ಬುಧವಾರ, ಜನವರಿ 22, 2020
28 °C

‘ತಾಳ್ಮೆ, ಶಕ್ತಿ, ಅಹಂ’ನ ತ್ರಿಕೋನ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಿಂದೆ ಎರಡೇ ಪಾತ್ರಗಳನ್ನು ಇಟ್ಟುಕೊಂಡು, ‘143’ ಎನ್ನುವ ಕಮರ್ಷಿಯಲ್ ಸಿನಿಮಾ ಮಾಡಿದ್ದರು ನಿರ್ದೇಶಕ ಚಂದ್ರಕಾಂತ್. ಇದಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಈಗ ಅದೇ ಚಂದ್ರಕಾಂತ್ ಇನ್ನೊಂದು ಸಿನಿಮಾ ಸಿದ್ಧಪಡಿಸಿಕೊಂಡು, ವೀಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ.

ಈ ಚಿತ್ರದ ಹೆಸರು ‘ತ್ರಿಕೋನ’. ಚಿತ್ರವನ್ನು ಮೂರು ಭಾಷೆಗಳಲ್ಲಿ (ಕನ್ನಡ, ತೆಲುಗು ಮತ್ತು ತಮಿಳು) ಸಿದ್ಧಪಡಿಸಲಾಗಿದೆ. ಸುರೇಶ್ ಹೆಬ್ಳೀಕರ್, ಅಚ್ಯುತ್ ಕುಮಾರ್, ಸುಧಾರಾಣಿ ಅವರೂ ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.

‘ತ್ರಿಕೋನ’ ಚಿತ್ರಕ್ಕೆ ಬಂಡವಾಳ ಹೂಡಿದವರು ರಾಜಶೇಖರ್. ಚಿತ್ರದ ಕಥೆ ಕೂಡ ಅವರದ್ದೇ. ‘ಚಂದ್ರಕಾಂತ್ ಅವರು ನಿರ್ದೇಶಿಸಿದ್ದ 143 ಚಿತ್ರ ವೀಕ್ಷಿಸಿದ್ದೆ. ಅದನ್ನು ನೋಡಿದ ನಂತರ ಅವರ ಜೊತೆ ಸೇರಿ ಕೆಲಸ ಮಾಡಬೇಕು ಎಂದು ಅನಿಸಿತು. ಈ ಚಿತ್ರದ ತಂತ್ರಜ್ಞರೇ ನಾಯಕ ಹಾಗೂ ನಾಯಕಿ’ ಎಂದರು ರಾಜಶೇಖರ್. ‘ತ್ರಿಕೋನ’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆಯಂತೆ.

‘ತಾಳ್ಮೆ, ಶಕ್ತಿ ಮತ್ತು ಅಹಂ ಪ್ರತಿ ಮನುಷ್ಯನಲ್ಲೂ ಇರಬಹುದಾದ ಗುಣಗಳು. ಮನುಷ್ಯನ ವಯಸ್ಸಿಗೆ ತಕ್ಕಂತೆ ಶಕ್ತಿ ಮತ್ತು ಅಹಂ ಬರುತ್ತವೆ, ಹೋಗುತ್ತವೆ. ಆದರೆ ತಾಳ್ಮೆ ಹಾಗಲ್ಲ. ಅದು ಎಲ್ಲರಿಗೂ ಬರುವುದಿಲ್ಲ. ಒಮ್ಮೆ ಬಂದರೆ, ಬಿಟ್ಟುಹೋಗುವುದಿಲ್ಲ. ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸುವ ಕೆಲಸ ಮಾಡಿದ್ದೇವೆ’ ಎಂದರು ಚಂದ್ರಕಾಂತ್.

ಈ ಚಿತ್ರದ ಚಿತ್ರೀಕರಣವು ಬೆಂಗಳೂರು, ಸುಬ್ರಹ್ಮಣ್ಯ, ಕಡಬ, ಪಂಜ, ಪುತ್ತೂರು, ಮಂಗಳೂರು, ಹಾಸನ ಮತ್ತು ಸಕಲೇಶಪುರದಲ್ಲಿ ನಡೆದಿದೆ.

‘ತ್ರಿಕೋನ’ದ ಕಥೆಯನ್ನು ಸಿದ್ಧಪಡಿಸಿದ್ದ ನಿರ್ಮಾಪಕರಿಗೆ, ಚಂದ್ರಕಾಂತ್ ಅವರು ಕಥೆಯ ಬಗ್ಗೆ ಕೊಟ್ಟ ವಿವರಣೆ ಬಹಳ ಇಷ್ಟವಾಯಿತು. ಹಾಗಾಗಿ ತಮ್ಮ ಕಥೆಯನ್ನು ಚಿತ್ರವನ್ನಾಗಿಸಲು ಚಂದ್ರಕಾಂತ್ ಅವರೇ ನಿರ್ದೇಶಕರಾಗಿ ಕೆಲಸ ಮಾಡಬೇಕು ಎಂದು ರಾಜಶೇಖರ್ ತೀರ್ಮಾನಿಸಿದರು. ಇದು ಈ ಚಿತ್ರದ ತೆರೆಯ ಹಿಂದಿನ ಚಿಕ್ಕ ಕಥೆ.

ಶಕ್ತಿ, ಅಹಂ ಮತ್ತು ತಾಳ್ಮೆಯನ್ನು ಪರೀಕ್ಷೆಗೆ ಒಳಪಡಿಸುವ ಪಾತ್ರವನ್ನು ಬಳ್ಳಾರಿಯ ಮಾರುತೇಶ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)