‘ಸೂಪರ್‌ ಡಿಲಕ್ಸ್’ನಲ್ಲಿ ಗೆದ್ದ ಕುಮಾರ ಲೆಕ್ಕ

ಶನಿವಾರ, ಏಪ್ರಿಲ್ 20, 2019
31 °C

‘ಸೂಪರ್‌ ಡಿಲಕ್ಸ್’ನಲ್ಲಿ ಗೆದ್ದ ಕುಮಾರ ಲೆಕ್ಕ

Published:
Updated:
Prajavani

ಚೆನ್ನೈನ ಪೊರೂರಿನಿಂದ ಸಂತೋಮ್ ಹೈಯರ್‌ ಸೆಕೆಂಡರಿ ಸ್ಕೂಲ್‌ಗೆ ನಿತ್ಯವೂ ಬಸ್‌ ಪ್ರಯಾಣ ಮಾಡುತ್ತಿದ್ದ ಹುಡುಗನಿದ್ದ. ಅವನು ಚಾಲಕನ ಸೀಟಿನ ಪಕ್ಕದಲ್ಲೇ ನಿಲ್ಲುತ್ತಿದ್ದ. ಅವರನ್ನು ಮಾತಿಗೆಳೆಯುತ್ತಿದ್ದ. ಅವರಿಗೂ ನಿತ್ಯ ಪ್ರಯಾಣಿಸುವ ಬಾಲಕನ ಜತೆಗೆ ಬಾಂಧವ್ಯ ಬೆಳೆಯಿತೆನ್ನಿ. ಹಾಗೆ ಹಗಲು ಕೇಳಿದ ಚಾಲಕನ ಕಥೆಗಳನ್ನು ರಾತ್ರಿ ಅಂಗಾತ ಮಲಗಿ, ಇಳಯರಾಜ ಸ್ವರ ಸಂಯೋಜನೆಯ ಹಿನ್ನೆಲೆ ಸಂಗೀತ ಬೆಸೆದು ಬಾಲಕ ಕಲ್ಪಿಸಿಕೊಳ್ಳುತ್ತಿದ್ದ. ಆ ಕಥೆಗಳನ್ನೆಲ್ಲ ಸಿನಿಮಾ ಮಾಡಿದರೆ ತೆರೆಮೇಲೆ ಹೇಗೆ ಕಾಣಬಹುದು ಎಂದು ಕನಸು ಕಾಣುತ್ತಿದ್ದ. 

ಸಿನಿಮಾ ಕನಸನ್ನು ಪದೇ ಪದೇ ಕಾಣುತ್ತಿದ್ದ ಹುಡುಗನಿಗೆ ಒಂದು ಸಮಸ್ಯೆ. ತನಗೆ ಇಷ್ಟವಾಗದ ಮೇಷ್ಟರು ಅಥವಾ ಮೇಡಂ ಹೇಳುವ ಪಾಠ ಅಪಥ್ಯ. ಗಣಿತದ ಮೇಷ್ಟರನ್ನು ಕಂಡರೆ ಸುತರಾಂ ಆಗುತ್ತಿರಲಿಲ್ಲ. ಹನ್ನೆರಡನೇ ಇಯತ್ತೆಯಲ್ಲಿ ಆ ವಿಷಯದಲ್ಲಿ ಫೇಲಾದ. 
ಶಾಲಾ ಕಲಿಕೆಯ ಗಣಿತದಲ್ಲಿ ಅಂಕ ಪಡೆಯಲಾಗದ ಆ ಹುಡುಗ ಈಗ ‘ಸೂಪರ್‌ ಡಿಲಕ್ಸ್’ ಎಂಬ ಚರ್ಚಿತ ತಮಿಳು ಸಿನಿಮಾದ ನಿರ್ದೇಶಕ. ಈಗ ನಡುವಯಸ್ಸಿನ ಕದ ತಟ್ಟುತ್ತಿರುವ ಆ ಹುಡುಗನ ಹೆಸರು ತ್ಯಾಗರಾಜನ್ ಕುಮಾರರಾಜ.

