ನಟಿ ಮಾಲಾಶ್ರೀ ನಟನೆಯ ‘ನೈಟ್ ಕರ್ಫ್ಯೂ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶನದ ‘ಟೇಕ್ವಾಂಡೋ ಗರ್ಲ್’ ಸಿನಿಮಾ ಆಗಸ್ಟ್ 30ರಂದು ರಿಲೀಸ್ ಆಗಲಿದೆ.
ಸಿನಿಮಾದ ಟೀಸರ್ ಅನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಇತ್ತೀಚೆಗೆ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಋತುಸ್ಪರ್ಶ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಈ ಚಿತ್ರದಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತಹ ಸಮಯದಲ್ಲಿ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆಯ ಮುಖಾಂತರ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದೇ ಈ ಚಿತ್ರದ ಮುಖ್ಯ ಸಾರಾಂಶ. 5ನೇ ತರಗತಿಯಲ್ಲಿ ಓದುತ್ತಿರುವ ಋತುಸ್ಪರ್ಶ ಮೂರನೇ ವಯಸ್ಸಿನಿಂದ ಈ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು ನಾಲ್ಕು ಅಂತರರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದಾಳೆ’ ಎಂದರು ರವೀಂದ್ರ ವಂಶಿ.
ನಿರ್ಮಾಪಕಿ ಸುಮೀತಾ ಪ್ರವೀಣ್ ಮಾತನಾಡಿ, ‘ನನ್ನ ಮಗಳು ಋತುಸ್ಪರ್ಶ ಸಾಮರ್ಥ್ಯವನ್ನು ಗಮನಿಸಿ ಈ ಚಿತ್ರವನ್ನು ಮಾಡಿದ್ದೇನೆ. ಇಂತಹ ಕಲೆಗಳನ್ನು ಕಲಿಯುವ ಮುಖಾಂತರ ಹೆಣ್ಣುಮಕ್ಕಳು ಸ್ವಯಂರಕ್ಷಣೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಹೇಳಲು ಸಿನಿಮಾ ಮಾಡಿದ್ದೇವೆ. ವಿದ್ಯಾರ್ಥಿಗಳಿಗಾಗಿ ಟಿಕೆಟ್ ದರದಲ್ಲಿ ಶೇ 50 ರಿಯಾಯಿತಿ ನೀಡಿ ಚಿತ್ರ ವೀಕ್ಷಿಸಲು ಅನುಕೂಲ ಮಾಡುತ್ತೇವೆ’ ಎಂದರು