ ಅಲ್ಲ, ಹಾಲಿವುಡ್‌ ಆ್ಯಕ್ಷನ್‌ ಚಿತ್ರಗಳಲ್ಲೂ ಈತ ಐಕಾನ್‌. 

1982ರಲ್ಲಿ ಕಾನನ್ ದಿ ಬಾರ್ಬೇರಿಯನ್ ಚಿತ್ರದಲ್ಲಿ ಮನೋಜ್ಞ ಅಭಿನಯ ಮತ್ತು ತನ್ನ ಉಕ್ಕಿನ ಮೈಕಟ್ಟಿನಿಂದ ಪ್ರೇಕ್ಷಕರ ಮನಸಿನಲ್ಲಿ ಅಳಿಸಲಾಗದಂತಹ ಅಚ್ಚೊತ್ತಿದ ಈ ನಟ, ಮತ್ತೆ ತನ್ನ ವೃತ್ತಿ ಬದುಕಿನಲ್ಲಿ ಹಿಂತಿರುಗಿ ನೋಡಲಿಲ್ಲ.  

ದಿ ಟರ್ಮಿನೇಟರ್ (1984) ಸರಣಿಗಳು, ಕಮಾಂಡೋ (1985), ದಿ ರನ್ನಿಂಗ್ ಮ್ಯಾನ್ (1987), ಪ್ರಿಡೇಟರ್ (1987), ಟೋಟಲ್ ರಿಕಾಲ್ (1990) ಟ್ರೂ ಲೈಸ್ (1994) ಇಂತಹ ಯಶಸ್ವಿ ಚಿತ್ರಗಳು ಅರ್ನಾಲ್ಡ್‌ಗೆ ಹೆಸರು ತಂದುಕೊಟ್ಟವು. ಜಗತ್ತಿನಾದ್ಯಂತ ಅಭಿಮಾನಿಗಳು ಹುಟ್ಟಿಕೊಳ್ಳುವಂತೆ ಮಾಡಿದವು.

ಅರ್ನಾಲ್ಡ್‌ ಅಭಿನಯಿಸಿದ ಬಹುತೇಕ ಎಲ್ಲ ಚಿತ್ರಗಳೂ ಅವರನ್ನು ವರ್ಷದಿಂದ ವರ್ಷಕ್ಕೆ ಹಾಲಿವುಡ್‌ನಲ್ಲಿ ಕೀರ್ತಿಯ ಶಿಖರದತ್ತ ಕೊಂಡೊಯ್ದವು ಎಂದರೂ ತಪ್ಪಾಗಲಾರದು. ಕೀರ್ತಿಯ ಉತ್ತುಂಗದಲ್ಲಿರುವಾಗಲೇ ಅರ್ನಾಲ್ಡ್‌, ತಮ್ಮ ಕಾರ್ಯ ಕ್ಷೇತ್ರದ ಪರಿಧಿಯನ್ನು ವಿಸ್ತರಿಸಿಕೊಂಡರು. ಚಿತ್ರ ನಿರ್ಮಾಪಕ, ಲೇಖಕ, ಉದ್ಯಮಿ, ಹೂಡಿಕೆದಾರ, ಹೋರಾಟಗಾರ, ಲೋಕೋಪಕಾರಿಯಾಗಿಯೂ ಗುರುತಿಸಿಕೊಂಡರು. ಅಷ್ಟೇ ಅಲ್ಲದೆ, ಎರಡು ಬಾರಿ ಕ್ಯಾಲಿಫೋರ್ನಿಯಾದ ಗವರ್ನರ್‌ ಹುದ್ದೆಯನ್ನು ಅಲಂಕರಿಸಿದ್ದರು. ಇಂತಹ ಅರ್ನಾಲ್ಡ್‌ ಕೂಡ ವಿವಾದದಿಂದ ಹೊರತಾದವರಲ್ಲ, ವೈಯಕ್ತಿಕ ಬದುಕಿನಲ್ಲಿ ಎಡವಟ್ಟು ಮಾಡಿಕೊಂಡು ಸಾಂಸಾರಿಕ ನೆಮ್ಮದಿ ಕಳೆದುಕೊಂಡಾತ! 

ಪ್ರತಿಕ್ರಿಯಿಸಿ (+)