ಹನ್ನೆರಡನೇ ತರಗತಿಯಲ್ಲಿ ಫೇಲಾದ ಮೇಲೂ ಓದಿನ ವಿಷಯದಲ್ಲಿ ಪಾಠ ಕಲಿಯಲಿಲ್ಲ. ವಿಷುಯಲ್ ಕಮ್ಯುನಿಕೇಷನ್ಸ್‌ ಕಲಿಯಲೆಂದು ಲೊಯೋಲಾ ಕಾಲೇಜಿಗೆ ಸೇರಿದ ತ್ಯಾಗರಾಜನ್, ಸಿನಿಮಾ ಮಾಡಬೇಕೆಂಬ ಗುರಿ ಇಟ್ಟುಕೊಂಡೇ ಅಧ್ಯಯನವನ್ನೂ ಅರ್ಧಕ್ಕೇ ನಿಲ್ಲಿಸಿಬಿಟ್ಟರು. 1998ರಲ್ಲಿ ಫ್ರೀಲಾನ್ಸ್‌ ಬರಹಗಾರ ಹಾಗೂ ಫೋಟೊಗ್ರಾಫರ್‌ ಆದರು. ಜಾಹೀರಾತು ಚಿತ್ರಗಳನ್ನು ತಯಾರಿಸಿ ಕೈಪಳಗಿಸಿಕೊಂಡರು. ದಕ್ಷಿಣ ಭಾರತದ ದೇವಾಲಯಗಳನ್ನು ಕುರಿತ ಐದು ಭಾಗಗಳ ಸಾಕ್ಷ್ಯಚಿತ್ರವನ್ನು ಚಿತ್ರಿಸಿಕೊಂಡು ಬರುವಂತೆ ವಿಜಯ್‌ ಟಿ.ವಿ. ಕೆಲಸ ಹಚ್ಚಿತು. ‘60 ಸೆಕೆಂಡ್ಸ್‌ ಟು ಫೇಮ್ ಬೈ ಎಬಿಲಿಟಿ ಫೌಂಡೇಷನ್’ ಎಂಬ ಸ್ಪರ್ಧೆ ಇದೆಯೆಂದು 2005ರಲ್ಲಿ ತ್ಯಾಗರಾಜನ್‌ ಅವರಿಗೆ ಗೊತ್ತಾಯಿತು. ಒಂದು ಕೈ ನೋಡಿಯೇ ಬಿಡೋಣ ಎಂದು ‘ಬೆಕಿ’ ಎಂಬ ಒಂದು ನಿಮಿಷದ ಕಿರುಚಿತ್ರ ನಿರ್ಮಿಸಿದರು.

ಸ್ಪರ್ಧೆಯಲ್ಲಿ ಒಂದಿಷ್ಟು ಹಣ ಸಿಗುತ್ತದಲ್ಲ ಎಂಬ ಆಸೆಗೆ ಅದನ್ನು ತಯಾರಿಸಿದ್ದು. ಅದೃಷ್ಟವೆಂಬಂತೆ ಅವರ ಕಿರುಚಿತ್ರಕ್ಕೇ ಪ್ರಶಸ್ತಿ ಒಲಿಯಿತು. ಪುಷ್ಕರ್‌, ಗಾಯತ್ರಿ ಎಂಬ ಇನ್ನಿಬ್ಬರು ಸೃಜನಶೀಲರ ಪರಿಚಯ ಆಗಲೇ ಆದದ್ದು. 2007ರಲ್ಲಿ ‘ಒರಂ ಪೋ’ ತಮಿಳು ಸಿನಿಮಾಗೆ ಸಂಭಾಷಣೆ ಬರೆಯುವ ಅವಕಾಶವನ್ನು ಅವರಿಬ್ಬರೂ ತ್ಯಾಗರಾಜನ್‌ಗೆ ಕೊಟ್ಟರು. ‘ವಾ’ ಎಂಬ ಇನ್ನೊಂದು ಚಿತ್ರಕ್ಕೆ ಎಲ್ಲ ಹಾಡುಗಳನ್ನು ಕಟ್ಟುವ ಅವಕಾಶವೂ ಸಿಕ್ಕಿತು.

ನಟ, ಹಿನ್ನೆಲೆ ಗಾಯಕ, ನಿರ್ಮಾಪಕರೂ ಆದ ಎಸ್‌.ಪಿ.ಬಿ. ಚರಣ್ (ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಮಗ) ಈ ಯುವಪ್ರತಿಭೆಯನ್ನು ಮೆಚ್ಚಿ, ಸಿನಿಮಾ ನಿರ್ಮಿಸಲು ಒಪ್ಪಿಕೊಂಡರು. ‘ಅರಣ್ಯ ಕಾಂಡಂ’ ಎಂಬ ನಿಯೊ–ನಾಯ್ರ್ ಶೈಲಿಯ ಸಿನಿಮಾ ಚಿತ್ರಕಥೆ ಸಿದ್ಧಗೊಂಡು ಒಂದೂವರೆ ವರ್ಷವಾದ ಮೇಲೆ ಬೆಳಕು ಕಂಡಿತು. ಕೊಟ್ಟ ಮಾತಿನಂತೆ ಚರಣ್ ಅದಕ್ಕೆ ಐದು ಕೋಟಿ ರೂಪಾಯಿಗಿಂತ ಹೆಚ್ಚು ಹಣ ಹಾಕಿದರು.

ಚಿತ್ರೀಕರಣ ಮುಗಿದು, ಸಿನಿಮಾ ತೆರೆಕಾಣಲು ಇನ್ನೂ ಒಂದೂವರೆ ವರ್ಷ ಬೇಕಾಯಿತು. ತಮಿಳಿನ ಚೊಚ್ಚಿಲ ನಿರ್ದೇಶನದ ಶ್ರೇಷ್ಠ ಚಿತ್ರ ವಿಭಾಗದಲ್ಲಿ ಅದಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದ್ದು ವಿಶೇಷ. ಈಗಲೂ ತ್ಯಾಗರಾಜನ್ ಬರೆಯಲು ಕೂರುವ ಅನೇಕ ಸಂದರ್ಭಗಳಲ್ಲಿ ಬಸ್‌ ಚಾಲಕ ಹೇಳಿದ ಕೆಲವು ಕಥೆಗಳು ನೆನಪಾಗುತ್ತಾ ಇರುತ್ತವೆಯಂತೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !