ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ರಿವಿಕ್ರಮ’ ಹಾಡುಗಳ ಹಕ್ಕು ₹50 ಲಕ್ಷಕ್ಕೆ ಮಾರಾಟ

Last Updated 31 ಜುಲೈ 2020, 10:05 IST
ಅಕ್ಷರ ಗಾತ್ರ

ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ‌ ಪುತ್ರ‌ ವಿಕ್ರಮ್‌ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ‘ತ್ರಿವಿಕ್ರಮ’ ಸಿನಿಮಾದ ಆಡಿಯೊ ಹಕ್ಕು ಕೊರೊನಾ ಕಾಲದಲ್ಲಿ ₹50 ಲಕ್ಷಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ. ವರಮಹಾಲಕ್ಷ್ಮಿ ಹಬ್ಬದಂದೇ ‘ತ್ರಿವಿಕ್ರಮ’ನ ಜೋಳಿಗೆಗೆ ‘ಲಕ್ಷ್ಮಿ’ ಸೇರಿದ್ದಾಳೆ. ಸಹಜವಾಗಿಯೇ ಚಿತ್ರತಂಡದ ಉತ್ಸಾಹ ಇದರಿಂದ ಮತ್ತಷ್ಟು ಇಮ್ಮಡಿಕೊಂಡಿದೆ.

ಎ2 ಮ್ಯೂಸಿಕ್ ಆಡಿಯೊ ಸಂಸ್ಥೆ ‘ತ್ರಿವಿಕ್ರಮ’ನ ಹಾಡುಗಳನ್ನು ಕೇಳಿ ಭಾರಿ ಮೊತ್ತಕ್ಕೆ ಆಡಿಯೊ ಹಕ್ಕುಗಳನ್ನು ಖರೀಸಿದೆ. ಸದ್ಯದ ಸ್ಥಿತಿಯಲ್ಲಿ ಸ್ಟಾರ್ ನಟರ ಸಿನಿಮಾದ ಹಾಡುಗಳೇ ಇಷ್ಟೊಂದು ಮೊತ್ತಕ್ಕೆ ಮಾರಾಟವಾಗುವುದು ಕಷ್ಟ ಎನ್ನುವಂತಿರುವಾಗ, ಹೊಸ ನಟನ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಕನ್ನಡಚಿತ್ರರಂಗ ಚೇತರಿಕೆ ಹಾದಿ ಹಿಡಿಯುತ್ತಿರುವುದನ್ನು ಸೂಚಿಸುವಂತಿದೆ.

ಈ ಚಿತ್ರದಲ್ಲಿ ವಿಕ್ರಮ್‌ಗೆ ಜೋಡಿಯಾಗಿ ‘ಕ್ಯಾಡ್‌ಬರಿ’ ಚೆಲುವೆ ಆಕಾಂಕ್ಷಾ ಶರ್ಮಾ ನಟಿಸುತ್ತಿದ್ದಾರೆ.ಉತ್ತರ ಭಾರತದ ನಟಿ– ರೂಪದರ್ಶಿಯೂ ಆದಆಕಾಂಕ್ಷಾ ಸ್ಯಾಂಡಲ್‌ವುಡ್‌ನಿಂದ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇದು ವಿಕ್ರಮ್‌ಗೂ ಚೊಚ್ಚಲ ಸಿನಿಮಾ.

ಚಿತ್ರದ ಎರಡು ಹಾಡುಗಳ ಚಿತ್ರೀಕರಣವನ್ನು ಚೀನಾ ಮತ್ತು ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಭಾರತದ ಗಡಿಯಲ್ಲಿ ನಡೆಸಲು ಚಿತ್ರತಂಡ ಯೋಜಿಸಿದೆ. ಚಿತ್ರದಲ್ಲಿ 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಸಂಚಿತ್ ಹೆಗಡೆ‌ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಈ ಚಿತ್ರಕ್ಕೆ ಸಹನಾ ಮೂರ್ತಿ ಆ್ಯಕ್ಷನ್‌ ಕಟ್ ಹೇಳುತ್ತಿದ್ದು, ವಿಕ್ರಮ್‌ಗಾಗಿಯೇ ಈ ಸಿನಿಮಾ ಮಾಡುತ್ತಿದ್ದಾರೆ. ನಿರ್ಮಾಪಕ ಸೋಮಣ್ಣ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT