ಮೊದಲ ಚಿತ್ರದಲ್ಲೇ ಮತ್ತೇರಿಸಿದ ಸಲೋನಿ

ಸೋಮವಾರ, ಮಾರ್ಚ್ 25, 2019
31 °C

ಮೊದಲ ಚಿತ್ರದಲ್ಲೇ ಮತ್ತೇರಿಸಿದ ಸಲೋನಿ

Published:
Updated:
Prajavani

ನ್ಯೂಜಿಲೆಂಡ್‌ನ ಅಕ್ಲೆಂಡ್‌ನಲ್ಲಿ ಬೆಳೆದ ಸುಂದರಿ ಸಲೋನಿ ಮಿಶ್ರಾ ಚಿತ್ರರಂಗಕ್ಕೆ ಕಾಲಿಡುತ್ತಲೇ ಮುತ್ತಿನ ಮಳೆಗರೆದು ಸುದ್ದಿಯಾದಾಕೆ. ‘ಫಾಲಕ್‌ನುಮಾ ದಾಸ್‌’ ಚಿತ್ರದ ಟ್ರೇಲರ್‌, ಸಲೋನಿಯ ಮುತ್ತಿನ ದೃಶ್ಯದಿಂದಾಗಿ ಸಖತ್‌ ಹಿಟ್‌ ಆಗಿತ್ತು.

ಮೇಕಿಂಗ್‌, ನರೇಶನ್ ಮತ್ತು ನಟನೆಯ ಕಾರಣಕ್ಕೆ ಸೂಪರ್‌ ಹಿಟ್‌ ಆಗಿದ್ದ ಮಲಯಾಳಂನ ‘ಅಂಗಾಮಲೈ ಡೈರೀಸ್‌’ನ ತೆಲುಗು ರೀಮೇಕ್‌ ‘ಫಾಲಕ್‌ನುಮಾ ದಾಸ್‌’. ತೆಲುಗಿನಲ್ಲಿಯೂ ಚಿತ್ರ ಗೆಲ್ಲುವುದಕ್ಕೆ ಬೇಕಾದ ಸರಕು ಮತ್ತು ಮಸಾಲೆಯನ್ನು ತುಂಬಲಾಗಿದೆ. ಯಾಕೆಂದರೆ ನಿರ್ದೇಶಕರು ಹೇಳುವಂತೆ, ಮಲಯಾಳಂ ಚಿತ್ರದ ಪಡಿಯಚ್ಚನ್ನು ತಮ್ಮ ಪ್ರೇಕ್ಷಕರಿಗೆ ನೀಡಲು ಅವರಿಗಿಷ್ಟವಿಲ್ಲವಂತೆ. ಹಾಗಾಗಿ, ಸಲೋನಿಯ ಮುತ್ತಿನ ದೃಶ್ಯವನ್ನೂ ಇನ್ನಷ್ಟು ಹಾಟ್‌ ಆಗಿಯೇ ಚಿತ್ರೀಕರಿಸಿರುವುದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿತ್ತು.

ಚಿತ್ರದ ನಾಯಕ ನಟ ವಿಶ್ವಕ್‌ ಸೇನ್‌ ಕೂಡಾ ಹಸಿಬಿಸಿಯಾಗಿ ನಟಿಸಿ ಪಂಜಾಬಿ ಚೆಲುವೆಯ ನಟನೆಗೆ ಸಾಥ್‌ ನೀಡಿದ್ದರು. 

ಸಲೋನಿ ಭಾರತಕ್ಕೆ ಬಂದಿದ್ದು ಕಾಲೇಜು ಸೇರುವ ಹೊತ್ತಿಗೆ. ಓದಿನ ಜೊತೆ ರೂಪದರ್ಶಿಯಾಗಿಯೂ ಬಣ್ಣದ ಲೋಕದಲ್ಲಿಯೂ ದುಡಿದರು. ಹೆಸರಾಂತ ಬ್ರ್ಯಾಂಡ್‌ಗಳಿಗೆ ರೂಪದರ್ಶಿಯಾಗಿ ಕೈತುಂಬಾ ಕಾಸು ಮಾಡಿಕೊಳ್ಳುವ ವೇಳೆಗೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಆಸೆ ಅವರಲ್ಲೂ ಮೊಳೆಯಿತು.

ವಾಸ್ತವವಾಗಿ, ಇಡೀ ಕುಟುಂಬ ನ್ಯೂಜಿಲೆಂಡ್‌ನಿಂದ ಭಾರತದ ವಿಮಾನ ಹತ್ತಿದ್ದೇ ಸಲೋನಿಯನ್ನು ನಟಿಯಾಗಿ ಕಾಣಬೇಕೆಂಬ ಆಕಾಂಕ್ಷೆಯಿಂದ. ಆಕೆಗೆ ಆರಂಭದಲ್ಲಿ ಇಷ್ಟವಿಲ್ಲದಿದ್ದರೂ ಬಣ್ಣದ ಲೋಕದ ಸೆಳೆತಕ್ಕೆ ಬಿದ್ದರು. ಬೆಲ್ಲಿ ನೃತ್ಯದಲ್ಲಿ ಪಳಗಿದ ಸಲೋನಿ, ಮೊದಲ ಚಿತ್ರದಲ್ಲೇ ತಮ್ಮ ಪ್ರತಿಭೆ ಮತ್ತು ಸೌಂದರ್ಯದ ಅನಾವರಣ ಮಾಡಿದ್ದಾರೆ. ಬಿಂದಾಸ್‌ ನಟನೆ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ಅವರದು. ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವುದು ಅವರಿಗಿಷ್ಟವಂತೆ. ಹಾಗಾಗಿ ಸದ್ಯ ಬಾಲಿವುಡ್‌ನತ್ತ ಅವರ ಚಿತ್ತ ಹರಿದಿಲ್ಲ. 

ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗ ಹಿಂದಿ ಸಿನಿಮಾಗಳನ್ನು ಅದ್ಭುತವಾಗಿ ರೀಮೇಕ್ ಮಾಡುತ್ತವೆ ಎಂದು ಹೇಳುವ ಸಲೋನಿಗೆ ಈ ಮೂರೂ ಭಾಷೆಗಳಲ್ಲಿ ಪಳಗಿದ ನಂತರ ಮುಂದಿನ ಯೋಚನೆ ಮಾಡುವ ಇರಾದೆ ಇದೆಯಂತೆ. ‘ಫಾಲಕ್‌ನಾಮ ದಾಸ್‌’ ಸೆಟ್‌ನಲ್ಲಿ ತೆಲುಗು ಪದಗಳನ್ನು ಅಷ್ಟಿಷ್ಟು ಕಲಿಯುತ್ತಿದ್ದಾರೆ ಈ ವಿದೇಶಿ ಬೆಡಗಿ. ಸ್ಥಳೀಯ ಭಾಷೆಗಳನ್ನು ಕಲಿತರೆ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಆ ಮೂಲಕ ನಟನೆಯನ್ನು ಸಲೀಸು ಮಾಡಿಕೊಳ್ಳುವುದು ಸಲೋನಿ ಐಡಿಯಾ!

ತರುಣ್‌ ಭಾಸ್ಕರ್‌ ನಿರ್ದೇಶನದ ‘ಫಾಲಕ್‌ನುಮಾ ದಾಸ್‌’ನಲ್ಲಿ ಸಲೋನಿ ಜೊತೆ ಹರ್ಷಿತ್ ಗೌರ್‌ ಮತ್ತು ಪ್ರಶಾಂತಿ ಎಂಬ ನಟಿಯರೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !